ADVERTISEMENT

ಸಂಪಾದಕೀಯ| ಜಾತಿವಿಷ: ದೇಶದ ಮಾನ ಮುಕ್ಕು– ಇನ್ನೆಷ್ಟು ದಿನ ಮರ್ಯಾದೆಗೇಡು ಕೃತ್ಯ?

ಸಂಪಾದಕೀಯ
Published 28 ಜೂನ್ 2023, 23:32 IST
Last Updated 28 ಜೂನ್ 2023, 23:32 IST
   

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ನಡೆದಿರುವ ಯುವತಿಯೊಬ್ಬಳ ಕೊಲೆ, ಸಮಾಜದಲ್ಲಿ ಸುಪ್ತವಾಗಿರುವ ಜಾತಿವಿಷ ಆಗಾಗ್ಗೆ ಸ್ಫೋಟಿಸಿ ಹೊರಚಿಮ್ಮುತ್ತಿರುವುದಕ್ಕೆ ನಿದರ್ಶನವಾಗಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಯುವತಿಯನ್ನು ಆಕೆಯ ತಂದೆಯೇ ಕೊಂದಿದ್ದಾನೆ. ಪ್ರೇಮಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ, ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಯುವಕನನ್ನು ಮದುವೆಯಾಗುವುದಾಗಿ
ಹಟ ಹಿಡಿದ ಮಗಳ ಧೋರಣೆ ಅಪ್ಪನ ಕಣ್ಣಿಗೆ ಕೊಲ್ಲಬಹುದಾದ ಅಪರಾಧವಾಗಿ ಕಾಣಿಸಿರುವುದನ್ನು
ಕಲ್ಪಿಸಿಕೊಳ್ಳುವುದೇ ಅಸಹನೀಯ. ಈ ಪ್ರಕರಣವು ಯಾವ ಹಂತಕ್ಕಾದರೂ ಹೋಗಬಹುದಾದ ಜಾತೀಯತೆಯ ಅಮಾನವೀಯ ಸ್ವರೂಪವನ್ನು ಸೂಚಿಸುವುದರ ಜೊತೆಗೆ, ಕ್ರೌರ್ಯ ಮತ್ತು ಹಿಂಸೆ ಸಮಾಜದಲ್ಲಿ ಆಳವಾಗಿ ಬೇರೂರಿರುವುದಕ್ಕೂ ಉದಾಹರಣೆಯಂತಿದೆ. ಈ ಕೃತ್ಯದ ಆಸುಪಾಸಿನಲ್ಲೇ, ಕುಟುಂಬದ ನಿರ್ಣಯಕ್ಕೆ ವಿರುದ್ಧವಾಗಿ ಮದುವೆಯಾದ ಇಪ್ಪತ್ತು ವರ್ಷದ ಮಹಿಳೆ ತನ್ನ ಸಂಬಂಧಿಯಿಂದ ಕೊಲೆಯಾದ ಪ್ರಕರಣ ಗುಜರಾತ್‌ನಲ್ಲಿ ನಡೆದಿದೆ. ಪ್ರೇಮಿಗಳನ್ನು ಕೊಂದು ಅವರ ದೇಹಗಳನ್ನು ಚಂಬಲ್‌ ನದಿಗೆಸೆದ ಪ್ರಕರಣದಲ್ಲಿ, ಯುವತಿಯ ತಂದೆ ಸೇರಿದಂತೆ ಮೂವರನ್ನು ಬಂಧಿಸಿರುವ ಸುದ್ದಿ ಮಧ್ಯಪ್ರದೇಶದಿಂದ ಇತ್ತೀಚೆಗಷ್ಟೇ ವರದಿಯಾಗಿತ್ತು. ತುಮಕೂರು ಜಿಲ್ಲೆಯ ಚಿಕ್ಕಹೆಡಿಗೆಹಳ್ಳಿಯಲ್ಲಿ ನಾಯಕ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ, ಬೇರೆ ಜಾತಿಯ ಯುವಕನನ್ನು ಪ್ರೇಮಿಸಿದ ಮಗಳನ್ನು ಕೊಂದಿರುವ ಸುದ್ದಿ ಈಚೆಗೆ ವರದಿಯಾಗಿತ್ತು. ಹಿಂದಿನ  ವರ್ಷ ಬಳ್ಳಾರಿಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮದ ಕಾರಣದಿಂದಾಗಿ ತಂದೆಯಿಂದಲೇ ಕೊಲೆಗೀಡಾಗಿದ್ದಳು. ಮರ್ಯಾದೆಗೇಡು ಹತ್ಯೆಯು ಬೆಳಕಿಗೆ ಬಂದ ಇಂತಹ ಕೆಲವು ಉದಾಹರಣೆಗಳೊಂದಿಗೆ, ಆತ್ಮಹತ್ಯೆ ಹೆಸರಿನಲ್ಲಿ ಮುಚ್ಚಿಹೋಗಿರಬಹುದಾದ ಕೊಲೆಗಳನ್ನೂ ಊಹಿಸಿಕೊಂಡರೆ, ದೇಶದಲ್ಲಿ ಅಂತಃಕರಣದ ಒರತೆಯ ಸೆಲೆಗಳೇ ಬತ್ತಿಹೋಗಿರುವಂತೆ ಭಾಸವಾಗುತ್ತದೆ. ಈ ಪ್ರಕರಣಗಳು ‌ದೇಶದ ಜಾತ್ಯತೀತ ಸ್ವರೂಪವನ್ನು ಅಣಕ ಮಾಡುವಂತಿವೆ. ಸೌಹಾರ್ದ, ಸಹಬಾಳ್ವೆ ಹಾಗೂ ಕುಟುಂಬಪ್ರೇಮದ ಅನನ್ಯತೆಯನ್ನು ವಿಶ್ವಕ್ಕೆ ಸಾರುವ ಸಮಾಜಕ್ಕೆ ಕಳಂಕವಾಗಿವೆ. ಜಾತಿಶ್ರೇಷ್ಠತೆಯ ಕುರುಡಿನಲ್ಲಿ ನಡೆಯುವ ಬಹುತೇಕ ಹತ್ಯೆಗಳನ್ನು ಆತ್ಮಹತ್ಯೆಯೆಂದು ಮುಚ್ಚಿಹಾಕಲಾಗುತ್ತದೆ.

ಕೌಟುಂಬಿಕ ಸಂಬಂಧಗಳಿಗಿಂತಲೂ ಹುಸಿ ಹಿರಿಮೆಯೇ ಮುಖ್ಯವಾಗಿ ಕಾಣುವ ಮನಃಸ್ಥಿತಿಯ ಹಿಂದೆ ಅಮಲಿನ ರೂಪದಲ್ಲಿ ಜಾತಿಯು ಕೆಲಸ ಮಾಡುತ್ತಿರುವುದನ್ನು ಗಮನಿಸಬೇಕು. ಅರಿವುಗೇಡಿ ಸ್ಥಿತಿಯಲ್ಲಿ ಜಾತಿ ಮತ್ತು ಧರ್ಮವು ಮಾದಕ ಪದಾರ್ಥಗಳಂತೆ ಕೆಲಸ ಮಾಡುತ್ತಿರುವುದಕ್ಕೆ ನಿದರ್ಶನಗಳು ಪ್ರತಿನಿತ್ಯ ವರದಿ
ಯಾಗುತ್ತಿವೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದಯನೀಯ ಸ್ಥಿತಿಯಲ್ಲಿ ಇರುವವರೂ ಜಾತಿಯ ಹೆಸರಿನಲ್ಲಿ ಹಿಂಸ್ರಪಶುಗಳಂತೆ ವರ್ತಿಸತೊಡಗುತ್ತಾರೆ. ಮಕ್ಕಳನ್ನು ಬಲಿ ಕೊಟ್ಟು ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವ ಮನಃಸ್ಥಿತಿ ಮನುಷ್ಯತ್ವದ ಘನತೆಯನ್ನು ಮುಕ್ಕುಗೊಳಿಸುವಂತಹದ್ದು ಮಾತ್ರವಲ್ಲ, ಅದು ಸಮಾಜವನ್ನು ಬಾಧಿಸುವ ರೋಗವೂ ಹೌದು. ಕುಟುಂಬದ ಮರ್ಯಾದೆ ಹಾಗೂ ಜಾತಿ ಪ್ರತಿಷ್ಠೆ ಸಂರಕ್ಷಣೆಯ ನೆಪದಲ್ಲಿ ನಡೆಯುವ ಕೊಲೆಗಳು ಯಾವುದೇ ಕುಟುಂಬ, ಸಮುದಾಯ ಅಥವಾ ಸಮಾಜದ ಮರ್ಯಾದೆಯನ್ನು ಹೆಚ್ಚಿಸಲಾರವು. ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಪ್ರಜಾ
ಪ್ರಭುತ್ವ ವ್ಯವಸ್ಥೆಯಲ್ಲಿ, ಜಾತಿ ಒಂದು ಸಾಮಾಜಿಕ ವಾಸ್ತವ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ
ವಾದರೂ, ವ್ಯಕ್ತಿ ಅಥವಾ ಕುಟುಂಬದ ಘನತೆಗೂ ಜಾತಿಗೂ ಸಂಬಂಧ ಕಲ್ಪಿಸಲಾಗದು. ಜಾತಿಯೊಂದನ್ನು ಮೇಲು ಇಲ್ಲವೇ ಕೀಳು ಎಂದು ಭಾವಿಸುವುದು ಮೂರ್ಖತನವಷ್ಟೇ ಅಲ್ಲ, ರೋಗಗ್ರಸ್ತ ಮನಃಸ್ಥಿತಿಯೂ ಹೌದು. ಮರ್ಯಾದೆಗೇಡು ಹತ್ಯೆಯಂಥ ಅಮಾನುಷ ಕೃತ್ಯಗಳು ನಡೆದಾಗ ಸಮಾಜದಲ್ಲಿ ಆತಂಕ ಸಹಜವಾಗಿ ವ್ಯಕ್ತವಾಗುತ್ತದೆ. ಈ ಆತಂಕದ ತೀವ್ರತೆ ಹೆಚ್ಚು ಕಾಲ ಉಳಿಯುವುದಿಲ್ಲವಾದ್ದರಿಂದ, ಜಾತಿಶ್ರೇಷ್ಠತೆಯ ಹೆಸರಿನಲ್ಲಿ ಮತ್ತೆ ಮತ್ತೆ ಸಾವು ನೋವುಗಳು ಘಟಿಸುತ್ತಲೇ ಇವೆ. ಜಾತಿಯ ರೋಗಕ್ಕೆ ಭಾವುಕತೆ ಮದ್ದಾಗಲಾರದು. ಜಾತಿಯ ವೈರಸ್‌ನಿಂದ ನರಳುವ ಜನರನ್ನು ಬೆಳಕಿಗೆ ತಂದು ಅವರನ್ನು ಮಾನವೀಯಗೊಳಿಸುವುದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆ ಕುಡಿಯುವ ನೀರಿನ ಬಾವಿಯಂತಹದ್ದು. ಗಾಳಿ, ಬೆಳಕು ಕಾಣದೇ ಹೋದರೆ ಹಾಗೂ ಆಗಾಗ ಕೈಯಾಡಿಸದೇ ಹೋದರೆ ನೀರು ಕಲುಷಿತಗೊಂಡು ಕುಡಿಯಲು ಬಾರದಂತಾಗುತ್ತದೆ. ಸಮಾಜವೂ ಅಷ್ಟೇ; ವಿವೇಕದ ಗಾಳಿ, ಬೆಳಕಿಗೆ ಹಾಗೂ ಹೃದಯವಂತಿಕೆಯ ವಿಚಾರಗಳಿಗೆ ನಿರಂತರವಾಗಿ ಒಡ್ಡಿಕೊಳ್ಳದೇ ಹೋದರೆ ಸಂವೇದನೆಗಳನ್ನು ಕಳೆದುಕೊಂಡು ಜಡವಾಗತೊಡಗುತ್ತದೆ. ಅದರ ಫಲವಾಗಿ ಜಾತಿ ಕಲಹಗಳು, ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳು ನಡೆಯುತ್ತವೆ. ಜಾತಿವಿಷವನ್ನು ಹೋಗಲಾಡಿಸುವ ಕೆಲಸದಲ್ಲಿ ಸರ್ಕಾರದೊಂದಿಗೆ ಪ್ರಜ್ಞಾವಂತರು ಹಾಗೂ ಧಾರ್ಮಿಕ ಸಂಸ್ಥೆ–ಸಂಘಟನೆಗಳು ಕೈಜೋಡಿಸಬೇಕು. ಕಾನೂನು ಉಲ್ಲಂಘನೆ ಪ್ರಕರಣಗಳು ನಡೆದಾಗ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಸ್ವಸ್ಥ ಸಮಾಜಕ್ಕೆ ಕಾನೂನು ಕಣ್ಗಾವಲಿನ ಅಗತ್ಯವಿರು
ವಂತೆ ನೈತಿಕತೆಯ ಸ್ವಯಂ ನಿರ್ಬಂಧವೂ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT