ADVERTISEMENT

ಸಂಪಾದಕೀಯ | ಮೋಹನ್ ಭಾಗವತ್ ಮಾತು: ಆತ್ಮಾವಲೋಕನದ ಪ್ರತಿಫಲನ

ಸಂಪಾದಕೀಯ
Published 12 ಜೂನ್ 2024, 23:56 IST
Last Updated 12 ಜೂನ್ 2024, 23:56 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಅವರು ಈಚೆಗೆ ಸಂಘದ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳನ್ನು ಬಿಜೆಪಿ ನಾಯಕರ ವರ್ತನೆ, ಪಕ್ಷದ ಕಾರ್ಯವಿಧಾನದ ಬಗ್ಗೆ ಮಾಡಿರುವ ಟೀಕೆ ಎಂದು ಗ್ರಹಿಸಬೇಕಾಗುತ್ತದೆ. ಭಾಗವತ್ ಅವರ ಮಾತುಗಳು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲ ವ್ಯಕ್ತಿಗಳಿಗೆ ಅನ್ವಯವಾಗುತ್ತವೆ
ಎಂದು ಅರ್ಥೈಸಲಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅನುಭವಿಸಿದ ಹಿನ್ನಡೆಯನ್ನು ಗಮನಿಸಿ ಈ ಮಾತುಗಳನ್ನು ಆಲಿಸಿದಾಗ, ಅವರು ನಿರ್ದಿಷ್ಟವಾಗಿ ಬಿಜೆಪಿಯನ್ನು ಉದ್ದೇಶಿಸಿಯೇ ಈ ಮಾತುಗಳನ್ನು ಆಡಿದ್ದಾರೆ ಎಂದು ಭಾವಿಸಿದರೆ ತಪ್ಪಾಗುವುದಿಲ್ಲ. ಆರ್‌ಎಸ್‌ಎಸ್‌ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆಯಾದರೂ ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಅಂಗ ಎಂಬ ಮಾತನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸುವುದು ಆರ್‌ಎಸ್‌ಎಸ್‌. ಭಾಗವತ್ ಅವರ ಮಾತುಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋರಿದ ಪ್ರದರ್ಶನದ ವಿಚಾರವಾಗಿ ನಡೆದ ಮೊದಲ ಆತ್ಮಾವಲೋಕನದ ಪ್ರತಿಫಲನದಂತೆ ಇವೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಡುವೆ ಅಭಿಪ್ರಾಯಭೇದ ಇದೆ ಎಂಬುದು ಬಹಿರಂಗ ಸತ್ಯ. ಬಿಜೆಪಿಯು ಆರ್‌ಎಸ್‌ಎಸ್‌ ಮೇಲೆ ಅವಲಂಬಿತಾಗಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಚೆಗೆ ಹೇಳಿದ ಮಾತು ಇದನ್ನು ಪುಷ್ಟೀಕರಿಸುತ್ತದೆ.

ನಿಜವಾದ ‘ಸೇವಕ’ನಲ್ಲಿ ಅಹಂಕಾರ ಇರುವುದಿಲ್ಲ, ಆತ ಇನ್ನೊಬ್ಬರಿಗೆ ನೋವು ಉಂಟು ಮಾಡದೆಯೇ ಕೆಲಸ ಮಾಡುತ್ತಾನೆ ಎಂದು ಭಾಗವತ್ ಹೇಳಿರುವುದನ್ನು ಹಲವು ವಿಧಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ. ‘ನಿಜವಾದ ಸೇವಕನು ಸಭ್ಯತೆಯನ್ನು ಪಾಲಿಸುತ್ತಾನೆ... ಸಭ್ಯತೆಯನ್ನು ಪಾಲಿಸುವವ ತನ್ನ ಕೆಲಸ ತಾನು ಮಾಡುತ್ತಾನೆ, ಆದರೆ ಕೆಲಸದೊಂದಿಗೆ ಮೋಹ ಬೆಳೆಸಿಕೊಳ್ಳುವುದಿಲ್ಲ, ಅಂಥವನು ಮಾತ್ರವೇ ಸೇವಕ’ ಎಂದು ಭಾಗವತ್ ಹೇಳಿರುವ ಮಾತುಗಳಲ್ಲಿ ಭಗವದ್ಗೀತೆಯ ಧ್ವನಿ ಇದೆ. ಇದು ನಿರ್ದಿಷ್ಟವಾದ ಉದ್ದೇಶ ಇರಿಸಿಕೊಂಡು ಆಡಿರುವ ವಿವೇಕದ ಮಾತು ಎನ್ನಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ದೇಶದ ಪ್ರಧಾನ ಸೇವಕ ಎಂದು ಕರೆದುಕೊಂಡಿದ್ದಾರೆ. ಆದರೆ, ಪ್ರಧಾನಿ ಹಾಗೂ ಇತರ ಹಲವು ನಾಯಕರು ಚುನಾವಣೆಯ ವೇಳೆ ಹಾಗೂ ಸಾರ್ವಜನಿಕವಾಗಿ ಆಡುವ ಮಾತಿನಲ್ಲಿ ಪಾಲಿಸಬೇಕಿರುವ ಸಭ್ಯತೆಯನ್ನು ಪ್ರಚಾರದ ಸಂದರ್ಭದಲ್ಲಿ ಉಪೇಕ್ಷಿಸಿದ ನಿದರ್ಶನಗಳಿವೆ. ಬಿಜೆಪಿಯ ಚುನಾವಣಾ ಅಭಿಯಾನವು ವ್ಯಕ್ತಿಕೇಂದ್ರಿತವಾಗಿ ಇತ್ತು. ಪ್ರಚಾರದ ಸಂದರ್ಭದಲ್ಲಿ ಅಹಂಕಾರ ಕಾಣುತ್ತಿತ್ತು. ವಿರೋಧ ಪಕ್ಷ ಎಂಬುದು ಎದುರಾಳಿ ಅಲ್ಲ ಎಂದು ಭಾಗವತ್ ಹೇಳಿರುವುದನ್ನು ಹಾಗೂ ಸಹಮತದ ಅಗತ್ಯದ ಬಗ್ಗೆ ಅವರು ಒತ್ತು ನೀಡಿರುವುದನ್ನು ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಬಿಜೆಪಿ ಈ ಹಿಂದೆ ಹೇಳಿದ್ದ ಮಾತುಗಳ ಜೊತೆ ಹಾಗೂ ಬಿಜೆಪಿಯು ಪಾಲಿಸಿದ ಸಂಘರ್ಷದ ರಾಜಕೀಯದ ಜೊತೆ ಇರಿಸಿ ಅರ್ಥ ಮಾಡಿಕೊಳ್ಳಬೇಕು. ಮಣಿಪುರದಲ್ಲಿನ ಪರಿಸ್ಥಿತಿಯ ಬಗ್ಗೆ ಭಾಗವತ್ ಆಡಿರುವ ಮಾತುಗಳು, ಅಲ್ಲಿನ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸಿದ ಬಗೆ ಕುರಿತ ನೇರ ಟೀಕೆಯಂತೆ ಇವೆ.

ADVERTISEMENT

ಭಾಗವತ್ ಅವರ ಮಾತುಗಳು ಎಲ್ಲರಿಗೂ ಅನ್ವಯ ಆಗುವಂತೆ ಇವೆಯಾದರೂ ಅವು ಬಿಜೆಪಿಗೆ ಹೆಚ್ಚು ಅನ್ವಯವಾಗುತ್ತವೆ. ಭಾಗವತ್ ಅವರು ತಮ್ಮ ಭಾಷಣದಲ್ಲಿ ಹೆಸರುಗಳನ್ನು ಉಲ್ಲೇಖಿಸಿಲ್ಲ ಎಂಬುದು ನಿಜ. ಆದರೆ, ಆರ್‌ಎಸ್‌ಎಸ್‌ ಜೊತೆ ನಂಟು ಹೊಂದಿರುವ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಲೇಖನಗಳಲ್ಲಿ ಬಿಜೆಪಿಯ ಹೆಸರನ್ನು ಉಲ್ಲೇಖಿಸಿ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಒಂದು ಲೇಖನದಲ್ಲಿ, ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು, ತಮ್ಮದೇ ಲೋಕದಲ್ಲಿ ಬಹಳ ಸಂತಸದಿಂದ ಇದ್ದರು ಎಂದು ಹೇಳಲಾಗಿದೆ. ಬಿಜೆಪಿಗೆ ಚುನಾವಣೆಯಲ್ಲಿ ಆಗಿರುವ ಹಿನ್ನಡೆಗೂ ಸಂಘಕ್ಕೂ ಸಂಬಂಧವಿಲ್ಲ ಎಂದಿರುವ ಲೇಖನವು ಚುನಾವಣೆಯಲ್ಲಿ ನೆರವು ಬೇಕು ಎಂದು ಬಿಜೆಪಿ ಕೋರಿರಲಿಲ್ಲ ಎಂದು ಹೇಳಿದೆ. ಪಕ್ಷವು ದುರ್ಬಲಗೊಂಡಾಗ, ವಿಫಲಗೊಂಡಾಗ ಆರ್‌ಎಸ್‌ಎಸ್‌ ಈ ಹಿಂದೆಯೂ ಬಿಜೆಪಿಯನ್ನು ಟೀಕಿಸಿದ ನಿದರ್ಶನಗಳು ಇವೆ. ನಾಯಕರು ಸಂಘಟನೆಗಿಂತ ಮಿಗಿಲಾಗಿ ನಿಲ್ಲಲು ಯತ್ನಿಸಿದಾಗ ಅದನ್ನು ಸಂಘವು ಮೆಚ್ಚಿಲ್ಲ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಭಾಗವತ್ ಅವರು ಈಗ ಆಡಿರುವ ಮಾತುಗಳನ್ನು ಈ ಹಿಂದೆ ಬೇರೆಯವರೂ ಆಡಿದ್ದಾರೆ. ಆದರೆ ಈ ಬಾರಿ ಭಾಗವತ್ ಅವರೇ ಈ ಮಾತು ಆಡಿರುವುದು ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.