ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಸಂಯುಕ್ತ ಅರಬ್ ಸಂಸ್ಥಾನಗಳಿಗೆ (ಯುಎಇ) ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ಆರಂಭಿಸಲು ಮಾಡಿಕೊಂಡಿರುವ ಒಪ್ಪಂದವು ರೂಪಾಯಿಯನ್ನು ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ಹೆಚ್ಚೆಚ್ಚು ಬಳಕೆ ಮಾಡಬೇಕು ಎಂಬ ಕೇಂದ್ರದ ನೀತಿಗೆ ಅನುಗುಣವಾಗಿ ಇದೆ. ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ಒಟ್ಟಾಗಿ ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದವು. ಇದಾದ ನಂತರದಲ್ಲಿ ಭಾರತವು ರೂಪಾಯಿ ಬಳಸಿ ವಹಿವಾಟು ನಡೆಸುವ ವಿಚಾರವಾಗಿ ರಷ್ಯಾ ಜೊತೆಗೂ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಇಂಡೊನೇಷ್ಯಾ ಹಾಗೂ ತಾಂಜಾನಿಯಾ ಜೊತೆ ಕೂಡ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವ ವಿಚಾರವಾಗಿ ಮಾತುಕತೆಗಳು ನಡೆದಿವೆ. ಆದರೆ, ಭಾರತದ ಪಾಲಿಗೆ ಯುಎಇ ಮೂರನೆಯ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಕಾರಣ, ಆ ದೇಶದ ಜೊತೆ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಮಾಡಿಕೊಂಡಿರುವ ಒಪ್ಪಂದವು ಮಹತ್ವದ್ದಾಗುತ್ತದೆ. ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯನ್ನು ಹೆಚ್ಚಿಸುವ ಬಯಕೆ ಭಾರತದ್ದು. ಈ ದಿಸೆಯಲ್ಲಿ, ದ್ವಿಪಕ್ಷೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಆರಂಭಿಕ ಹೆಜ್ಜೆಗಳನ್ನು ಇರಿಸಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ವಹಿವಾಟುಗಳಲ್ಲಿ ಡಾಲರ್ ಬಳಕೆಯನ್ನು ತಗ್ಗಿಸಿದರೆ, ಆ ಕರೆನ್ಸಿಯ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ತುಂಬಲು ಬೇರೆ ಯಾವ ಕರೆನ್ಸಿಗೂ ಶಕ್ತಿಯಿಲ್ಲ. ಹೀಗಾಗಿ, ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿಗೆ ಒಂದಿಷ್ಟು ಪಾಲು ಹೊಂದುವ ಅವಕಾಶವಿದೆ ಎಂದು ಕೇಂದ್ರ ಅಂದಾಜಿಸಿದೆ.
ರೂಪಾಯಿ ಬಳಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಚ್ಚಿಸಲು ಯೋಜನೆಯೊಂದನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚಿಸಿದ್ದ ಸಮಿತಿಯೊಂದು ವರದಿಯನ್ನು ಈಚೆಗೆ ಸಲ್ಲಿಸಿದೆ. ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ರೂಪಾಯಿ ಬಳಕೆಯನ್ನು ಇನ್ನಷ್ಟು ಹೆಚ್ಚು ಮಾಡಲು ಅದು ಹಲವು ಪ್ರಸ್ತಾವಗಳನ್ನು ಪಟ್ಟಿಮಾಡಿದೆ. ರೂಪಾಯಿಯಲ್ಲಿ ಮಾಡುವ ಪಾವತಿಗಳಿಗೆ ಏಕರೂಪದ ಮಾದರಿಯೊಂದನ್ನು ಅಳವಡಿಸಿಕೊಳ್ಳುವುದು, ಪಾವತಿಗಳಲ್ಲಿ ರೂಪಾಯಿಯನ್ನು ಬಳಕೆ ಮಾಡುವ ರಫ್ತುದಾರರಿಗೆ ಉತ್ತೇಜನ ನೀಡುವುದು, ಭಾರತದ ಪಾವತಿ ವ್ಯವಸ್ಥೆಯನ್ನು ಇತರ ದೇಶಗಳ ಪಾವತಿ ವ್ಯವಸ್ಥೆಯ ಜೊತೆ ಒಂದಾಗಿಸುವುದು ಸಮಿತಿಯ ಪ್ರಸ್ತಾವಗಳಲ್ಲಿ ಇವೆ. ಇವೆಲ್ಲ ರೂಪಾಯಿಯಲ್ಲಿ ವಹಿವಾಟು ಹೆಚ್ಚಿಸಲು ಇರುವ ಅಲ್ಪಾವಧಿ ಕ್ರಮಗಳು.
ಆದರೆ ಮುಂದಿನ ದಿನಗಳಲ್ಲಿ ದೇಶದ ಮುಂದೆ ಸವಾಲಿನ ಬೆಟ್ಟಗಳೇ ಇವೆ. ದೇಶದ ಅರ್ಥ ವ್ಯವಸ್ಥೆಯು ಇನ್ನಷ್ಟು ದೊಡ್ಡದಾಗಿ ಬೆಳೆಯಬೇಕು ಮತ್ತು ವ್ಯಾಪಾರ ವಹಿವಾಟಿನ ಗಾತ್ರವು ವಿಸ್ತಾರವಾಗಬೇಕು. ಒಪ್ಪಂದ ಆಗಿದ್ದರೂ ರಷ್ಯಾ ಜೊತೆ ರೂಪಾಯಿಯಲ್ಲಿ ವಹಿವಾಟು ಆರಂಭವಾಗಿಲ್ಲ. ಭಾರತದಿಂದ ತಾನು ಮಾಡಿಕೊಳ್ಳುವ ಆಮದಿನ ಮೊತ್ತವು ರೂಪಾಯಿಯಲ್ಲಿ ವಹಿವಾಟು ನಡೆಸಲು ಸಾಕಾಗುವಷ್ಟು ಇಲ್ಲ, ಭಾರತವು ರೂಪಾಯಿಯಲ್ಲಿ ಪಾವತಿಗಳನ್ನು ಮಾಡಿದರೆ ಆ ರೂಪಾಯಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಳಕೆ ಮಾಡಲು ತನಗೆ ಇರುವ ಅವಕಾಶಗಳು ಕಡಿಮೆ ಎಂದು ರಷ್ಯಾ ಹೇಳಿದೆ ಎಂಬ ವರದಿಗಳು ಇವೆ. ಅದಕ್ಕಾಗಿ, ಭಾರತವು ತನಗೆ ಮಾಡಬೇಕಿರುವ ಪಾವತಿಗಳನ್ನು ಯುವಾನ್ ಬಳಸಿ ಮಾಡಲಿ ಎಂದು ರಷ್ಯಾ ಬಯಸಿದೆ. ಜಾಗತಿಕ ವಹಿವಾಟಿನಲ್ಲಿ ಭಾರತದ ಪಾಲು ಶೇಕಡ 2ರಷ್ಟು ಮಾತ್ರವೇ ಇದೆ. ಇದು ಬಹಳ ಸಣ್ಣ ಪ್ರಮಾಣ. ದೇಶದ ವ್ಯಾಪಾರ ಕೊರತೆ ಅಂತರವು ಬಹಳ ದೊಡ್ಡದಾಗಿದೆ. ಕೆಲವು ದೇಶಗಳ ಜೊತೆಗಿನ ವ್ಯಾಪಾರದಲ್ಲಿ ಮಾತ್ರ ಕೊರತೆ ಇಲ್ಲ. ಇವೆಲ್ಲ ಏನೇ ಇದ್ದರೂ, ಕೆಲವು ದೇಶಗಳ ಜೊತೆಗಾದರೂ ರೂಪಾಯಿಯಲ್ಲಿ ವಹಿವಾಟು ಆರಂಭಿಸುವ ಬಯಕೆ ಭಾರತದ್ದು. ಬಾಂಗ್ಲಾದೇಶದ ಜೊತೆ ರೂಪಾಯಿಯಲ್ಲಿ ವಹಿವಾಟಿಗೆ ಈ ತಿಂಗಳಲ್ಲಿ ಚಾಲನೆ ನೀಡಲಾಗಿದೆ. ರೂಪಾಯಿಯ ಅಂತರರಾಷ್ಟ್ರೀಕರಣವು ನಿಜ ಅರ್ಥದಲ್ಲಿ ಆಗಬೇಕು ಎಂದಾದರೆ ದೇಶದೊಳಕ್ಕೆ ಬರುವ ಹಾಗೂ ದೇಶದಿಂದ ಹೊರಹೋಗುವ ವಿದೇಶಿ ಬಂಡವಾಳದ ಮೇಲೆ ಸರ್ಕಾರ ಅಥವಾ ಕೇಂದ್ರೀಯ ಬ್ಯಾಂಕ್‌ನ ನಿಯಂತ್ರಣ ಇರಬಾರದು. ಆದರೆ ಇದು ಸದ್ಯಕ್ಕೆ ಆಗುವಂಥದ್ದಲ್ಲ. ಭಾರತದ ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಬಳಸುವುದರಿಂದ ಹಲವು ಪ್ರಯೋಜನಗಳು ಇವೆಯಾದರೂ, ಅದರ ಅನುಷ್ಠಾನವು ಬಹಳ ನಿಧಾನಗತಿಯ ಪ್ರಕ್ರಿಯೆಯಾಗಿರುತ್ತದೆ. ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಜೊತೆಯಲ್ಲೇ ಇದು ವಿಕಾಸ ಹೊಂದುತ್ತ ಸಾಗುತ್ತದೆ. ಜಾಗತಿಕ ಮಟ್ಟದಲ್ಲಿ ಆಗುವ ಬದಲಾವಣೆಗಳು ಕೂಡ ಇದರ ಮೇಲೆ ಪ್ರಭಾವ ಬೀರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.