ಕೋವಿಡ್ ಸಾಂಕ್ರಾಮಿಕವು ಕಾಣಿಸಿಕೊಂಡ ನಂತರದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಪಿಎಂ–ಕೇರ್ಸ್ ಎಂಬ ನಿಧಿಯೊಂದನ್ನು ಸ್ಥಾಪಿಸಿದೆ. ಇದೊಂದು ಹಣಕಾಸಿನ ಕಪ್ಪು ಕುಳಿಯೇ ಆಗಿದ್ದು, ನಿಧಿಯ ಕುರಿತು ಹೆಚ್ಚಿನ ಮಾಹಿತಿ ಜನರಿಗೆ ತಿಳಿದಿಲ್ಲ. ಈ ನಿಧಿಗೆ ಹಣ ಎಲ್ಲಿಂದ ಬಂದಿದೆ, ಅದನ್ನು ಹೇಗೆ ವೆಚ್ಚ ಮಾಡಲಾಗಿದೆ, ಯಾವ ಉದ್ದೇಶಕ್ಕೆ ವೆಚ್ಚ ಮಾಡಲಾಗಿದೆ ಎಂಬ ಯಾವ ಮಾಹಿತಿಯನ್ನೂ ಸರ್ಕಾರವು ಬಹಿರಂಗ ಮಾಡಿದ್ದೇ ಇಲ್ಲ. ಕೆಲವು ವ್ಯಕ್ತಿಗಳನ್ನು ಈ ನಿಧಿಯ ಟ್ರಸ್ಟಿಗಳು ಅಥವಾ ಸಲಹೆಗಾರರನ್ನಾಗಿ ಇತ್ತೀಚೆಗೆ ನೇಮಕ ಮಾಡಲಾಗಿದೆ. ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್, ಲೋಕಸಭೆಯ ಮಾಜಿ ಉಪಸ್ಪೀಕರ್ ಕರಿಯ ಮುಂಡಾ ಅವರನ್ನು ಟ್ರಸ್ಟಿಗಳನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಮಹಾಲೇಖಪಾಲ ರಾಜೀವ್ ಮಹರ್ಷಿ, ಇನ್ಫೊಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಸಲಹಾ ಮಂಡಳಿಗೆ ನೇಮಕ ಮಾಡಲಾಗಿದೆ. ಈ ಎಲ್ಲರೂ ಅಸಾಧಾರಣ ವ್ಯಕ್ತಿಗಳೇ ಹೌದು. ಆದರೆ, ದೇಶದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಇನ್ನೂ ಹಲವು ವ್ಯಕ್ತಿಗಳು ಇದ್ದಾರೆ. ಹಾಗಿರುವಾಗ ಅವರನ್ನೆಲ್ಲ ಬಿಟ್ಟು, ಈ ವ್ಯಕ್ತಿ ಗಳನ್ನೇ ಟ್ರಸ್ಟಿಗಳು ಅಥವಾ ಸಲಹೆಗಾರರನ್ನಾಗಿ ನೇಮಕ ಮಾಡಲು ಕಾರಣಗಳೇನು ಎಂಬುದನ್ನು ಬಹಿರಂಗ ಪಡಿಸಿಲ್ಲ.
ಪಿಎಂ–ಕೇರ್ಸ್ ನಿಧಿಯ ಕುರಿತು ಉತ್ತರ ದೊರೆತಿಲ್ಲದ ಹಲವು ಪ್ರಶ್ನೆಗಳು ಈಗಲೂ ಇವೆ. ಈ ಪ್ರಶ್ನೆಗಳನ್ನು ಮಾಧ್ಯಮ, ಸಾರ್ವಜನಿಕ ವೇದಿಕೆಗಳು, ಸಾಮಾಜಿಕ ಜಾಲತಾಣಗಳು ಮತ್ತು ನ್ಯಾಯಾಲಯಗಳಲ್ಲಿ ಕೇಳಲಾಗಿದೆ. ಸರ್ಕಾರವು ಈ ಪ್ರಶ್ನೆಗಳಿಗೆ ತೃಪ್ತಿಕರವಾಗಿ ಉತ್ತರಿಸಿಲ್ಲ. ಅವುಗಳ ಜೊತೆಗೆ ನೇಮಕ ಕುರಿತ ಹೊಸ ಪ್ರಶ್ನೆಯನ್ನೂ ಸೇರಿಸಿಕೊಳ್ಳಬಹುದು. ಆದರೆ, ನಿಧಿಯ ವಿಚಾರದಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ಸರ್ಕಾರವು ನಿಲುವುಗಳನ್ನು ಬದಲಾಯಿಸು ತ್ತಲೇ ಬಂದಿದೆ. ಕೋವಿಡ್ ಸಾಂಕ್ರಾಮಿಕದಂತಹ ಸಂಕಷ್ಟದ ಸಂದರ್ಭದಲ್ಲಿ ಅಥವಾ ತುರ್ತು ಸ್ಥಿತಿಯಲ್ಲಿ ನೆರವು ನೀಡುವುದು ನಿಧಿಯ ಉದ್ದೇಶ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಅದೇ ಉದ್ದೇಶಕ್ಕಾಗಿ ಕಾಯ್ದೆಬದ್ಧವಾಗಿ ಸ್ಥಾಪಿಸಲಾಗಿರುವ ಪ್ರಧಾನಮಂತ್ರಿ ಪರಿಹಾರ ನಿಧಿ ಈಗಾಗಲೇ ಇದೆ. ಪಿಎಂ– ಕೇರ್ಸ್ ನಿಧಿಗೆ ಪ್ರಧಾನಿಯವರ ಅಧ್ಯಕ್ಷತೆ ಇದ್ದರೆ, ಸಚಿವ ಸಂಪುಟದ ಹಿರಿಯ ಸಚಿವರು ಟ್ರಸ್ಟಿಗಳಾಗಿದ್ದಾರೆ. ಪ್ರಧಾನಿ ಕಾರ್ಯಾಲಯವೇ ಈ ನಿಧಿಯನ್ನು ನಿರ್ವಹಿಸುತ್ತಿದೆ. ಸರ್ಕಾರದ ಮೂಲಸೌಕರ್ಯವನ್ನು ಮತ್ತು ರಾಷ್ಟ್ರೀಯ ಲಾಂಛನವನ್ನು ಬಳಸಿಕೊಳ್ಳುತ್ತಿದೆ. ಹಾಗಿದ್ದರೂ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ಅಥವಾ ಮಹಾಲೇಖಪಾಲರಿಂದ ಲೆಕ್ಕ ಪರಿಶೋಧನೆ ಮಾಡಿಸಲು ಸರ್ಕಾರ ನಿರಾಕರಿಸಿದೆ.
ಪಿಎಂ– ಕೇರ್ಸ್ ನಿಧಿಯ ರಚನೆ, ಕಾರ್ಯನಿರ್ವಹಣೆ ಮತ್ತು ಲೆಕ್ಕಪತ್ರಗಳ ಕುರಿತಂತೆ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕೊರತೆ ಆರಂಭದಿಂದಲೇ ಇದೆ. ದೇಣಿಗೆ ಮತ್ತು ದೇಣಿಗೆದಾರರ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ನಿಧಿಗೆ ದೇಣಿಗೆ ನೀಡಿದವರು ತೆರಿಗೆ ವಿನಾಯಿತಿಗೆ ಅರ್ಹರು. ಸಾರ್ವಜನಿಕವಾದ ವಿವಿಧ ಅಗತ್ಯಗಳಿಗೆ ನಿಧಿಯು ಇನ್ನಷ್ಟು ಹುರುಪಿನಿಂದ ಸ್ಪಂದಿಸುವಂತೆ ಮಾಡಲು ಈಗ ನೇಮಕಗೊಂಡಿರುವವರ ವಿಸ್ತಾರವಾದ ಅನುಭವವು ನೆರವಾಗಲಿದೆ ಎಂದು ಹೊಸ ನೇಮಕದ ಕುರಿತಂತೆ ಸರ್ಕಾರವು ಹೇಳಿದೆ. ಕೆಲವು ವ್ಯಕ್ತಿಗಳನ್ನು ನಿಧಿಯ ಟ್ರಸ್ಟಿಗಳನ್ನಾಗಿ ನೇಮಿಸಿದ ಮಾತ್ರಕ್ಕೆ ನಿಧಿಗೆ ವಿಶ್ವಾಸಾರ್ಹತೆ ಬರುವುದಿಲ್ಲ. ನಿಧಿಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡುವುದರ ಮೂಲಕ ಮಾತ್ರ ವಿಶ್ವಾಸಾರ್ಹತೆ ಬರುವಂತೆ ಮಾಡಲು ಸಾಧ್ಯ. ಪಿಎಂ–ಕೇರ್ಸ್ ನಿಧಿಯ ವಿಚಾರದಲ್ಲಿ ಇದುವರೆಗೆ ಅನುಸರಿಸಿಕೊಂಡು ಬಂದಿರುವ ಗೋಪ್ಯತೆಯು ಹೊಸ ನೇಮಕಗಳಿಗೂ ಅನ್ವಯ ಆಗುತ್ತದೆ. ಹೊಸದಾಗಿ ನೇಮಕಗೊಂಡವರು ಯಾವ ಮಾನದಂಡಗಳ ಅಡಿ ನೇಮಕವಾಗಿದ್ದಾರೆ ಎಂಬುದು ಕೂಡ ರಹಸ್ಯವಾಗಿಯೇ ಇದೆ. 80 ವರ್ಷ ದಾಟಿದವರು ಎಂಬುದು ಒಂದು ಮಾನದಂಡ ಆಗಿರುವ ಸಾಧ್ಯತೆ ಇದೆ. ಏಕೆಂದರೆ, ಟ್ರಸ್ಟಿಗಳಾಗಿ ನೇಮಕಗೊಂಡವರಲ್ಲಿ ಹೆಚ್ಚಿನವರು 80 ವರ್ಷ ದಾಟಿದವರು. ಇದು ನಿಧಿಯ ಅಗೋಚರ ಚಟುವಟಿಕೆಗಳಿಗೆ ಹೇಗೆ ಹುರುಪು ತುಂಬಲಿದೆ ಎಂಬುದನ್ನು ಸರ್ಕಾರವೇ ವಿವರಿಸಬೇಕಿದೆ. ರತನ್ ಟಾಟಾ, ಸುಧಾ ಮೂರ್ತಿ, ಕೆ.ಟಿ. ಥಾಮಸ್ ಇವರೆಲ್ಲ ಸಮಾಜದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡವರು. ಈ ಗಣ್ಯರು, ಪಿಎಂ–ಕೇರ್ಸ್ ನಿಧಿ ಜತೆಗೆ ಗುರುತಿಸಿಕೊಳ್ಳುವುದನ್ನುನಿರಾಕರಿಸಲು ಬೇಕಿರುವ ಬಲವಾದ ಕಾರಣಗಳು ಇವೆ. ಉತ್ತರದಾಯಿತ್ವವಾಗಲೀ ಪಾರದರ್ಶಕತೆ ಯಾಗಲೀ ಚಟುವಟಿಕೆಯ ಬಗ್ಗೆ ಸ್ಪಷ್ಟತೆಯಾಗಲೀ ಇಲ್ಲಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.