ADVERTISEMENT

ಸಂಪಾದಕೀಯ: ಪ್ರಯಾಣಿಕರಿಗೂ ಆಟೊ ಚಾಲಕರಿಗೂ ಸಮಾಧಾನ ತಂದ ಹೈಕೋರ್ಟ್‌ ತೀರ್ಪು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 23:15 IST
Last Updated 18 ಅಕ್ಟೋಬರ್ 2022, 23:15 IST
   

ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಯನ್ನು ಮುಂದುವರಿಸಲು ಅಗ್ರಿಗೇಟರ್‌ಗಳಿಗೆ ಅನುಮತಿ ನೀಡಿರುವ ಹೈಕೋರ್ಟ್‌, 15 ದಿನಗಳಲ್ಲಿ ನ್ಯಾಯಯುತ ದರ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡುವ ಮೂಲಕ ಒಳ್ಳೆಯ ಕೆಲಸವನ್ನೇ ಮಾಡಿದೆ. ಸಮಸ್ಯೆಯನ್ನು ಬಗೆಹರಿಸುವ ದಿಸೆಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆ. ಹೈಕೋರ್ಟ್‌ನ ಈ ಕ್ರಮದಿಂದ ಪ್ರಯಾಣಿಕರು, ಆಟೊ ಚಾಲಕರು ಮಾತ್ರವಲ್ಲ ಓಲಾ, ಉಬರ್‌, ರ‍್ಯಾಪಿಡೊದಂತಹ ಅಗ್ರಿಗೇಟರ್‌ಗಳು ಕೂಡ ನಿರಾಳವಾಗಿ ನಿಟ್ಟುಸಿರು ಬಿಡುವಂತಾಗಿದೆ.

ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲು ಮಾಡಲಾಗುತ್ತಿದೆ ಎಂಬ ದೂರು ಬಂದ ಕಾರಣ ಆ್ಯಪ್ ಆಧಾರಿತ ಆಟೊರಿಕ್ಷಾ ಹಾಗೂ ಬೈಕ್‌ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಸಾರಿಗೆ ಇಲಾಖೆ ಆಯುಕ್ತರು ಓಲಾ, ಉಬರ್ ಮತ್ತು ರ್‍ಯಾಪಿಡೊ ಕಂಪನಿಗಳಿಗೆ ನೋಟಿಸ್‌ ನೀಡಿದ್ದರು. ‘ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್‌ಗಳ ನಿಯಮ–2016’ರ ಅಡಿಯಲ್ಲಿ ಅಗ್ರಿಗೇಟ್‌ ಕಂಪನಿಗಳಿಗೆ ಟ್ಯಾಕ್ಸಿ ಸೇವೆಯನ್ನು ನಡೆಸಲಷ್ಟೇ ಅನುಮತಿ ಇದೆ. ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆಯನ್ನು ನಡೆಸಲು ಈ ಕಂಪನಿಗಳು ಲೈಸನ್ಸ್‌ ಪಡೆದಿಲ್ಲ.

ಆದರೆ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ಕೇಂದ್ರ ಸರ್ಕಾರವು 2020ರಲ್ಲಿ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಅಗ್ರಿಗೇಟರ್‌ಗಳು ಆಟೊರಿಕ್ಷಾ, ಇ–ರಿಕ್ಷಾ, ಮೋಟಾರ್‌ ಕ್ಯಾಬ್‌, ಮೋಟಾರ್‌ ಸೈಕಲ್‌ ಹಾಗೂ ಬಸ್‌ ಸೇವೆಗಳನ್ನು ಒದಗಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟಿದೆ. ‘ಈ ಅಗ್ರಿಗೇಟರ್‌ಗಳು ಆಟೊರಿಕ್ಷಾ ಸೇವೆಯನ್ನು ಒದಗಿಸುವುದು ಕಾನೂನುಬಾಹಿರ ಎನ್ನುವುದು ಸಾರಿಗೆ ಇಲಾಖೆಯ ಅಭಿಪ್ರಾಯ
ವಾಗಿದ್ದರೆ ಇದುವರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಸುಮ್ಮನಿದ್ದುದು ಏಕೆ’ ಎಂದೂ ಪ್ರಶ್ನಿಸಿದೆ.

ADVERTISEMENT

ಆಟೊ ಚಾಲಕರ ಅಹವಾಲುಗಳನ್ನು ಸಾರಿಗೆ ಇಲಾಖೆಯು ಇದುವರೆಗೆ ಕಡೆಗಣಿಸುತ್ತಲೇ ಬಂದಿರುವುದು ಸ್ಪಷ್ಟ. ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಹೆಚ್ಚಿನ ಶುಲ್ಕವನ್ನು ವಸೂಲು ಮಾಡುತ್ತಿದ್ದರೂ ತಮಗೆ ಅದರಲ್ಲಿ ಹೆಚ್ಚಿನ ಲಾಭ ಸಿಗುತ್ತಿಲ್ಲ ಎಂದು ಆಟೊ ಚಾಲಕರು ಹಲವು ಬಾರಿ ದೂರಿದರೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದರು. ಸಾರಿಗೆ ಇಲಾಖೆಯು ಆಟೊರಿಕ್ಷಾಗಳಿಗೆ ಕನಿಷ್ಠ ಪ್ರಯಾಣ ದರವನ್ನು ₹ 30ಕ್ಕೆ ನಿಗದಿ ಮಾಡಿದೆ.

ಆದರೆ, ಅಗ್ರಿಗೇಟರ್‌ಗಳು ಕನಿಷ್ಠ ದರವನ್ನೇ ₹100ಕ್ಕೆ ನಿಗದಿಗೊಳಿಸಿದ ದೂರುಗಳಿದ್ದವು. ದಟ್ಟಣೆ ಅವಧಿಯಲ್ಲಿ ಈ ಮೊತ್ತವನ್ನು ‘ಸರ್ಜ್‌ ಪ್ರೈಸಿಂಗ್‌’ ಹೆಸರಿನಲ್ಲಿ ಕಾನೂನುಬಾಹಿರವಾಗಿ ಇನ್ನೂ ಏರಿಕೆ ಮಾಡಲಾಗುತ್ತಿತ್ತು. ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ಪ್ರಯಾಣಿಕರ ಸುಲಿಗೆಯನ್ನು ಮಾಡಲಾಗುತ್ತಿತ್ತು. ಈ ರೀತಿಯ ದರ ಏರಿಕೆಗೆ ಅಂಕುಶವೆಂಬುದೇ ಇರಲಿಲ್ಲ. ತಾವು ಹೇಳಿದ ಸ್ಥಳಗಳಿಗೆ ಆಟೊರಿಕ್ಷಾ ಚಾಲಕರು ಬಾಡಿಗೆಗೆ ಬರುವುದಿಲ್ಲ ಎನ್ನುವುದು ಪ್ರಯಾಣಿಕರ ಸಾಮಾನ್ಯ ದೂರು. ಆದರೆ, ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆಯು ಪ್ರಯಾಣಿಕರ ಈ ದೂರನ್ನು ಬಹುಮಟ್ಟಿಗೆ ತಗ್ಗಿಸಿತ್ತು. ಆಟೊ ಚಾಲಕರು ಅಸಡ್ಡೆ ತೋರಿದರೂ ಪ್ರಯಾಣಿಕರೊಂದಿಗೆ ಅವರು ಚೌಕಾಸಿಗೆ ಇಳಿಯುವ, ವಾಗ್ವಾದ ನಡೆಸುವ ಅವಕಾಶ ಇರಲಿಲ್ಲ.

ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆಯ ಮೇಲೆ ನಿರ್ಬಂಧ ವಿಧಿಸಿದ ಸರ್ಕಾರದ ಕ್ರಮದಿಂದ ಯಾರೊಬ್ಬರಿಗೂ ಪ್ರಯೋಜನ ಇರಲಿಲ್ಲ. ತಾವು ಪಡೆಯುತ್ತಿರುವ ಅನುಕೂಲಕ್ಕಾಗಿ ಪ್ರಯಾಣಿಕರು ಮೀಟರ್‌ ದರದ ಮೇಲೆ ಅಲ್ಪಮೊತ್ತದ ಸೇವಾ ಶುಲ್ಕವನ್ನು ಕೊಡಲು ಸಿದ್ಧರಿದ್ದಾರೆ. ಮೀಟರ್‌ ದರದ ಮೇಲೆ ಶೇ 10ಕ್ಕಿಂತ ಹೆಚ್ಚಿನ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಕೋರ್ಟ್‌ ಕೂಡ ತಾಕೀತು ಮಾಡಿದೆ. ‘ಕೇರಳ ಸವಾರಿ’ ಆ್ಯಪ್‌ನ ಶುಲ್ಕದ ಮಾದರಿಯನ್ನು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಸರಿಯಾದ ದಿಕ್ಕಿನಲ್ಲಿದೆ.

ಅಲ್ಲಿ ಚಾಲಕರು ಆ್ಯಪ್‌ ಬಳಸಿದ್ದಕ್ಕೆ ಶೇ 8ರಷ್ಟು ಕಮಿಷನ್‌ ನೀಡಬೇಕು ಮತ್ತು ಪ್ರಯಾಣಿಕರಿಗೆ ಪ್ರಯಾಣದ ಶುಲ್ಕದಲ್ಲಿ ಯಾವುದೇ ಹೆಚ್ಚಿನ ಹೊರೆಯೂ ಬೀಳುವುದಿಲ್ಲ. ‘ಸರ್ಜ್‌ ಪ್ರೈಸಿಂಗ್‌’ನ ಹಾವಳಿಯಂತೂ ಇಲ್ಲವೇ ಇಲ್ಲ. ಯಾವುದೇ ವಲಯದಲ್ಲಿ ಸರ್ಕಾರದ ಮಿತಿಮೀರಿದ ಹಸ್ತಕ್ಷೇಪ ಅಪೇಕ್ಷಣೀಯವಲ್ಲ, ನಿಜ. ಆದರೆ, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತಹ ಸಾರಿಗೆ ಸೇವೆ ಲಭ್ಯವಾಗುವಂತೆ ಮಾಡುವುದು ಮತ್ತು ಅದು ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎನ್ನುವುದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.