ADVERTISEMENT

ಮುಖ್ಯಮಂತ್ರಿ ಬದಲಾವಣೆ: ಪಂಜಾಬ್‌ ಹಾದಿಯಲ್ಲಿ ರಾಜಸ್ಥಾನವೂ ಸಾಗುತ್ತಿದೆಯೇ?

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 19:30 IST
Last Updated 27 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರಿಗೆ ನಿಷ್ಠರಾಗಿರುವ ಶಾಸಕರ ಬಂಡಾಯದಿಂದಾಗಿ ಕಾಂಗ್ರೆಸ್‌ ಪಕ್ಷದ ರಾಜಸ್ಥಾನ ಘಟಕದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಯಾವುದೇ ರೀತಿಯಲ್ಲಿ ಪರಿಹರಿಸಿದರೂ ಪಕ್ಷವು ಇನ್ನಷ್ಟು ದುರ್ಬಲಗೊಳ್ಳುವುದು ಖಚಿತ. ಜತೆಗೆ, ಪಕ್ಷದ ನಾಯಕತ್ವದ ವಿಶ್ವಾಸಾರ್ಹತೆ ಮತ್ತು ಪ್ರಭಾವ ಇನ್ನಷ್ಟು ಕುಸಿತ ಕಾಣುತ್ತದೆ. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು ಬಿಂಬಿತವಾಗಿದ್ದ ಗೆಹಲೋತ್‌ ಅವರೇ ಈಗಿನ ಬಿಕ್ಕಟ್ಟಿನ ಹಿಂದೆ ಇದ್ದಾರೆ ಎಂಬುದೇ ಪರಿಸ್ಥಿತಿಯ ವ್ಯಂಗ್ಯ. ಹೈಕಮಾಂಡ್‌ನ ವಿಶ್ವಾಸ ಗಳಿಸಿಕೊಂಡವರು ಮತ್ತು ಹೈಕಮಾಂಡ್‌ನ ಒತ್ತಾಸೆಯಿಂದಲೇ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಅಧ್ಯಕ್ಷ ಹುದ್ದೆಯ ಸ್ಪರ್ಧೆಗೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ಕೂಡ ಬಹುತೇಕ ಖಚಿತವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್‌ ಎಂದರೆ ನೆಹರೂ–ಗಾಂಧಿ ಕುಟುಂಬ. ಪಕ್ಷವು ಪ್ರಜಾಸತ್ತಾತ್ಮಕವಾಗಿಯೇ ನಡೆಯುತ್ತಿದೆ ಎಂದು ಎಷ್ಟೇ ಹೇಳಿಕೊಂಡರೂ ಪಕ್ಷದ ಮೇಲೆ ಆ ಕುಟುಂಬ ಹೊಂದಿರುವ ಹಿಡಿತ ಸಡಿಲವಾಗದು. ಆದರೆ, ಈಗ ಹೈಕಮಾಂಡ್‌ನ ವಿಶ್ವಾಸಾರ್ಹ ವ್ಯಕ್ತಿಯೇ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಏಕೆಂದರೆ, ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಗೆಹಲೋತ್‌ ಬಳಿಕ ಸಚಿನ್‌ ಪೈಲಟ್‌ ಅವರನ್ನು ನೇಮಿಸಲು ಹೈಕಮಾಂಡ್‌ ನಿರ್ಧಾರ ಮಾಡಿತ್ತು, ಎರಡು ವರ್ಷಗಳ ಹಿಂದೆ ಪೈಲಟ್‌ ಅವರು ಭಿನ್ನಮತ ತೋರಿದಾಗ ಮುಖ್ಯಮಂತ್ರಿ ಹುದ್ದೆಗೆ ಅವರನ್ನು ನೇಮಿಸುವ ಭರವಸೆಯನ್ನು ಹೈಕಮಾಂಡ್‌ ನೀಡಿತ್ತು ಎಂಬ ವರದಿಗಳಿವೆ. ಆ ಭರವಸೆಗೆ ಗೆಹಲೋತ್‌ ಅವರು ಈಗ ಸವಾಲೆಸೆದಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕವೊಂದು ಹೈಕಮಾಂಡ್‌ ಇಚ್ಛೆಯ ವಿರುದ್ಧ ಈ ರೀತಿಯಲ್ಲಿ ಬಂಡಾಯ ಎದ್ದಿದ್ದು ಇದೇ ಮೊದಲು. ತೀರಾ ಇತ್ತೀಚಿನವರೆಗೆ ಇಂತಹ ಬಂಡಾಯವನ್ನು ಊಹಿಸುವುದೂ ಸಾಧ್ಯವಿರಲಿಲ್ಲ. ರಾಜಸ್ಥಾನದಲ್ಲಿ ಉಂಟಾಗಿರುವ ಈಗಿನ ಸ್ಥಿತಿಯು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯಾಗಿ ಗೆಹಲೋತ್‌ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳುವ ಮುಂಚೆಯೇ ಚರ್ಚಿಸಲಿಲ್ಲವೇ? ಉತ್ತರಾಧಿಕಾರಿ ಆಯ್ಕೆಯ ವಿಚಾರದಲ್ಲಿ ರಾಜಸ್ಥಾನ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಮತ್ತು ಪಕ್ಷದ ರಾಜ್ಯ ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೇ? ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರೂ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಇಚ್ಛೆ ಇದೆ ಎಂಬುದನ್ನು ಗೆಹಲೋತ್‌ ಅವರು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ‘ಭಾರತ ಜೋಡೊ ಯಾತ್ರೆ’ ಕೈಗೊಂಡಿರುವ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ‘ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ’ ಎಂಬ ತತ್ವವನ್ನು ಉಲ್ಲೇಖಿಸಿದ್ದರು. ಗೆಹಲೋತ್‌ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಪಕ್ಷದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ ಮಾಕನ್‌ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ ಎಂಬುದನ್ನು ಈ ಸಭೆ ಆಯೋಜನೆಗೂ ಮೊದಲೇ ಅಂದಾಜಿಸಿರಲಿಲ್ಲವೇ? ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗೆಹಲೋತ್ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಆತುರ ಏನಿತ್ತು?

ಈ ಪ್ರಶ್ನೆಗಳು ಅಥವಾ ಇಂತಹ ಇನ್ನಾವುದೇ ಪ್ರಶ್ನೆಗಳಿಗೆ ಸಿಗುವ ಉತ್ತರವು ಪಕ್ಷದ ವರ್ಚಸ್ಸನ್ನು ಖಂಡಿತವಾಗಿಯೂ ಹೆಚ್ಚಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಎರಡು ರಾಜ್ಯಗಳಲ್ಲಿ ರಾಜಸ್ಥಾನವೂ ಒಂದು. ಇಂತಹ ಸ್ಥಿತಿಯಲ್ಲಿಯೂ ಪಕ್ಷದ ಆಂತರಿಕ ವಿಚಾರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ನಾಯಕತ್ವವು ವಿಫಲವಾಗಿದೆ. ಪಂಜಾಬ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನು ಬದಲಾಯಿಸಲಾಗಿತ್ತು. ಪಂಜಾಬ್‌ನಲ್ಲಿ ನಡೆಸಿದ ಈ ಪ್ರಯೋಗವು ದಯನೀಯವಾಗಿ ವಿಫಲವಾಗಿತ್ತು. ಪಕ್ಷವು ಹೀನಾಯವಾಗಿ ಸೋತಿತ್ತು. ರಾಜಸ್ಥಾನದ ಬೆಳವಣಿಗೆಯು ಪಂಜಾಬ್‌ನ ಬೆಳವಣಿಗೆಯನ್ನೇ ಹೋಲುತ್ತಿದೆ. ರಾಜಸ್ಥಾನ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಚುನಾವಣೆಯ ಮೂಲಕ ಅಧ್ಯಕ್ಷರ ಆಯ್ಕೆಯು ಪಕ್ಷವನ್ನು ಬಲಪಡಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುನಾವಣೆಗೆ ಮುಂಚೆಯೇ ಅದು ಕಾಂಗ್ರೆಸ್ ಪಕ್ಷಕ್ಕೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.