ADVERTISEMENT

ಸಂಪಾದಕೀಯ | ಹಣಕಾಸು ನಿಲುವಿನಲ್ಲಿ ಬದಲಾವಣೆ; ಆರ್‌ಬಿಐ ವಿಶ್ವಾಸವೃದ್ಧಿಯ ಸೂಚಕ

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಕಚ್ಚಾ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿ, ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ

ಸಂಪಾದಕೀಯ
Published 14 ಅಕ್ಟೋಬರ್ 2024, 22:02 IST
Last Updated 14 ಅಕ್ಟೋಬರ್ 2024, 22:02 IST
   

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಅಕ್ಟೋಬರ್ ತಿಂಗಳ ಸಭೆಯಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂಬ ನಿರೀಕ್ಷೆಯು ಮೊದಲೇ ಇತ್ತು. ರೆಪೊ ದರವನ್ನು ಶೇಕಡ 6.5ರಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಹೊಸದಾಗಿ ರಚನೆ ಆಗಿರುವ ಎಂಪಿಸಿ ತೆಗೆದುಕೊಂಡಿದೆ. ಆದರೆ, ಸಮಿತಿಯ ತೀರ್ಮಾನಗಳಲ್ಲಿ ಮುಖ್ಯವಾದುದು ಹಣಕಾಸಿಗೆ ಸಂಬಂಧಿಸಿದ ನಿಲುವಿನಲ್ಲಿ ಬದಲಾವಣೆ ತರುವ ತೀರ್ಮಾನ. ಹಣಕಾಸಿನ ನೀತಿಯ ವಿಚಾರವಾಗಿ ‘ಹೊಂದಾಣಿಕೆಯ ನಿಲುವಿನಿಂದ ಹಿಂದೆ ಸರಿಯುವುದು’ ಎಂಬುದರ ಬದಲು, ‘ತಟಸ್ಥ’ ನಿಲುವು ತಾಳಲು ಎಂಪಿಸಿ ತೀರ್ಮಾನಿಸಿತು. ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ತೀರ್ಮಾನವು ಬಹುಮತದ ಆಧಾರದಲ್ಲಿ ಕೈಗೊಂಡಿದ್ದಾಗಿತ್ತು. ಆದರೆ, ಹಣಕಾಸಿಗೆ ಸಂಬಂಧಿಸಿದ ನಿಲುವಿನಲ್ಲಿ ಬದಲಾವಣೆ ತರುವ ತೀರ್ಮಾನವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು. ಅಂದರೆ, ಭವಿಷ್ಯದಲ್ಲಿ ರೆಪೊ ದರವನ್ನು ಕಡಿತ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯು ಸಿದ್ಧವಿದೆ ಎಂದು ಅರ್ಥ. ರೆಪೊ ದರದಲ್ಲಿ ಇಳಿಕೆಯು ಬಹುಶಃ ಡಿಸೆಂಬರ್‌ನಲ್ಲಿ ಆಗಬಹುದು. ಯುರೋಪಿನ ಕೇಂದ್ರೀಯ ಬ್ಯಾಂಕ್‌, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ ದರ ಇಳಿಕೆಯನ್ನು ಆರಂಭಿಸಿವೆ. ಆದರೆ, ಎಂಪಿಸಿಯು ನಿರ್ಧಾರವನ್ನು ಕೈಗೊಳ್ಳುವ ಸಂದರ್ಭದಲ್ಲಿ ದೇಶದ ಆಂತರಿಕ ಪರಿಸ್ಥಿತಿಯು ಹೆಚ್ಚಿನ ಪ್ರಭಾವ ಬೀರಿರಬಹುದು.

ಹಣದುಬ್ಬರ ಪ್ರಮಾಣವನ್ನು ಪೂರ್ಣವಾಗಿ ನಿಯಂತ್ರಣಕ್ಕೆ ತರುವ ವಿಚಾರದಲ್ಲಿ ಆರ್‌ಬಿಐಗೆ ಈಗ ಹೆಚ್ಚಿನ ವಿಶ್ವಾಸ ಬಂದಿರುವಂತಿದೆ. ಈ ಕಾರಣದಿಂದಾಗಿಯೇ ಅದು ಈಗ ಹಣಕಾಸಿಗೆ ಸಂಬಂಧಿಸಿದ ತನ್ನ ನಿಲುವಿನಲ್ಲಿ ಬದಲಾವಣೆಯನ್ನು ತಂದಿರಬಹುದು. ಚಿಲ್ಲರೆ ಹಣದುಬ್ಬರ ದರವನ್ನು ಶೇಕಡ 4ಕ್ಕೆ ತರುವ ಗುರಿಯನ್ನು ಆರ್‌ಬಿಐ ಹೊಂದಿದೆ. ಈ ಗುರಿ ತಲುಪಲು ಅದು ಹಣಕಾಸು ನೀತಿಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದೆ. ಈ ವರ್ಷದಲ್ಲಿ ಹಣದುಬ್ಬರ ಪ್ರಮಾಣವು ಶೇ 4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಕಡಿಮೆ ಆಗುವ ಸೂಚನೆ ಇರುವ ಕಾರಣ, ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವ ಆಶಾಭಾವನೆಯಲ್ಲಿ ಆರ್‌ಬಿಐ ಇದೆ. ಫೆಬ್ರುವರಿಯಲ್ಲಿ ಶೇ 8.6ರಷ್ಟು ಇದ್ದ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 5.66ಕ್ಕೆ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕಡಿಮೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಆರ್‌ಬಿಐ ಇದೆ. ಏಕೆಂದರೆ, ಮುಂಗಾರು ಮಳೆಯು ದೇಶದ ಬಹುತೇಕ ಕಡೆಗಳಲ್ಲಿ ಚೆನ್ನಾಗಿ ಆಗಿರುವ ಕಾರಣ, ಆಹಾರ ವಸ್ತುಗಳ ಉತ್ಪಾದನೆಯು ಹೆಚ್ಚಾಗಿರಲಿದೆ ಎಂಬ ಭರವಸೆ ಇದೆ. ಹಾಗೆಯೇ, ಹಿಂಗಾರು ಹಂಗಾಮಿನಲ್ಲಿ ಕೂಡ ಬೆಳೆ ಉತ್ತಮವಾಗಿ ಇರಲಿದೆ ಎಂಬ ಅಂದಾಜು ಇದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಹಣದುಬ್ಬರ ಪ್ರಮಾಣವು ಶೇ 4.3ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಕಾರ್ಯತಂತ್ರವು ಫಲ ನೀಡುತ್ತಿದೆ, ಹಣದುಬ್ಬರ ನಿಯಂತ್ರಣ ಸಾಧ್ಯವಿದೆ ಎಂದು ಆರ್‌ಬಿಐ ಭಾವಿಸಿದೆ.

ಆದರೆ ಇಲ್ಲಿ ಒಂದಿಷ್ಟು ಎಚ್ಚರಿಕೆಯ ಮಾತುಗಳೂ ಇವೆ. ಹವಾಮಾನ ಪರಿಸ್ಥಿತಿಯು ನಿರೀಕ್ಷೆಯಂತೆ ಇಲ್ಲದೇ ಇದ್ದರೆ ಹಾಗೂ ಜಾಗತಿಕ ಸಂಘರ್ಷಗಳು ಇನ್ನಷ್ಟು ವಿಷಮಗೊಂಡರೆ ಹಣದುಬ್ಬರದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ಎಚ್ಚರಿಕೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ನೀಡಿದ್ದಾರೆ. ಹವಾಮಾನ ಪರಿಸ್ಥಿತಿಯನ್ನು ಊಹಿಸುವುದು ಬಹಳ ಕಷ್ಟ. ಹವಾಮಾನ ಪರಿಸ್ಥಿತಿ ಅನುಕೂಲಕರ ಆಗಿಲ್ಲದಿದ್ದರೆ ಕೃಷಿ ಉತ್ಪಾದನೆಯ ಮೇಲೆ ಹಾಗೂ ಆರ್ಥಿಕತೆಯ ಮೇಲೆ ಅನಿರೀಕ್ಷಿತ ಪರಿಣಾಮಗಳು ಉಂಟಾಗುತ್ತವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಯಾವ ರೂಪ ತಾಳುತ್ತದೆ ಎಂಬುದನ್ನು ಅಂದಾಜಿಸುವುದು ಕಷ್ಟ. ಅಲ್ಲಿನ ಸಂಘರ್ಷವು ಕಚ್ಚಾ ತೈಲ ಪೂರೈಕೆಯ ಮೇಲೆ ಪರಿಣಾಮ ಉಂಟುಮಾಡಿ, ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇಲ್ಲದಿಲ್ಲ. ಈಗಿರುವ ಪರಿಸ್ಥಿತಿ ಮುಂದುವರಿದಲ್ಲಿ ಮಾತ್ರವೇ ತನ್ನ ನೀತಿಯನ್ನು ಸಡಿಲಗೊಳಿಸುವ ಸೂಚನೆಯನ್ನು ಎಂಪಿಸಿ ನೀಡಿದೆ. ದೇಶದ ಆರ್ಥಿಕ ಬೆಳವಣಿಗೆ ದರದ ವಿಚಾರದಲ್ಲಿ ಆರ್‌ಬಿಐ ಭರವಸೆ ವ್ಯಕ್ತಪಡಿಸಿದೆ. ಹೂಡಿಕೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ವೇಗ ಪಡೆದುಕೊಳ್ಳುತ್ತಿದೆ ಎಂದು ಅದು ಹೇಳಿದೆ. ಕೆಲವು ತಿಂಗಳ ಹಿಂದೆ ಮಂದಗತಿಯಲ್ಲಿ ಇದ್ದ ಗ್ರಾಮಾಂತರ ಪ್ರದೇಶಗಳಲ್ಲಿನ ಬೇಡಿಕೆಯ ಪ್ರಮಾಣವು ಈಗ ವೇಗ ಪ‍ಡೆದುಕೊಳ್ಳುತ್ತಿದೆ. ನಗರ ಪ್ರದೇಶಗಳಲ್ಲಿನ ಬೇಡಿಕೆಯು ಸ್ಥಿರವಾಗಿದೆ. ದೇಶದ ಅರ್ಥ ವ್ಯವಸ್ಥೆಯು ಈ ವರ್ಷದಲ್ಲಿ ಶೇಕಡ 7.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಅರ್ಥ ವ್ಯವಸ್ಥೆಯ ಬೆಳವಣಿಗೆಯು ಶುಭಸೂಚಕ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.