ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಈ ತಿಂಗಳ 12ರಿಂದ 16ರವರೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿರುವ ಈ ವಸ್ತ್ರಸಂಹಿತೆ ಅತಿರೇಕದಿಂದ ಕೂಡಿದೆ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸೂಚಿಸುವಂತಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ‘ನೀಟ್’ ಬರೆಯುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಯಲ್ಲಿದೆ. ಆ ನಿರ್ಬಂಧಗಳನ್ನೀಗ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗೂ ಜಾರಿಗೊಳಿಸಲಾಗಿದೆ. ಅಭ್ಯರ್ಥಿಗಳು ತುಂಬು ತೋಳಿನ ಉಡುಪು, ಶೂ, ಆಲಂಕಾರಿಕ ಉಡುಪು ಹಾಗೂ ಆಭರಣಗಳನ್ನು ತೊಡುವುದನ್ನು ನಿಷೇಧಿಸಲಾಗಿದೆ. ಮಾಂಗಲ್ಯ ಸರ ಧರಿಸುವುದಕ್ಕಷ್ಟೇ ಅವಕಾಶ ನೀಡಲಾಗಿದ್ದು, ಉಂಗುರ, ಕಿವಿಯೋಲೆ, ನೆಕ್ಲೇಸ್, ಬಳೆ, ಪೆಂಡೆಂಟ್‌ಗಳಂತಹ ಯಾವುದೇ ಆಭರಣ ಧರಿಸುವುದಕ್ಕೆ ಅವಕಾಶವಿಲ್ಲವೆಂದು ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಈ ನಿರ್ಬಂಧಗಳನ್ನು ನೋಡಿದರೆ, ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬರುವರೋ ಅಥವಾ ಫ್ಯಾಷನ್ ಷೋದಲ್ಲಿ ಭಾಗಿಯಾಗಲು ಬರುವರೋ ಎನ್ನುವ ಗೊಂದಲ ಪ್ರಾಧಿಕಾರಕ್ಕೆ ಇರುವಂತಿದೆ. ವಸ್ತ್ರಸಂಹಿತೆಯ ನಿರ್ಧಾರವು ಪರೀಕ್ಷೆಯನ್ನು ಸಮರ್ಥವಾಗಿ ನಡೆಸುವುದಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರದ ದಕ್ಷತೆಯ ಬಗ್ಗೆಯೇ ಅನುಮಾನ ಹುಟ್ಟಿಸುವಂತಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಅವಮಾನಿಸುವಂತೆಯೂ ಇದೆ. ಪರೀಕ್ಷೆ ಬರೆಯುತ್ತಿರುವವರು ಶಾಲಾಕಾಲೇಜು ವಿದ್ಯಾರ್ಥಿಗಳಲ್ಲ. ಪದವಿ ವಿದ್ಯಾರ್ಥಿಗಳಿಗೆ ಕಲಿಸುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಿಯೋಜನೆಗೊಳ್ಳಬೇಕಾದವರು ನಕಲು ಮಾಡಿಯೇ ತೀರುತ್ತಾರೆಂದು ಭಾವಿಸುವುದು ಹಾಗೂ ಆ ನಕಲನ್ನು ತಡೆಯಲು ವಿಪರೀತ ಕ್ರಮಗಳನ್ನು ಕೈಗೊಳ್ಳುವುದು ತಮಾಷೆಯಾಗಿದೆ. ಸಂಭಾವ್ಯ ಅಕ್ರಮಗಳನ್ನು ತಡೆಯಲಿಕ್ಕಾಗಿ ಎಲ್ಲ ಕೊಠಡಿಗಳಲ್ಲೂ ಮೇಲ್ವಿಚಾರಕರು ಇದ್ದೇಇರುತ್ತಾರೆ.
ಪರೀಕ್ಷೆ ಬರೆಯುವವರು ಕೂಡ ಸಾಮಾಜಿಕ ಜವಾಬ್ದಾರಿ ಹೊಂದಿರುವವರೇ ಆಗಿರುತ್ತಾರೆ. ಪ್ರೌಢ ಅಭ್ಯರ್ಥಿಗಳೇ ಇರುವ ಪರೀಕ್ಷೆಯಲ್ಲಿ ತುಡುಗು ನಡೆದೇ ನಡೆಯುತ್ತದೆಂದು ಭಾವಿಸುವುದು ಸರಿಯಲ್ಲ. ನಕಲು ಮಾಡುವುದಕ್ಕೆ ಸಾಧ್ಯವಾಗದಂತೆ ಪ್ರಶ್ನೆಪತ್ರಿಕೆಯನ್ನೂ
ಒಳಗೊಂಡಂತೆ ಇಡೀ ಪರೀಕ್ಷಾ ಪದ್ಧತಿಯನ್ನು ರೂಪಿಸಬೇಕಾದ ಪರೀಕ್ಷಾ ಪ್ರಾಧಿಕಾರ, ಆ ಕೆಲಸ ಮಾಡುವುದರ ಬದಲು ಅಭ್ಯರ್ಥಿಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರಲು ಹೊರಟಿದೆ. ನೆಮ್ಮದಿಯ ವಾತಾವರಣದಲ್ಲಿ ಪರೀಕ್ಷೆ ಬರೆಯಬೇಕಾದ ಅಭ್ಯರ್ಥಿಗಳು, ನಿರ್ಬಂಧಗಳ ಒತ್ತಡದಲ್ಲಿ ಪರೀಕ್ಷೆ ಬರೆಯುವಂತಾಗಿದೆ. ಪರೀಕ್ಷೆ ಬರೆಯಲಿಕ್ಕೆಂದೇ ವಿಶೇಷ ಉಡುಪಿನ ಸಿದ್ಧತೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯವನ್ನೂ ಕೆಲವು ಅಭ್ಯರ್ಥಿಗಳು ಎದುರಿಸಬೇಕಾಗಬಹುದು.
ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವಸ್ತ್ರಸಂಹಿತೆ ರೂಪಿಸಲಾಗಿದೆ ಎಂದು ಹೇಳಲಾಗಿದೆ. ಯಾವುದೇ ಪರೀಕ್ಷೆ ಪಾರದರ್ಶಕವಾಗಿರಬೇಕು ಎನ್ನುವುದರ ಬಗ್ಗೆ ಯಾರಿಗೂ ತಕರಾರು ಇರಬಾರದು. ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೊ ಫೋನ್, ಬ್ಲೂಟೂತ್‌ಗಳಂಥ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ತರಬಾರದೆನ್ನುವ ನಿಯಮಗಳನ್ನೂ ಒಪ್ಪಬಹುದು. ಆದರೆ, ತೊಡುವ ಅಂಗಿ ಇಂಥದ್ದೇ ಆಗಿರಬೇಕು ಹಾಗೂ ಅದು ಆಲಂಕಾರಿಕ ಆಗಿರಬಾರದು ಎಂದು ಬಯಸುವುದು ವಿವೇಕದ ನಡವಳಿಕೆಯಲ್ಲ. ಹೆಣ್ಣು ಮಕ್ಕಳು ಮಾಂಗಲ್ಯಸರ ಹೊರತುಪಡಿಸಿ ಉಳಿದೆಲ್ಲ ಒಡವೆಗಳನ್ನು ತೆಗೆದಿರಿಸಿ ಬರಬೇಕೆಂದು ಬಯಸುವುದೂ ಅತಿರೇಕದ ನಿರ್ಧಾರ. ಬಾಟಲಿಯಲ್ಲಿ ನೀರು ತರಲು ಅವಕಾಶ ಕಲ್ಪಿಸಿರುವ ಪರೀಕ್ಷಾ ಪ್ರಾಧಿಕಾರವು ಆ ಬಾಟಲಿಯ ಮೇಲೆ ಬ್ರ್ಯಾಂಡ್ ಹೆಸರಿರಬಾರದು ಎಂದು ಬಯಸುವುದು ಹುಚ್ಚುತನ.
ಬಟ್ಟೆಯ ಮೇಲಿನ ಕಸೂತಿ, ಕಾಲಿನ ಚಪ್ಪಲಿ, ಅಂಗಿಯ ಗುಂಡಿ ಹಾಗೂ ಕಿಸೆಗಳನ್ನೂ ಪರೀಕ್ಷೆಗೊಳಪಡಿಸಲು ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಪ್ರಸ್ತುತ ವಸ್ತ್ರಸಂಹಿತೆಯಲ್ಲಿ ಅಭ್ಯರ್ಥಿಗಳು ಆಲಂಕಾರಿಕ ಉಡುಪು ಧರಿಸಲು ಅವಕಾಶವಿಲ್ಲ. ಹಾಗಾದರೆ, ಯಾವ ಉಡುಪು ಆಲಂಕಾರಿಕ ಯಾವುದು ಅಲ್ಲವೆಂದು ನಿರ್ಧರಿಸುವವರು ಯಾರು ಹಾಗೂ ಅಲಂಕಾರದ ಮಾನದಂಡಗಳು ಯಾವುವೆನ್ನುವುದನ್ನು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಬೇಕು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಈವರೆಗೆ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ವಸ್ತ್ರಸಂಹಿತೆ ಇರಲಿಲ್ಲ. ಹಾಗೆಂದು ಆ ಪರೀಕ್ಷೆಗಳ ಮೂಲಕ ಆಯ್ಕೆಯಾದವರು ನಕಲು ಮಾಡಿದ್ದಾರೆಂದು ಭಾವಿಸಬೇಕೆ? ವಸ್ತ್ರಸಂಹಿತೆಗೆ ಬದ್ಧವಾಗಿ ಈಗ ಪರೀಕ್ಷೆ ಬರೆಯುವವರು ನಕಲು ಮಾಡುವುದಿಲ್ಲವೆಂದು ಪ್ರಾಧಿಕಾರ ಖಾತರಿ ನೀಡುತ್ತದೆಯೇ? ಪರೀಕ್ಷೆಗಳನ್ನು ಸರಳವಾಗಿ ಹಾಗೂ ಸಮರ್ಥವಾಗಿ ನಡೆಸಬೇಕಾದ ಪ್ರಾಧಿಕಾರ ಅನಗತ್ಯ ನೀತಿನಿಯಮಗಳನ್ನು ರೂಪಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನೇ ಕಗ್ಗಂಟು ಮಾಡುತ್ತಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಸುವ ಪರೀಕ್ಷೆ ಮಾತ್ರವಲ್ಲ, ಶಾಲಾಕಾಲೇಜು ಸೇರಿದಂತೆ ಯಾವ ಹಂತದಲ್ಲೂ ಪರೀಕ್ಷೆ ಬರೆಯುವ ವಾತಾವರಣ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ಹಾಗೂ ಅಭ್ಯರ್ಥಿಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರದಿರುವುದು ಆರೋಗ್ಯಕರ ಸಮಾಜದ ಲಕ್ಷಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.