ADVERTISEMENT

ಸಂಪಾದಕೀಯ | ಮೋದಿ ಮೂರನೇ ಅವಧಿ: ‘ಸಹಮತ’ವೇ ಮುನ್ನಡೆಗೆ ಸೂತ್ರ

ಸಂಪಾದಕೀಯ
Published 11 ಜೂನ್ 2024, 0:21 IST
Last Updated 11 ಜೂನ್ 2024, 0:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ನೂತನ ಸಚಿವ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ, ತಿಂಗಳುಗಳ ಕಾಲ ನಡೆದ ಲೋಕಸಭಾ ಚುನಾವಣಾ ಪ್ರಕ್ರಿಯೆಯು ಅಂತ್ಯ ಕಂಡಿದೆ. ಸತತ ಮೂರನೆಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಮೋದಿ ಅವರು ಈ ಬಾರಿ ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಅವರ ಸಂಪುಟದಲ್ಲಿ 71 ಸದಸ್ಯರು ಇದ್ದಾರೆ. ಹಿಂದಿನ ಸಂಪುಟದಲ್ಲಿ ಇದ್ದ ಹಿರಿಯರ ಪೈಕಿ ಬಹುತೇಕರನ್ನು ಮೋದಿ ಅವರು ಈ ಬಾರಿಯೂ ಉಳಿಸಿಕೊಂಡಿದ್ದಾರೆ. ಜೊತೆಯಲ್ಲೇ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಸದಸ್ಯ ಪಕ್ಷಗಳಿಗೆ ಸ್ಥಾನ ಕಲ್ಪಿಸಿದ್ದಾರೆ. ಹೀಗಾಗಿ, ಹೊಸದಾಗಿ ರಚನೆಯಾಗಿರುವ ಸರ್ಕಾರವು ಹಳೆಯದರ ಮುಂದುವರಿಕೆಯನ್ನೂ ಹೊಸ ಬದಲಾವಣೆಯನ್ನೂ ಸೂಚಿಸುವಂತಿದೆ. ಇದು ಇನ್ನಷ್ಟು ವಿಶಾಲವಾದ ಭಾರತವನ್ನು ಪ್ರತಿನಿಧಿಸುವುದಷ್ಟೇ ಅಲ್ಲದೆ, ಬಿಜೆಪಿಯ ರಾಜಕೀಯ ನಿಲುವುಗಳಿಗಿಂತ ಭಿನ್ನವಾದ ನಿಲುವುಗಳನ್ನು ಹೊಂದಿರುವವರಿಗೆ ಇಲ್ಲಿ ಈಗ ಧ್ವನಿ ಇದೆ. ಹೀಗಿದ್ದರೂ ಸಂಪುಟದಲ್ಲಿನ ಪ್ರಾತಿನಿಧ್ಯವನ್ನು ಗಮನಿಸಿದಾಗ ಬಿಜೆಪಿಯ ಪ್ರಾಬಲ್ಯವು ಎದ್ದುಕಾಣುವಂತಿದೆ. ಸರ್ಕಾರದ ಉಳಿವಿಗೆ ಈಗ ಮಿತ್ರಪಕ್ಷಗಳ ನೆರವು ಅತ್ಯಗತ್ಯವಾಗಿದ್ದರೂ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ 11 ಸ್ಥಾನಗಳು ಮಾತ್ರ ಸಿಕ್ಕಿವೆ. ಪ್ರಮುಖ ಖಾತೆಗಳ ಪೈಕಿ ಹೆಚ್ಚಿನವು ಬಿಜೆಪಿ ಬಳಿಯೇ ಇವೆ. ಬೇರೆ ಬೇರೆ ರಾಜ್ಯಗಳ ಕೆಲವು ಹಿರಿಯ ಬಿಜೆಪಿ ನಾಯಕರು ಕೂಡ ಸಂಪುಟ ಸೇರಿದ್ದಾರೆ.

ಹೀಗಿದ್ದರೂ ಸರ್ಕಾರವು ಈ ಬಾರಿ ಭಿನ್ನವಾಗಿ ಇರಲಿದೆ. ಏಕೆಂದರೆ ಅದರ ನೀತಿಗಳು, ಅದು ರೂಪಿಸುವ ಕಾರ್ಯಕ್ರಮಗಳು ಹಿಂದಿನ ಅವಧಿಯ ನೀತಿಗಳು, ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಇರಲಿವೆ. ಭಿನ್ನದೃಷ್ಟಿಕೋನಗಳನ್ನು ಹಾಗೂ ಹಿತಾಸಕ್ತಿಗಳನ್ನು ಹೊಂದಿರುವ ಪಕ್ಷಗಳು ಸರ್ಕಾರದ ಭಾಗವಾಗಿವೆ ಎಂಬುದೊಂದೇ ಇದಕ್ಕೆ ಕಾರಣವಲ್ಲ; ಚುನಾವಣೆಯ ಮೂಲಕ ಮತದಾರರು ನೀಡಿರುವ ಸಂದೇಶಕ್ಕೆ ಕಿವಿಗೊಡುವ ಕೆಲಸವನ್ನು, ಆ ಸಂದೇಶದಿಂದ ಪಾಠ ಕಲಿಯುವ ಕೆಲಸವನ್ನು ಪ್ರಧಾನಿ ಮೋದಿ ಮತ್ತು ಅವರ ಪಕ್ಷವು ಮಾಡಬೇಕಿದೆ. ಪ್ರಧಾನಿಯವರು ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸಬೇಕಿದೆ, ಬಿಜೆಪಿಯು ಎರಡು ದಶಕಗಳ ಹಿಂದೆ ತಾನೇ ಪಾಲಿಸುತ್ತಿದ್ದ ರಾಜಕೀಯ ಸೂತ್ರಗಳತ್ತ ಮರಳಿ ದೃಷ್ಟಿಹಾಯಿಸಬೇಕಿದೆ. ಮೋದಿ ಅವರು ಈವರೆಗೆ ಬಿಜೆಪಿಗೆ ಬಹುಮತ ಇರುವ, ತಮ್ಮ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟ ಸರ್ಕಾರವನ್ನು ಮಾತ್ರ ಮುನ್ನಡೆಸಿದ್ದಾರೆ. ಈಗ ಮೋದಿ ಅವರು ಪರಿಸ್ಥಿತಿಯನ್ನು ಅರಿತಿರುವಂತೆ ಕಾಣುತ್ತಿದೆ. ಎನ್‌ಡಿಎ ಮೈತ್ರಿಕೂಟವು ಒಂದು ಸಾವಯವ ಹಾಗೂ ಯಶಸ್ವಿ ಒಕ್ಕೂಟ, ಸರ್ಕಾರವನ್ನು ನಡೆಸಲು ಬಹುಮತ ಬೇಕಿದೆ, ದೇಶವನ್ನು ಮುನ್ನಡೆಸಲು ಸಹಮತ ಬೇಕಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅವರು ಇನ್ನೂ ಎರಡು ಪ್ರಮುಖ ಅಂಶಗಳನ್ನು ಹೇಳಿದ್ದಾರೆ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಆಕಾಂಕ್ಷೆಗಳಿಗೆ ಕಿವಿಗೊಡುವ ಸಹಕಾರಿ ಒಕ್ಕೂಟ ವ್ಯವಸ್ಥೆಯ ಅಗತ್ಯವನ್ನು ಹೇಳಿದ್ದಾರೆ. ಅವರು ಆಡಿರುವ ಇನ್ನೊಂದು ಮಾತು, ವಿರೋಧ ಪಕ್ಷಗಳು ಸರ್ಕಾರವನ್ನು ವಿರೋಧಿಸುತ್ತವೆಯೇ ವಿನಾ ದೇಶವನ್ನು ಅಲ್ಲ ಎಂಬುದು. ಇವು ಬಹಳ ಮುಖ್ಯವಾದ ಸಂಗತಿಗಳು. ಇವೇ ಆಲೋಚನೆಗಳು ಮೋದಿ ಅವರನ್ನು ಮುನ್ನಡೆಸಬೇಕು.

ADVERTISEMENT

ಈಗ ರಚನೆ ಆಗಿರುವ ಸರ್ಕಾರವು ದೇಶದ ಹಲವು ಪ್ರದೇಶಗಳನ್ನು ಪ್ರತಿನಿಧಿಸುತ್ತಿದೆ. ಏಕೆಂದರೆ ಎನ್‌ಡಿಎ ಮೈತ್ರಿಕೂಟವು ದೇಶದ ಎಲ್ಲೆಡೆಯ ಪ್ರತಿನಿಧಿಗಳನ್ನು ಹೊಂದಿದೆ. ಸರ್ಕಾರದಲ್ಲಿ ಬೇರೆ ಬೇರೆ ಸಮುದಾಯಗಳು, ಜಾತಿಗಳು ಹಾಗೂ ಸಾಮಾಜಿಕ ಗುಂಪುಗಳು ಪ್ರಾತಿನಿಧ್ಯ ಪಡೆದಿವೆ. ಹೀಗಿದ್ದರೂ ಸಂಪುಟದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ ಎಂಬುದು ಗಮನಾರ್ಹ. ಕ್ರೈಸ್ತ ಸಮುದಾಯಕ್ಕೆ ಸಾಂಕೇತಿಕವಾಗಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 14ರಷ್ಟು ಇರುವ ಸಮುದಾಯವೊಂದಕ್ಕೆ ಪ್ರಾತಿನಿಧ್ಯ ನಿರಾಕರಿಸುವುದು ಸರಿಯಲ್ಲ. ಪ್ರಧಾನಿ ಸೇರಿ 72 ಮಂದಿ ಸಚಿವರ ಪೈಕಿ ಮಹಿಳೆಯರ ಸಂಖ್ಯೆ ಏಳು ಮಾತ್ರ. ಇದು ಸಂಪುಟದ ಗಾತ್ರದ ಶೇ 10ರಷ್ಟು ಕೂಡ ಅಲ್ಲ. ರಾಜಕೀಯ ಹಾಗೂ ಸರ್ಕಾರದ ವಿವಿಧ ಹಂತಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲಾಗುವುದು ಎಂದು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಇದು ಅನುಗುಣವಾಗಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.