ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ, ಇಂಗ್ಲೆಂಡ್ ನೆಲದಲ್ಲಿ ಭಾರತದ ಕ್ರೀಡಾಪಟುಗಳು ತ್ರಿವರ್ಣಧ್ವಜವು ಹೆಮ್ಮೆಯಿಂದ ನಲಿದಾಡುವಂತೆ ಮಾಡಿದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳನ್ನು ಗೆದ್ದು ಅಮೋಘ ಸಾಧನೆ ಮಾಡಿದರು. ಕೂಟದಲ್ಲಿ 215 ಕ್ರೀಡಾಪಟುಗಳು 16 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಿದರು. ಈ ಪೈಕಿ 12 ವಿಭಾಗಗಳಲ್ಲಿ ಪದಕಗಳು ಒಲಿದಿವೆ. ಭಾರತ 4ನೇ ಸ್ಥಾನ ಪಡೆದಿದೆ. ಈ ಸಾಧನೆ ಸಣ್ಣದಲ್ಲ.
ಅದರಲ್ಲೂ ಈ ಬಾರಿ ಶೂಟಿಂಗ್ ವಿಭಾಗವನ್ನು ಕೈಬಿಡಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಶೂಟಿಂಗ್‌ನಲ್ಲಿಯೇ ಭಾರತವು ಒಟ್ಟು 16 ಪದಕಗಳನ್ನು ಪಡೆದಿತ್ತು. ಈ ಸಲ ಕುಸ್ತಿ ಹಾಗೂ ವೇಟ್‌ಲಿಫ್ಟಿಂಗ್ ವಿಭಾಗಗಳ ಸ್ಪರ್ಧಿಗಳು ಹೆಚ್ಚು ಪದಕಗಳನ್ನು ಮೊಗೆದುಕೊಟ್ಟರು. ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಆಟಗಾರರು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಮೂರನೇ ಬಾರಿ ಕಾಮನ್‌ವೆಲ್ತ್ ಕೂಟದಲ್ಲಿ ಆಡಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಚಿನ್ನಕ್ಕೆ ಮುತ್ತಿಟ್ಟರು.
ಇಪ್ಪತ್ತು ವರ್ಷ ವಯಸ್ಸಿನ ಲಕ್ಷ್ಯ ಸೇನ್, ಪುರುಷರ ಸಿಂಗಲ್ಸ್‌ನ ಚಿನ್ನದ ಹುಡುಗನಾಗಿ ಉದಯಿಸಿದರು. ಟೇಬಲ್ ಟೆನಿಸ್‌ನಲ್ಲಿ ಅನುಭವಿ ಅಚಂತ ಶರತ್ ಕಮಲ್ ಮೂರು ಚಿನ್ನದ ಪದಕಗಳನ್ನು ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಸತ್ಯನ್, ಶ್ರೀಜಾ ಅಕುಲಾ ಕೂಡ ಮಿಂಚಿದರು. ವೇಟ್‌ಲಿಫ್ಟಿಂಗ್‌ನಲ್ಲಿ ಯುವಪ್ರತಿಭೆ ಜೆರೆಮಿ ಲಾಲ್‌ರಿನುಂಗಾ, ಕನ್ನಡಿಗ ಗುರುರಾಜ್ ಪೂಜಾರಿ, ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಕುಸ್ತಿಯಲ್ಲಿ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಚಿನ್ನ ಗೆದ್ದರು.
ಈ ಸಲ ಟ್ರ್ಯಾಕ್ ಹಾಗೂ ಫೀಲ್ಡ್, ಜುಡೊ ಮತ್ತು ಲಾನ್‌ಬಾಲ್ಸ್‌ನಲ್ಲಿಯೂ ಎರಡಕ್ಕಿಂತ ಹೆಚ್ಚು ಪದಕಗಳು ಒಲಿದಿದ್ದು ಉತ್ತಮ ಸಾಧನೆ. ಜಾವೆಲಿನ್ ಥ್ರೋನಲ್ಲಿ ಚಾಂಪಿಯನ್ ನೀರಜ್ ಚೋಪ್ರಾ ಗೈರುಹಾಜರಿ ಕಾಡಿತು. ಆದರೆ ಮಹಿಳೆಯರ ಜಾವೆಲಿನ್‌ನಲ್ಲಿ ಅನುರಾಣಿ ಪದಕ ಗೆದ್ದು ಸಮಾಧಾನ ತಂದರು. ಈ ಕೂಟದಲ್ಲಿ ಸೇರ್ಪಡೆಯಾದ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ಸಾಧನೆ ಮಾಡಿದೆ. ಇದರೊಂದಿಗೆ ಕ್ರಿಕೆಟ್ ಆಟವನ್ನೂ ಒಲಿಂಪಿಕ್ ಕೂಟಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ಚಾಲನೆ ದೊರೆಯಿತು.
ಈ ಎರಡು ದಶಕಗಳಲ್ಲಿ ನಡೆದ ಆರು ಕಾಮನ್‌ವೆಲ್ತ್ ಕೂಟಗಳಲ್ಲಿ ಸತತವಾಗಿ 50ಕ್ಕಿಂತ ಹೆಚ್ಚು ಪದಕಗಳನ್ನು ಭಾರತವು ಗೆದ್ದಿರುವುದು ಗಮನಾರ್ಹ. ಈ ಸಾಧನೆಯ ಓಟದ ಹಿಂದೆ ಹಲವು ಕಾರಣಗಳಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಸಾಧನೆ ಮೂಡುತ್ತಿರುವುದು ಭಾರತದ ಕ್ರೀಡೆಯು ವೃತ್ತಿಪರತೆಯತ್ತ ಹೆಜ್ಜೆ ಇಟ್ಟಿರುವುದರ ಸೂಚಕವೂ ಹೌದು. ಇದರಿಂದಾಗಿ, ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಭರವಸೆ ಮೂಡುತ್ತಿದೆ. ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ಕ್ರೀಡಾ ವಸತಿ ಶಾಲೆಗಳು ಮತ್ತು ಅಕಾಡೆಮಿಗಳನ್ನು ಆರಂಭಿಸಿರುವುದು ಕೂಡ ಆಟಗಾರರ ಬೆಳವಣಿಗೆಗೆ ಸಕಾರಾತ್ಮಕವಾಗಿ ಒದಗಿಬಂದಿದೆ.
ಕೇಂದ್ರ ಕ್ರೀಡಾ ಇಲಾಖೆಯ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಯೂ ಕ್ರೀಡಾಪಟುಗಳಿಗೆ ತಕ್ಕಮಟ್ಟಿಗೆ ಆರ್ಥಿಕ ನೆರವು ನೀಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ– ಖಾಸಗಿ ಸಹಭಾಗಿತ್ವದಿಂದಾಗಿ ವಿದೇಶಿ ಕೋಚ್‌ಗಳ ಲಭ್ಯತೆ, ನೂತನ ತಂತ್ರಜ್ಞಾನ ಹಾಗೂ ಕ್ರೀಡಾವಿಜ್ಞಾನದ ನೆರವು ದೊರೆಯುತ್ತಿರುವುದು ಆಟಗಾರರ ಸಾಮರ್ಥ್ಯ ವೃದ್ಧಿಗೆ ಇಂಬು ನೀಡಿವೆ. ಪ್ರಚಾರ ಹೆಚ್ಚಿಗೆ ಲಭಿಸುತ್ತಿರುವುದರಿಂದ ಪ್ರಾಯೋಜಕರೂ ಒಲವು ತೋರುತ್ತಿದ್ದಾರೆ. ಆದರೆ, ಕ್ರೀಡಾ ಫೆಡರೇಷನ್‌ಗಳಲ್ಲಿನ ಆಡಳಿತವು ಸುಧಾರಣೆಯಾಗುವುದು ಇನ್ನೂ ಬಾಕಿ ಇದೆ. ಈಗಲೂ ಪಟ್ಟಭದ್ರರು ಮತ್ತು ರಾಜಕಾರಣಿಗಳ ಹಸ್ತಕ್ಷೇಪ ನಿಂತಿಲ್ಲ. ಕ್ರೀಡಾ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸದ ಫೆಡರೇಷನ್‌ಗಳಿಗೆ ನ್ಯಾಯಾಲಯಗಳು ಚಾಟಿ ಬೀಸುತ್ತಿವೆ.
ಕೆಲವು ಅಥ್ಲೀಟ್‌ಗಳು ತಮ್ಮ ತರಬೇತಿ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಇಂತಹದೇ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಸೂಚನೆಯ ಮೇರೆಗೆ ಕೊನೆಕ್ಷಣದಲ್ಲಿ ತೇಜಸ್ವಿನ್ ಶಂಕರ್ ಅವರಿಗೆ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಲಭಿಸಿತ್ತು. ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನ್ ಕಂಚು ಗೆದ್ದರು. ಈ ವಿಭಾಗದಲ್ಲಿ ಭಾರತಕ್ಕೆ ದಕ್ಕಿದ ಮೊದಲ ಪದಕ ಇದು.
ಇವೆಲ್ಲದರಾಚೆ ಕ್ರಿಕೆಟ್ ಅಭಿಮಾನಿಗಳೇ ಹೆಚ್ಚಿರುವ ದೇಶದಲ್ಲಿ ಬೇರೆ ಕ್ರೀಡೆಗಳಲ್ಲಿಯೂ ತಾರೆಗಳು ಮಿನುಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಪ್ರತೀ ಸಲ ಇಂತಹದೊಂದು ದೊಡ್ಡ ಸಾಧನೆ ಮೂಡಿದಾಗ ಯುವ ಸಮೂಹದಲ್ಲಿ ಉಂಟಾಗುವ ಸಂಚಲನವನ್ನು ಬಳಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಪ್ರತಿಭಾಶೋಧಕ್ಕೆ ಮುಂದಾಗಬೇಕು. ಭವಿಷ್ಯದಲ್ಲಿ ಇನ್ನೂ ಹೆಚ್ಚು ಪದಕಗಳು ಭಾರತದ ಮಡಿಲು ಸೇರುವಂತಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.