ADVERTISEMENT

ಸಂಪಾದಕೀಯ: ನಿವೃತ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಯುವಕರಿಗೆ ಅವಕಾಶ ನೀಡಿ

ಸಂಪಾದಕೀಯ

ಸಂಪಾದಕೀಯ
Published 25 ಜೂನ್ 2024, 0:40 IST
Last Updated 25 ಜೂನ್ 2024, 0:40 IST
<div class="paragraphs"><p>ಸಂಪಾದಕೀಯ: ನಿವೃತ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಯುವಕರಿಗೆ ಅವಕಾಶ ನೀಡಿ</p></div>

ಸಂಪಾದಕೀಯ: ನಿವೃತ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಯುವಕರಿಗೆ ಅವಕಾಶ ನೀಡಿ

   

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿ ಸುತ್ತಿರುವ 370ಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು, ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದೇಶಿಸಿ ಆರು ತಿಂಗಳು ಕಳೆದರೂ ಅದು ಜಾರಿಯಾಗ
ದಿರುವುದು ಆಡಳಿತ ಜಡ್ಡುಗಟ್ಟಿರುವುದಕ್ಕೆ ಜ್ವಲಂತ ನಿದರ್ಶನ. ಕರ್ತವ್ಯದಲ್ಲಿದ್ದಾಗ ಸಿಗುತ್ತಿದ್ದ ಸೌಲಭ್ಯ
ಗಳನ್ನು ನಿವೃತ್ತಿಯ ನಂತರವೂ ಪಡೆಯಬೇಕು ಎಂಬ ಕಾರಣಕ್ಕೆ ಆಯಕಟ್ಟಿನ ಸ್ಥಾನವೊಂದನ್ನು ಪ್ರಭಾವಿಗಳು ಹುಡುಕಿಕೊಳ್ಳುವುದು ಅಥವಾ ತಾವೇ ಸೃಷ್ಟಿಸಿಕೊಳ್ಳುವುದು ಹೊಸದೇನಲ್ಲ. ನಿವೃತ್ತಿಗೆ ಕೆಲ ತಿಂಗಳು ಬಾಕಿ ಇರುವಾಗಲೇ ಆಯಕಟ್ಟಿನ ಹುದ್ದೆಯೊಂದಕ್ಕೆ ಹೊಂಚು ಹಾಕಿ, ಅದಕ್ಕಾಗಿ
‘ಬಂಡವಾಳ’ವನ್ನೂ ತೊಡಗಿಸಿ, ನಿವೃತ್ತಿಯ ಕೊನೆಯ ದಿನಕ್ಕೆ ಮೊದಲೇ ಹುದ್ದೆ ಗಿಟ್ಟಿಸುವುದು ಕೆಲವರಿಗೆ ಕರಗತ. ಅದರಲ್ಲೂ ಐಎಎಸ್ ಶ್ರೇಣಿಯ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚು ಪರಿಣತರು. ನಿವೃತ್ತಿಯ ನಂತರವೂ ಕೆಲವರು 18–20 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 75 ವರ್ಷ ಪೂರ್ಣಗೊಳಿಸಿದವರು 40ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬ ಮಾಹಿತಿಯು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಕಾರ್ಯದರ್ಶಿಯವರು ಕಳುಹಿಸಿರುವ ಟಿಪ್ಪಣಿಯಲ್ಲೇ ಇದೆ. ಉಪಮುಖ್ಯ
ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿ 82 ವರ್ಷದವರೊಬ್ಬರಿದ್ದಾರೆ ಎಂಬ ಮಾಹಿತಿಯನ್ನೂ ಪಟ್ಟಿ ಒಳಗೊಂಡಿದೆ. ಕೆಲವರು ತಿಂಗಳಿಗೆ ₹ 2.5 ಲಕ್ಷದವರೆಗೂ ವೇತನ ಪಡೆಯುತ್ತಿದ್ದಾರೆ.

ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ನಿವೃತ್ತರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಈ ವರ್ಷದ ಜನವರಿ 23 ಮತ್ತು ಫೆಬ್ರುವರಿ 22ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಕಳುಹಿಸಿದ್ದರು. ಈ ಹುದ್ದೆಗಳಿಗೆ ಸೇವಾನಿರತರನ್ನೇ ನಿಯೋಜಿಸಿ ವರದಿ ಮಂಡಿಸುವಂತೆ ಸೂಚಿಸಿದ್ದರು. ಆದರೆ, ಜೂನ್ ಕಳೆಯುತ್ತಾ ಬಂದರೂ ಅನೇಕ ಇಲಾಖೆಗಳಲ್ಲಿ, ನಿಗಮ–ಮಂಡಳಿಗಳಲ್ಲಿ ಈ ಆದೇಶ ಜಾರಿಯೇ ಆಗಿಲ್ಲ. ಮುಖ್ಯಮಂತ್ರಿ ಎರಡು ಬಾರಿ ಟಿಪ್ಪಣಿ ಕಳುಹಿಸಿದರೂ ಅದು ಅನುಷ್ಠಾನ ಆಗಿಲ್ಲವೆಂದರೆ, ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ತಪ್ಪಿದೆ, ಆಡಳಿತ ಸರಿದಾರಿಯಲ್ಲಿ ಸಾಗುತ್ತಿಲ್ಲ ಎಂದೇ ಭಾವಿಸಬೇಕಾಗುತ್ತದೆ.

ADVERTISEMENT

2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌, ಬಹುಮುಖ್ಯವಾಗಿ ಜನರ ಮುಂದಿಟ್ಟಿದ್ದ ವಿಷಯಗಳ ಪೈಕಿ ನಿರುದ್ಯೋಗ ಸಮಸ್ಯೆಯೂ ಒಂದು. ಉದ್ಯೋಗ ಸೃಷ್ಟಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂಬುದನ್ನು ಚುನಾವಣೆ ವೇಳೆ ಅಬ್ಬರದ ಧ್ವನಿಯಲ್ಲೇ ಕಾಂಗ್ರೆಸ್‌ ಪ್ರಸ್ತಾಪಿಸಿತ್ತು. ಖಾಲಿ ಇರುವ ಸರ್ಕಾರಿ ಹುದ್ದೆಗಳಲ್ಲಿ ಕನಿಷ್ಠ ಒಂದು ಲಕ್ಷ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವ ವಾಗ್ದಾನವನ್ನೂ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಈ ಭರವಸೆ ಕಾಲುಭಾಗದಷ್ಟೂ ಈಡೇರಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ 2.58 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿಯೇ ಸರ್ಕಾರಕ್ಕೆ ಇದ್ದಂತಿಲ್ಲ. ಏತನ್ಮಧ್ಯೆ, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸರ್ಕಾರ, ಸಂಪನ್ಮೂಲ ಕ್ರೋಡೀಕರಣಕ್ಕೆ ವಿವಿಧ ಮಾರ್ಗಗಳನ್ನು ಹುಡುಕುತ್ತಿದೆ. ಇಂತಹ ಹೊತ್ತಿನೊಳಗೆ, ನಿವೃತ್ತರಿಗೆ ಮಣೆ ಹಾಕುವ ಉಸಾಬರಿ ಆರ್ಥಿಕವಾಗಿ ಹೊರೆ ಎಂಬುದನ್ನು ತಿಳಿಯಲು ವಿಶೇಷ ಜ್ಞಾನವೇನೂ ಬೇಕಿಲ್ಲ. ನಿವೃತ್ತಿ ನಂತರವೂ ಜಾತಿ, ಹಣ ಹೀಗೆ ನಾನಾ ಕಾರಣಗಳಿಂದ ವಿವಿಧ ಇಲಾಖೆಗಳಲ್ಲಿ ಕುಳಿತಿರುವವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಕೆಲಸ ಆಗಬೇಕಿದೆ. ನಿವೃತ್ತಿ ನಂತರ ಹಲವಾರು ವರ್ಷಗಳವರೆಗೂ ಹುದ್ದೆಯಲ್ಲಿ ಮುಂದುವರಿದವರಿಂದ ಆಡಳಿತಕ್ಕೆ ಚುರುಕು ಮತ್ತು ಹೊಸತನ ತರಲು ಸಾಧ್ಯವಾಗದು. ಸರ್ಕಾರಿ ಸೇವೆಯಲ್ಲಿದ್ದಾಗಲೇ ಇಲಾಖೆಯನ್ನು ಅಥವಾ ಕನಿಷ್ಠ ತಮ್ಮ ವಿಭಾಗವನ್ನು ಜನಸ್ನೇಹಿಯಾಗಿ, ಭ್ರಷ್ಟಾಚಾರರಹಿತವಾಗಿ ಮಾಡಲಾಗದವರು ನಿವೃತ್ತಿಯ ಬಳಿಕ ಇನ್ನೇನು ಮಾಡಲು ಸಾಧ್ಯ? ಅಂತಹವರನ್ನೆಲ್ಲ ಮನೆಗೆ ಕಳುಹಿಸಿ, ಅವರ ಜಾಗಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಹೊಸ ತಲೆಮಾರಿನವರನ್ನು ನೇಮಕ ಮಾಡಿಕೊಂಡರೆ ಆಡಳಿತಕ್ಕೆ ಆಧುನಿಕ ಸ್ಪರ್ಶ, ನವಚೈತನ್ಯ ಬರಬಹುದು ಎಂಬ ನಿರೀಕ್ಷೆ ಹೊಂದಬಹುದು. ಸುದೀರ್ಘ ಅವಧಿಯ ಆಡಳಿತದ ಅನುಭವ ಇರುವ ಮುಖ್ಯಮಂತ್ರಿಯವರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾದರೆ ಯುವಕರಿಗೆ ಉದ್ಯೋಗವೂ ಲಭಿಸುತ್ತದೆ, ಆಡಳಿತವೂ ಚುರುಕಾಗುತ್ತದೆ. ಅಲ್ಲದೆ, ವೆಚ್ಚಕ್ಕೆ ಕಡಿವಾಣವೂ ಬೀಳುತ್ತದೆ. ಆ ವಿವೇಕಯುತ ಮಾರ್ಗದಲ್ಲಿ ಹೆಜ್ಜೆ ಇಡುವ ಇಚ್ಛಾಶಕ್ತಿಯನ್ನು ತೋರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.