ADVERTISEMENT

ಸಂಪಾದಕೀಯ | ‘ಬುಲ್ಡೋಜರ್ ನ್ಯಾಯ’ಕ್ಕೆ ಲಗಾಮು; ಕೋರ್ಟ್‌ ತೀರ್ಪಿನ ಪಾಲನೆ ಮುಖ್ಯ

ಸಂಪಾದಕೀಯ
Published 15 ನವೆಂಬರ್ 2024, 0:07 IST
Last Updated 15 ನವೆಂಬರ್ 2024, 0:07 IST
   

ದೇಶದ ಕೆಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದ್ದ ‘ಬುಲ್ಡೋಜರ್ ನ್ಯಾಯ’ದ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಹಾಗೂ ಅದು ರೂಪಿಸಿರುವ ನಿಯಮಗಳು ಸಂವಿಧಾನದ ಅತ್ಯುತ್ತಮ ಆಶಯಗಳನ್ನು, ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವವನ್ನು ಎತ್ತಿಹಿಡಿಯುವಂತೆ ಇವೆ. ಸಂವಿಧಾನದ ಆಶಯಗಳನ್ನು, ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತಾತ್ವಿಕತೆಯನ್ನು ಪಾಲಿಸುವಂತೆ ಸರ್ಕಾರಗಳಿಗೆ ತಿಳಿಹೇಳುವ ಕೆಲಸವನ್ನು ಸುಪ್ರೀಂ ಕೋರ್ಟ್‌ ತೀರ್ಪು ಮಾಡಿದೆ. ಕೆಲವು ಅಪರಾಧ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳು ಅತಿಕ್ರಮಣ ಮಾಡಿಕೊಂಡ ಜಾಗದಲ್ಲಿ ಇವೆ ಎಂಬ ನೆಪ ಒಡ್ಡಿ, ಆ ಕಟ್ಟಡಗಳನ್ನು ಧ್ವಂಸಗೊಳಿಸುವ ಕೆಲಸ ಮಾಡುತ್ತಿದ್ದ ಕೆಲವು ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್‌ನ ಈ ತೀರ್ಪು ‘ದೋಷಿ’ ಎಂದು ಸ್ಪಷ್ಟವಾಗಿ ಕರೆದಂತಿದೆ. ಕಾನೂನಿನ ಪ್ರಕ್ರಿಯೆಗಳನ್ನು ಪಾಲಿಸದೆ ವ್ಯಕ್ತಿಯೊಬ್ಬನಿಗೆ ಶಿಕ್ಷೆ ವಿಧಿಸುವ ಅಧಿಕಾರವು ಪ್ರಭುತ್ವಕ್ಕೆ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನಗೆ ಇರುವ ವಿಶೇಷವಾದ ಅಧಿಕಾರವನ್ನು ಬಳಸಿ ಮಾರ್ಗಸೂಚಿಗಳನ್ನು ರೂಪಿಸಿರುವ ಸುಪ್ರೀಂ ಕೋರ್ಟ್, ಈ ಮಾರ್ಗಸೂಚಿಗಳನ್ನು ಪಾಲನೆ ಮಾಡದ ಅಧಿಕಾರಿಗಳು ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ. ಈ ಮೂಲಕ, ಈ ಮಾರ್ಗ‌ಸೂಚಿಗಳಿಗೆ ಬಲ ತಂದುಕೊಡುವ ಕೆಲಸವನ್ನೂ ಮಾಡಿದೆ. ಕಟ್ಟಡಗಳನ್ನು ಧ್ವಂಸಗೊಳಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಬೇಕು, ಮೇಲ್ಮನವಿ ಸಲ್ಲಿಸಲು ಅವಕಾಶ ಇರಬೇಕು ಎಂದು ಕೂಡ ಹೇಳಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳು, ಧ್ವಂಸಗೊಂಡ ಕಟ್ಟಡವನ್ನು ತಮ್ಮದೇ ಖರ್ಚಿನಲ್ಲಿ ಮರುನಿರ್ಮಿಸಿ ಕೊಡುವ ಹೊಣೆ ಹೊರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಸಾರಾಂಶ ಬಹಳ ಸ್ಪಷ್ಟವಾಗಿದೆ. ಕಾನೂನಿಗೆ ಅನುಗುಣವಾದ ಆಡಳಿತಕ್ಕೆ ಆದ್ಯತೆ ನೀಡುವುದು, ಸಂವಿಧಾನದ ವಿವಿಧ ಅಂಗಗಳ ನಡುವೆ ಹಂಚಿಕೆಯಾಗಿರುವ ಅಧಿಕಾರಕ್ಕೆ ಗೌರವ ಕೊಡುವುದು, ಆರೋಪ ಸಾಬೀತಾಗುವವರೆಗೂ ಆರೋಪಿಯು ನಿರ್ದೋಷಿ ಎಂಬ ತತ್ವಕ್ಕೆ ಬೆಲೆ ಕೊಡುವುದು ಹಾಗೂ ಸಾಮೂಹಿಕ ಶಿಕ್ಷೆ ಕೊಡುವುದು ತಪ್ಪು ಎಂಬುದು ತೀರ್ಪಿನ ಸಾರಾಂಶ. ಸಹಜ ನ್ಯಾಯ ಪ್ರಕ್ರಿಯೆಯ ಮೂಲಭೂತ ಅಂಶಗಳಿವು. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ವಿರುದ್ಧ, ದುರ್ಬಲ ಸಮುದಾಯಗಳ ವಿರುದ್ಧ ರಾಜಕೀಯ ಅಸ್ತ್ರವಾಗಿ ಬುಲ್ಡೋಜರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ದುರುದ್ದೇಶದಿಂದ, ‘ದಿಢೀರ್‌ ನ್ಯಾಯ’ದ ಸಾಧನವಾಗಿ ಬುಲ್ಡೋಜರ್‌ಗಳ ಬಳಕೆ ಆಗುತ್ತಿದೆ. ‘ಅಧಿಕಾರಿಗಳು ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಪಾಲಿಸದೇ ಇದ್ದಾಗ, ಬುಲ್ಡೋಜರ್‌ಗಳು ಕಟ್ಟಡವನ್ನು ಧ್ವಂಸಗೊಳಿಸುವ ಭೀತಿಯ ದೃಶ್ಯಗಳು ಅರಾಜಕ ಸ್ಥಿತಿಯನ್ನು ನೆನಪಿಸುತ್ತವೆ’ ಎಂದು ಕೋರ್ಟ್‌ ಬೇಸರದಿಂದ ಹೇಳಿದೆ. ಆದರೆ, ನ್ಯಾಯವನ್ನು ಈ ರೀತಿ ವಿಕೃತಗೊಳಿಸಿದ್ದಕ್ಕೆ ಸರ್ಕಾರಗಳು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸವನ್ನು ಈ ಹಿಂದೆ ಮಾಡಿವೆ, ಕೋರ್ಟ್‌ಗಳು ಈ ಹಿಂದೆಯೂ ಈ ವಿಚಾರವಾಗಿ ಆಡಿದ ಕಟು ಮಾತುಗಳು ಹಾಗೂ ಟೀಕೆಗಳು ಸರ್ಕಾರಗಳಲ್ಲಿ ಅಳುಕು ಮೂಡಿಸಿದಂತೆ ಕಾಣುತ್ತಿಲ್ಲ. ‘ಬುಲ್ಡೋಜರ್‌ ನ್ಯಾಯ’ದ ಮೂಲ ಇರುವುದು ಉತ್ತರಪ್ರದೇಶದಲ್ಲಿ. ಮಧ್ಯಪ್ರದೇಶ, ಉತ್ತರಾಖಂಡ, ಗುಜರಾತ್, ರಾಜಸ್ಥಾನ ರಾಜ್ಯ ಸರ್ಕಾರಗಳು ಇದೇ ಬಗೆಯ ಕ್ರಮಕ್ಕೆ ಮುಂದಾಗಿದ್ದವು. ಅಲ್ಪಸಂಖ್ಯಾತರ ಕುರಿತಾಗಿನ ಪೂರ್ವಗ್ರಹಗಳು ಹಾಗೂ ‘ದಿಢೀರ್‌ ನ್ಯಾಯ’ಕ್ಕಾಗಿನ ಆಗ್ರಹಗಳ ನಡುವೆ ಈ ಬಗೆಯ ಕ್ರಮಗಳು ವ್ಯಾಪಕವಾಗಿ ಬಳಕೆಯಾಗಿದ್ದವು. ಆದರೆ, ಈ ಕ್ರಮಗಳು ಪ್ರಜೆಗಳ ಜೀವಿಸುವ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದವು.

ಈಗ ಸುಪ್ರೀಂ ಕೋರ್ಟ್‌ ಬಹಳ ಉತ್ತಮವಾದ ತೀರ್ಪೊಂದನ್ನು ನೀಡಿದೆ. ಆದರೆ ತೀರ್ಪು ಎಷ್ಟು ಉತ್ತಮವಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ದ್ವೇಷ ಭಾಷಣ ಹಾಗೂ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರವೃತ್ತಿಯನ್ನು ಹತ್ತಿಕ್ಕಲು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಸರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ. ಕೋರ್ಟ್‌ ಕೆಲವು ವಾರಗಳ ಹಿಂದೆ ಪ್ರಾಥಮಿಕ ಸೂಚನೆಗಳನ್ನು ನೀಡಿದ್ದ ನಂತರದಲ್ಲಿಯೂ ಬುಲ್ಡೋಜರ್ ಬಳಸಿ ಕಟ್ಟಡ ಧ್ವಂಸಗೊಳಿಸಿದ ಪ್ರಕರಣಗಳು ವರದಿಯಾಗಿವೆ. ಈಗ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳಲ್ಲಿ ಒಂದಿಷ್ಟು ಲೋಪಗಳನ್ನು ಹುಡುಕಿ, ಮಾರ್ಗಸೂಚಿಗಳ ಉದ್ದೇಶವನ್ನು ವಿಫಲಗೊಳಿಸುವ ಯತ್ನಗಳೂ ನಡೆಯಬಹುದು. ಕಾನೂನಿನ ಅಡಿಯಲ್ಲಿ ನೋಟಿಸ್ ನೀಡುವುದು, ಮೇಲ್ಮನವಿ ಸಲ್ಲಿಸುವುದು ಹಾಗೂ ಸೂಕ್ತ ಪರಿಹಾರ ಪಡೆದುಕೊಳ್ಳುವುದಕ್ಕೆ ಮಾರ್ಗಸೂಚಿಗಳು ಅವಕಾಶ ಕಲ್ಪಿಸುತ್ತವೆಯಾದರೂ ತೊಂದರೆಗೆ ಒಳಗಾದವರಿಗೆ ಅವುಗಳ ಪ್ರಯೋಜನ ಪೂರ್ಣಪ್ರಮಾಣದಲ್ಲಿ ದೊರೆಯಬೇಕು. ಈ ಹಿಂದೆ ‘ಬುಲ್ಡೋಜರ್ ನ್ಯಾಯ’ದ ಕಾರಣದಿಂದಾಗಿ ತಮ್ಮ ಮನೆಗಳನ್ನು ಕಳೆದು ಕೊಂಡವರಿಗೆ ಈಗ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.