ADVERTISEMENT

ರಾಜ್ಯಸಭೆ ಚುನಾವಣೆ | ಅಡ್ಡಮತದಾನ: ರಾಜಕಾರಣದ ಅಧಃಪತನದ ಲಕ್ಷಣ

ಸಂಪಾದಕೀಯ
Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
   

ಪ್ರಜಾಪ್ರಭುತ್ವದಲ್ಲಿ ಜನರು ನೀಡುವ ತೀರ್ಪು ಅಂತಿಮ ಮತ್ತು ಅದು ಪವಿತ್ರ. ಆದರೆ, ಈಗಿನ ಜನಪ್ರತಿನಿಧಿಗಳು ಜನಾದೇಶಕ್ಕೆ ಯಾವುದೇ ಬೆಲೆ ಕೊಡುತ್ತಿಲ್ಲ. ಹಾಗಾಗಿಯೇ ಪಕ್ಷಾಂತರಗಳು ಈಗಿನ ರಾಜಕಾರಣದ ತಿರುಳು ಎಂಬಂತಾಗಿದೆ. ರಾಜಕಾರಣದ ಗುಣಮಟ್ಟವು ದಿನದಿಂದ ದಿನಕ್ಕೆ ಪ್ರಪಾತಕ್ಕೆ ಬೀಳುತ್ತಿದೆ. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ರಾಜಕಾರಣಿಗಳ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕೆಲವು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಈ ಬೆಳವಣಿಗೆಯು ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಭಾರಿ ಮುಜುಗರ ಉಂಟಾಗಿದೆ. ಎರಡೂ ರಾಜ್ಯಗಳಲ್ಲಿ ಸದಸ್ಯ ಬಲ ಇಲ್ಲದೇ ಇದ್ದರೂ ತಲಾ ಒಂದು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಈಗ, ಶಾಸಕರು ಪಕ್ಷಾಂತರ ಮಾಡಿ ಅಥವಾ ಮಾತೃಪಕ್ಷವನ್ನು ಒಡೆದು ಬಣ ಕಟ್ಟಿಕೊಂಡು ರಾಜ್ಯ ಸರ್ಕಾರವನ್ನು ಉರುಳಿಸುವುದು ಭಾರತದ ಸಹಜ ರಾಜಕಾರಣವೇ ಆಗಿದೆ. ಮಹಾರಾಷ್ಟ್ರದಲ್ಲಿ 2022ರಲ್ಲಿ ಮಹಾ ವಿಕಾಸ ಆಘಾಡಿ ನೇತೃತ್ವದ ಸರ್ಕಾರವನ್ನು ಉರುಳಿಸಲಾಯಿತು. ಮಹಾಘಟಬಂಧನ ಎಂಬ ಹೆಸರಿನಲ್ಲಿ ಬಿಹಾರದಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರವು ಇತ್ತೀಚೆಗೆ ಉರುಳಿತು. ಜೆಡಿಯು–ಆರ್‌ಜೆಡಿ–ಕಾಂಗ್ರೆಸ್‌ ನೇತೃತ್ವದ ಈ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಸೇರಿಕೊಂಡರು. ಹಳೆಯ ಸರ್ಕಾರ ಉರುಳಿತು, ಹೊಸ ಸರ್ಕಾರ ಬಂತು ಮತ್ತು ನಿತೀಶ್‌ ಅವರೇ ಮತ್ತೆ ಮುಖ್ಯಮಂತ್ರಿಯಾದರು. ಈಗ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಉರುಳುವ ಅಂಚಿಗೆ ಬಂದಿದೆ.  ರಾಜ್ಯಸಭೆಯ ಮತದಾನವು ಸರ್ಕಾರವೊಂದನ್ನು ಪತನದ ಅಂಚಿಗೆ ತಂದಿದ್ದು ಇದೇ ಮೊದಲು. ಹಿಮಾಚಲ ಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಅಡ್ಡ ಮತದಾನದಿಂದ ಬಿಜೆಪಿಗೆ ಲಾಭವಾಗಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಇಬ್ಬರು ಶಾಸಕರು ಆ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು. ಒಬ್ಬರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದರೆ, ಇನ್ನೊಬ್ಬರು ಮತ ಚಲಾಯಿಸಲು ಬರಲೇ ಇಲ್ಲ. 

ಉತ್ತರಪ್ರದೇಶದ 10 ಸ್ಥಾನಗಳ ಪೈಕಿ ಎಂಟನ್ನು ಬಿಜೆಪಿ ಗೆದ್ದುಕೊಂಡಿದೆ. ಏಳು ಸ್ಥಾನಗಳನ್ನು ಗೆಲ್ಲುವ ಶಾಸಕ ಬಲ ಬಿಜೆಪಿಗೆ ಇತ್ತು. ಆದರೆ, ಎಸ್‌ಪಿಯ ಏಳು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಪರಿಣಾಮ ಆ ಪಕ್ಷಕ್ಕೆ ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕಿತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ 40 ಶಾಸಕರಿದ್ದಾರೆ. ಮೂವರು ಪಕ್ಷೇತರರ ಬೆಂಬಲವೂ ಕಾಂಗ್ರೆಸ್‌ ಪಕ್ಷಕ್ಕೆ ಇತ್ತು. ಬಿಜೆಪಿ ಶಾಸಕರ ಸಂಖ್ಯೆ 25 ಮಾತ್ರ ಆಗಿತ್ತು. ಹಾಗಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ಅವರು ಸೋತರು. ಕಾಂಗ್ರೆಸ್‌ನ ಆರು ಶಾಸಕರು ಮತ್ತು ಮೂವರು ಪಕ್ಷೇತರರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ತಲಾ 34 ಮತಗಳು ಸಿಕ್ಕವು. ಕೊನೆಗೆ, ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದಾಗ ಗೆಲುವು ಬಿಜೆಪಿಗೆ ಒಲಿಯಿತು. ಕಾಂಗ್ರೆಸ್‌ ಅಭ್ಯರ್ಥಿಯ ಸೋಲನ್ನು ಬಿಜೆಪಿ ಅಸ್ತ್ರವಾಗಿ ಬಳಸುತ್ತಿದೆ. ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಪರಿಣಾಮವಾಗಿ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ರಾಜ್ಯ ಹಿಮಾಚಲ ಪ್ರದೇಶ ಮಾತ್ರ. ಈಗ ಈ ರಾಜ್ಯವನ್ನೂ ಆ ಪಕ್ಷವು ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್‌ ಮತ್ತು ಎಸ್‌ಪಿ ಶಾಸಕರು ಅಡ್ಡಮತದಾನ ಮಾಡುವುದಕ್ಕೆ ಕಾರಣ ಬಿಜೆಪಿ. ಚುನಾವಣಾ ಲಾಭಕ್ಕಾಗಿ ಯಾವುದೇ ತಂತ್ರ–ಕುತಂತ್ರಗಳನ್ನು ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಬಂದಿದೆ. ಚಂಡೀಗಢ ಮೇಯರ್‌ ಚುನಾವಣೆಯು ಇತ್ತೀಚೆಗೆ ನಡೆದಾಗಲೂ ಬಿಜೆಪಿ ಪರವಾಗಿ ಕುತಂತ್ರ ನಡೆದು ಎಂಟು ಸದಸ್ಯರ ಮತಗಳನ್ನು ಅಸಿಂಧು ಮಾಡಲಾಗಿತ್ತು. ಹಿಮಾಚಲ ಪ್ರದೇಶದಲ್ಲಿಯೂ ಬಿಜೆಪಿ ಏನಾದರೂ ಆಟ ಆಡಬಹುದು ಎಂಬ ಎಚ್ಚರದಲ್ಲಿ ಕಾಂಗ್ರೆಸ್‌ ಪಕ್ಷವು ಇರಬೇಕಾಗಿತ್ತು. 

ಈಗಿನ ರಾಜಕಾರಣಕ್ಕೆ ತಾವು ಹೊಂದುವುದಿಲ್ಲ ಎಂಬುದನ್ನು ಎಸ್‌ಪಿ ಮತ್ತು ಕಾಂಗ್ರೆಸ್‌ ಸಾಬೀತು ಮಾಡಿವೆ. ಶಾಸಕ ಬಲ ಇದ್ದರೂ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಎರಡೂ ಪಕ್ಷಗಳು ವಿಫಲವಾಗಿ ಮುಜುಗರ, ಅವಮಾನ ಅನುಭವಿಸಿವೆ. ಈ ರೀತಿಯ ಮುಜುಗರದ ಸ್ಥಿತಿಗೆ ಒಳಗಾಗುವುದು ಈ ಪಕ್ಷಗಳಿಗೆ ಹೊಸದೇನೂ ಅಲ್ಲ. ಹಾಗಿದ್ದರೂ ಅಂತಹ ಸ್ಥಿತಿಯನ್ನು ತಪ್ಪಿಸಿಕೊಳ್ಳಲು ಗಂಭೀರ ಪ್ರ‌ಯತ್ನಗಳನ್ನು ಕಾಂಗ್ರೆಸ್‌ ಪಕ್ಷವು ಮಾಡಿಲ್ಲ. ಪಕ್ಷದಲ್ಲಿ ಇರುವ ಆಂತರಿಕ ಬಿಕ್ಕಟ್ಟುಗಳನ್ನು ಚುನಾವಣೆಗೆ ಮುನ್ನವೇ ಪರಿಹರಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿಲ್ಲ. ರಾಜ್ಯದ ಹೊರಗಿನ ವ್ಯಕ್ತಿ ಸಿಂಘ್ವಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇ ಪಕ್ಷದಲ್ಲಿ ಅತೃಪ್ತಿಗೆ ಕಾರಣವಾಗಿತ್ತು. ಸುಖು ಅವರ ನಾಯಕತ್ವದ ಬಗ್ಗೆಯೂ ಶಾಸಕರಿಗೆ ಸಂತೃಪ್ತಿ ಇರಲಿಲ್ಲ. ಈ ಪರಿಸ್ಥಿತಿಯ ಲಾಭವನ್ನು ಬಿಜೆಪಿ ಪಡೆದುಕೊಂಡಿತು. ಕಾಂಗ್ರೆಸ್‌ನ ಕೆಲ ಶಾಸಕರು ಈಗ ಬಿಜೆಪಿ ಸುಪರ್ದಿಯಲ್ಲಿ ಇದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ವಾಹನದಲ್ಲಿ ಅವರನ್ನು ಕರೆದೊಯ್ಯಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಆಟವು ಇನ್ನೂ ಕೆಲ ದಿನ ಮುಂದುವರಿಯುವುದು ಖಚಿತ. 

ADVERTISEMENT

ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯ ಮಾನದಂಡ ಕುಸಿತವೂ ಭಾರಿ ಕಳವಳ ಮೂಡಿಸುವಂತಿದೆ. ಚರಿತ್ರೆ, ವಿಜ್ಞಾನ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಬಹುದೊಡ್ಡ ಕೆಲಸ ಮಾಡಿದವರನ್ನು ರಾಜ್ಯಸಭೆಯ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವ ಪರಿಪಾಟ ಇತ್ತು. ಈ ಕಾರಣಕ್ಕಾಗಿಯೇ ರಾಜ್ಯಸಭೆಯನ್ನು
ಹಿರಿಯರ ಮನೆ ಎಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ಅರ್ಥಪೂರ್ಣವಾದ, ದೇಶಕ್ಕೆ ದೊಡ್ಡ ಕೊಡುಗೆ ಕೊಡುವಂತಹ ಚರ್ಚೆಗಳು ಹಿಂದೆ ಆಗುತ್ತಿದ್ದವು. ಆದರೆ, ಈಗ ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆ ಮತ್ತು ನಾಮನಿರ್ದೇಶನ ಎರಡಕ್ಕೂ ಪ್ರಸ್ತುತ ರಾಜಕಾರಣದ ಲೆಕ್ಕಾಚಾರಗಳೇ ಆಧಾರ. ನೇರ ಚುನಾವಣೆಯ ಮೂಲಕ ಲೋಕಸಭೆ ಅಥವಾ ವಿಧಾನಸಭೆ ಪ್ರವೇಶಿಸಲು ಆಗದವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸಲು ರಾಜ್ಯಸಭೆಯು ಬಳಕೆ ಆಗುತ್ತಿದೆ. ಈ ಎಲ್ಲವೂ ಭಾರತದ ರಾಜಕಾರಣ ಅಧಃಪತನ
ಗೊಂಡಿದೆ ಮತ್ತು ಕಾಯಕಲ್ಪ ತಕ್ಷಣವೇ ಆಗಬೇಕಿದೆ ಎಂಬುದನ್ನು ಸೂಚಿಸುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.