ADVERTISEMENT

ಸಂಪಾದಕೀಯ: ಗ್ರಾಹಕನಿಗೆ ರಿಪೇರಿ ಹಕ್ಕು ಆಶಯವು ಅನುಷ್ಠಾನಕ್ಕೆ ಬರಲಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:31 IST
Last Updated 15 ಜುಲೈ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೊಬೈಲ್‌ ಫೋನ್‌ಗಳು, ಕೃಷಿ ಉಪಕರಣಗಳು ಸೇರಿದಂತೆ ದೈನಂದಿನ ಬದುಕಿನ ಭಾಗವಾಗಿರುವ ಕೆಲವು ಉಪಕರಣಗಳ ರಿಪೇರಿಯನ್ನು ‘ಗ್ರಾಹಕರ ಹಕ್ಕು’ ಎಂಬುದಾಗಿ ಪರಿಗಣಿಸುವ ದಿಸೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಮುಂದಡಿ ಇರಿಸಿದೆ. ಕಾರು ತಯಾರಕರು, ಮೊಬೈಲ್‌ ತಯಾರಿಕಾ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ರಿಪೇರಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದನ್ನು ತಡೆಯುವ ಉದ್ದೇಶವು ಕೇಂದ್ರ ಸರ್ಕಾರಕ್ಕೆ ಇರುವಂತಿದೆ. ಹೀಗಾಗಿ ಈ ವಲಯದ ಕಂಪನಿಗಳು, ತಮ್ಮ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಅವುಗಳ ರಿಪೇರಿ ಮಾಡಿಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಒದಗಿಸುವುದು ಕಡ್ಡಾಯ ಎಂಬ ನಿಯಮವನ್ನು ರೂಪಿಸುವ ಇರಾದೆ ಕೇಂದ್ರಕ್ಕೆ ಇದೆ. ಹತ್ತು ಹಲವು ಉಪಕರಣಗಳ ಗ್ರಾಹಕರು ಅವುಗಳನ್ನು ಕಂಪನಿಗಳು ಹೇಳಿದ ಸೇವಾ ಕೇಂದ್ರಗಳಲ್ಲೇ ರಿಪೇರಿ ಮಾಡಿಸಬೇಕು ಎಂಬ ಷರತ್ತನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಕೆಲವು ವರ್ಷಗಳ ಹಿಂದೆ ಇಂತಹ ಸ್ಥಿತಿ ಇರಲಿಲ್ಲ. ಜನಪ್ರಿಯ ಕಂಪನಿಯೊಂದರ ರೇಡಿಯೊ ಖರೀದಿಸಿದವರು, ಅದರ ರಿಪೇರಿಯನ್ನು ಹೋಬಳಿ ಕೇಂದ್ರದಲ್ಲಿಯೋ ತಾಲ್ಲೂಕು ಕೇಂದ್ರದಲ್ಲಿಯೋ ಮೂರನೆಯ ವ್ಯಕ್ತಿಯ ಬಳಿ ಮಾಡಿಸಿಕೊಳ್ಳುತ್ತಿದ್ದರು. ಅಂದರೆ, ತಯಾರಿಕಾ ಕಂಪನಿಯ ಅಥವಾ ಆ ಕಂಪನಿಯ ಪ್ರತಿನಿಧಿಯ ಸಹಾಯ ಇಲ್ಲದೆಯೂ ಉಪಕರಣಗಳ ರಿಪೇರಿ ಸಾಧ್ಯವಾಗುತ್ತಿತ್ತು. ಪರಿಸ್ಥಿತಿ ಈಗ ಬದಲಾಗಿದೆ. ಮೂರನೆಯ ವ್ಯಕ್ತಿಯಿಂದ ರಿಪೇರಿ ಮಾಡಿಸಿಕೊಂಡರೆ ವಾರಂಟಿ ಸೌಲಭ್ಯಗಳು ಲಭ್ಯವಾಗುವುದಿಲ್ಲ ಎಂದು ಕೂಡ ಕೆಲವು ಕಂಪನಿಗಳು ಹೇಳುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ಉಪಕರಣಗಳ ರಿಪೇರಿಯನ್ನು ಗ್ರಾಹಕರ ಹಕ್ಕು ಎಂಬಂತೆ ಪರಿಗಣಿಸುವುದು ಸ್ವಾಗತಾರ್ಹ. ಕೆಲವು ದೇಶಗಳಲ್ಲಿ ರಿಪೇರಿ ಹಕ್ಕನ್ನು ಖಾತರಿಪಡಿಸುವಂತೆ ಅಲ್ಲಿನ ಸರ್ಕಾರವನ್ನು ಆಗ್ರಹಿಸಿ ಜನಸಮುದಾಯ ಚಳವಳಿ ನಡೆಸಿದ ನಿದರ್ಶನಗಳು ಇವೆ. ಯುರೋಪ್, ಅಮೆರಿಕದಲ್ಲಿ ರಿಪೇರಿ ಹಕ್ಕಿನ ಪರವಾಗಿ ಬಲವಾದ ಜನಾಭಿಪ್ರಾಯ ಕೂಡ ಇದೆ ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ, ಭಾರತದಲ್ಲಿ ಇದು ಇನ್ನೂ ಒಂದು ಜನಾಂದೋಲನದ ರೂಪ ಪಡೆದಿಲ್ಲ. ಉಪಕರಣವನ್ನು ಖರೀದಿಸುವ ಗ್ರಾಹಕರಿಗೆ ಅದನ್ನು ತಾವೇ ರಿಪೇರಿ ಮಾಡಿಕೊಳ್ಳುವ ಅಥವಾ ಕಂಪನಿಗೆ ಸಂಬಂಧಪಡದ ವ್ಯಕ್ತಿಯೊಬ್ಬನ ಮೂಲಕ ರಿಪೇರಿ ಮಾಡಿಸಿಕೊಳ್ಳುವ ಅವಕಾಶ ಇರಲೇಬೇಕು ಎಂಬ ಆಗ್ರಹದ ಹಿಂದೆ ತರ್ಕ ಇದೆ. ಗ್ರಾಹಕನು ಒಂದು ಉಪಕರಣವನ್ನು ಖರೀದಿಸಿದ ನಂತರ ಅದರ ಪೂರ್ಣ ಮಾಲೀಕತ್ವ ಅವನದ್ದಾಗುತ್ತದೆ. ಹೀಗಿರುವಾಗ, ರಿಪೇರಿಯನ್ನು ಇಂಥವರಲ್ಲಿಯೇ ಮಾಡಿಸಿಕೊಳ್ಳಬೇಕು,
ತಾವು ಹೇಳುವ ಸೇವಾ ಕೇಂದ್ರದಲ್ಲಿಯೇ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಕಂಪನಿಗಳು ಷರತ್ತು ಒಡ್ಡುವುದು ಅವನ ಮಾಲೀಕತ್ವವನ್ನೇ ಪ್ರಶ್ನಿಸುವುದಕ್ಕೆ ಸಮ. ರಿಪೇರಿ ಮಾಡಿಕೊಳ್ಳುವುದು ಅಥವಾ ಮಾಡಿಸಿಕೊಳ್ಳುವುದು ಗ್ರಾಹಕನ ಹಕ್ಕಾದಾಗ, ಕಂಪನಿಗಳು ಈ ರೀತಿ ಷರತ್ತು ಒಡ್ಡುವುದಕ್ಕೆ ಅವಕಾಶ ಇರುವುದಿಲ್ಲ. ಕೇಂದ್ರ ಸರ್ಕಾರ ಈಗ ಇರಿಸಿರುವುದು ತೀರಾ ಪ್ರಾಥಮಿಕ ಹೆಜ್ಜೆ. ಕೇಂದ್ರದ ಆಲೋಚನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ ಗ್ರಾಹಕರಿಗೆ ಅನುಕೂಲ
ವಾಗುವುದರಲ್ಲಿ ಅನುಮಾನವಿಲ್ಲ.

ರಿಪೇರಿ ಹಕ್ಕನ್ನು ಗ್ರಾಹಕರಿಗೆ ಖಾತರಿಪಡಿಸಬೇಕು ಎಂದಾದರೆ ಸರ್ಕಾರವು ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಉಪಕರಣಗಳ ವಿನ್ಯಾಸವು, ಅವುಗಳನ್ನು ಮುಂದೊಂದು ದಿನ ಸುಲಭವಾಗಿ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗುವಂತೆ ಇರಬೇಕು. ಉಪಕರಣಗಳ ಬಿಡಿಭಾಗಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಬೇಕು. ಬಿಡಿಭಾಗಗಳು ಕಂಪನಿ ಹೇಳಿದ ವರ್ತಕರಲ್ಲಿ ಮಾತ್ರ ಸಿಗುವಂತೆ ಆಗಬಾರದು. ಅವುಗಳನ್ನು ಯಾವುದೇ ವರ್ತಕ ತನ್ನ ಗ್ರಾಹಕನಿಗೆ ತರಿಸಿಕೊಡಲು ಸಾಧ್ಯವಾಗಬೇಕು. ಉಪಕರಣಗಳ ರಿಪೇರಿಗೆ ಅಗತ್ಯವಿರುವ ಸಲಕರಣೆಗಳು ಕೂಡ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಬೇಕು. ಉಪಕರಣವನ್ನು ರಿಪೇರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಕೈಪಿಡಿಗಳು ಗ್ರಾಹಕರಿಗೆ ಹಾಗೂ ರಿಪೇರಿ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಸುಲಭವಾಗಿ ಸಿಗುವಂತೆ ಆಗಬೇಕು. ದ್ವಿಚಕ್ರ ವಾಹನಗಳು, ಕೆಲವು ಪ್ರಯಾಣಿಕ ವಾಹನಗಳು, ರೇಡಿಯೊ, ಟೇಪ್‌ ರೆಕಾರ್ಡರ್‌ ಮುಂತಾದ ನಿತ್ಯ ಬಳಕೆಯ ವಾಹನ, ಉಪಕರಣಗಳ ರಿಪೇರಿ ಹೇಗೆ ಎಂಬುದನ್ನು ವಿವರಿಸುವ ಪುಸ್ತಿಕೆಗಳು ಮಾರುಕಟ್ಟೆಯಲ್ಲಿ ಲಭಿಸುತ್ತಿದ್ದವು. ಆದರೆ, ‘ನಮ್ಮ ಸೇವಾ ಕೇಂದ್ರಗಳಲ್ಲಿ ಮಾತ್ರ ರಿಪೇರಿ’ ಎಂಬ ಪರಿಪಾಟ ವ್ಯಾಪಕವಾದಂತೆಲ್ಲ ಈ ಬಗೆಯ ‍ಪುಸ್ತಿಕೆಗಳು ಮರೆಯಾಗಿವೆ. ಈ ಮಾತುಗಳನ್ನು ರಿಪೇರಿ ಹಕ್ಕಿನ ಪರವಾಗಿ ದನಿ ಎತ್ತಿದವರು ಕಾಲಕಾಲಕ್ಕೆ ಹೇಳುತ್ತಲೇ ಬಂದಿದ್ದಾರೆ. ರಿಪೇರಿಯನ್ನು ಹಕ್ಕಿನ ನೆಲೆಯಲ್ಲಿ ಜಾರಿಗೆ ತಂದರೆ, ಕಂಪನಿ ಸೇವಾ ಕೇಂದ್ರಗಳ ಆಚೆಗೂ ರಿಪೇರಿ ಮಾಡುವ
ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಮರೆಯುವಂತಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.