ADVERTISEMENT

‍ಸಂಪಾದಕೀಯ: ಪತ್ರಕರ್ತರ ಡಿಜಿಟಲ್‌ ಸಾಧನ ಜಪ್ತಿ– ಕಟ್ಟುನಿಟ್ಟಿನ ಮಾರ್ಗಸೂಚಿ ಬೇಕು

ಸಂಪಾದಕೀಯ

ಸಂಪಾದಕೀಯ
Published 16 ನವೆಂಬರ್ 2023, 20:27 IST
Last Updated 16 ನವೆಂಬರ್ 2023, 20:27 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಮಾಧ್ಯಮ ಪ್ರತಿನಿಧಿಗಳಿಂದ ಡಿಜಿಟಲ್‌ ಉಪಕರಣಗಳನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ; ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಬೆದರಿಕೆಯನ್ನು ನಿಭಾಯಿಸಲು ಹೊಸ ದಾರಿಯನ್ನು ತೋರಬಹುದು ಎಂಬ ಭರವಸೆಯನ್ನು ಇದು ಮೂಡಿಸಿದೆ.

ಮಾಧ್ಯಮ ಸಂಸ್ಥೆಗಳಲ್ಲಿ ಶೋಧ ನಡೆಸಿದಾಗ ಅಲ್ಲಿರುವ ಪತ್ರಕರ್ತರ ಕೈಯಲ್ಲಿರುವ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ನಂತಹ ಡಿಜಿಟಲ್‌ ಸಾಧನಗಳನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ವಶಕ್ಕೆ ಪಡೆಯುತ್ತವೆ. ಹೀಗೆ ವಶಕ್ಕೆ ಪಡೆದ ಸಾಧನಗಳನ್ನು ತಮ್ಮ ಬಳಿಯೇ ಬಹುಕಾಲ ಉಳಿಸಿಕೊಳ್ಳುತ್ತವೆ. ಸುದ್ದಿ ಪೋರ್ಟಲ್‌ ‘ನ್ಯೂಸ್‌ಕ್ಲಿಕ್‌’ ಕಚೇರಿ ಮತ್ತು ಈ ಪೋರ್ಟಲ್‌ನ ಪತ್ರಕರ್ತರ ಮನೆಗಳಲ್ಲಿ ಇತ್ತೀಚೆಗೆ ಶೋಧ ನಡೆದಾಗ ಇದೇ ರೀತಿ ಮಾಡಲಾಗಿದೆ.

ADVERTISEMENT

ಫೌಂಡೇಷನ್‌ ಫಾರ್‌ ಮೀಡಿಯಾ ಪ್ರೊಫೆಷನಲ್ಸ್‌ ಸಂಸ್ಥೆಯು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ‍್ರೀಂ ಕೋರ್ಟ್‌, ಮಾರ್ಗಸೂಚಿ ರೂಪಿಸಲು ನಿರ್ದೇಶನ ನೀಡಿದೆ. ಮಾಧ್ಯಮ ಪ್ರತಿನಿಧಿಗಳ ಡಿಜಿಟಲ್‌
ಉಪಕರಣಗಳನ್ನು ಪರಿಶೀಲಿಸುವ ಅನಿಯಂತ್ರಿತ ಅಧಿಕಾರವು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಕರಡು
ಮಾರ್ಗಸೂಚಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

ಹೀಗೆ ಸಲ್ಲಿಸಲಾದ ಕರಡನ್ನು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳ ಜೊತೆಗೆ ಹಂಚಿಕೊಂಡು ಅವುಗಳ ಪ್ರತಿಕ್ರಿಯೆಯನ್ನೂ ಪಡೆಯಬಹುದಾಗಿದೆ ಎಂದು ಕೋರ್ಟ್‌ ಹೇಳಿದೆ. ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯೊಳಗೆ ಎಲ್ಲವೂ ಬರುತ್ತವೆ ಎಂಬುದನ್ನು ಒಪ್ಪಲಾಗದು ಮತ್ತು ಇದು ಅಪಾಯಕಾರಿ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಒಂದು ವೇಳೆ, ಸರ್ಕಾರವು ಮಾರ್ಗಸೂಚಿ ರೂಪಿಸದಿದ್ದರೆ ತಾನೇ ರೂಪಿಸಲು ಸಿದ್ಧ ಎಂದೂ ಹೇಳಿದೆ. 

ಡಿಜಿಟಲ್‌ ಉಪಕರಣಗಳನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅದು ಪತ್ರಕರ್ತರ ಕಾರ್ಯ
ನಿರ್ವಹಣೆಗೆ ಅಡ್ಡಿ ಆಗುವುದಿಲ್ಲ ಎಂಬುದನ್ನು ಹೊಸ ಮಾರ್ಗಸೂಚಿಯು ಖಾತರಿಪಡಿಸಿಕೊಳ್ಳಬೇಕು. ಉ‍ಪಕರಣಗಳನ್ನು ತಿರುಚುವ ಕೆಲಸ ಮಾಡಬಾರದು, ಪತ್ರಕರ್ತರ ಖಾಸಗಿತನ, ಪತ್ರಕರ್ತರ ಮೂಲಗಳು ಮತ್ತು ಮಾಹಿತಿಯ ಗೋಪ್ಯತೆ ಉಲ್ಲಂಘನೆ ಆಗಬಾರದು ಎಂಬುದರ ಖಾತರಿಯನ್ನೂ ಮಾರ್ಗ
ಸೂಚಿ ನೀಡಬೇಕು.

ಡಿಜಿಟಲ್‌ ಉ‍‍ಪಕರಣಗಳಲ್ಲಿ ವೈಯಕ್ತಿಕ, ಆರ್ಥಿಕ ಮತ್ತು ಇತರರ ಕುರಿತಾದ ಮತ್ತು ಇತರರು ನೀಡಿದ ಮಾಹಿತಿ ಇರಬಹುದು. ಈ ಎಲ್ಲವುಗಳ ಗೋಪ್ಯತೆಯ ರಕ್ಷಣೆ ಆಗಬೇಕು ಮತ್ತು ಮೂರನೇ ವ್ಯಕ್ತಿಯ ಕೈಗೆ ಈ ವಿವರಗಳು ದೊರಕಬಾರದು. ನ್ಯಾಯಾಂಗದ ವಾರಂಟ್‌ಗಳ ಮೂಲಕವೇ ಶೋಧ ಮತ್ತು ಜಪ್ತಿ ನಡೆಯಬೇಕು. ನಿರ್ದಿಷ್ಟ ಮಾಹಿತಿ ಪಡೆಯುವುದಕ್ಕಾಗಿ ಮಾತ್ರವೇ ಈ ಪ್ರಕ್ರಿಯೆಗೆ ಅವಕಾಶ ಇರಬೇಕು.

ಏನಾದರೂ ತಪ್ಪು ಜರುಗಿದೆಯೇ ಎಂಬುದನ್ನು ಹುಡುಕುವುದಕ್ಕಾಗಿ ಶೋಧ, ಜಪ್ತಿ ನಡೆಸಬಾರದು. ಪತ್ರಕರ್ತರ ವಿರುದ್ಧ ಬಳಸಬಹುದಾದ ಮಾಹಿತಿ ಸಂಗ್ರಹಿಸುವುದಕ್ಕಾಗಿಯೇ ಶೋಧ ನಡೆಸುವುದು ಸಲ್ಲದು. ಪತ್ರಕರ್ತರ ವೈಯಕ್ತಿಕ ಮತ್ತು ವೃತ್ತಿಪರ ಹಕ್ಕುಗಳ ರಕ್ಷಣೆಯ ಖಾತರಿ ನೀಡುವ ಸಮಗ್ರವಾದ
ಮಾರ್ಗಸೂಚಿಯನ್ನು ರೂಪಿಸಬೇಕಾದ ಅಗತ್ಯ ಇದೆ.

ಈ ವಿಚಾರದಲ್ಲಿ, ಸಂಕೀರ್ಣವಾದ ಹಲವು ಕಾನೂನು ಅಂಶಗಳನ್ನು ಪರಿಶೀಲನೆಗೆ ಒಳಪಡಿಸ
ಬೇಕಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ಹೇಳಿದೆ. ಸರ್ಕಾರದ ಅಧಿಕಾರ ಮತ್ತು ವ್ಯಕ್ತಿಯ ಹಕ್ಕುಗಳ ನಡುವೆ ಸಮತೋಲನ ಇರಬೇಕು ಎಂದು ಕೋರ್ಟ್‌ ಹೇಳಿದೆ. ತನಿಖಾ ಸಂಸ್ಥೆಗಳು ಹೊಂದಿರುವ ಅಧಿಕಾರದ ದುರ್ಬಳಕೆ ಆಗದಂತೆ ಖಾತರಿಪಡಿಸುವುದಕ್ಕೂ ಮಾರ್ಗಸೂಚಿಯ ಅಗತ್ಯ ಇದೆ.

‘ದೇಶವೊಂದು ತನ್ನ ತನಿಖಾ ಸಂಸ್ಥೆಗಳ ಮೂಲಕವೇ ನಡೆಯುವಂತಹ ಸ್ಥಿತಿ ನಿರ್ಮಾಣ ಆಗಬಾರದು’ ಎಂದೂ ಕೋರ್ಟ್‌ ಹೇಳಿದೆ. ಬ್ರಿಟನ್‌ ಮತ್ತು ಅಮೆರಿಕದಲ್ಲಿ ಡಿಜಿಟಲ್‌ ಉಪಕರಣಗಳ ಶೋಧ ಹಾಗೂ ಜಪ್ತಿಗೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮ ಮತ್ತು ನಿರ್ಬಂಧಗಳು ಇವೆ. ಆದರೆ, ಭಾರತದಲ್ಲಿ ಇರುವ ನಿಯಮಗಳು ಕೂಡ ಪಾಲನೆ ಆಗುತ್ತಿಲ್ಲ. ಹಾಗಾಗಿಯೇ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲು ಬಲವಾದ ವ್ಯವಸ್ಥೆಯೊಂದರ ಅಗತ್ಯ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.