ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪರವಾಗಿ ಎದ್ದ ಅಲೆ ಮತ್ತು ಸಿಕ್ಕ ಗೆಲುವು ಎಷ್ಟೊಂದು ಅಭೂತಪೂರ್ವ ಎಂದರೆ, ಆ ಪಕ್ಷದ ನಾಯಕರೇ ಫಲಿತಾಂಶ ಕಂಡು ಬೆರಗುಗೊಂಡಿದ್ದಾರೆ. ಪೊರಕೆಯಲ್ಲಿ ಗುಡಿಸಿ ಹಾಕಬೇಕು ಎಂಬ ನಿರೀಕ್ಷೆಯಷ್ಟೇ ಪಕ್ಷಕ್ಕೆ ಇತ್ತು. ಆದರೆ, ಜನರು ವ್ಯಾಕ್ಯೂಮ್ ಕ್ಲೀನರ್ ತೆಗೆದುಕೊಂಡು ಸ್ವಚ್ಛಗೊಳಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದು ಈ ಬೆರಗಿಗೆ ಪುರಾವೆ. 117 ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳನ್ನು ಎಎಪಿ ಗೆದ್ದುಕೊಂಡಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ಗೆ ಸಿಕ್ಕಿದ್ದು 18 ಸ್ಥಾನಗಳು ಮಾತ್ರ. ಪಂಜಾಬ್‌ನಲ್ಲಿ ಇತ್ತೀಚಿನವರೆಗೆ ಇದ್ದದ್ದು ಕಾಂಗ್ರೆಸ್ ಮತ್ತು ಅಕಾಲಿದಳದ ನಡುವೆ ದ್ವಿಪಕ್ಷೀಯ ಸ್ಪರ್ಧೆ. ಈಗ ಅದು ಬಹುಪಕ್ಷೀಯ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಸ್ಪರ್ಧೆ ಬಹುಪಕ್ಷೀಯವಾದ ಕಾರಣದಿಂದಾಗಿ 2017ರಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದಿದ್ದ ಎಎಪಿಯ ಸ್ಥಾನಗಳು ಈ ಬಾರಿ 92ಕ್ಕೆ ಏರಿಕೆಯಾದವು. ಆ ಪಕ್ಷದ ಮತಗಳಿಕೆ ಪ್ರಮಾಣವು ಶೇ 23.7ರಿಂದ ಶೇ 42ಕ್ಕೆ ಏರಿತು. ಕಾಂಗ್ರೆಸ್ ಮತ್ತು ಅಕಾಲಿದಳದ ಮತ ಗಳಿಕೆಯ ಪ್ರಮಾಣವು ಕ್ರಮವಾಗಿ ಶೇ 23 ಮತ್ತು ಶೇ 20ರಷ್ಟಿದೆ. ಕಾಂಗ್ರೆಸ್‌ನ 18 ಮತ್ತು ಅಕಾಲಿದಳದ 3 ಸ್ಥಾನ ಗಳಿಕೆಗೆ ಹೋಲಿಸಿದರೆ ಮತ ಪ್ರಮಾಣವು ಶೋಚನೀಯ ಏನಲ್ಲ. ಚುನಾವಣೆ ಮತ್ತು ರಾಜಕೀಯಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ಅಸಾಧಾರಣ ಸನ್ನಿವೇಶವು ಎಎಪಿಗೆ ವರವಾಗಿ ಪರಿಣಮಿಸಿದೆ.
ಸ್ಥಾನಗಳ ಸಂಖ್ಯೆ ಕಡಿಮೆಯಾದರೂ ಕಾಂಗ್ರೆಸ್ ಪಕ್ಷವು ಗೆಲ್ಲಬಹುದು ಎಂಬ ನಿರೀಕ್ಷೆ ಕಳೆದ ವರ್ಷದವರೆಗೆ ಇತ್ತು. ಅಕಾಲಿದಳದ ನಾಯಕರ ವಿರುದ್ಧ ವಿವಿಧ ರೀತಿಯ ಭ್ರಷ್ಟಾಚಾರಗಳ ಆರೋಪ ಕೇಳಿಬಂದಿತ್ತು. ಜತೆಗೆ, ಕೇಂದ್ರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಿಜೆಪಿಯ ಜತೆಗಿನ ಸಖ್ಯವನ್ನು ಅಕಾಲಿದಳ ಕಡಿದುಕೊಂಡಿತ್ತು. ಹೀಗಾಗಿ ಅಕಾಲಿದಳವು ದುರ್ಬಲವಾಗಿತ್ತು. ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ಸ್ವಲ್ಪಮಟ್ಟಿಗೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ, ಅಮರಿಂದರ್ ಅವರನ್ನು ಬದಲಾಯಿಸಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಚುನಾವಣೆಗೆ ಕೆಲವೇ ತಿಂಗಳು ಇರುವಾಗ ನೇಮಿಸಿದ್ದು ಮತ್ತು ನವಜೋತ್ ಸಿಂಗ್ ಸಿಧು ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಟ್ಟದ್ದು ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾದ ಅಂಶಗಳಲ್ಲಿ ಕೆಲವು. ಪರಿಶಿಷ್ಟ ಜಾತಿಯ ಚನ್ನಿ ಅವರ ನೇಮಕದಿಂದಾಗಿ ಆ ಸಮುದಾಯದ ಮತಗಳು ಸಾರಾಸಗಟಾಗಿ ಪಕ್ಷಕ್ಕೆ ಸಿಗಬಹುದು ಎಂಬ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿದೆ. ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಚನ್ನಿ ಅವರನ್ನು ನೇಮಿಸಿದ್ದು ನೆರವಾಗಲಿಲ್ಲ ಮಾತ್ರವಲ್ಲ, ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿತು. ಸಿಧು ಅವರಂತೂ ಚನ್ನಿ ಅವರ ವಿರುದ್ಧ ಪ್ರತಿದಿನವೂ ಬಹಿರಂಗವಾಗಿ ಟೀಕೆ ಮಾಡುತ್ತಲೇ ಇದ್ದರು. ಭ್ರಷ್ಟಾಚಾರಮುಕ್ತ ಮತ್ತು ದಕ್ಷ ಆಡಳಿತದ ಭರವಸೆಯನ್ನು ಎಎಪಿ ಕೊಟ್ಟಿತ್ತು. ಹಲವು ಹೊಸಮುಖಗಳನ್ನು ಕಣಕ್ಕೆ ಇಳಿಸಿತ್ತು. ದೆಹಲಿಯಲ್ಲಿಪರಿಣಾಮಕಾರಿಯಾಗಿ ಜಾರಿ ಆಗಿರುವ ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಿಗೆ ಆದ್ಯತೆ ಇರುವ ಆಡಳಿತ ಮಾದರಿಯನ್ನು ಜನರ ಮುಂದೆ ಇರಿಸಿತ್ತು. ಒಂದು ಪರ್ಯಾಯ ಎಂಬಂತೆ ಜನರು ಇದನ್ನು ಕಂಡರು ಮತ್ತು ಎಎಪಿಗೆ ಮತ ಹಾಕಿದರು.
ಅಮೋಘ ಗೆಲುವಿನ ಅಲೆಯಲ್ಲಿ ಎಎಪಿ ತೇಲಿ ಹೋಗಬಾರದು. ಭಾರಿ ಬಹುಮತವನ್ನು ಜನರು ನೀಡಿದ್ದಾರೆ ಎಂದರೆ ದೊಡ್ಡ ಹೊಣೆಗಾರಿಕೆಯನ್ನು ಹೊರಿಸಿದ್ದಾರೆ ಎಂದೇ ಅರ್ಥ. ಎಎಪಿ, ದೆಹಲಿಯಲ್ಲಿ ಮಾಡಿರುವ ಪ್ರಯೋಗ ಯಶಸ್ವಿಯಾಗಿದೆ. ಭಾರಿ ಬಹುಮತದ ಸರ್ಕಾರವನ್ನು ಸತತ ಎರಡನೇ ಅವಧಿಗೆ ಅಲ್ಲಿ ಎಎಪಿ ನಡೆಸುತ್ತಿದೆ. ದೆಹಲಿ ಮಾದರಿಯನ್ನು ಮುಂದಿಟ್ಟುಕೊಂಡೇ ಪಂಜಾಬ್‌ನ ಜನರ ಮನ ಗೆಲ್ಲುವಲ್ಲಿ ಎಎಪಿ ಯಶಸ್ವಿಯಾಗಿದೆ. ಆದರೆ, ದೆಹಲಿ ಮತ್ತು ಪಂಜಾಬ್ ನಡುವೆ ಇರುವ ವ್ಯತ್ಯಾಸವನ್ನು ಹೊಸ ಮುಖ್ಯಮಂತ್ರಿ ಭಗವಂತ ಮಾನ್ ಅರ್ಥ ಮಾಡಿಕೊಳ್ಳಬೇಕು. ದೆಹಲಿಯನ್ನು ಪೂರ್ಣ ಪ್ರಮಾಣದ ರಾಜ್ಯ ಎಂದು ಹೇಳುವಂತಿಲ್ಲ. ದೆಹಲಿಯ ವಿಸ್ತೀರ್ಣ ಕಡಿಮೆ. ಅಲ್ಲಿ ಕಾನೂನು–ಸುವ್ಯವಸ್ಥೆಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳಬೇಕಿಲ್ಲ. ಜತೆಗೆ ದೆಹಲಿ ಶ್ರೀಮಂತ ರಾಜ್ಯ. ಪಂಜಾಬ್ ಹಾಗಲ್ಲ. ಇಲ್ಲಿನ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಕುಸಿತದತ್ತ ಸಾಗಿವೆ. ಮಾದಕ ಪದಾರ್ಥ ಬಳಕೆಯು ವ್ಯಾಪಕವಾಗಿದೆ. ನಿರುದ್ಯೋಗ ಸಮಸ್ಯೆ ನಡುಕ ಹುಟ್ಟಿಸುವ ರೀತಿಯಲ್ಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಿ ಜನರು ಇಟ್ಟಿರುವ ಭರವಸೆಗೆ ತಕ್ಕ ರೀತಿಯಲ್ಲಿ ಎಎಪಿ ಆಡಳಿತ ನಡೆಸಬೇಕು. ದೆಹಲಿಗೆ ಹೋಲಿಸಿದರೆ ಪಂಜಾಬ್‌ಗೆ ಹೆಚ್ಚು ಸ್ವಾತಂತ್ರ್ಯ ಇದೆ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ ಮಾತ್ರ. ಕೇಂದ್ರದ ಹಸ್ತಕ್ಷೇಪ ಮತ್ತು ಅಡ್ಡಿಗಳನ್ನು ಎದುರಿಸಲು ಸರ್ಕಾರವು ಸಿದ್ಧವಾಗಿಯೇ ಇರಬೇಕು. ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಎಎಪಿ, ರಾಷ್ಟ್ರ ಮಟ್ಟದಲ್ಲಿ ತಾನು ಕಾಂಗ್ರೆಸ್‌ಗೆ ಪರ್ಯಾಯ ಎಂದು ಬೀಗುತ್ತಿದೆ. ಕಾಂಗ್ರೆಸ್‌ಗೆ ಪರ್ಯಾಯವಾಗಿ ಪಕ್ಷವೊಂದು ರೂಪುಗೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂಬುದು ನಿಜ. ಆದರೆ, ಎಎಪಿಯೇ ಪರ್ಯಾಯ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪಂಜಾಬ್‌ನಲ್ಲಿ ಎಎಪಿ ಏನು ಮಾಡಲಿದೆ ಎಂಬುದರ ಮೇಲೆಯೇರಾಷ್ಟ್ರಮಟ್ಟದ ಮಹತ್ವಾಕಾಂಕ್ಷೆಯು ಅವಲಂಬಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.