ಭಾರತದ ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ದೇಶದ ಸಂವಿಧಾನವನ್ನು ಅಂಗೀಕರಿಸುವ ಮೂಲಕ ಸ್ವತಂತ್ರ ಭಾರತವು ತನ್ನ ಎಲ್ಲ ಪ್ರಜೆಗಳ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ರಕ್ಷಿಸುವ ಹಾಗೂ ಅವರಲ್ಲಿ ಭ್ರಾತೃತ್ವವನ್ನು ಪ್ರೇರೇಪಿಸುವ ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಬಲಗೊಳ್ಳುವ ಪ್ರಕ್ರಿಯೆಗೆ ನಾಂದಿಹಾಡಿತು. ಸಂವಿಧಾನದ ತತ್ವ ಮತ್ತು ಆಶಯಗಳನ್ನು ಸಾಕಾರಗೊಳಿಸುವಲ್ಲಿ ದೇಶವು ಈವರೆಗೆ ಕ್ರಮಿಸಿರುವ ಹಾದಿಯ ಕುರಿತು ಪರಾಮರ್ಶೆ ನಡೆಸಲು ಮತ್ತು ಆ ಉದ್ದೇಶಕ್ಕೆ ತನ್ನನ್ನು ತಾನು ಮರು ಸಮರ್ಪಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲು ಸಂವಿಧಾನ ದಿನವು ಒಂದು ಸೂಕ್ತ ಸಂದರ್ಭ. ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನ ಗಳಲ್ಲಿರುವ ಅತ್ಯುತ್ತಮ ವಿಚಾರಗಳು ಮತ್ತು ಮಾದರಿಗಳನ್ನು ನಮ್ಮ ಸಂವಿಧಾನವು ಒಳಗೊಂಡಿದೆ. ಆದರೆ, ನಮ್ಮ ಸಂವಿಧಾನವು ದೇಶದ ಇತಿಹಾಸ, ಪರಂಪರೆ ಮತ್ತು ಮೌಲ್ಯಗಳೊಂದಿಗೆ ಆಳವಾದ ನಂಟು ಹೊಂದಿದ್ದು, ಭವಿಷ್ಯದ ಭಾರತಕ್ಕೆ ಅಗತ್ಯವಿರುವ ದೂರದೃಷ್ಟಿಯೂ ಅದರಲ್ಲಿ ಅಡಕವಾಗಿದೆ. ಭಾರತ ಸರ್ಕಾರದ ಕಾಯ್ದೆ–1935ರಲ್ಲಿ ಮಾತ್ರವಲ್ಲ, ತಿಲಕ್ ಅವರ 1895ರ ಸ್ವರಾಜ್ ಮಸೂದೆ, 1918ರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಾಡಿದ ಹಕ್ಕುಗಳಿಗೆ ಸಂಬಂಧಿಸಿದ ಘೋಷಣೆ ಹಾಗೂ 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ಬದಲಾವಣೆಗೆ ಸಂಬಂಧಿಸಿದಂತೆ ಮಾಡಿದ ಘೋಷಣೆಗಳಲ್ಲೂ ಅಂತಹ ಪ್ರಸ್ತಾವಗಳಿದ್ದವು. ದೇಶದ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳು ಸಂವಿಧಾನದ ಹೃದಯದಿಂದಲೇ ಬಂದಿವೆ. ಅವುಗಳ ಮೂಲವು ಸಂವಿಧಾನದ ದಿಕ್ಸೂಚಿಯಂತಿರುವ ರಾಜ್ಯ ನಿರ್ದೇಶಕ ತತ್ವಗಳು.
‘ಸಂವಿಧಾನವು ರಚನಾ ಸಭೆಯು ಅನುಮೋದಿಸಿರುವ ಒಂದು ದಾಖಲೆ ಮಾತ್ರ ಅಲ್ಲ; ಅದು ಯಾರನ್ನು ಪ್ರತಿನಿಧಿಸುತ್ತದೆಯೋ ಅವರ ಮೂಲದಿಂದಲೇ ಬಂದ ಸನ್ನದು’ ಎಂದು ಸಂವಿಧಾನಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ನಾಗರಿಕರ ಎಲ್ಲ ಹಕ್ಕುಗಳ ಮೂಲವಾದ ಸಂವಿಧಾನವು ಒಂದು ರಾಜಕೀಯ, ಸಾಮಾಜಿಕ ಮತ್ತು ಕಾನೂನುಬದ್ಧ ಸನ್ನದು, ಅದು ದೇಶದಲ್ಲಿ ಪ್ರಜಾತಾಂತ್ರಿಕ ಮತ್ತು ಗಣರಾಜ್ಯ ಮಾದರಿಯ ಆಡಳಿತವನ್ನು ಸೃಷ್ಟಿಸಿತು. ಪ್ರಭುತ್ವದ ವಿವಿಧ ಅಂಗಗಳ ಕುರಿತು ಸ್ಪಷ್ಟವಾದ ಕಲ್ಪನೆ, ಅವುಗಳ ಮಧ್ಯೆ ಅಧಿಕಾರ ಹಂಚಿಕೆಯ ನಿಖರ ವ್ಯಾಖ್ಯಾನ, ಪ್ರಜಾತಾಂತ್ರಿಕ ಚುನಾವಣಾ ಪದ್ಧತಿಯ ಸ್ಪಷ್ಟ ನಿರೂಪಣೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಸಾಮಾಜಿಕ ವೈವಿಧ್ಯವನ್ನೂ ಕಾಪಿಟ್ಟುಕೊಳ್ಳುವ ಬಹುಮುಖ್ಯವಾದ ಅಂಶಗಳನ್ನು ನಮ್ಮ ಸಂವಿಧಾನವು ಹೊಂದಿದೆ. ಸಂವಿಧಾನದ ಮೂಲ ಸ್ವರೂಪವು ಅದರ ಎಲ್ಲ ಗುಣಲಕ್ಷಣಗಳೊಂದಿಗೆ ಮುಂದುವರಿಯುತ್ತಿದ್ದು, ಹಲವು ತಿದ್ದುಪಡಿ, ವ್ಯಾಖ್ಯಾನಗಳ ನಂತರವೂ ಅದು ದೃಢವಾಗಿ ಉಳಿದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ 75 ವರ್ಷಗಳಲ್ಲಿ ಭಾರತದ ಸಂವಿಧಾನಕ್ಕೆ 100ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ. ನಮ್ಮ ಸಂವಿಧಾನವು ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಒಗ್ಗಿಕೊಳ್ಳುವ ಮತ್ತು ಕ್ರಿಯಾಶೀಲ ಗುಣವನ್ನು ಹೊಂದಿದೆ ಎಂಬುದು ಇದರಿಂದ ಸಾಬೀತಾಗಿದೆ. ಬದಲಾವಣೆಯ ಅಗತ್ಯಗಳು ಹಾಗೂ ಸಮಾಜದ ಆಲೋಚನೆಗಳು ಈ ತಿದ್ದುಪಡಿಗಳಲ್ಲಿ ಅಭಿವ್ಯಕ್ತವಾಗಿವೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಂವಿಧಾನವು ಬೆದರಿಕೆಯನ್ನು ಎದುರಿಸಿತ್ತು. ಅದರ ಪ್ರಮುಖ ಭಾಗಗಳನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಇದರಿಂದ ಸಂವಿಧಾನದ ಮೂಲ ಚೈತನ್ಯವೇ ಅಪಾಯಕ್ಕೆ ಸಿಲುಕಿತ್ತು. ಸಂವಿಧಾನವು ದೇಶದ ಪ್ರಜೆ ಮತ್ತು ಪ್ರಭುತ್ವದ ನಡುವಣ ಒಡಂಬಡಿಕೆ. ಅದನ್ನು ಮೀರಿ ತನ್ನ ಅನುಕೂಲಕ್ಕೆ ಬೇಕಾದಂತೆ ಒಡಂಬಡಿಕೆಯ ನಿಬಂಧನೆಗಳನ್ನು ಬದಲಿಸುವ ಪ್ರವೃತ್ತಿಯನ್ನು ಸರ್ಕಾರ ಹೊಂದಿರುತ್ತದೆ. ಸಂವಿಧಾನವು ತಮ್ಮ ರಾಜಕೀಯ ಅನುಕೂಲಕ್ಕೆ ಬಳಕೆಯಾಗಬೇಕು ಎಂದು ಸರ್ಕಾರದ ನೇತೃತ್ವ ವಹಿಸಿರುವವರು ಬಯಸುತ್ತಾರೆ. ಅದೇ ಉದ್ದೇಶದಿಂದ ಅವರ ಆಸಕ್ತಿ ಮತ್ತು ಸಿದ್ಧಾಂತಗಳಿಗೆ ಹೊಂದಾಣಿಕೆಯಾಗುವಂತೆ ಸಂವಿಧಾನವನ್ನು ವ್ಯಾಖ್ಯಾನಿಸುತ್ತಿರುತ್ತಾರೆ. ಮೂಲತಃ ಮತ್ತು ಅತಿಮುಖ್ಯವಾಗಿ ಸಂವಿಧಾನವು ನಾಗರಿಕರ ಸ್ವಾತಂತ್ರ್ಯದ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯ ರಕ್ಷಣೆಯ ಸಾಧನ. ಸ್ವಾತಂತ್ರ್ಯದ ರಕ್ಷಣೆಯ ವಿಚಾರದಲ್ಲಿ ನಾಗರಿಕರು ಸದಾ ಜಾಗರೂಕರಾಗಿರಬೇಕು. ಪ್ರತಿ ಸಂವಿಧಾನ ದಿನವೂ ಅದನ್ನು ನೆನಪಿಸುವ ಸಂದರ್ಭವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.