ಫಲಿತಾಂಶ ಪ್ರಕಟವಾದ ಹದಿನೈದು ದಿನದೊಳಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಹಾಗೂ ಆ ಬಳಿಕ ‘ಆಪರೇಷನ್ ಕಮಲ’ದ ಮೂಲಕ ರೂಪುಗೊಂಡ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತವನ್ನು ಜನ ನೋಡಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ದೊರಕದೆ ಅತಂತ್ರ ಸ್ಥಿತಿ ತಲೆದೋರಿದರೆ ಆಗಬಹುದಾದ ಪರಿಣಾಮಗಳನ್ನು ಕಂಡ ಮತದಾರರು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಮೈತ್ರಿ ಸರ್ಕಾರ ಮತ್ತು ‘ಡಬಲ್ ಎಂಜಿನ್’ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾದವರಿಗೆ ದಿಟ್ಟ ನಿರ್ಣಯಗಳನ್ನು ಕೈಗೊಳ್ಳುವ ಅವಕಾಶ ದೊರೆಯಲಿಲ್ಲ ಎಂಬ ಮಾತಿದೆ. ಹಂಗಿನ ಅರಮನೆಯಲ್ಲಿ ಕುಳಿತ ಮುಖ್ಯಮಂತ್ರಿ, ಉತ್ಸವಮೂರ್ತಿ ಪಾತ್ರ ನಿರ್ವಹಿಸಿದ್ದೇ ಹೆಚ್ಚು. ಅದರಿಂದಾಗಿ ಆಡಳಿತ ಸಡಿಲಗೊಂಡು, ಜನಕಲ್ಯಾಣಕ್ಕೆ ಆದ್ಯತೆಯೇ ಇಲ್ಲವಾಗಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬೇಡದ ಉಸಾಬರಿಗಳು, ವಿವಾದಗಳೇ ವಿಜೃಂಭಿಸಿದವು. ಬಿಜೆಪಿಗೆ ಅದೇ ಮುಳುವಾದಂತಿದೆ. ಇಂತಹ ಉಪದ್ವ್ಯಾಪಗಳಿಗೆ ಅವಕಾಶ ಇಲ್ಲದಂತೆ, ಯಾರನ್ನೂ ನೆಚ್ಚಿಕೊಳ್ಳದೆ ನಿರಾತಂಕವಾಗಿ ಆಡಳಿತ ನಡೆಸಿ ಎಂಬ ಆದೇಶವನ್ನು ಕಾಂಗ್ರೆಸ್‌ಗೆ ಜನ ನೀಡಿದ್ದಾರೆ. ಯಾರನ್ನೋ ಓಲೈಸಲು ಹಿಂದೆಲ್ಲ ಎರಡು– ಮೂರು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿತ್ತು. ಬಹಳ ವರ್ಷಗಳ ನಂತರ ಸಂಪುಟದ ಅಷ್ಟೂ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ.
ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗದೇ ಹೋದರೂ ಕರ್ನಾಟಕದ ಸಮುದಾಯವಾರು ಜನಸಂಖ್ಯೆ ಹಾಗೂ ಗೆದ್ದ ಶಾಸಕರ ಜಾತಿ ಲೆಕ್ಕಾಚಾರವನ್ನು ಆಧರಿಸಿ ನೋಡಿದರೆ ಒಂದು ಮಟ್ಟಿಗೆ ಸಮತೋಲನದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಸಂಪುಟದಲ್ಲಿ ಲಿಂಗಾಯತರು, ಒಕ್ಕಲಿಗರು ಹಾಗೂ ಬ್ರಾಹ್ಮಣರಿಗೆ ಪ್ರಾತಿನಿಧ್ಯ ಹೆಚ್ಚಿಗೆ ಇರುತ್ತಿತ್ತು. ಈ ಬಾರಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಂಬತ್ತು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಲಿಂಗಾಯತರಿಗೆ ಏಳು, ಒಕ್ಕಲಿಗರಿಗೆ ಐದು ಸ್ಥಾನ ಸಿಕ್ಕಿದೆ. ಕ್ರೈಸ್ತ, ಮುಸ್ಲಿಂ, ಜೈನ ಹೀಗೆ ಎಲ್ಲ ಧರ್ಮದವರಿಗೂ ಪ್ರಾತಿನಿಧ್ಯ ಇರುವ ಸಂಪುಟ ಇದಾಗಿದೆ. ಕೆಲವು ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿತ್ತು ಎಂಬುದು ತಾತ್ವಿಕವಾಗಿ ಸರಿ. ಆದರೆ, ಆಡಳಿತ ಪಕ್ಷಕ್ಕೆ 135ರಷ್ಟು ಸದಸ್ಯಬಲ ಇದ್ದಾಗ ಸಂಭಾಳಿಸುವುದು ಕಷ್ಟ. ಅಸಮಾಧಾನದ ಬೇಗೆ ಸರ್ಕಾರ ಮತ್ತು ಆಡಳಿತಾಂಗವನ್ನು ತಾಕಿ, ಅದು ಸಾಮಾನ್ಯ ಜನರನ್ನು ಪರಿತಾಪಕ್ಕೆ ದೂಡದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಹೊಣೆ ಮುಖ್ಯಮಂತ್ರಿ ಮೇಲಿದೆ. ಎಲ್ಲರನ್ನೂ ಸಮಾಧಾನಪಡಿಸುವುದರ ಜತೆಗೆ, ಸಕಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವುದು ಆದ್ಯತೆಯಾಗಲಿ. ಇಲ್ಲದಿದ್ದಲ್ಲಿ, ಅಸಮಾಧಾನವೇ ಪ್ರಧಾನವಾಗಿ, ಜನಹಿತವು ನಗಣ್ಯವಾಗಿಬಿಡುತ್ತದೆ. ಈ ಬಗ್ಗೆ ಸದಾ ಎಚ್ಚರ ವಹಿಸಬೇಕಿರುವುದು ಆಡಳಿತಾರೂಢರ ಕರ್ತವ್ಯ.
ಜನರ ಬೇಡಿಕೆಗಳನ್ನು ಈಡೇರಿಸುವ, ನಿರೀಕ್ಷೆಗಳನ್ನು ಪೂರೈಸುವ ಹೊಣೆ ನೂತನ ಸಚಿವರ ಹೆಗಲೇರಿದೆ. ಬೆಲೆ ಏರಿಕೆ, ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ಜನ ರೋಸಿಹೋಗಿದ್ದಾರೆ. ಅವೆಲ್ಲವನ್ನೂ ದಿಢೀರನೆ ಸರಿಪಡಿಸಲಾಗದು. ಆದರೆ, ಆ ದಿಸೆಯಲ್ಲಿ ದೃಢವಾದ ಹೆಜ್ಜೆಯನ್ನಿಡಲು ಹಾಗೂ ಅದಕ್ಕೆ ಬೇಕಾದ ನೀಲನಕ್ಷೆ ರೂಪಿಸಿಕೊಳ್ಳಲು ಇದು ಸಕಾಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಿಂದ ಹಿಡಿದು ಹಿಜಾಬ್, ಹಲಾಲ್‌ವರೆಗೆ ವಿವಾದಗಳೇ ಚರ್ಚೆಯ ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಂಡಿದ್ದವು. ಜನರ ಬವಣೆಯು ಚರ್ಚೆಯ ವಸ್ತು ಆಗದಂತೆ ನೋಡಿಕೊಳ್ಳಲಾಯಿತು. ಜನರ ನೆಮ್ಮದಿಗೆ ಭಂಗ ತರುವಂತಹ ಚಟುವಟಿಕೆಗೆ ಆಸ್ಪದವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಆದ ಪ್ರಮಾದಗಳನ್ನು ಸರಿಪಡಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೇ ಹೇಳಿದೆ. ಮತ್ತೊಂದು ವಿವಾದಕ್ಕೆ ಆಸ್ಪದವಿಲ್ಲದಂತೆ ಈ ಕೆಲಸವನ್ನು ಸರ್ಕಾರ ನಿರ್ವಹಿಸಬೇಕಿದೆ. ಹಾಗೆಯೇ, ಭ್ರಷ್ಟಾಚಾರದ ಬಗ್ಗೆ ದೊಡ್ಡ ಕೂಗೆದ್ದು, ಅದು ಚುನಾವಣೆಯಲ್ಲಿ ಅಸ್ತ್ರವೂ ಆಗಿತ್ತು. ಭ್ರಷ್ಟಾಚಾರದ ಬೇರುಗಳನ್ನು ಕತ್ತರಿಸಿ ಹಾಕುವುದರ ಜತೆಗೆ, ಹಿಂದೆ ಕಾಂಗ್ರೆಸ್ ನಾಯಕರೇ ಮಾಡಿದ ಆರೋಪಗಳ ಬಗ್ಗೆ ಸಮಗ್ರ ತನಿಖೆಯನ್ನೂ ನಡೆಸಬೇಕಿದೆ. ಹೂಡಿಕೆ, ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಐಟಿ–ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಅದನ್ನು ಕಾಯ್ದುಕೊಳ್ಳುವ ಗುರುತರ ಹೊಣೆಗಾರಿಕೆ ಈಗಿನ ಸರ್ಕಾರದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.