ADVERTISEMENT

ಸಂಪಾದಕೀಯ | ಬೆಂಗಳೂರಿನಲ್ಲಿ ‘ನಗರ ಮಹಾಪೂರ’: ಬಿಬಿಎಂಪಿ ಆಡಳಿತ ವೈಫಲ್ಯವೇ ಕಾರಣ

ಮಳೆ ಸುರಿದಾಗಲೆಲ್ಲ ಜನಜೀವನ ಅಸ್ತವ್ಯಸ್ತಗೊಳ್ಳುವಂತಹ ಪರಿಸ್ಥಿತಿಯಿಂದ ನಗರವನ್ನು ಪಾರು ಮಾಡುವುದಕ್ಕೆ ಆದ್ಯತೆ ನೀಡಬೇಕಿದೆ

ಸಂಪಾದಕೀಯ
Published 17 ಅಕ್ಟೋಬರ್ 2024, 22:09 IST
Last Updated 17 ಅಕ್ಟೋಬರ್ 2024, 22:09 IST
   

ಬೆಂಗಳೂರು ಮಹಾನಗರವು ಆರು ತಿಂಗಳಿನಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಮೇ ತಿಂಗಳಿನಲ್ಲಿ ಮುಂಗಾರುಪೂರ್ವ ಮಳೆ ಸುರಿದಾಗ ಒಮ್ಮೆ ಪ್ರವಾಹ ಉಂಟಾಗಿತ್ತು. ಆಗಸ್ಟ್‌ನಲ್ಲಿ ಮುಂಗಾರು ಮಳೆ ಹೆಚ್ಚು ಪ್ರಮಾಣದಲ್ಲಿ ಸುರಿದಾಗಲೂ ನಗರದ ಪೂರ್ವ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈಗ ಮೂರನೇ ಬಾರಿ ಪ್ರವಾಹದಿಂದ ನಗರದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಸೋಮವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆಯವರೆಗೂ ಸುರಿದ ಮಳೆಗೆ ನಗರದ ಹಲವು ಭಾಗಗಳಲ್ಲಿ ರಾಜಕಾಲುವೆಗಳು ಉಕ್ಕಿ ಹರಿದು ರಸ್ತೆಗಳು ನದಿಗಳಂತಾದವು. ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹಲವೆಡೆ ತಗ್ಗು ಪ್ರದೇಶಗಳಲ್ಲಿನ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳಿಗೆ ನೀರು ನುಗ್ಗಿತು. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಮತ್ತು ಹೊರಮಾವು ಬಳಿಯ ಸಾಯಿ ಬಡಾವಣೆಯು ಸಂಪೂರ್ಣ ಜಲಾವೃತ
ವಾಗಿದ್ದವು. ಈ ಎರಡೂ ಕಡೆ ಜನರ ಸಂಚಾರ, ಕುಡಿಯುವ ನೀರು ಪೂರೈಕೆಯಂತಹ ಕೆಲಸಕ್ಕೆ ಟ್ರ್ಯಾಕ್ಟರ್‌
ಗಳ ಮೊರೆ ಹೋಗಬೇಕಾಯಿತು. ಅಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಈ ಬಾರಿಯೂ ದಿನವೊಂದರಲ್ಲಿ ಸುರಿದ ಮಳೆಯ ಗರಿಷ್ಠ ಪ್ರಮಾಣ 10 ಸೆಂಟಿಮೀಟರ್‌ ದಾಟಿಲ್ಲ. ಆದರೂ, ‘ನಗರ ಮಹಾಪೂರ’ ಸೃಷ್ಟಿಯಾಗಿ ನಿವಾಸಿಗಳು ಯಾತನೆ ಅನುಭವಿಸುವಂತಾಯಿತು. ಬಿಬಿಎಂಪಿ ವ್ಯಾಪ್ತಿಯ ಹಲವು ಪ್ರದೇಶ
ಗಳಲ್ಲಿ ಇಂತಹ ಸ್ಥಿತಿ ಉಂಟಾಗಿದ್ದಕ್ಕೆ ಮಳೆಗಾಲವನ್ನು ಎದುರಿಸಲು ಸಮರ್ಪಕವಾಗಿ ಸಿದ್ಧತೆ ಮಾಡಿ
ಕೊಳ್ಳುವಲ್ಲಿ ಪಾಲಿಕೆ ಆಡಳಿತವು ವಿಫಲವಾಗಿರುವುದೇ ಕಾರಣ. ‘ಮಳೆಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಲವು ಬಾರಿ ಹೇಳಿದ್ದರು. ಆದರೆ, ಆರು ತಿಂಗಳ ಅವಧಿಯಲ್ಲಿ ಮೂರು ಬಾರಿ ಉಂಟಾದ ಪ್ರವಾಹವು ಬಿಬಿಎಂಪಿಯ ಮಳೆಗಾಲದ ಸಿದ್ಧತೆಯು ಬಾಯಿ ಮಾತಿಗೆ ಸೀಮಿತವಾಗಿತ್ತು ಎಂಬುದನ್ನು ಜಾಹೀರುಗೊಳಿಸಿದೆ.

ಹೆಚ್ಚು ಮಳೆ ಬಿದ್ದಾಗ ಜಗತ್ತಿನ ಎಲ್ಲ ದೊಡ್ಡ ನಗರಗಳಲ್ಲೂ ಪ್ರವಾಹ ಸ್ಥಿತಿ ಉಂಟಾಗುತ್ತಿದೆ ಎಂಬ ಸಬೂಬು ಮುಂದಿಟ್ಟು ವೈಫಲ್ಯ ಮುಚ್ಚಿಕೊಳ್ಳಲು ಅಧಿಕಾರಸ್ಥರು ಪ್ರತಿ ಬಾರಿಯೂ ಪ್ರಯತ್ನಿಸುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾದರೂ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಳ್ಳುವಂತಹ ಸ್ಥಿತಿ ಇದೆ. ಪ್ರವಾಹ ಪರಿಸ್ಥಿತಿ ಎದುರಿಸುವ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ವಿಷಯದಲ್ಲಿ ಯಾವುದೇ ಸಬೂಬು ಸಮರ್ಥನೀಯವಲ್ಲ. ಬೆಂಗಳೂರು ನಗರವು ಎತ್ತರದ ದಿಣ್ಣೆಗಳು ಹಾಗೂ ತಗ್ಗು ಪ್ರದೇಶಗಳ ಮಿಶ್ರಣದಿಂದ ಕೂಡಿದೆ. ಎತ್ತರದ ಪ್ರದೇಶಗಳಲ್ಲಿ ಬಿದ್ದ ಮಳೆಯ ನೀರು ತಗ್ಗುಪ್ರದೇಶಕ್ಕೆ ಹರಿದು, ಅಲ್ಲಿಂದ ರಾಜಕಾಲುವೆಗಳ ಮೂಲಕ ಕೆರೆಗಳನ್ನು ತಲುಪುತ್ತಿತ್ತು. ಆದರೆ, ಬಹುತೇಕ ರಾಜಕಾಲುವೆಗಳು ಒತ್ತುವರಿಯ ಕಾರಣದಿಂದ ಕಿರಿದಾಗಿವೆ. ಸುಮಾರು 2,000 ಸ್ಥಳಗಳಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯ ವರ್ಷದಿಂದಲೂ ಬಾಕಿ ಉಳಿದಿದೆ. ಈ ವರ್ಷ ಮಳೆಗಾಲಕ್ಕೂ ಮುನ್ನ ಚರಂಡಿಗಳು, ದ್ವಿತೀಯ ಹಂತದ ಕಾಲುವೆಗಳು ಮತ್ತು ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸವೂ ಸಮರ್ಪಕವಾಗಿ ನಡೆದಿಲ್ಲ. ಕೆಲವೆಡೆ ತೆಗೆದ ಹೂಳನ್ನು ಅಲ್ಲಿಯೇ ರಾಶಿ ಹಾಕಿದ್ದರಿಂದ ಮಳೆ ಸುರಿದಾಗ ಅದು ಮತ್ತೆ ಕಾಲುವೆಗಳನ್ನು ಸೇರಿದೆ. ಕೆರೆಗಳ ಒತ್ತುವರಿ ಮುಂದುವರಿದಿರುವುದು ಹಾಗೂ ಕೆರೆಗಳ ಅಂಗಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅಂಕುಶ ಹಾಕದಿರುವುದು ಕೂಡ ಸಮಸ್ಯೆ ಬಿಗಡಾಯಿಸಲು ಕಾರಣ ಎಂಬುದು ನಿರ್ವಿವಾದ. ವೈಟ್‌ಫೀಲ್ಡ್‌ ಸುತ್ತಮುತ್ತಲಿನ ಪ್ರದೇಶ, ಯಲಹಂಕ ಸೇರಿದಂತೆ ಕೆಲವು ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಪ್ರವಾಹ ಉಂಟಾದಾಗ ಮಾತ್ರ ಅಧಿಕಾರಿಗಳು ಎಚ್ಚರಗೊಂಡು ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರವಾಹ ತಡೆಗೆ ದೀರ್ಘಕಾಲೀನ ಪರಿಹಾರ ಹುಡುಕುವಲ್ಲಿ ಬಿಬಿಎಂಪಿ ಸರಿಯಾದ ಪ್ರಯತ್ನವನ್ನೇ ಮಾಡಿಲ್ಲ ಎಂಬುದಕ್ಕೆ ಈಗಿನ ಪರಿಸ್ಥಿತಿಯೇ ಪುರಾವೆ ಒದಗಿಸುತ್ತದೆ.

ಸುಮಾರು 830 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಬಿಬಿಎಂಪಿಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ ರಚಿಸಲು ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ. ‘ಬ್ರ್ಯಾಂಡ್‌ ಬೆಂಗಳೂರು’ ಹೆಸರಿನಲ್ಲಿ ಬೃಹತ್‌ ಯೋಜನೆಗಳನ್ನೂ ಘೋಷಿಸುತ್ತಿದ್ದಾರೆ. ಪದೇ ಪದೇ ಜನರನ್ನು ಕಾಡುವ ಪ್ರವಾಹ ಸ್ಥಿತಿ ನಿಯಂತ್ರಣದ ವಿಷಯ ಬಿಬಿಎಂಪಿಯ ಆದ್ಯತಾ ಪಟ್ಟಿಯಿಂದಲೇ ಬದಿಗೆ ಸರಿದಂತೆ ಭಾಸವಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಿಸಿ, ಕಾರ್ಯಗತಗೊಳಿಸುವುದಷ್ಟೇ ಅಭಿವೃದ್ಧಿ ಎಂಬ ಭ್ರಮೆಯಿಂದ ಅಧಿಕಾರಸ್ಥರು ಹೊರಬರಬೇಕಿದೆ. ಮಳೆ ಸುರಿದಾಗಲೆಲ್ಲ ಜನಜೀವನ ಅಸ್ತವ್ಯಸ್ತಗೊಳ್ಳುವಂತಹ ಪರಿಸ್ಥಿತಿಯಿಂದ ನಗರವನ್ನು ಪಾರು ಮಾಡುವುದು ಆದ್ಯತೆ ಆಗಬೇಕಿದೆ. ಬೆಂಗಳೂರು ನಗರವನ್ನು ಪದೇ ಪದೇ ಕಾಡುತ್ತಿರುವ ‘ನಗರ ಮಹಾಪೂರ’ದಂತಹ ಸಮಸ್ಯೆಗಳ ನಿವಾರಣೆಗೆ ದೃಢವಾದ ಪ್ರಯತ್ನ ಮಾಡಬೇಕಿದೆ. ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿರುವುದೂ ಈಗಿನ ದುರವಸ್ಥೆಗೆ ಒಂದು ಕಾರಣವಾಗಿರಬಹುದು. ರಾಜಕಾಲುವೆಗಳ ಒತ್ತುವರಿ ತೆರವು, ಹೂಳು ತೆಗೆಯುವುದು ಸೇರಿದಂತೆ ಪ್ರವಾಹ ನಿಯಂತ್ರಣಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಈ ವಿಷಯದಲ್ಲಿ ಬಿಬಿಎಂಪಿಯನ್ನಷ್ಟೇ ಹೊಣೆ ಮಾಡಿದರೆ ಸಾಲದು, ರಾಜ್ಯ ಸರ್ಕಾರವೂ ಜವಾಬ್ದಾರಿ ತೆಗೆದುಕೊಳ್ಳಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.