ADVERTISEMENT

ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ: ರೋಗಗ್ರಸ್ತ ಮನಃಸ್ಥಿತಿಗೆ ಬೇಕಿದೆ ಮದ್ದು

ಸಂಪಾದಕೀಯ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
   

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿಯನ್ನು ಸ್ವಚ್ಛಗೊಳಿಸಲು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಬಳಸಿಕೊಂಡಿರುವ ಅಮಾನವೀಯ ಘಟನೆಯು ಜಾತಿ ತಾರತಮ್ಯದ ಜೀವಂತಿಕೆಗೆ ಹೊಸತೊಂದು ಉದಾಹರಣೆ. ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರ ಸಮ್ಮುಖದಲ್ಲೇ ಏಳರಿಂದ ಒಂಬತ್ತನೇ ತರಗತಿಯ ಐದಾರು ಮಕ್ಕಳನ್ನು ಮಲದ ಗುಂಡಿ ಸ್ವಚ್ಛಗೊಳಿಸಲು ಇಳಿಸಲಾಗಿದೆ. ಜಾತಿಯ ಕಾರಣದಿಂದಾಗಿ ಎಸಗುವ ತರತಮಗಳಿಗೆ ಶಿಕ್ಷಣವನ್ನು ಪರಿಹಾರದ ರೂಪದಲ್ಲಿ ನೋಡಲಾಗುತ್ತದೆ. ದುರದೃಷ್ಟವಶಾತ್‌, ಬೆಳಕು ಹಂಚಬೇಕಾದ ಕಲಿಕಾ ಕೇಂದ್ರಗಳಲ್ಲೇ ಅಸಮಾನತೆಯ ಕತ್ತಲೆ ಕಾಣಿಸಿಕೊಂಡಿದೆ. ನಿರ್ದಿಷ್ಟ ಜಾತಿಯ ಮಕ್ಕಳನ್ನು ಗುರುತಿಸಿ ಅವರನ್ನು ಕೊಳಕು ಬಳಿಯಲು ಗುಂಡಿಗೆ ಇಳಿಸಿರುವ ಗಲೀಜು ಮನಃಸ್ಥಿತಿಯುಳ್ಳವರು ಜಾತ್ಯತೀತ ಸಮಾಜವನ್ನು ಕಟ್ಟುವ ವ್ಯಕ್ತಿತ್ವಗಳನ್ನು ರೂಪಿಸುತ್ತಾರೆಂದು ನಿರೀಕ್ಷಿಸುವುದು ಸಾಧ್ಯವೇ? ಗಲೀಜು ಬಳಿಯಲು ಮಕ್ಕಳನ್ನು ಬಳಸಿಕೊಂಡಿರುವುದು, ಅದರಲ್ಲೂ ಪರಿಶಿಷ್ಟ ಜಾತಿಯ ಮಕ್ಕಳನ್ನೇ ಬಳಸಿಕೊಂಡಿರುವುದು ಜಾತೀಯತೆ ಪ್ರದರ್ಶನದ ಸ್ಪಷ್ಟ ನಿದರ್ಶನ. ವಸತಿ ಶಾಲೆಯಲ್ಲಿ ನಡೆದಿರುವ ಈ ಕೃತ್ಯವನ್ನು ನೋಡಿದರೆ, ಮಕ್ಕಳು ಯಾಕಾಗಿ ಶಾಲೆಗಳಿಗೆ ಬರುತ್ತಾರೆ ಎನ್ನುವುದನ್ನೇ ಘಟನೆಗೆ ಕಾರಣರಾದವರು ಮರೆತಿರುವಂತಿದೆ. ಪ್ರಕರಣ ವರದಿಯಾದ ನಂತರವೂ ‘ಇದು ಮಲದ ಗುಂಡಿ ಅಲ್ಲ; ಸ್ವಚ್ಛತಾ ಆಂದೋಲನದ ಅಂಗವಾಗಿ ಚೇಂಬರ್‌ನೊಳಗೆ ಮಕ್ಕಳನ್ನು ಇಳಿಸಿ ಸ್ವಚ್ಛಗೊಳಿಸಲಾಗಿದೆಯಷ್ಟೇ’ ಎಂದು ಕೆಲವು ಅಧಿಕಾರಿಗಳು ನೀಡಿರುವ ಸಮಜಾಯಿಷಿ ತಪ್ಪನ್ನು ಮರೆಮಾಚುವ ಪ್ರಯತ್ನವಾಗಿದೆ. ಮಲದ ಗುಂಡಿಯಾದರೂ ಆಗಿರಲಿ, ಚೇಂಬರ್‌ ಆದರೂ ಆಗಿರಲಿ, ಕೊಳಕು ಬಳಿಯುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಯೋಚನೆಯೇ ಅಸಹನೀಯ. ವಸತಿ ಶಾಲೆಯಲ್ಲಿನ ಸಿಬ್ಬಂದಿಯು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ದೂರುಗಳೂ ಇವೆ. ರಾತ್ರಿ ವೇಳೆಯಲ್ಲಿ ಲೈಟ್‌ಗಳನ್ನೆಲ್ಲ ಆರಿಸಿ ಹಾಸ್ಟೆಲ್‌ ಹೊರಗಡೆ ಮಂಡಿಯೂರಿ ಕೂರಿಸಲಾಗುತ್ತಿದೆ ಎಂದು ಕೆಲವು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮಕ್ಕಳನ್ನು ಶಾಲೆಯಲ್ಲಿ ಹೊಡೆಯುತ್ತಿರುವ ದೃಶ್ಯಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಹಿಂಸೆಯನ್ನು ಸಹಿಸಿಕೊಳ್ಳಲಾಗದೆ ಕೆಲವು ವಿದ್ಯಾರ್ಥಿಗಳು ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಯಲುವಹಳ್ಳಿಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು ಹಾಗೂ ಒಬ್ಬ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರಕ್ಕೆ ಶೋಷಣೆಗೊಳಗಾದ ಮಕ್ಕಳಿಗೆ ನ್ಯಾಯ ದೊರೆಯುವುದಿಲ್ಲ. ಘಟನೆಯ ನಂತರ ನಾಪತ್ತೆಯಾಗಿರುವ ಶಾಲೆಯ ಇತರ ಸಿಬ್ಬಂದಿಯನ್ನೂ ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. ಇದರ ಜೊತೆಗೆ, ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆಯುತ್ತಿದೆ ಎನ್ನಲಾದ ಕಿರುಕುಳದ ಕುರಿತೂ ವಿಚಾರಣೆ ನಡೆಯಬೇಕು. ಯಲುವಹಳ್ಳಿಯ ಘಟನೆ ರಾಜ್ಯದ ಎಲ್ಲ ವಸತಿ ಶಾಲೆಗಳ ವ್ಯವಸ್ಥೆಯ ಅವಲೋಕನಕ್ಕೆ ಕಾರಣವಾಗಬೇಕು. ಮಕ್ಕಳನ್ನು ವಿವಿಧ ರೀತಿಯಲ್ಲಿ ಶೋಷಿಸುವವರು ಹಾಗೂ ಅವರನ್ನು ತಾರತಮ್ಯ ಮನೋಭಾವದಿಂದ ನಡೆಸಿಕೊಳ್ಳುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಶಾಲೆ ಮತ್ತು ವಸತಿ ಕೇಂದ್ರಗಳಲ್ಲಿ ಮಕ್ಕಳಿಗೆ ಆರೋಗ್ಯಕರ ಪರಿಸರವನ್ನು ರೂಪಿಸಿಕೊಡುವುದು ಸರ್ಕಾರದ ಕರ್ತವ್ಯ. ನಿರಂತರ ನಿಗಾ ವಹಿಸುವಿಕೆಯ ಮೂಲಕ ವಸತಿ ಶಾಲೆಗಳನ್ನು ಜೀವಪರವಾಗಿ ಇರಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು. ಕಲಿಕೆಯ ಹಂಬಲದಿಂದಾಗಿ ಮನೆ ಹಾಗೂ ಪೋಷಕರನ್ನು ಬಿಟ್ಟು ಬಂದಿರುವ ಮಕ್ಕಳನ್ನು ಕಾಳಜಿ ಹಾಗೂ ಸಹಾನುಭೂತಿಯಿಂದ ನೋಡಿಕೊಳ್ಳಬೇಕಾದುದು ಅಲ್ಲಿನ ಸಿಬ್ಬಂದಿಯ ಕರ್ತವ್ಯ ಹಾಗೂ ಅವರಿಗೆ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಬೇಕಾದುದು ಸರ್ಕಾರದ ಹೊಣೆಗಾರಿಕೆ. ಆದರೆ, ಕೆಲವು ವಸತಿ ಶಾಲೆಗಳು ಮಕ್ಕಳ ಪಾಲಿಗೆ ಶಿಕ್ಷಾಕೇಂದ್ರಗಳಾಗಿ ಪರಿಣಮಿಸಿರುವ ವರದಿಗಳು ಮಾಧ್ಯಮಗಳಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತಲೇ ಇರುತ್ತವೆ. ಕೊಳೆತ ತರಕಾರಿ ಹಾಗೂ ಹುಳು ಬಿದ್ದ ಪದಾರ್ಥಗಳನ್ನು ಬಳಸಿ ತಯಾರಿಸುವ ಅಡುಗೆಯನ್ನು ಮಕ್ಕಳಿಗೆ ನೀಡಿರುವ ಬಗ್ಗೆ ದೂರುಗಳಿವೆ. ಕಳಪೆ ಊಟ ಹಾಗೂ ಸೌಲಭ್ಯಗಳ ಕೊರತೆಯಿಂದಾಗಿ ವಸತಿ ಶಾಲೆಗಳು ಮಕ್ಕಳ ಪಾಲಿಗೆ ಜೈಲುಗಳಾಗಿ ‍ಪರಿಣಮಿಸುತ್ತವೆ. ಶೌಚಾಲಯಗಳ ಕೊರತೆ, ಮಂಚಗಳ ಕೊರತೆಯೂ ಮಕ್ಕಳನ್ನು ಬಾಧಿಸುತ್ತದೆ. ಸೂಕ್ತ ನಿಗಾ ಇಲ್ಲದೆ ಹೋದಾಗ ವಸತಿ ಶಾಲೆಗಳು ಮಕ್ಕಳ ಶೋಷಣೆಯ ಕೇಂದ್ರಗಳೂ ಆಗಬಲ್ಲವು ಎನ್ನುವುದಕ್ಕೆ ಯಲುವಹಳ್ಳಿಯ ಪ್ರಕರಣವೇ ನಿದರ್ಶನ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವ ಸಂವೇದನೆ ಹಾಗೂ ಇಚ್ಛಾಶಕ್ತಿಯ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT