ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕರಡು ಐ.ಟಿ. ನಿಯಮಗಳು– 2021ಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸುವಂತೆ ಇವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ (ಪಿಐಬಿ) ಯಾವ ಸುದ್ದಿಗಳನ್ನು ‘ಸುಳ್ಳು’ ಎಂದು ವರ್ಗೀಕರಿಸುತ್ತದೆಯೋ ಆ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಕಂಪನಿಗಳು ತಮ್ಮ ಜಾಲತಾಣದಿಂದ ತೆಗೆದುಹಾಕಬೇಕು ಎಂದು ಈ ಉದ್ದೇಶಿತ ತಿದ್ದುಪಡಿ ಹೇಳುತ್ತದೆ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿರುವ ಪಿಐಬಿ, ಒಂದು ಸುದ್ದಿಯು ಅಸಲಿಯೋ ನಕಲಿಯೋ ಎಂಬುದನ್ನು ತೀರ್ಮಾನಿಸುವ ಅಧಿಕಾರ ಹೊಂದಿಲ್ಲ. ಸುದ್ದಿಯು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸುವ ಅಧಿಕಾರವನ್ನು ಪಿಐಬಿ ಅಲ್ಲದೆ ಬೇರೆ ಯಾವುದೇ ಸಂಸ್ಥೆಗೆ ನೀಡುವ ಅವಕಾಶವನ್ನು ಉದ್ದೇಶಿತ ತಿದ್ದುಪಡಿಯು ಸರ್ಕಾರಕ್ಕೆ ನೀಡುತ್ತದೆ. ಉದ್ದೇಶಿತ ತಿದ್ದುಪಡಿಗಳು ನಿಯಮವಾಗಿ ಜಾರಿಗೆ ಬಂದ ಸಂದರ್ಭದಲ್ಲಿ, ಪಿಐಬಿಯ ಪರಿಶೀಲನಾ ತಂಡವು ‘ನಕಲಿ’ ಎಂದು ಹೇಳಿದ ಯಾವುದೇ ಸುದ್ದಿಯ ವೆಬ್ ಕೊಂಡಿಯನ್ನು ಹಾಗೂ ಸುದ್ದಿಯ ವಿಡಿಯೊವನ್ನು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಂತಹ ಆನ್‌ಲೈನ್ ಮಾಧ್ಯಮಗಳಿಂದ ತೆಗೆಯಬೇಕಾಗುತ್ತದೆ. ವ್ಯಕ್ತಿಯನ್ನು ‘ಸುದ್ದಿಯ ಮೂಲದ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡುವ ಯಾವುದನ್ನೂ’ ಓದುಗ ಹಾಗೂ ಸುದ್ದಿಮೂಲದ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುವ ವೇದಿಕೆಗಳು ಪ್ರಕಟಿಸುವಂತೆ ಇಲ್ಲ ಎಂದು ಕೂಡ ತಿದ್ದುಪಡಿ ಹೇಳುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ, ತಪ್ಪು ಮಾಹಿತಿಗಳ, ಬೇಜವಾಬ್ದಾರಿಯಿಂದ ಕೂಡಿದ ಹಾಗೂ ಉತ್ತರದಾಯಿತ್ವ ಇಲ್ಲದ ವಸ್ತು–ವಿಷಯಗಳ ಪ್ರವಾಹವೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅವುಗಳನ್ನು ತೊಡೆಯಲು ‘ಹತ್ತಿಕ್ಕುವ ಅಸ್ತ್ರ’ವನ್ನು ಬಳಸುವ ಕೆಲಸವನ್ನು ಸರ್ಕಾರ ಮಾಡಬಾರದು. ಪಿಐಬಿ ಮಾಡಬೇಕಿರುವ ಕೆಲಸ ‘ಸರ್ಕಾರದ ನೀತಿಗಳು, ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾಹಿತಿ ಒದಗಿಸುವುದು’. ಸುದ್ದಿಯನ್ನು ಪರಿಶೀಲಿಸುವ, ಅದರ ಮೌಲ್ಯಮಾಪನ ಮಾಡುವ ಅಥವಾ ಸುದ್ದಿಯ ಬಗ್ಗೆ ತೀರ್ಮಾನ ಹೇಳುವ ನೈಪುಣ್ಯವು ಪಿಐಬಿಗೆ ಇಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರತ್ಯೇಕ ತಂಡವೊಂದನ್ನು ಮೂರು ವರ್ಷಗಳ ಹಿಂದೆ ರಚಿಸಲಾಯಿತು. ಆದರೆ ಆ ತಂಡದ ಕೆಲಸಗಳು ತೃಪ್ತಿಕರ ಮಟ್ಟದಲ್ಲಿ ಇಲ್ಲ. ಅದು ದೊಡ್ಡ ತಪ್ಪುಗಳನ್ನು ಮಾಡಿರುವುದೂ ಇದೆ. ಸರ್ಕಾರದ ವಿರುದ್ಧ ಇರುವ ಹಾಗೂ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡುವ ಎಲ್ಲವನ್ನೂ ಅದು ತಪ್ಪು ಮಾಹಿತಿ ಎಂದು ಪರಿಗಣಿಸಿ, ಅವುಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತದೆ. ಸರ್ಕಾರದ ಸಂಸ್ಥೆಗಳು ಅವುಗಳಿಗೆ ನಿಗದಿ ಮಾಡಿದ ನಿಯಮ–ನಿಬಂಧನೆಗಳಿಗೆ ಅನುಗುಣವಾಗಿ ಮಾತ್ರ ಆಲೋಚಿಸುತ್ತವೆ. ದೇಶದಲ್ಲಿ ಸರ್ವಾಧಿಕಾರದ ಧೋರಣೆಗಳು ಬಲಗೊಳ್ಳುತ್ತಿರುವ ಈಗಿನ ವಾತಾವರಣದಲ್ಲಿ ಇದು ಹೆಚ್ಚು ಪ್ರಸ್ತುತವಾಗುತ್ತದೆ. ಸರ್ಕಾರ ಈಗ ಪ್ರಸ್ತಾಪಿಸಿರುವುದು ಸುದ್ದಿಯನ್ನು ನಿರ್ಬಂಧಿಸುವ ಕ್ರಮ. ಆದರೆ ಅದು ಆ ಪದವನ್ನು ಬಳಸಿಲ್ಲ, ಅಷ್ಟೇ. ಪಿಐಬಿಯಂತಹ ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಆಲೋಚನೆ ಹೊಂದಿರುವುದು ವಿಚಿತ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಕಲಿ, ಅಸಲಿ ಯಾವುದು ಎಂಬುದನ್ನು ಪರಿಶೀಲಿಸುವ, ತೀರ್ಮಾನಿಸುವ ಹಾಗೂ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರಗಳೆಲ್ಲ ಕೇಂದ್ರ ಸರ್ಕಾರದ ಬಳಿ ಇರಲಿವೆ. ಭಾರತದ ಸಂಪಾದಕರ ಒಕ್ಕೂಟವು ಹೇಳಿರುವಂತೆ, ‘ಸರ್ಕಾರವು ತನ್ನದೇ ಕೆಲಸಗಳ ವಿಚಾರದಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ತೀರ್ಮಾನಿಸುವ ಪ್ರಶ್ನಾತೀತ ಅಧಿಕಾರವನ್ನು ತನಗೇ ಕೊಟ್ಟುಕೊಂಡಿದೆ’.
ಇಂತಹ ಅಧಿಕಾರವನ್ನು ಸರ್ಕಾರವು ತನಗೆ ತಾನೇ ಕೊಟ್ಟುಕೊಂಡು, ಅಧಿಕಾರವನ್ನು ಬಳಸಲು ಆರಂಭಿಸುವುದರಿಂದ ಸಮಾಜದಲ್ಲಿ ಮಾಹಿತಿಯ ಮುಕ್ತ ಹರಿವನ್ನು ತಡೆದಂತಾಗುತ್ತದೆ. ಅದು ಪತ್ರಿಕಾ ವೃತ್ತಿಗೂ ಕೆಡುಕು ಉಂಟುಮಾಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜೆಗಳ ಮೂಲಭೂತ ಹಕ್ಕುಗಳಲ್ಲಿ ಒಂದು. ಮುಕ್ತ ಮಾಧ್ಯಮಗಳು ಮುನ್ನಡೆಯುವಂತೆ ಕಾಪಾಡುವುದು ಇದೇ ಹಕ್ಕು. ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ಅಗತ್ಯಗಳಲ್ಲಿ ಒಂದು ಮುಕ್ತ ಮಾಧ್ಯಮ ವ್ಯವಸ್ಥೆ. ವಾಸ್ತವದಲ್ಲಿ ಮುಕ್ತ ಮಾಧ್ಯಮ ಎಂಬುದು ಪ್ರಜಾತಂತ್ರಕ್ಕೆ ಇರುವ ಪರ್ಯಾಯ ಪದವೂ ಹೌದು. ಸರ್ಕಾರದ ಪ್ರಸ್ತಾವವು ಪ್ರಜಾತಂತ್ರ ವಿರೋಧಿ ಕ್ರಮ. ಇದನ್ನು ಸರ್ಕಾರ ಕೈಬಿಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.