ADVERTISEMENT

ಪಡಿತರ ಚೀಟಿದಾರರಿಗೆ ಜೋಳ, ರಾಗಿ ಬಹುದಿನಗಳ ಬೇಡಿಕೆಗೆ ಸಿಕ್ಕ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:30 IST
Last Updated 27 ಜನವರಿ 2021, 19:30 IST
Edit- 28012021
Edit- 28012021   

ಪಡಿತರ ಚೀಟಿದಾರರಿಗೆ ಇದೇ ಏಪ್ರಿಲ್‌ ಒಂದರಿಂದ ಅಕ್ಕಿಯ ಜತೆಗೆ ಜೋಳ, ತೊಗರಿ, ರಾಗಿ ಹಾಗೂ ಕಡಲೆಯಂತಹ ದವಸ ಧಾನ್ಯಗಳನ್ನು ಸಹ ವಿತರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಅತ್ಯಂತ ಸೂಕ್ತವಾದುದು. ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿಯನ್ನು ವಿತರಿಸಬೇಕೆಂಬ ಬೇಡಿಕೆ ಬಹು ದಿನಗಳಿಂದಲೂ ಕೇಳಿಬರುತ್ತಿತ್ತು. ಇನ್ನು ತೊಗರಿ ಹಾಗೂ ಕಡಲೆ ರಾಜ್ಯದ ಎಲ್ಲ ಭಾಗಗಳ ಜನರಿಗೂ ಅಗತ್ಯವಾದ ಧಾನ್ಯಗಳು. ಸರ್ಕಾರ ಈಗ ತೆಗೆದುಕೊಂಡ ತೀರ್ಮಾನದಂತೆ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ನಿಜವಾಗಿಯೂ ಬದಲಾವಣೆಗಳು ಆದಲ್ಲಿ, ಅದರಿಂದ ರಾಜ್ಯದ ಜನರಿಗೆ ಎರಡು ಬಹುಮುಖ್ಯ ಪ್ರಯೋಜನಗಳು ಆಗಲಿವೆ. ಒಂದು, ಈ ಧಾನ್ಯಗಳನ್ನು ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವುದರಿಂದ, ಅವುಗಳನ್ನು ಬೆಳೆದ ರೈತರ ಮಾರುಕಟ್ಟೆ ಸಮಸ್ಯೆ ತಕ್ಕಮಟ್ಟಿಗೆ ನೀಗಲಿದೆ. ಇನ್ನೊಂದು, ಬಡತನ ರೇಖೆಗಿಂತ ಕೆಳಗಿನವರು ಸದ್ಯ ಅನುಭವಿಸುತ್ತಿರುವ ಪೌಷ್ಟಿಕ ಆಹಾರದ ಕೊರತೆ ನೀಗಿಸುವುದಕ್ಕೂ ಸಹಕಾರಿ ಆಗಲಿದೆ. ಈ ಧಾನ್ಯಗಳನ್ನು ವಿತರಿಸುವ ಸಲುವಾಗಿ ಅಕ್ಕಿ ವಿತರಣೆ ಪ್ರಮಾಣದಲ್ಲಿ ಕಡಿತ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಪ್ರಕಟಿಸಿದ್ದಾರೆ. ಉಗ್ರಾಣದಲ್ಲಿ ಕೊಳೆಯುತ್ತಾ ಬಿದ್ದಿರುವ ಮುಗ್ಗಲು ಅಕ್ಕಿಯನ್ನೇ ಪಡಿತರ ವ್ಯವಸ್ಥೆಯ ಮೂಲಕ ವಿತರಿಸಿದ ಕುರಿತು ಆಗಾಗ ದೂರುಗಳು ಕೇಳಿ ಬರುವುದುಂಟು. ಅಲ್ಲದೆ, ವಿತರಣೆ ಆಗುವಷ್ಟು ಪ್ರಮಾಣದಲ್ಲಿ ಅಕ್ಕಿಯು ಸದ್ಬಳಕೆಯಾಗುವುದಿಲ್ಲ ಎಂಬ ವಾದವೂ ಇದೆ. ಅಂತಹ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವುದಕ್ಕಿಂತ ಪೌಷ್ಟಿಕಾಂಶ ವುಳ್ಳ ಇತರ ಧಾನ್ಯಗಳನ್ನು ಪಡೆಯುವುದೇ ವಿಹಿತ.

‘ಗರೀಬಿ ಹಠಾವೊ’ದಿಂದ ‘ಅನ್ನಭಾಗ್ಯ’ದ ವರೆಗಿನ ಹಲವು ಯೋಜನೆಗಳು ಬಡತನ ನಿರ್ಮೂಲನೆ ಹಾಗೂ ಹಸಿವು ನಿವಾರಣೆಯ ಉದ್ದೇಶದಿಂದಲೇ ರೂಪುಗೊಂಡಂಥವು. ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಯೋಜನೆ ಅನುಷ್ಠಾನಗೊಂಡು ದಶಕಗಳೇ ಗತಿಸಿದ್ದರೂ ಬಡವರು ಎದುರಿಸುತ್ತಿರುವ ಪೌಷ್ಟಿಕಾಂಶದ ಕೊರತೆಯನ್ನಾಗಲೀ ಹಸಿವಿನ ಸಮಸ್ಯೆಯನ್ನಾಗಲೀ ಸಂಪೂರ್ಣವಾಗಿ ಹೋಗಲಾಡಿಸಲು ಆಗಿಲ್ಲ. ಅನುಷ್ಠಾನದ ಹಂತದಲ್ಲಿ ಆಗಿರುವ ವೈಫಲ್ಯಗಳೇ ಇದಕ್ಕೆ ಕಾರಣ. ಅನುಷ್ಠಾನ ಹಂತದ ಅಂಥದ್ದೊಂದು ಲೋಪವನ್ನು ಸರಿಪಡಿಸಿಕೊಳ್ಳುವ ಯತ್ನವನ್ನಾಗಿ ಸರ್ಕಾರದ ಈ ತೀರ್ಮಾನವನ್ನು ನೋಡಬಹುದು. ಮನುಷ್ಯನನ್ನು ಹೆಚ್ಚಿನ ಕ್ಷಮತೆ ಮತ್ತು ದುಡಿಮೆಗೆ ಪ್ರೇರೇಪಿಸುವ ವಿಷಯಗಳ ಕುರಿತು ಅಧ್ಯಯನ ಮಾಡಿದ್ದ ಅಮೆರಿಕದ ಮನಃಶಾಸ್ತ್ರಜ್ಞ ಅಬ್ರಹಾಂ ಮ್ಯಾಸ್ಲೊ, ಮನುಷ್ಯನ ಎಲ್ಲಾ ರೀತಿಯ ಅಗತ್ಯಗಳನ್ನು ಪಟ್ಟಿಮಾಡಿ, ಶ್ರೇಣೀಕರಿಸಿ, ಅವುಗಳನ್ನು ಒಂದು ಪಿರಮಿಡ್ಡಿನ ಆಕಾರದಲ್ಲಿ ಮಂಡಿಸಿದ್ದರು. ಈ ಶ್ರೇಣಿಯಲ್ಲಿ ಅತಿಕೆಳಗಿನ ಸ್ತರದಲ್ಲಿದ್ದದ್ದು ಆಹಾರ. ಹೌದು, ಬದುಕಿನ ಗುಣಮಟ್ಟ ವನ್ನು ಸುಧಾರಿಸುವಲ್ಲಿ ಪೌಷ್ಟಿಕ ಆಹಾರಕ್ಕೇ ಆದ್ಯತೆ. ಅದು ಎಲ್ಲರಿಗೂ ಸಿಗುವ ದಿಸೆಯಲ್ಲಿ ನಡೆಯುವ ಯಾವುದೇ ಪ್ರಯತ್ನವೂ ಸ್ವಾಗತಾರ್ಹ. ಆದರೆ, ಜೋಳ, ರಾಗಿ, ತೊಗರಿ, ಕಡಲೆಯನ್ನು ರೈತರಿಂದ ಖರೀದಿಸುವಾಗ ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ನೋಡಿಕೊಳ್ಳಲು ಸಮರ್ಪಕ ವ್ಯವಸ್ಥೆಯೊಂದನ್ನು ರೂಪಿಸಬೇಕು. ವ್ಯವಸ್ಥೆಯೊಳಗೆ ಮಧ್ಯವರ್ತಿಗಳು ನುಸುಳದಂತೆ, ಪಡಿತರ ಚೀಟಿದಾರರಿಗೆ ವಿತರಿಸಲು ಖರೀದಿಸಿದ ದವಸ ಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗದಂತೆ ಗರಿಷ್ಠ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಯಾವುದೇ ಭಾಗದ ಜನ, ಯಾವುದೇ ಧಾನ್ಯ (ಜೋಳ ಅಥವಾ ರಾಗಿ) ಬಯಸಿದರೂ ಸಿಗುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು. ರಾಜ್ಯದಲ್ಲಿ ಈಗ 4.46 ಕೋಟಿ ಪಡಿತರ ಚೀಟಿದಾರರು ಇದ್ದಾರೆ ಎಂದು ಸಚಿವರು ಹೇಳಿದ್ದಾರೆ. ಚುನಾವಣೆಗಳು ಹತ್ತಿರವಾದಾಗಲೆಲ್ಲ ಚೀಟಿದಾರರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುವುದರ ಹಿಂದಿನ ಲೆಕ್ಕಾಚಾರ ಎಲ್ಲರಿಗೂ ಗೊತ್ತೇ ಇದೆ. ಎಲ್ಲರಿಗೂ ಸಮರ್ಪಕವಾಗಿ ಪಡಿತರ ವಿತರಣೆ ಆಗಬೇಕಾದರೆ, ಒಂದಕ್ಕಿಂತ ಹೆಚ್ಚು ಚೀಟಿ ಪಡೆದ ಹಾಗೂ ಅನರ್ಹರಾದ ಚೀಟಿದಾರರನ್ನೆಲ್ಲ ಪತ್ತೆ ಹಚ್ಚಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು. ಹಾಗೆಯೇ ಆಹಾರ ಮತ್ತು ಆರೋಗ್ಯವನ್ನು ಎಲ್ಲರಿಗೂ ಖಾತರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT