ADVERTISEMENT

ಸಂಪಾದಕೀಯ: ಮಹಾರಾಷ್ಟ್ರದಲ್ಲಿ ಮಹಾಯುತಿ ಅಬ್ಬರ: ಇಂಡಿಯಾಕ್ಕೆ ಜಾರ್ಖಂಡ್‌ ಸಮಾಧಾನಕರ

ಸಂಪಾದಕೀಯ
Published 25 ನವೆಂಬರ್ 2024, 0:11 IST
Last Updated 25 ನವೆಂಬರ್ 2024, 0:11 IST
   

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ಯು ಜಯಭೇರಿ ಬಾರಿಸಿದೆ. ಹಾಗೆಯೇ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ನಿರ್ಣಾಯಕ ಗೆಲುವು ಪಡೆದಿದೆ. ಆದರೆ, ಈ  ಎರಡು ಗೆಲುವುಗಳ ನಡುವೆ ರಾಜಕೀಯವಾದ ಹೋಲಿಕೆ ಇಲ್ಲ. ಮಹಾಯುತಿಯ ಪ್ರಚಂಡ ಗೆಲುವು ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಉತ್ತೇಜನವನ್ನು ನೀಡಲಿದೆ. ಆದರೆ, ಜಾರ್ಖಂಡ್‌ನ ಗೆಲುವು ವಿರೋಧ ಪಕ್ಷಗಳಿಗೆ ಒಂದು ಸಣ್ಣ ಸಮಾಧಾನ ಮಾತ್ರ. ಹರಿಯಾಣದಲ್ಲಿನ ಮಹತ್ವಪೂರ್ಣ ಗೆಲುವಿನ ಬಳಿಕ ದೇಶದ ಅತ್ಯಂತ ಶ್ರೀಮಂತ ರಾಜ್ಯವಾದ ಮಹಾರಾಷ್ಟ್ರದಲ್ಲಿಯೂ ಈ ಪ್ರಮಾಣದ ಗೆಲುವು ಎನ್‌ಡಿಎ ದುರ್ಬಲವಾಗಿದೆ ಎಂಬ ಭಾವನೆಯನ್ನು ತೊಡೆದುಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿ ಸ್ವಂತವಾಗಿ ಸರಳ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಬಿಜೆಪಿ ದುರ್ಬಲವಾಗಿದೆ ಎಂಬ ಭಾವನೆ ಸೃಷ್ಟಿಯಾಗಿತ್ತು. ಈಗಿನ ಗೆಲುವು, ಸಂಸತ್ತಿನೊಳಗೆ ಶಾಸನ ರೂಪಿಸುವಿಕೆ ಮತ್ತು ಹೊರಗಿನ ಆಳ್ವಿಕೆಯ ಕಾರ್ಯಸೂಚಿಯನ್ನು ಸರ್ಕಾರವು ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಲೆಕ್ಕಿಸದೆಯೇ ಜಾರಿಗೆ ತರಲು ಬಲ ತುಂಬಲಿದೆ. 

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸಿಕ್ಕಿದ್ದು ಬಹಳ ಅಬ್ಬರದ ಗೆಲುವು. ವಿಧಾನಸಭೆಯಲ್ಲಿ ಸರಳ ಬಹುಮತದ ಹತ್ತಿರಕ್ಕೆ ಬಿಜೆಪಿ ಬಂದಿದೆ. ಇದಕ್ಕಾಗಿ ಬಿಜೆಪಿ ಕಠಿಣವಾಗಿ ಶ್ರಮಪಟ್ಟಿದೆ. ಹಲವು ವರ್ಷಗಳಿಂದ ವಿಧಾನಸಭೆಯಲ್ಲಿನ ತನ್ನ ಬಲವನ್ನು ಸ್ಥಿರವಾಗಿ ಏರಿಸಿಕೊಂಡು ಬಂದಿದೆ ಮತ್ತು ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ತಂತ್ರಗಾರಿಕೆ ತೋರಿ ಶಿವಸೇನಾ ಮತ್ತು ಎನ್‌ಸಿಪಿಯನ್ನು ಒಡೆದು ತನ್ನೊಂದಿಗೆ ಕರೆದೊಯ್ದಿದೆ. ಜಾತಿಗಳು ಮತ್ತು ಗುಂಪುಗಳನ್ನು ಒಗ್ಗೂಡಿಸಿ, ಗೆಲುವಿನ ಸಂಯೋಜನೆ ರೂಪಿಸಿ ಪರಿಣಾಮಕಾರಿಯಾದ ಚುನಾವಣಾ ಕಾರ್ಯತಂತ್ರ ಹೆಣೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮತದಾರರಿಗೆ ಉಚಿತ ಕೊಡುಗೆಗಳ ಸುರಿಮಳೆಗೈದಿದೆ. ಲಡ್ಕಿ ಬಹೀಣ್‌ನಂತಹ ಯೋಜನೆಯ ಮೂಲಕ ನೀಡಿದ ನಗದು ಕೊಡುಗೆ ಮಹಿಳೆಯರ ಮೇಲೆ ಪ್ರಭಾವ ಬೀರಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರ ಮತದಾನ ಪ್ರಮಾಣವು ಶೇ 7ರಷ್ಟು ಏರಿಕೆಯಾಗಿದೆ. ಇದರಿಂದ ಮಹಾಯುತಿಗೆ ಮಾತ್ರ ಅನುಕೂಲ ಆಗಿರಲು ಸಾಧ್ಯ. ಮಹಾಯುತಿಯ ಭಾಗವಾಗಿದ್ದ ಶಿವಸೇನಾ ಮತ್ತು ಎನ್‌ಸಿಪಿ ನಾಯಕರೇ ಆ ಪಕ್ಷಗಳ ನೈಜ ವಾರಸುದಾರರು ಎಂದು ಕೂಡ ಮತದಾರರು ಭಾವಿಸಿದಂತಿದೆ. ಮಹಾಯುತಿ ಮೈತ್ರಿಕೂಟದ ಚುನಾವಣಾ ಪ್ರಚಾರವು ಹೆಚ್ಚು ಪರಿಣಾಮಕಾರಿಯಾಗಿತ್ತು. ಅದರ ಸಂದೇಶವು ರಾಜ್ಯದ ಎಲ್ಲ ಭಾಗಗಳು ಮತ್ತು ಎಲ್ಲ ಸಾಮಾಜಿಕ ವರ್ಗಗಳ ಮತದಾರರಿಗೆ ಸ್ಪಷ್ಟವಾಗಿ ತಲುಪಿದೆ. ಮಹಾವಿಕಾಸ ಆಘಾಡಿಯ (ಎಂವಿಎ) ಚುನಾವಣಾ ಪ್ರಚಾರವು ಪೇಲವವಾಗಿತ್ತು. ಮತದಾರರಿಗೆ ನೀಡಲು ಎಂವಿಎ ಬಳಿ ಸ್ಪಷ್ಟವಾದ ಸಂದೇಶ ಇರಲಿಲ್ಲ, ಮೈತ್ರಿಕೂಟದ ಭಾಗವಾಗಿದ್ದ ಪಕ್ಷಗಳ ನಡುವೆ ಸಮನ್ವಯ ಇರಲಿಲ್ಲ. ಚುನಾವಣಾ ಪ್ರಚಾರವು ಮತದಾರರನ್ನು ಮನವೊಲಿಸುವ ರೀತಿಯಲ್ಲಿ ಇರಲಿಲ್ಲ. 

ಜಾರ್ಖಂಡ್‌ನಲ್ಲಿನ ಚಿತ್ರಣವು ಸಂ‍ಪೂರ್ಣವಾಗಿ ಭಿನ್ನವಾಗಿತ್ತು. ಅಲ್ಲಿ ಜೆಎಂಎಂ ನೇತೃತ್ವದ ಸರ್ಕಾರ ಇತ್ತು ಮತ್ತು ಆ ಪಕ್ಷವು ಆಯ್ದುಕೊಂಡಿದ್ದ ಚುನಾವಣಾ ವಿಚಾರಗಳು, ಕಟ್ಟಿದ ಸಂಕಥನ ಮತ್ತು ಪ್ರಚಾರವು ಬಿಜೆಪಿಯ ಚುನಾವಣಾ ತಂತ್ರಗಾರಿಕೆಗಿಂತ ಶಕ್ತಿಶಾಲಿಯಾಗಿತ್ತು. ಜಾರ್ಖಂಡ್‌ ಸರ್ಕಾರ ಆರಂಭಿಸಿದ್ದ ಮಹಿಳೆಯರಿಗೆ ನಗದು ಕೊಡುಗೆ ನೀಡುವ ಯೋಜನೆಯು ಜೆಎಂಎಂಗೆ ಅನುಕೂಲಕರವಾಗಿ ಪರಿಣಮಿಸಿದೆ. ಆಡಳಿತಾರೂಢ ಮೈತ್ರಿಕೂಟದ ಪ್ರಬಲ ಬೆಂಬಲ ನೆಲೆ ಬುಡಕಟ್ಟು ಸಮುದಾಯವೇ ಆದರೂ ಇತರ ವರ್ಗಗಳಿಂದಲೂ ಬೆಂಬಲ ದೊರೆತಿದೆ. ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿ ಜೈಲಿಗಟ್ಟಿದ್ದರಿಂದ ಅವರ ಪರವಾಗಿ ಅನುಕಂಪ ವ್ಯಕ್ತವಾಗಿದೆ. ಮಾತ್ರವಲ್ಲ, ಈ ಅನುಕಂಪವು ಮತಗಳಾಗಿಯೂ ಪರಿವರ್ತನೆ ಆಗಿದೆ. ಬಾಂಗ್ಲಾದೇಶಿಯರ ಒಳನುಸುಳುವಿಕೆಯನ್ನೇ ಕೇಂದ್ರೀಕರಿಸಿದ್ದ ಕೋಮುವಾದಿ ಮನೋಭಾವದ ಬಿಜೆಪಿಯ ಪ್ರಚಾರವು ಮತದಾರರ ಮನಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಆಡಳಿತವಿರೋಧಿ ಅಲೆಯನ್ನು ಮೆಟ್ಟಿನಿಂತು ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಸಾಧಿಸಿದ ದೊಡ್ಡ ಗೆಲುವು ಪರಿಣಾಮಕಾರಿಯೇ ಹೌದು. ಆದರೆ, ಮಹಾರಾಷ್ಟ್ರದಲ್ಲಿ ಮಹಾಯುತಿ ಪಡೆದ ಗೆಲುವಿಗೆ ಇರುವಷ್ಟು ಪ್ರಭೆ ಇದಕ್ಕಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.