ADVERTISEMENT

ಸಂಪಾದಕೀಯ | ‘ನೀಟ್’ ಸುತ್ತ ಗೊಂದಲ: ಲೋಪ ಸರಿಪಡಿಸಿ, ತಪ್ಪಿತಸ್ಥರ ಶಿಕ್ಷಿಸಿ

ಸಂಪಾದಕೀಯ
Published 12 ಜೂನ್ 2024, 0:10 IST
Last Updated 12 ಜೂನ್ 2024, 0:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇತರ ಕೆಲವು ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಣಯಿಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿ) ಅಥವಾ ‘ನೀಟ‌್’ಗೆ ಸಂಬಂಧಿಸಿದಂತೆ ವಿವಾದ ಹೊಸದೇನೂ ಅಲ್ಲ. ಈ ವರ್ಷ ಕೂಡ ಈ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿವೆ. ಪರೀಕ್ಷೆಯ ಬಗೆ ಹಾಗೂ ಫಲಿತಾಂಶವನ್ನು ಘೋಷಿಸಿದ ರೀತಿಯ ಕುರಿತು ಟೀಕೆಗಳು ಇವೆ. ಈ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ವಿವಾದ, ಟೀಕೆಗಳ ಕುರಿತು ತನಿಖೆಗೆ ನಾಲ್ಕು ಮಂದಿ ಸದಸ್ಯರ ಸಮಿತಿಯೊಂದನ್ನು ನೇಮಿಸಿದೆ. ಹಲವು ಸಮಸ್ಯೆಗಳ ಬಗ್ಗೆ ನೂರಾರು ಮಂದಿ ವಿದ್ಯಾರ್ಥಿಗಳು ದೂರಿದ್ದಾರೆ. ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಿದ್ದವು, ದೋಷಪೂರಿತ ಪ್ರಶ್ನೆಪತ್ರಿಕೆಗಳು ಇದ್ದವು ಹಾಗೂ ಒಎಂಆರ್‌ ಷೀಟ್‌ಗಳಲ್ಲಿ ಲೋಪಗಳು ಇದ್ದವು. ಕೆಲವು ಕಡೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪ ಇದೆ. ಫಲಿತಾಂಶವನ್ನು ಜೂನ್‌ 14ರಂದು
ಪ್ರಕಟಿಸಬೇಕಿತ್ತು. ಆದರೆ ಹತ್ತು ದಿನ ಮುಂಚಿತವಾಗಿ ಫಲಿತಾಂಶ ಪ್ರಕಟವಾಯಿತು. ಕೆಲವು ಉತ್ತರಪತ್ರಿಕೆ ಮಾದರಿಗಳು ತಪ್ಪಾಗಿದ್ದವು, ಮೌಲ್ಯಮಾಪನವು ಸರಿಯಾಗಿ ನಡೆದಿಲ್ಲ ಎಂಬ ಆರೋಪಗಳೂ ಇವೆ. 

ಇಷ್ಟೇ ಅಲ್ಲ, ಇಲ್ಲಿ ಇನ್ನೂ ಹಲವು ಸಂಗತಿಗಳು ಇವೆ. ಪರೀಕ್ಷೆಗೆ ಹಾಜರಾಗಿದ್ದ 67 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ (720ಕ್ಕೆ 720) ಲಭಿಸಿದೆ. ಹೀಗೆ ಹಿಂದೆಂದೂ ಆಗಿರಲಿಲ್ಲ. ಅತಿ ಹೆಚ್ಚಿನ ಅಂಕ ಪಡೆದವರಲ್ಲಿ ಹಲವರು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು. ಕೆಲವು ವಿದ್ಯಾರ್ಥಿಗಳಿಗೆ 718 ಹಾಗೂ 719 ಅಂಕಗಳು ಲಭಿಸಿವೆ. ನೀಟ್ ಪರೀಕ್ಷೆಯಲ್ಲಿ ಅಂಕ ನೀಡುವ ಸೂತ್ರದ ಪ್ರಕಾರ ಇಷ್ಟು ಅಂಕ ಪಡೆಯಲು ಸಾಧ್ಯವೇ ಇಲ್ಲ. ಮಾದರಿ ಉತ್ತರಪತ್ರಿಕೆಯೊಂದರ ಪರಿಷ್ಕರಣೆ ಹಾಗೂ ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸಮಯ ಸರಿಯಾಗಿ ಸಿಗದಿದ್ದ ಕಾರಣಕ್ಕೆ ಕೃಪಾಂಕ ನೀಡಿದ್ದರಿಂದಾಗಿ ಭಾರಿ ಅಂಕಗಳು ಸಿಕ್ಕಿವೆ ಎಂದು ಎನ್‌ಟಿಎ ಹೇಳಿದೆ. ಕೃಪಾಂಕ ನೀಡಿದ ಪರಿಣಾಮವಾಗಿ 718, 719 ಅಂಕಗಳು ಲಭಿಸಿವೆ, ಹಲವು ವಿದ್ಯಾರ್ಥಿಗಳು ಭಾರಿ ಅಂಕ ಪಡೆದಿದ್ದಕ್ಕೆ ಕಾರಣ ಅವರಿಗೆ ‍ಪ್ರಶ್ನೆಪತ್ರಿಕೆಯು ಸುಲಭವಾಗಿದ್ದುದು ಎಂದು ಕೂಡ ಎನ್‌ಟಿಎ ವಿವರಣೆ ನೀಡಿದೆ.

ADVERTISEMENT

ಕೆಲವು ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಲ್ಲದೆ, ಎನ್‌ಟಿಎಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು, ಹೊಸದಾಗಿ ಪರೀಕ್ಷೆ ಆಗಬೇಕು ಎಂದು ಕೆಲವರು ಕೋರಿದ್ದಾರೆ. ರಾಜಕೀಯ ಪಕ್ಷಗಳು ನೀಟ್‌ ಕುರಿತು ಮಾತನಾಡಿವೆ. ಸರಿಸುಮಾರು ಐದು ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆ. ಇದಕ್ಕೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆ ನಡೆಯುವ ಬಗೆಯ ಸುತ್ತ ಇಷ್ಟೊಂದು ದೂರುಗಳು, ಇಷ್ಟೊಂದು ಪ್ರಶ್ನೆಗಳು ಇರಲೇಬಾರದು. ದೊಡ್ಡ ಮಟ್ಟದಲ್ಲಿ ನಡೆಯುವ ಹಾಗೂ ಹೆಚ್ಚು ಪ್ರಾಮುಖ್ಯ ಪಡೆದ ನೀಟ್‌ನಂತಹ ಪರೀಕ್ಷೆಗಳು ಅತ್ಯಂತ ಹೆಚ್ಚು ವಿಶ್ವಾಸಾರ್ಹ ಆಗಿರಬೇಕು. ಹೀಗಾಗಬೇಕು ಎಂದಾದರೆ ಪಾರದರ್ಶಕತೆ ಹಾಗೂ ದಕ್ಷತೆ ಇರಬೇಕು. ನಾಲ್ವರು ಸದಸ್ಯರ ಸಮಿತಿಯು ಒಂದು ವಾರದಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಆ ವರದಿಯು ಎಲ್ಲ ಲೋಪಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು, ಆ ಲೋಪಗಳು ಉಂಟಾಗಿದ್ದಕ್ಕೆ ಕಾರಣ ಏನು ಎಂಬುದನ್ನು ಹೇಳಬೇಕು.
ತಪ್ಪಾಗಿದ್ದಲ್ಲಿ ಅವುಗಳನ್ನು ಸರಿಪಡಿಸಬೇಕು, ತಪ್ಪಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು. ಸರಿಯಾದ ಯೋಜನೆ ಇದ್ದಲ್ಲಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಲೋಪಗಳಿಗೆ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲು ಸಾಧ್ಯವಿದೆ. ಈಗ ಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ಅವು ಮುಂದೆ ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.