ADVERTISEMENT

ಸಂಪಾದಕೀಯ: ಬಿಜೆಪಿ ಸಿದ್ಧಾಂತಕ್ಕೆ ಅನುಗುಣವಾಗಿ NCERT ಪಠ್ಯ ಪರಿಷ್ಕರಣೆ ಸರಿಯಲ್ಲ

ಸಂಪಾದಕೀಯ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
   

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲಿ ಮತ್ತಷ್ಟು ಬದಲಾವಣೆಗಳನ್ನು ತಂದಿದೆ; ಹಲವು ಮಿಥ್ಯೆಗಳನ್ನು ಸೇರಿಸಲಾಗಿದೆ, ಕೆಲವು ವಿಚಾರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಮತ್ತು ಕೆಲವು ವಿಚಾರಗಳನ್ನು ಕೈಬಿಡಲಾಗಿದೆ. ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಇತಿಹಾಸವನ್ನು ತಿದ್ದಿಬರೆಯುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಮತ್ತು ಚಾರಿತ್ರಿಕ ವ್ಯಕ್ತಿಗಳಿಗೆ ಹೊಸ ರೂಪ ಕೊಡುವ ಪ್ರಯತ್ನ ನಡೆಸಲಾಗಿದೆ. ಸಮಾಜವನ್ನು ಮರುವ್ಯಾಖ್ಯಾನಿಸುವ ಕೆಲಸವೂ ನಡೆದಿದೆ. ಈ ಬಾರಿಯ ಪರಿಷ್ಕರಣೆಯಲ್ಲಿ ಸಮತೋಲನವಿಲ್ಲ ಎಂಬುದು ಎದ್ದು ಕಾಣುವ ಅಂಶ. 12ನೇ ತರಗತಿಯ ರಾಜಕೀಯಶಾಸ್ತ್ರ ಪಠ್ಯಪುಸ್ತಕದಲ್ಲಿ ಗುಜರಾತ್‌ ಗಲಭೆಗಳು ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಹಿಂಸಾಚಾರದ ಉಲ್ಲೇಖವೇ ಇಲ್ಲ. ‘ಆಯ್ದ ಕೆಲವು ಗಲಭೆಗಳನ್ನು ಉಲ್ಲೇಖಿಸುವುದು ಸರಿಯಲ್ಲ’ ಎಂದು ಪರಿಣತರ ಸಮಿತಿ ಹೇಳಿರುವುದು ಈ ಪರಿಷ್ಕರಣೆಗೆ ಕಾರಣ ಎಂದು ಹೇಳಲಾಗಿದೆ. ‘ನಾವು ರೂಪಿಸಬೇಕಿರುವುದು ಸಕಾರಾತ್ಮಕ ಮನಃಸ್ಥಿತಿಯ ಪೌರರನ್ನೇ ವಿನಾ ಹಿಂಸಾತ್ಮಕ ಮತ್ತು ನಿರುತ್ಸಾಹಿ ಮನಃಸ್ಥಿತಿಯ ಪೌರರನ್ನಲ್ಲ’. ಆದುದರಿಂದ ಗಲಭೆಗಳ ಕುರಿತು ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯ ಇಲ್ಲ ಎಂದು ಎನ್‌ಸಿಇಆರ್‌ಟಿ ಅಧ್ಯಕ್ಷ ದಿನೇಶ್‌ ಸಕ್ಲಾನಿ ಹೇಳಿದ್ದಾರೆ. ಹಾಗಿದ್ದರೆ, ವಿದ್ಯಾರ್ಥಿಗಳನ್ನು ಸಕಾರಾತ್ಮಕ ಮನಃಸ್ಥಿತಿಯ ಪೌರರನ್ನಾಗಿ ರೂಪಿಸಲು ದೇಶ ವಿಭಜನೆಯ ಸಂದರ್ಭದ ಗಲಭೆಯೂ ಸೇರಿ ಇತಿಹಾಸದ ಎಲ್ಲ ಸಂಘರ್ಷಗಳನ್ನು ‍ಪಠ್ಯಪುಸ್ತಕದಿಂದ ಹೊರಗೆ ಇರಿಸಲಾಗುವುದೇ?

ಭಾರತ ಮತ್ತು ಜಗತ್ತಿನ ಭೂತಕಾಲವು ಹೇಗಿತ್ತೋ ಅದನ್ನು ತೋರಿಸುವ ಬದಲಿಗೆ ಅದು ಹೇಗಿರಬೇಕು ಎಂದು ಬಿಜೆಪಿ ಬಯಸುತ್ತದೆಯೋ ಆ ರೀತಿಯಲ್ಲಿ ಚಿತ್ರಿಸುವುದು ಉದ್ದೇಶವಾಗಿದೆ. ಅದಕ್ಕಾಗಿ ಇತಿಹಾಸಕ್ಕೆ ಬಿಜೆಪಿಗೆ ಬೇಕಾದ ಬಣ್ಣ ಬಳಿಯಲಾಗುತ್ತಿದೆ. ಬಾಬರಿ ಮಸೀದಿಯನ್ನು ಅದರ ಹೆಸರಿನಿಂದ ಉಲ್ಲೇಖಿಸಲಾಗಿಲ್ಲ, ಬದಲಿಗೆ ‘ಮೂರು ಗುಮ್ಮಟಗಳಿರುವ ಕಟ್ಟಡ’ ಎಂದು ಕರೆಯಲಾಗಿದೆ. ಬಾಬರಿ ಮಸೀದಿ ಧ್ವಂಸದಲ್ಲಿ ಕರಸೇವಕರ ಪಾತ್ರ ಮತ್ತು ಅದರ ನಂತರದ ಕೋಮು ಹಿಂಸಾಚಾರದ ಉಲ್ಲೇಖವೇ ಇಲ್ಲ. ಮಸೀದಿ ನಾಶಗೊಳಿಸಿದ ನಂತರ ಬಿಜೆಪಿ ನೇತೃತ್ವದ ಸರ್ಕಾರದ ವಜಾ ಹಾಗೂ ಅಯೋಧ್ಯೆಯಲ್ಲಿ ನಡೆದುದಕ್ಕೆ ಬಿಜೆಪಿ ವ್ಯಕ್ತಪಡಿಸಿದ್ದ ವಿಷಾದವನ್ನು ಪಠ್ಯದಿಂದ ಕೈಬಿಡಲಾಗಿದೆ. ಈ ಹಿಂದೆಯೂ ಹಲವು ಬಾರಿ ವಿವಿಧ ರೀತಿಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಿದೆ. ಆರ್ಯನ್ನರ ವಲಸೆ, ಮೊಘಲ್‌ ಯುಗವೂ ಸೇರಿದಂತೆ ಭಾರತದಲ್ಲಿ ಮುಸ್ಲಿಂ ರಾಜರ ಆಳ್ವಿಕೆ, ಗಾಂಧೀಜಿ ಹತ್ಯೆಯಂತಹ ಚಾರಿತ್ರಿಕ ವಿಚಾರಗಳನ್ನು ಬಿಜೆಪಿಯ ಸಂಕಥನಕ್ಕೆ ಹೊಂದುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಎಲ್ಲ ಮೊಘಲ್‌ ದೊರೆಗಳೂ ಶೋಷಕರು ಮತ್ತು ಹಿಂದೂ ರಾಜರೆಲ್ಲರೂ ಒಳ್ಳೆಯವರು ಎಂದು ಚಿತ್ರಿಸಲಾಗಿದೆ. ಪ್ರಾಚೀನ ಭಾರತವು ಸುವರ್ಣ ಯುಗವಾಗಿದ್ದು ಜಗತ್ತನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಸಿದೆ ಎಂದು ಹೇಳಲಾಗಿದೆ. ಮಕ್ಕಳ ಮುಂದೆ ಅವಾಸ್ತವಿಕ ಮತ್ತು ತಿರುಚಿದ ಭಾರತದ ಚಿತ್ರಣವನ್ನು ಇರಿಸಲಾಗಿದೆ. 

ಶಿಕ್ಷಣವನ್ನು ಒಂದು ಸಾಧನವಾಗಿ ಬಳಸಿಕೊಂಡು ಯುವ ಮನಸ್ಸುಗಳ ಮೇಲೆ ಒಂದು ಸಿದ್ಧಾಂತವನ್ನು ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ‘ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹೆಚ್ಚಳ’ ಮಾಡುವುದು ಹೊಸ ಶಿಕ್ಷಣ ನೀತಿಯ ಗುರಿಯಾಗಿದೆ. ಎನ್‌ಸಿಇಆರ್‌ಟಿ ಒಂದು ಸ್ವಾಯತ್ತ ಸಂಸ್ಥೆಯೇ ವಿನಾ ಬಿಜೆ‍ಪಿಯ ಅಂಗಸಂಸ್ಥೆ ಅಲ್ಲ. ಒಂದು ದೇಶವು ಆ ದೇಶದ ಭೂತಕಾಲ ಮತ್ತು ವರ್ತಮಾನದ ಇತಿಹಾಸದಿಂದ ರೂಪುಗೊಳ್ಳುತ್ತದೆ. ಭೂತಕಾಲದಲ್ಲಿ ಮಾರ್ಗದರ್ಶಕವಾಗಿದ್ದ ಮೌಲ್ಯಗಳು ಭವಿಷ್ಯಕ್ಕೂ ಊರುಗೋಲಾಗುತ್ತವೆ. ದೇಶದ ಕುರಿತು ಹುಸಿಯಾದ ಚಿತ್ರಣವನ್ನು ವಿದ್ಯಾರ್ಥಿಗಳ ಮನದಲ್ಲಿ ಸೃಷ್ಟಿಸಿದರೆ, ಅದಕ್ಕೆ ಅನುಗುಣವಾದ ಚಿತ್ರಣವನ್ನು ಅವರು ರೂಪಿಸಿಕೊಳ್ಳುತ್ತಾರೆ. ಹುಸಿ ಮತ್ತು ಅವಾಸ್ತವಿಕವಾದ ಜಗತ್ತನ್ನು ಕಟ್ಟಿಕೊಳ್ಳುತ್ತಾರೆ. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಸಂವಾದ ನಡೆಸುವ ಮನಃಸ್ಥಿತಿಯನ್ನು ಉತ್ತೇಜಿಸಬೇಕು. ಶಿಕ್ಷಣವು ಏನನ್ನೂ ಅಡಗಿಸಿಡಬಾರದು, ತಿರುಚಬಾರದು ಮತ್ತು ಹುಸಿ ಚಿತ್ರಣವನ್ನು ಸೃಷ್ಟಿಸಬಾರದು. ವಿದ್ಯಾರ್ಥಿಗಳ ಮೇಲೆ ಉತ್ತರಗಳು ಮತ್ತು ನಿರ್ಧಾರಗಳನ್ನು ಹೇರಬಾರದು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.