ADVERTISEMENT

ಸಂಪಾದಕೀಯ | ರೆಪೊ ದರದಲ್ಲಿ ಯಥಾಸ್ಥಿತಿ: ನಿರೀಕ್ಷಿತವೂ ಹೌದು, ಸರಿಯೂ ಹೌದು

ಸಂಪಾದಕೀಯ
Published 13 ಜೂನ್ 2024, 23:52 IST
Last Updated 13 ಜೂನ್ 2024, 23:52 IST
.
.   

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದು ನಿರೀಕ್ಷಿತವೇ ಆಗಿತ್ತು. ನಿರೀಕ್ಷೆಗೆ ಅನುಗುಣವಾಗಿಯೇ ಎಂಪಿಸಿ ನಡೆದುಕೊಂಡಿದೆ. ಕೇಂದ್ರೀಯ ಬ್ಯಾಂಕ್‌ನ ಎಂಪಿಸಿಯು ಕಳೆದ ವಾರ ನಡೆದ ಸಭೆಯಲ್ಲಿ, ಸತತ ಎಂಟನೆಯ ಬಾರಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಕೆಲಸ ಮಾಡಿದೆ. ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಮುಂದುವರಿಸುವ ಹಾಗೂ ಹೊಂದಾಣಿಕೆಯ ನಿಲುವನ್ನು ಹಿಂಪಡೆಯುವ ಧೋರಣೆಯನ್ನು ಕಾಯ್ದುಕೊಳ್ಳುವ ವಿಚಾರವಾಗಿ ಎಂಪಿಸಿಯು ಬಹುಮತದ ನಿರ್ಧಾರ ಕೈಗೊಂಡಿದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವು (ರೆಪೊ) ಶೇಕಡ 6.5ರ ಮಟ್ಟದಲ್ಲಿ ಮುಂದುವರಿಯಲಿದೆ. ರೆಪೊ ದರದ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಎಂಪಿಸಿ ಪರಿಶೀಲಿಸುವ ಕೆಲವು ವಿದ್ಯಮಾನಗಳು ಈ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಪೂರಕವಾಗಿ ಇದ್ದವು. ಆದರೆ ಇಲ್ಲಿ ಇನ್ನೂ ಒಂದು ಸಂಗತಿಯನ್ನು ಉಲ್ಲೇಖಿಸಬಹುದು. ಅಂದರೆ, ಹೊಸದಾಗಿ ರಚನೆ ಆಗಿರುವ ಸರ್ಕಾರಕ್ಕೆ, ಆರಂಭದಲ್ಲಿಯೇ ಬಡ್ಡಿ ದರದಲ್ಲಿ ಬದಲಾವಣೆ ಆಗುವುದರಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯ ಇರುವುದಿಲ್ಲ.

ಬೆಲೆಗಳಲ್ಲಿ ಸ್ಥಿರತೆಯನ್ನು ತರುವ ಅಗತ್ಯದ ಕಾರಣಕ್ಕಾಗಿ ಎಂಪಿಸಿಯು ರೆಪೊ ದರದಲ್ಲಿ ಬದಲಾವಣೆ ಮಾಡದೆ ಇರುವ ತೀರ್ಮಾನ ಕೈಗೊಂಡಿದೆ. ಚಿಲ್ಲರೆ ಹಣದುಬ್ಬರ ದರವನ್ನು ಶೇಕಡ 4ರಲ್ಲಿ ನಿಯಂತ್ರಿಸುವ ಹೊಣೆಯು ಆರ್‌ಬಿಐ ಮೇಲೆ ಇದೆ. ಆದರೆ ಚಿಲ್ಲರೆ ಹಣದುಬ್ಬರ ದರವು ಶೇ 4ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಹೀಗಾಗಿ, ತಾನು ನಿಭಾಯಿಸ ಬೇಕಿರುವ ಹೊಣೆಗಾರಿಕೆಯ ದೃಷ್ಟಿಯಿಂದ ಕಂಡಾಗ ಆರ್‌ಬಿಐ ಮುಂದೆ ಹೆಚ್ಚಿನ ಆಯ್ಕೆಗಳೇನೂ ಇರಲಿಲ್ಲ. ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಉಳಿದಿದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಈ ವರ್ಷದಲ್ಲಿ ತುಸು ಕಡಿಮೆ ಆಗಿದೆ ಎಂಬುದು ನಿಜವಾದರೂ ಹಣದುಬ್ಬರದ ಪ್ರಮಾಣ ಇಳಿಕೆ ಆಗುತ್ತಿರುವ ಗತಿಯು ನಿಧಾನವಾಗಿಯೇ ಇದೆ. ಫೆಬ್ರುವರಿಯಲ್ಲಿ ಶೇ 5.8ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಶೇ 4.75ಕ್ಕೆ ತಗ್ಗಿದೆ. ಹಣದುಬ್ಬರದ ವಿಚಾರದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬಹಳ ಎಚ್ಚರಿಕೆಯಿಂದ ಇದ್ದಾರೆ. ಈಗಿನ ತ್ರೈಮಾಸಿಕ ದಲ್ಲಿ ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆಯು ಹೆಚ್ಚಾಗಿಯೇ ಇದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 4.5ರಷ್ಟು ಇರಲಿದೆ ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಅವರು ಪರಿಷ್ಕರಿಸಿಲ್ಲ. ಈ ಅಂದಾಜು ಕೂಡ ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಿತಿಗಿಂತ ಹೆಚ್ಚಿನದು ಎಂಬುದನ್ನು ಗಮನಿಸಬೇಕು. ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಇನ್ನೂ ಹೆಚ್ಚಿದೆ. ಮುಂಗಾರು ಮಳೆಯು ಈ ವರ್ಷ ಚೆನ್ನಾಗಿ ಆಗಲಿದೆ ಎಂಬ ಮುನ್ಸೂಚನೆ ಇದ್ದರೂ ಮುಂಗಾರು ಮಳೆಯು ಚೆನ್ನಾಗಿ ಆಗಿ ಬೆಲೆ ಇಳಿಕೆ ಆಗಬಹುದು ಎಂಬ ಅಂದಾಜನ್ನು ಇರಿಸಿಕೊಳ್ಳಬಹುದಾಗಿದ್ದರೂ ಆರ್‌ಬಿಐ ಹೆಚ್ಚಿನ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸಕ್ಕೆ ಕೈಹಾಕಿಲ್ಲ.

ಇದೇ ವೇಳೆ ಆರ್‌ಬಿಐ, ಆರ್ಥಿಕ ಬೆಳವಣಿಗೆಯ ವಿಚಾರವಾಗಿ ಕೆಲವು ಭರವಸೆಗಳನ್ನು ಕೂಡ ವ್ಯಕ್ತ
ಪಡಿಸಿದೆ. ಈ ಭರವಸೆಗಳು ಆಧಾರಸಹಿತವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 7.2ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಹಿಂದೆ ಮಾಡಿದ್ದ ಅಂದಾಜಿನ ಆಧಾರದಲ್ಲಿ ಆರ್‌ಬಿಐ, ಬೆಳವಣಿಗೆ ದರ ಶೇ 7ರಷ್ಟು ಇರಲಿದೆ ಎಂದು ಹೇಳಿತ್ತು. ಬೆಳವಣಿಗೆಯ ವೇಗಕ್ಕೆ ಧಕ್ಕೆ ಆಗುವುದಿಲ್ಲ ಎನ್ನಲು ವಿಶ್ವಾಸಾರ್ಹ ಸೂಚನೆಗಳು ಕಂಡಿವೆ ಎಂದು ಅದು ಹೇಳಿದೆ. ಮುಂಗಾರು ಮಳೆಯು ಈ ವರ್ಷ ವಾಡಿಕೆಗಿಂತ ಹೆಚ್ಚು ಇರಲಿದೆ ಎಂಬ ಅಂದಾಜು ಇದೆ. ಇದು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಬೇಡಿಕೆಯ ದೃಷ್ಟಿಯಿಂದ ಹಾಗೂ ಕೃಷಿ ವಲಯದ ಚಟುವಟಿಕೆಗಳ ದೃಷ್ಟಿಯಿಂದ ಒಳ್ಳೆಯ ಸುದ್ದಿ. ತಯಾರಿಕೆ ಹಾಗೂ ಸೇವಾ ವಲಯಗಳಲ್ಲಿ ಬೆಳವಣಿಗೆ ದರವು ತಗ್ಗುವ ಅಂದಾಜು ಇಲ್ಲ. ಈ ಎರಡು ವಲಯಗಳಲ್ಲಿನ ಬೆಳವಣಿಗೆಯು ದೇಶದ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಜಾಸ್ತಿ ಮಾಡಬಹುದು. ‘ಬ್ಯಾಂಕ್‌ ಹಾಗೂ ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಸ್ಥಿತಿ ಚೆನ್ನಾಗಿರುವ ಕಾರಣಕ್ಕೆ, ಸರ್ಕಾರವು ಮೂಲಸೌಕರ್ಯ ವಲಯದ ಮೇಲೆ ವೆಚ್ಚ ಮಾಡುವುದನ್ನು ಮುಂದುವರಿಸಲಿರುವ ಕಾರಣಕ್ಕೆ ಹಾಗೂ ಉದ್ಯಮ ವಲಯದಲ್ಲಿ ಆಶಾವಾದ ಇರುವ ಕಾರಣಕ್ಕೆ ಹೂಡಿಕೆ ಚಟುವಟಿಕೆಗಳು ನಿರೀಕ್ಷೆಯಂತೆಯೇ ಚೆನ್ನಾಗಿರಲಿವೆ’ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯು ಚೆನ್ನಾಗಿ ಇರುವ ನಿರೀಕ್ಷೆ ಇರುವಾಗ, ರೆಪೊ ದರವನ್ನು ತಗ್ಗಿಸುವ ಅಗತ್ಯವೂ ಇರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.