ADVERTISEMENT

ಸಂಪಾದಕೀಯ | ಮತ್ತೊಂದು ರೈಲು ಅಪಘಾತ; ಉತ್ತರದಾಯಿತ್ವದ ಕೊರತೆ ತೀವ್ರ

ರೈಲ್ವೆ ಯೋಜನೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕಿದೆ ಮತ್ತು ಸುರಕ್ಷತೆಗೆ ಆದ್ಯತೆ ಕೊಡಬೇಕಿದೆ

ಸಂಪಾದಕೀಯ
Published 14 ಅಕ್ಟೋಬರ್ 2024, 0:39 IST
Last Updated 14 ಅಕ್ಟೋಬರ್ 2024, 0:39 IST
   

ಮತ್ತೊಂದು ರೈಲು ಅಪಘಾತ ನಡೆದಿದೆ. ಮೈಸೂರು–ದರ್ಭಾಂಗ ಎಕ್ಸ್‌ಪ್ರೆಸ್‌ ರೈಲು ಅಪಘಾತಕ್ಕೆ ಈಡಾಗಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ, ರೈಲ್ವೆಯನ್ನು ಕಾಡುತ್ತಿರುವ ಸುರಕ್ಷತೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಬಳಿಕ ಈ ರೈಲಿನ 13 ಬೋಗಿಗಳು ಹಳಿ ತಪ್ಪಿವೆ. 2023ರಲ್ಲಿ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ಅಪಘಾತದ ರೀತಿಯಲ್ಲಿಯೇ ಈ ಅಪಘಾತವೂ ನಡೆದಿದೆ. ಬಾಲೇಶ್ವರದಲ್ಲಿ ನಡೆದ ಅಪಘಾತದಲ್ಲಿ 300 ಮಂದಿ ಮೃತಪಟ್ಟಿದ್ದರು. ಚೆನ್ನೈ–ಗೂಡೂರು ವಲಯದ ಕವರೈಪೇಟೈ ಎಂಬಲ್ಲಿ ಈ ಅಪಘಾತ ನಡೆದಿದೆ. ಸರಕು ಸಾಗಣೆ ರೈಲಿನ ಹಿಂಭಾಗದಲ್ಲಿ ಇದ್ದ ಬ್ರೇಕ್‌ ವ್ಯಾನ್‌ ಮತ್ತು ಕವರೈಪೇಟೈ ನಿಲ್ದಾಣದ ಸಮೀಪ ಇದ್ದ ವೇಗ ನಿಯಂತ್ರಕಗಳಿಂದಾಗಿ ಹೆಚ್ಚಿನ ಅಪಾಯ ತಪ್ಪಿದೆ. ಸಿಗ್ನಲ್‌ನಲ್ಲಿ ಆಗಿರುವ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆದರೆ, ಅಪಘಾತಕ್ಕೆ ಕಾರಣ ಏನು ಎಂಬುದು ತನಿಖೆಯಿಂದ ದೃಢಪಡಬೇಕಿದೆ. ರೈಲ್ವೆ ಇಲಾಖೆಯು ತನಿಖೆ ಆರಂಭಿಸಿದೆ. ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಕೂಡ ತನಿಖೆ ನಡೆಸುತ್ತಿದೆ. ಅಪಘಾತಕ್ಕೆ ಏನು ಕಾರಣ ಎಂಬುದು ತನಿಖೆಯಿಂದ ತಿಳಿದುಬರಬಹುದು ಎಂಬ ವಿಶ್ವಾಸ ಇದೆ. 

ಪಶ್ಚಿಮ ಬಂಗಾಳದಲ್ಲಿ ಕೆಲವು ವಾರಗಳ ಹಿಂದೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಅಪಘಾತಕ್ಕೆ ಒಳಗಾಗಿತ್ತು. ಈ ಅಪಘಾತದಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ರೈಲು ಅಪಘಾತಗಳ ಸಂಖ್ಯೆಯು ಕಡಿಮೆಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ, ಮನುಷ್ಯನ ಲೋಪ, ತಾಂತ್ರಿಕ ತೊಂದರೆ, ಸಿಗ್ನಲ್‌ ಸಮಸ್ಯೆ ಮತ್ತು ಇತರ ಕಾರಣಗಳಿಂದಾಗಿ ರೈಲು ಅಪಘಾತಗಳು ನಡೆಯುತ್ತಲೇ ಇವೆ. ರೈಲು ಸುರಕ್ಷತೆಗೆ ಕೊಡಬೇಕಾದಷ್ಟು ಗಮನ ಕೊಡಲಾಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಅತಿವೇಗದ ರೈಲು ಮತ್ತು ವಂದೇ ಭಾರತ್‌ನಂತಹ ಐಷಾರಾಮಿ ರೈಲುಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ರೈಲು ಪ್ರಯಾಣಿಕರ ಪೈಕಿ ಅತಿ ಹೆಚ್ಚು ಸಾಮಾನ್ಯ ಜನರು ಸಂಚರಿಸುವ ರೈಲುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂಬ ಭಾವನೆ ಬಲಗೊಳ್ಳತೊಡಗಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸುರಕ್ಷತಾ ವ್ಯವಸ್ಥೆ ‘ಕವಚ’ದ ಅಳವಡಿಕೆ ನಿಧಾನವಾಗುತ್ತಿದೆ. ನಿರ್ವಹಣೆಗೆ ಮಾಡುತ್ತಿರುವ ವೆಚ್ಚ ಬಹಳ ಕಡಿಮೆ ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿತ್ತು. 2022–23ರಲ್ಲಿ ಒಟ್ಟು ವರಮಾನದ ಶೇ 15ರಷ್ಟನ್ನು ಹಳಿ ನವೀಕರಣ ಮತ್ತು ನಿರ್ವಹಣೆಗೆ ವೆಚ್ಚ ಮಾಡಲಾಗಿತ್ತು. ಈ ವರ್ಷ ಇದಕ್ಕಾಗಿ ಶೇ 10ರಷ್ಟು ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. 

ರೈಲ್ವೆಯು ದೇಶದಲ್ಲಿಯೇ ಅತಿ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆ. ಆದರೆ, ನಿರ್ಣಾಯಕ ವಿಭಾಗಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ರೈಲು ಚಾಲಕರು ಮತ್ತು ಸಹಾಯಕ ಚಾಲಕರ 18 ಸಾವಿರಕ್ಕೂ ಹೆಚ್ಚು ಹುದ್ದೆಗಳು ವರ್ಷಗಳಿಂದ ಖಾಲಿ ಇವೆ ಎಂದು ವರದಿಯಾಗಿದೆ. ಸಿಬ್ಬಂದಿಯ ಕೊರತೆಯು ಇರುವ ನೌಕರರ ಮೇಲೆ ಹೆಚ್ಚಿನ ಹೊರೆ ಹಾಕಿದೆ. ದೀರ್ಘಕಾಲ ಬಿಡುವಿಲ್ಲದೆ ಕೆಲಸ ಮಾಡಬೇಕಾದುದರಿಂದ ಲೋಪಗಳಾಗುವ ಸಾಧ್ಯತೆ ಹೆಚ್ಚು. ಎಲ್ಲ ವಿಭಾಗಗಳಲ್ಲಿಯೂ ಮೂಲಸೌಕರ್ಯವನ್ನು ಉತ್ತಮಪಡಿಸಬೇಕಿದೆ, ಆಧುನೀಕರಣಗೊಳಿಸಬೇಕಿದೆ, ನಿರ್ವಹಣೆಯೂ ಉತ್ತಮಗೊಳ್ಳಬೇಕಿದೆ. ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಯೋಜನೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕಿದೆ ಮತ್ತು ಸುರಕ್ಷತೆಗೆ ಆದ್ಯತೆ ಕೊಡಬೇಕಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ರೈಲ್ವೆ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಉತ್ತರದಾಯಿತ್ವಕ್ಕೆ ಎಷ್ಟು ಮಹತ್ವ ನೀಡಬೇಕೋ ಅಷ್ಟು ಮಹತ್ವ ನೀಡಲಾಗುತ್ತಿಲ್ಲ. ತಳಮಟ್ಟದ ನೌಕರರಿಂದ ಹಿಡಿದು ರೈಲ್ವೆ ಸಚಿವರವರೆಗೆ, ಪ್ರತಿಯೊಬ್ಬರನ್ನೂ ಅವರ ಕೆಲಸಗಳಿಗೆ ಉತ್ತರದಾಯಿಯನ್ನಾಗಿ ಮಾಡಬೇಕು. ದುರದೃಷ್ಟವಶಾತ್‌ ಆ ಕೆಲಸ ಆಗುತ್ತಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.