ಚಿಲ್ಲರೆ ಹಣದುಬ್ಬರ ದರವು ನಿಯಂತ್ರಣದಲ್ಲಿ ಇಲ್ಲ ಹಾಗೂ ಅದನ್ನು ನಿಯಂತ್ರಣಕ್ಕೆ ತರಲು ಹಲವು ತಿಂಗಳೇ ಬೇಕಾಗುತ್ತವೆ ಎಂಬುದು ಗೊತ್ತಿರುವ ಸಂಗತಿಯೇ ಆಗಿತ್ತು. ಅಲ್ಪಾವಧಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರುತ್ತದೆ ಎಂಬ ಅಂದಾಜು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಕೂಡ ಇತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರದ ಪ್ರಮಾಣವು ಶೇಕಡ 6.2ಕ್ಕೆ ಹೆಚ್ಚಳ ಕಂಡಿರುವುದು, ಅಂದರೆ 14 ತಿಂಗಳ ಗರಿಷ್ಠ ಮಟ್ಟವನ್ನು ಅದು ತಲುಪಿರುವುದು ಬಹಳ ಆಶ್ಚರ್ಯ ಮೂಡಿಸುವಂಥದ್ದು. ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 5.5ರಷ್ಟು ಇತ್ತು. ಅಕ್ಟೋಬರ್‌ನಲ್ಲಿ ದಾಖಲಾಗಿರುವ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಿತಿಗಿಂತ ಹೆಚ್ಚು. ಚಿಲ್ಲರೆ ಹಣದುಬ್ಬರ ದರವನ್ನು ಶೇ 4ರಿಂದ ಶೇ 6ರ ನಡುವೆ ನಿಯಂತ್ರಿಸುವ ಹೊಣೆ ಆರ್‌ಬಿಐ ಮೇಲಿದೆ. ಆಹಾರ ವಸ್ತುಗಳ ಬೆಲೆ ಹೆಚ್ಚಳ, ಅದರಲ್ಲೂ ಮುಖ್ಯವಾಗಿ ತರಕಾರಿಗಳ ಬೆಲೆಯಲ್ಲಿನ ಏರಿಕೆ, ಚಿಲ್ಲರೆ ಹಣದುಬ್ಬರ ದರವು ಹೆಚ್ಚಾಗುವಂತೆ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ತರಕಾರಿಗಳ ಬೆಲೆ ಏರಿಕೆ ಪ್ರಮಾಣ ಶೇ 36ರಷ್ಟು ಇತ್ತು, ಅಕ್ಟೋಬರ್ ತಿಂಗಳಲ್ಲಿ ಅದು ಶೇ 42ರಷ್ಟು ಆಗಿದೆ. ಏಕದಳ ಧಾನ್ಯಗಳ ಬೆಲೆಯಲ್ಲಿ ಶೇ 7ರಷ್ಟು ಹಾಗೂ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಶೇ 8ರಷ್ಟು ಏರಿಕೆ ದಾಖಲಾಗಿದೆ. ಅಡುಗೆಯಲ್ಲಿ ಬಳಸುವ ವಿವಿಧ ಬಗೆಯ ಎಣ್ಣೆಗಳ ಬೆಲೆ ಕೂಡ ಏರಿಕೆ ಕಂಡಿದೆ.
ಮುಂದಿನ ತಿಂಗಳುಗಳಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡುಬರುವ ನಿರೀಕ್ಷೆ ಇದೆ. ಮುಂಗಾರು ಮಳೆಯು ಆಹಾರ ಬೆಳೆಗಳಿಗೆ ಅನುಕೂಲಕರವಾದ ರೀತಿಯಲ್ಲಿ ಚೆನ್ನಾಗಿ ಆಗಿದೆ. ಹೊಸದಾಗಿ ಕಟಾವು ಮಾಡಲಾದ ಬೆಳೆಗಳು ಮಾರುಕಟ್ಟೆಗೆ ಬಂದು, ಅವುಗಳ ಬೆಲೆಯಲ್ಲಿ ಒಂದಿಷ್ಟು ಇಳಿಕೆ ಕಂಡುಬರುವ ಸಾಧ್ಯತೆ ಇದೆ. ಹಿಂಗಾರು ಬೆಳೆ ಕೂಡ ಚೆನ್ನಾಗಿ ಆಗುವ ನಿರೀಕ್ಷೆ ಇದೆ. ಏಕದಳ ಧಾನ್ಯಗಳ ಸಂಗ್ರಹವು ಉತ್ತಮ ಮಟ್ಟದಲ್ಲಿ ಇರುವ ಕಾರಣ, ಅವುಗಳ ಬೆಲೆ ಏರಿಕೆಗೆ ಮಿತಿ ಇರುತ್ತದೆ. ಆದರೆ, ಅಕ್ಟೋಬರ್‌ನಲ್ಲಿ ದಾಖಲಾಗಿರುವ ಭಾರಿ ಪ್ರಮಾಣದ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು, ಪ್ರಸಕ್ತ ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ 4.8ರಷ್ಟು, ನಾಲ್ಕನೆಯ ತ್ರೈಮಾಸಿಕದಲ್ಲಿ ಶೇ 4.2ರಷ್ಟು ಇರಬಹುದು ಎಂದು ಆರ್‌ಬಿಐ ಮಾಡಿದ್ದ ತನ್ನ ಈ ಮೊದಲಿನ ಅಂದಾಜನ್ನು ಈಗ ಪರಿಷ್ಕರಿಸಬಹುದು. ಜಾಗತಿಕ ಪ್ರಭಾವಗಳ ಕಾರಣದಿಂದಾಗಿ ತೈಲ ಬೆಲೆಯು ಹೆಚ್ಚಳ ಕಂಡರೆ, ಅದರಿಂದಲೂ ಹಣದುಬ್ಬರ ಪ್ರಮಾಣ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಇತ್ತ, ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದಿನೇದಿನೇ ಕುಸಿಯುತ್ತಿರುವುದು ನಕಾರಾತ್ಮಕ ಪರಿಣಾಮ ಉಂಟುಮಾಡಲಿದೆ. ಆಹಾರ ವಸ್ತುಗಳು ಹಾಗೂ ಇಂಧನ ಹೊರತುಪಡಿಸಿ ಇತರ ಸರಕುಗಳು ಮತ್ತು ಸೇವೆಗಳ ಬೆಲೆ ಏರಿಕೆ ಪ್ರಮಾಣ ಕೂಡ ಶೇ 3.7ಕ್ಕೆ ಹೆಚ್ಚಳ ಕಂಡಿದೆ. ಸಗಟು ಹಣದುಬ್ಬರ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಅರ್ಥವ್ಯವಸ್ಥೆಯ ಬೆಳವಣಿಗೆಯು ಮಂದವಾಗುವ ಸೂಚನೆಗಳು ಈಗಾಗಲೇ ಇವೆ. ಆರ್ಥಿಕ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇ 7ರಷ್ಟು ಇರಲಿದೆ ಎಂಬುದು ಆರ್‌ಬಿಐ ಅಂದಾಜು. ಇಡೀ ವರ್ಷಕ್ಕೆ ಜಿಡಿಪಿ ಬೆಳವಣಿಗೆಯು ಶೇ 7.2ರಷ್ಟು ಇರಲಿದೆ ಎಂದು ಅದು ಅಂದಾಜು ಮಾಡಿದೆ. ಆದರೆ ಬೆಳವಣಿಗೆ ದರವು ಶೇ 7ಕ್ಕಿಂತ ಕಡಿಮೆ ಇರಲಿದೆ ಎಂಬ ಅಂದಾಜುಗಳೂ ಇವೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಕಳೆದ ತಿಂಗಳು ನಡೆದ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ತೀರ್ಮಾನ ಕೈಗೊಂಡಿತು. ಆದರೆ ತನ್ನ ಹಣಕಾಸು ನಿಲುವು ‘ಹೊಂದಾಣಿಕೆಯನ್ನು ಹಿಂಪಡೆಯುವುದು’ ಎಂದು ಇದ್ದಿದ್ದನ್ನು ‘ತಟಸ್ಥ’ ಎಂದು ಬದಲಾಯಿಸಿತು. ಚಿಲ್ಲರೆ ಹಣದುಬ್ಬರ ದರವನ್ನು ಶೇ 4ಕ್ಕೆ ಇಳಿಸುವುದು ತನ್ನ ಆದ್ಯತೆ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿದ್ದರೂ ಹಣಕಾಸಿನ ನಿಲುವಿನಲ್ಲಿ ಬದಲಾವಣೆ ತಂದಿರುವುದು ಮುಂದೆ ರೆಪೊ ದರ ಇಳಿಕೆ ಆಗುವುದರ ಸೂಚನೆ ಎಂದು ನಂಬಲಾಗಿತ್ತು. ಇತ್ತ ಬೇರೆ ಬೇರೆ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ರೆಪೊ ದರವನ್ನು ತಗ್ಗಿಸಿದ್ದುದು, ಡಿಸೆಂಬರ್‌ನಲ್ಲಿ ನಡೆಯುವ ಸಭೆಯಲ್ಲಿ ಆರ್‌ಬಿಐ ಕೂಡ ರೆಪೊ ದರ ಇಳಿಕೆಯ ತೀರ್ಮಾನ ಪ್ರಕಟಿಸಬಹುದು ಎಂಬ ನಿರೀಕ್ಷೆಗಳಿಗೆ ಕಾರಣವಾಗಿತ್ತು. ಆದರೆ, ಈಗ ಹಣದುಬ್ಬರವು ಮತ್ತೆ ಏರಿಕೆ ಆಗಿರುವ ಕಾರಣ, ಡಿಸೆಂಬರ್ ತಿಂಗಳ ಸಭೆಯಲ್ಲಿ ರೆಪೊ ದರವನ್ನು ಆರ್‌ಬಿಐ ತಗ್ಗಿಸುವುದಿಲ್ಲ ಎಂಬುದು ಖಾತರಿ ಆದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.