ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧಪಡಿಸುವ ಹಣಕಾಸು ಸ್ಥಿರತೆ ವರದಿಯು ದೇಶದ ಹಣಕಾಸು ವ್ಯವಸ್ಥೆಯ ಕುರಿತಾಗಿ ಸುಂದರ ಚಿತ್ರಣವೊಂದನ್ನು ನೀಡಿದೆ. ಹಲವು ವಲಯಗಳಲ್ಲಿ ಸಾಧನೆಯು ಉತ್ತಮವಾಗಿದೆ ಎಂದು ಅದು ಹೇಳಿದೆ. ದೇಶದ ಹಣಕಾಸು ವಲಯವು ಆರೋಗ್ಯಕರ ಸ್ಥಿತಿಯಲ್ಲಿದೆ, ಭವಿಷ್ಯದಲ್ಲಿ ಎದುರಾಗಬಹುದಾದ ಕೆಟ್ಟ ಪರಿಸ್ಥಿತಿಗಳನ್ನು ನಿಭಾಯಿಸಲು ಸನ್ನದ್ಧವಾಗಿ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣದಲ್ಲಿ ಹೆಚ್ಚಳ ಆಗಿದೆ, ವಸೂಲಾಗದ ಸಾಲಗಳನ್ನು ನಿಭಾಯಿಸಲು ತೆಗೆದು ಇರಿಸಬೇಕಾದ ಮೊತ್ತವು ಕಡಿಮೆ ಆಗುತ್ತಿದೆ ಎಂದು ಕೂಡ ವರದಿ ಹೇಳಿದೆ. ಅಂದರೆ, ಅರ್ಥ ವ್ಯವಸ್ಥೆಯಲ್ಲಿ ಕೆಟ್ಟ ಸಂದರ್ಭಗಳು ಎದುರಾದರೆ ಅದನ್ನು ತಾಳಿಕೊಳ್ಳಲು ಬೇಕಿರುವ ಮೀಸಲು ಮೊತ್ತವನ್ನು ಇರಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತದೆ.
ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಒಟ್ಟು ಅನುತ್ಪಾದಕ ಸಾಲಗಳ ಪ್ರಮಾಣ (ಎನ್‌ಪಿಎ) ಹತ್ತು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 3.9ಕ್ಕೆ ಇಳಿಕೆಯಾಗಿದೆ. ಸುಧಾರಣೆಯು ಎಲ್ಲ ವಲಯಗಳಲ್ಲಿಯೂ ಆಗಿದೆ, ದೇಶದ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸುಧಾರಣೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ಎನ್‌ಪಿಎ ಪ್ರಮಾಣವು ಶೇಕಡ 3.6ಕ್ಕೆ ಇಳಿಕೆ ಕಾಣಲಿದೆ ಎಂಬುದು ಆರ್‌ಬಿಐ ನಿರೀಕ್ಷೆ.
ಹಲವು ಕಾರಣಗಳಿಂದಾಗಿ ಹಣಕಾಸು ವಲಯದ ಕುರಿತು ಕಳವಳಗಳು ಮೂಡಿದ್ದವು. ಕೋವಿಡ್ ಸಾಂಕ್ರಾಮಿಕವು ತೀವ್ರವಾಗಿದ್ದ ಅವಧಿಯಲ್ಲಿ ಹಣಕಾಸು ಸಂಸ್ಥೆಗಳಿಗೆ ನೆರವು ನೀಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲೂ ಮುಖ್ಯವಾಗಿ ಬ್ಯಾಂಕ್‌ಗಳಿಗೆ ಹಲವು ನೆರವು ಕ್ರಮಗಳನ್ನು ಪ್ರಕಟಿಸಲಾಗಿತ್ತು. ಈಗ ಆ ಕ್ರಮಗಳನ್ನು ಹಿಂದಕ್ಕೆ ಪಡೆಯಲಾಗಿದೆ. ನೆರವಿನ ಹಸ್ತವನ್ನು ಹಿಂದಕ್ಕೆ ಪಡೆದಿರುವುದು ಬ್ಯಾಂಕ್‌ಗಳ ಮೇಲೆ ಪರಿಣಾಮ ಉಂಟುಮಾಡಬಹುದು ಎಂಬ ನಿರೀಕ್ಷೆ ಇತು. ಆದರೆ ಬ್ಯಾಂಕ್‌ಗಳು ಸಾಂಕ್ರಾಮಿಕದ ಪರಿಣಾಮವನ್ನು ನಿಭಾಯಿಸಿರುವುದಷ್ಟೇ ಅಲ್ಲ, ಅವು ಮೊದಲಿಗಿಂತ ಹೆಚ್ಚು ದಕ್ಷವಾಗಿ ಕೂಡ ಕೆಲಸ ನಿರ್ವಹಿಸಿವೆ. ಹಣಕಾಸು ಸ್ಥಿರತೆ ವರದಿಯ ಪ್ರಕಾರ, ಹಣಕಾಸು ವಲಯಕ್ಕೆ ಸಂಬಂಧಿಸಿರದ ಕೆಲವು ಕಂಪನಿಗಳು ಕೂಡ ತಮ್ಮ ಸಾಲದ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿವೆ ಮತ್ತು ಸಾಲ ತೀರಿಸುವ ಅವುಗಳ ಸಾಮರ್ಥ್ಯವು ಸುಧಾರಣೆ ಕಂಡಿದೆ. ಆದರೆ ಈ ಎಲ್ಲ ಉತ್ತಮ ಅಂಶಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಗ್ರಹಿಸಬೇಕಾದ ಅಗತ್ಯ ಇದೆ.
ಸಾಂಕ್ರಾಮಿಕದ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚುರುಕು ಪಡೆದಿಲ್ಲ. ವಸೂಲಾಗದ ಸಾಲಗಳನ್ನು ರೈಟ್ ಆಫ್ ಮಾಡಿದ ಹಾಗೂ ವಸೂಲಾಗದ ಸಾಲಗಳನ್ನು ತಮ್ಮ ಆಸ್ತಿ–ಹೊರೆ ಪಟ್ಟಿಯಿಂದ ತೆಗೆದುಹಾಕಲು ಬ್ಯಾಂಕ್‌ಗಳು ತಮ್ಮ ವಾರ್ಷಿಕ ವಹಿವಾಟಿನಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ತೆಗೆದಿರಿಸಿದ ನಿದರ್ಶನಗಳೂ ಇವೆ. ಆ ಮೂಲಕ ಹಲವು ಬ್ಯಾಂಕ್‌ಗಳು ತಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತೋರಿಸಿಕೊಂಡಿವೆ. ಹಣಕಾಸು ವಲಯದ ಚಟುವಟಿಕೆಗಳ ಬಗ್ಗೆ ಕಂಡುಬಂದ ಎಚ್ಚರಿಕೆಯ ನಡೆಯು ಮುಂದಿನ ದಿನಗಳಲ್ಲಿ ಕಾಣಿಸಲಿಕ್ಕಿಲ್ಲ.
ಕಳವಳಕ್ಕೆ ಕಾರಣವಾಗುವ ಇತರ ಕೆಲವು ಅಂಶಗಳೂ ಇವೆ. ಸಣ್ಣ ಸಾಲಗಳ ವಿಚಾರದಲ್ಲಿ ಒಂದಿಷ್ಟು ಕಳವಳ ಮೂಡುವಂಥ ಸಂಗತಿಗಳು ಇವೆ. ಸಣ್ಣ ಸಾಲದ ಪ್ರಮಾಣವು ಹೆಚ್ಚಾಗಿದೆ. ಇತರ ವರ್ಗಗಳ ಅಡಿಯಲ್ಲಿ ಬರುವ ಸಾಲಗಳಿಗಿಂತ ಈ ಬಗೆಯ ಸಾಲಗಳು ಬ್ಯಾಂಕ್‌ಗಳ ಪಾಲಿಗೆ ಕಡಿಮೆ ಪ್ರಮಾಣದ ಅಪಾಯ ಒಳಗೊಂಡಿರುತ್ತವೆ ಎಂಬ ಕಾರಣಕ್ಕೆ, ಈ ಸಾಲ ವಿತರಣೆಗೆ ಬ್ಯಾಂಕ್‌ಗಳ ಕಡೆಯಿಂದ ಉತ್ತೇಜನವೂ ಇದೆ. ಸಣ್ಣ ಪ್ರಮಾಣದ ಸಾಲಗಳಲ್ಲಿ ಎನ್‌ಪಿಎ ಪ್ರಮಾಣವು ಬಹಳ ಕಡಿಮೆ ಇರುತ್ತದೆಯಾದರೂ, ಈ ಬಗೆಯ ಕೆಲವು ಸಾಲಗಳ ಮರುಪಾವತಿ ವಿಳಂಬ ಆಗುತ್ತಿರುವುದನ್ನು ಹಣಕಾಸು ಸ್ಥಿರತೆ ವರದಿಯು ಗುರುತಿಸಿದೆ.
ನಿರ್ದಿಷ್ಟ ಅವಧಿಯ ಸಾಲಗಳು, ಶಿಕ್ಷಣ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಮರುಪಾವತಿಯಲ್ಲಿ ಹಲವು ವೈಫಲ್ಯಗಳು ವರದಿಯಾಗಿವೆ. ಹಣದುಬ್ಬರ ಪ್ರಮಾಣ ಹೆಚ್ಚಾಗುತ್ತ ಇರುವುದು ಸಾಲ ಮರುಪಾವತಿಯನ್ನು ವಿಳಂಬ ಮಾಡಬಹುದು ಹಾಗೂ ಇನ್ನಷ್ಟು ಸಾಲಕ್ಕೆ ಬೇಡಿಕೆ ಸೃಷ್ಟಿಸಬಹುದು ಎಂದು ಹೇಳಲಾಗಿದೆ. ಹಣದುಬ್ಬರದ ಏರಿಕೆಯು ಮುಂದೆಯೂ ಸವಾಲಾಗಿಯೇ ಉಳಿಯಲಿದೆ. ಹೀಗಾಗಿ ಸಾಲ ಮರುಪಾವತಿ ವಿಚಾರದಲ್ಲಿ ಇದು ಮುಂದೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಈ ವಲಯದ ಕಡೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.