ADVERTISEMENT

Editorial | ವಿರೋಧ ಪಕ್ಷಗಳ ಮೈತ್ರಿಸಭೆ: ಸ್ಪಷ್ಟವಾಗುತ್ತಿರುವ ಚುನಾವಣಾ ರೂಪುರೇಷೆ

ಸಂಪಾದಕೀಯ
Published 20 ಜುಲೈ 2023, 0:01 IST
Last Updated 20 ಜುಲೈ 2023, 0:01 IST
   

ಬಿಹಾರದ ಪಟ್ನಾದಲ್ಲಿ ಕಳೆದ ತಿಂಗಳು ಸಭೆ ಸೇರಿದ್ದ ವಿರೋಧ ಪಕ್ಷಗಳ ಪ್ರಮುಖರು ಈಗ ತಮ್ಮ ಒಕ್ಕೂಟಕ್ಕೆ ಒಂದು ಹೆಸರು ಅಂತಿಮಗೊಳಿಸಿದ್ದಾರೆ. ಆ ಮೂಲಕ ಇನ್ನೊಂದು ಹೆಜ್ಜೆ ಮುಂದಕ್ಕೆ ಇರಿಸಿದ್ದಾರೆ. ಈ ಹೆಸರು 2024ರ ಲೋಕಸಭಾ ಚುನಾವಣೆಯಲ್ಲಿ ತಾವು ಬಿಜೆಪಿಯನ್ನು ಎದುರಿಸಲು ನೆಚ್ಚಿಕೊಳ್ಳುತ್ತಿರುವ ನೆಲೆ ಯಾವುದು ಎಂಬುದನ್ನು ಸೂಚಿಸುವಂತಿದೆ. ಬಿಜೆಪಿಯನ್ನು ವಿರೋಧಿಸುತ್ತಿರುವ 26 ಪಕ್ಷಗಳ ಒಕ್ಕೂಟದ ಹೆಸರು ‘ಐಎನ್‌ಡಿಐಎ’ ಎಂದಿರಬೇಕು ಎಂಬ ತೀರ್ಮಾನಕ್ಕೆ ಬೆಂಗಳೂರಿನಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ ಸಭೆಯು ಬಂದಿದೆ. ಇದು ರಾಷ್ಟ್ರೀಯತೆಯ ಸಂಕಥನದ ವಿಚಾರದಲ್ಲಿ ಬಿಜೆಪಿಯನ್ನು ಎದುರಿಸಲು ತಮಗೆ ಸಹಾಯ ಮಾಡಲಿದೆ ಎಂದು ಈ ಪಕ್ಷಗಳು ಭಾವಿಸಿವೆ. ಅಲ್ಲದೆ, ತಮ್ಮ ಅಭಿಯಾನದಲ್ಲಿ ಅಭಿವೃದ್ಧಿಯು ಪ್ರಮುಖ ವಿಷಯವಾಗುವಂತೆಯೂ ಇದು ನೋಡಿಕೊಳ್ಳಲಿದೆ ಎಂದು ಪಕ್ಷಗಳು ಭಾವಿಸಿವೆ. ಅಭಿವೃದ್ಧಿಯ ವಿಚಾರವನ್ನು ಬಿಜೆಪಿಯು ಪ್ರಮುಖವಾಗಿ ಬಳಸಿಕೊಳ್ಳುತ್ತ ಬಂದಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ತಮ್ಮ ಪರಿಕಲ್ಪನೆಯ ಭಾರತವು ಸರ್ವಜನರನ್ನು ಒಳಗೊಳ್ಳುವಂಥದ್ದು; ಬಿಜೆಪಿಯ ವಿಭಜನಕಾರಿ ಹಿಂದುತ್ವ ಸಿದ್ಧಾಂತದ ಭಾರತ ಅಲ್ಲ ಎಂಬ ಸಂದೇಶ ಸಾರುವ ಇರಾದೆಯನ್ನು ಈ 26 ಪಕ್ಷಗಳು ಹೊಂದಿರುವಂತಿದೆ. ಐಎನ್‌ಡಿಐಎ (ಇಂಡಿಯಾ) ಎಂಬ ಹೆಸರಿನ ಜೊತೆಯಲ್ಲಿ ‘ಜೀತೇಗಾ ಭಾರತ್’ (ಭಾರತ ಗೆಲ್ಲಲಿದೆ) ಎಂಬ ಘೋಷವಾಕ್ಯವನ್ನು ಕೂಡ ಒಕ್ಕೂಟವು ಬಳಸಿಕೊಳ್ಳಲಿದೆ. ಭಾರತ ಎಂಬ ಪರಿಕಲ್ಪನೆಯ ಮೇಲೆ ಬಿಜೆಪಿಯು ಹಕ್ಕುಸಾಧಿಸುವುದನ್ನು ತಡೆಯಲು ಹಾಗೂ ತಾನು ಭಾರತವನ್ನೂ ಇಂಡಿಯಾವನ್ನೂ ಪ್ರತಿನಿಧಿಸುತ್ತೇನೆ ಎಂಬ ಸಂದೇಶ ರವಾನಿಸುವ ಉದ್ದೇಶ ಕೂಡ ಒಕ್ಕೂಟಕ್ಕೆ ಇರುವಂತಿದೆ. ಈ ಹೆಸರುಗಳು ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಿವೆ. ಈ ಹೆಸರು ಚುನಾವಣಾ ಮೈತ್ರಿಕೂಟವೊಂದರ ಸ್ವರೂಪವನ್ನು ಹೇಳುತ್ತಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ಪಕ್ಷವು ಒಂದು ಹೆಸರನ್ನು ಮಾತ್ರ ನೆಚ್ಚಿಕೊಂಡು ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹೆಸರು ಎಂಬುದು ಮೈತ್ರಿಕೂಟದ ಕಾರ್ಯಚಟುವಟಿಕೆಯನ್ನು, ಅದರ ಗುಣವನ್ನು ಅಥವಾ ಅದು ಪ್ರತಿನಿಧಿಸುವ ಅಸ್ಮಿತೆಯನ್ನು ಹೇಳುವುದಿಲ್ಲ.

ವಿರೋಧ ಪಕ್ಷಗಳ ನಡೆಗೆ ಒಂದಿಷ್ಟು ಅಡ್ಡಿಗಳು ಎದುರಾಗಿವೆ. ಪಟ್ನಾ ಸಭೆಯ ಸಂದರ್ಭದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಶರದ್ ಪವಾರ್ ಅವರು ತಮ್ಮ ಪಕ್ಷದ ವಿಭಜನೆಯ ನಂತರದಲ್ಲಿ ತುಸು ದುರ್ಬಲ ಆಗಿರುವಂತೆ ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಕಡೆ ವಾಲುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಮೈತ್ರಿಕೂಟದಲ್ಲಿ ಒಂದಿಷ್ಟು ಒಳ್ಳೆಯ ಅಂಶಗಳೂ ಕಾಣುತ್ತಿವೆ. 26 ಪಕ್ಷಗಳ ಪೈಕಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್, ತನ್ನ ಪ್ರಾದೇಶಿಕ ಎದುರಾಳಿಗಳಾದ ಎಎಪಿ ಅಥವಾ ತೃಣಮೂಲ ಕಾಂಗ್ರೆಸ್‌ ಪಕ್ಷಗಳನ್ನು ಒಳಗೊಳ್ಳುತ್ತಿರುವ ಪರಿ ಮೊದಲಿಗಿಂತ ಹೆಚ್ಚು ವಿಶ್ವಾಸ ಮೂಡಿಸುವಂತಿದೆ. ಇಡೀ ಭಾರತವನ್ನು ಹಾಗೂ ನಿಜ ಭಾರತವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಎಲ್ಲ ರಾಜಕೀಯ ಪ್ರಮುಖರು ಸಭೆಯಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಂಡಿದ್ದಾರೆ. ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜವಾದರೂ ಅವುಗಳನ್ನೆಲ್ಲ ಬದಿಗೆ ಸರಿಸಿ, ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇವೆಲ್ಲ ಏನೇ ಇದ್ದರೂ, ಬಿಜೆಪಿಗೆ ಎದುರಾಗಿ ಶಕ್ತಿಶಾಲಿ ಮೈತ್ರಿಕೂಟವನ್ನು ಕಟ್ಟಬೇಕು ಎಂದಾದರೆ ಈ ಪಕ್ಷಗಳು ಸಾಗಬೇಕಿರುವ ಹಾದಿ ಸುದೀರ್ಘವಾಗಿದೆ. ಪಕ್ಷಗಳ ಘೋಷಣೆಗಳು ಹೆಚ್ಚಿನ ಪರಿಣಾಮ ಉಂಟುಮಾಡುವುದಿಲ್ಲ. ಘೋಷಣೆಗಳನ್ನು ಜನರಿಗೆ ಇಷ್ಟವಾಗುವ ರೀತಿಯಲ್ಲಿ, ಕ್ರಿಯಾರೂಪಕ್ಕೆ ಬರುವಂತೆ ಮಾಡಬೇಕು. ಈ ಪಕ್ಷಗಳ ನಾಯಕರು ಒಟ್ಟಾಗಿ ಇರುತ್ತಾರೆ ಹಾಗೂ ಘೋಷಣೆಗಳನ್ನು ಅನುಷ್ಠಾನಕ್ಕೆ ತರುತ್ತಾರೆ ಎಂಬ ನಂಬಿಕೆ ಜನರಲ್ಲಿ ಮೂಡಬೇಕು. ಮುಂದಿನ ದಿನಗಳಲ್ಲಿ ಈ ಮೈತ್ರಿಕೂಟವು ಈಗಿರುವ ರೀತಿಯಲ್ಲಿಯೇ ಉಳಿದುಕೊಳ್ಳುತ್ತದೆಯೇ ಎಂಬುದು ಸ್ಪಷ್ಟವಿಲ್ಲ. ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಎಲ್ಲ ಸಂದರ್ಭಗಳಲ್ಲಿಯೂ ಬದಿಗೆ ಸರಿಸಲು ಆಗುವುದಿಲ್ಲ. ಈ ಭಿನ್ನಾಭಿಪ್ರಾಯಗಳು ಒಗ್ಗಟ್ಟಿಗೆ ಧಕ್ಕೆ ತರಬಹುದು. ಬಿಹಾರ ರಾಜಕಾರಣದ ಪ್ರಮುಖರಾದ ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಅವರಲ್ಲಿ ಒಂದಿಷ್ಟು ಅಸಂತೃಪ್ತಿ ಇದೆ ಎಂಬ ವರದಿಗಳಿವೆ. ಇವೆಲ್ಲವುಗಳ ನಡುವೆಯೇ, ವಿರೋಧ ಪಕ್ಷಗಳ ಮೈತ್ರಿಕೂಟವೊಂದು ರೂಪ ಪಡೆದುಕೊಳ್ಳುತ್ತಿದೆ ಹಾಗೂ 2024ರ ಲೋಕಸಭಾ ಚುನಾವಣೆಯ ರೂಪುರೇಷೆ ದಿನಕಳೆದಂತೆ ಹೆಚ್ಚು ಸ್ಪಷ್ಟವಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.