ADVERTISEMENT

ಸಂಪಾದಕೀಯ: ವೃತ್ತಿಪರ ಟೆನಿಸ್‌ ಕಣದಲ್ಲಿ ಕನ್ನಡಿಗ ರೋಹನ್ ಮೇರು ಸಾಧನೆ

ಸಂಪಾದಕೀಯ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಮ್ಯಾಥ್ಯೂ ಎಬ್ಡೆನ್ ಮತ್ತು ರೋಹನ್ ಬೋಪಣ್ಣ
ಮ್ಯಾಥ್ಯೂ ಎಬ್ಡೆನ್ ಮತ್ತು ರೋಹನ್ ಬೋಪಣ್ಣ   

ಕನ್ನಡಿಗ ರೋಹನ್ ಬೋಪಣ್ಣ ಈಗ ವಿಶ್ವದ ಗಮನ ಸೆಳೆದಿದ್ದಾರೆ. ಈ ಟೆನಿಸ್ ಆಟಗಾರ ವೃತ್ತಿಜೀವನದ ಸಂಧ್ಯಾಕಾಲದಲ್ಲಿಯೂ ಪ್ರಖರವಾಗಿ ಬೆಳಗುತ್ತಿದ್ದಾರೆ. ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕೊಡಗಿನ ಕಲಿ ರೋಹನ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಪುರುಷರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಅಲ್ಲದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಗ್ರ್ಯಾನ್‌ಸ್ಲಾಮ್ ಟೆನಿಸ್‌ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರನೆಂಬ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ. 43ನೇ ವಯಸ್ಸಿನಲ್ಲಿಯೂ ಅವರು ಪಾದರಸದಂತೆ ಆಡುವ ರೀತಿ ಯುವ ಆಟಗಾರರಿಗೆ ಮಾದರಿ. ರಾಡ್‌ ಲೇವರ್ ಟೆನಿಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಟಲಿಯ ಸಿಮೊನ್ ಬೊಲೆಲಿ ಹಾಗೂ ಆ್ಯಂಡ್ರಿಯಾ ವಾವಸೋರಿಯವರು ಕಠಿಣ ಪೈಪೋಟಿಯೊಡ್ಡಿದ್ದರು.


ರೋಹನ್ ಮತ್ತು ಮ್ಯಾಥ್ಯೂ ಜೋಡಿಯು ಅದನ್ನು ಮೀರಿ ನಿಂತಿತು. 21 ವರ್ಷಗಳಿಂದ ವೃತ್ತಿಪರ ಟೆನಿಸ್‌ ಆಡುತ್ತಿರುವ ರೋಹನ್, ಇದೇ ಮೊದಲ ಬಾರಿ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 2010 ಮತ್ತು 2023ರಲ್ಲಿ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್‌ ಫೈನಲ್ ಪ್ರವೇಶಿಸಿದ್ದರು. ಆದರೆ, ಗೆಲುವು ಸಾಧ್ಯವಾಗಿರಲಿಲ್ಲ. ಈ ಬಾರಿ ಅವರ ಛಲ, ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಲಭಿಸಿತು. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಟೆನಿಸ್ ತಾರೆಯೆಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಈ ಹಿಂದೆ ಪುರುಷರ ವಿಭಾಗದಲ್ಲಿ ಲಿಯಾಂಡರ್‌ ಪೇಸ್, ಮಹೇಶ್ ಭೂಪತಿ ಹಾಗೂ ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು. ರೋಹನ್ ಅವರಿಗೆ ಒಟ್ಟಾರೆ ಇದು ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ.  2017ರಲ್ಲಿ ಅವರು ಫೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಕೆನಡಾದ ಗ್ಯಾಬ್ರಿಲಾ ದಬ್ರೊವಸ್ಕಿ ಅವರೊಂದಿಗೆ ಕಿರೀಟ ಧರಿಸಿದ್ದರು.

ವೈಯಕ್ತಿಕ ಕ್ರೀಡೆಗಳಲ್ಲಿ ದೀರ್ಘ ಕಾಲದವರೆಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ದೃಢತೆ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಹಲವಾರು ಟೂರ್ನಿಗಳ ಪ್ರಮುಖ ಘಟ್ಟಗಳಲ್ಲಿ ಹೆಚ್ಚು ಸೋಲುಗಳ ಕಹಿಯುಂಡ ಮೇಲೆಯೂ ಎದೆಗುಂದದ  ರೋಹನ್ ಅವರ ತಾಳ್ಮೆ ಮತ್ತು ಏಕಾಗ್ರತೆಯು ಶ್ರೇಷ್ಠ ಮಟ್ಟದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕ್ರಿಕೆಟ್‌ ಆಟಕ್ಕೆ ಅಭಿಮಾನದ ಮಹಾಪೂರವೇ ಹರಿಯುವ ಭಾರತದಲ್ಲಿ ಇನ್ನುಳಿದ ಕ್ರೀಡೆಗಳಲ್ಲಿ ಎತ್ತರದ ಸಾಧನೆ ಮಾಡುವುದು ಸುಲಭವಲ್ಲ. ಅಂತಹ ಎಲ್ಲ ಸವಾಲುಗಳನ್ನೂ ಎದುರಿಸಿರುವ ರೋಹನ್ ಈ ಎತ್ತರಕ್ಕೆ ಬೆಳೆದಿದ್ದಾರೆ. ಹಾಕಿ ಕ್ರೀಡೆಯು ಕೊಡಗಿನಲ್ಲಿ ಕೌಟುಂಬಿಕ ಸಂಸ್ಕೃತಿಯಾಗಿದೆ. ಆದರೆ ರೋಹನ್ ಅವರು ಟೆನಿಸ್ ಆಟದತ್ತ ಒಲವು ತೋರಿದ್ದು ವಿಶೇಷ. ವೃತ್ತಿಜೀವನದುದ್ದಕ್ಕೂ ಗಾಯದ ಸಮಸ್ಯೆ, ಒತ್ತಡಗಳನ್ನು ಎದುರಿಸಿಯೂ ಅವರು ಈ ಎತ್ತರಕ್ಕೇರಿದ್ದಾರೆ. ಅವರ ಸಾಧನೆ ಮತ್ತು ವ್ಯಕ್ತಿತ್ವವು ಮತ್ತಷ್ಟು ಪ್ರತಿಭಾವಂತರು ಟೆನಿಸ್ ಕ್ರೀಡೆಯತ್ತ ಬರಲು ಪ್ರೇರಣೆಯಾಗಬೇಕು. ಈ ದಿಸೆಯಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಒಂದಿಷ್ಟು ಉತ್ತಮ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ದುಬಾರಿ ಕ್ರೀಡೆಯೆಂದೇ ಹೇಳಲಾಗುವ ಟೆನಿಸ್ ಆಟವನ್ನು ಸಾಮಾನ್ಯರ ಕೈಗೆಟುಕುವಂತೆ ಮಾಡಲು ಇದು ಸಕಾಲ. ರೋಹನ್ ಅವರು ಇತ್ತೀಚೆಗಷ್ಟೇ ಡೇವಿಸ್ ಕಪ್ ಟೆನಿಸ್‌ನಿಂದ ವಿದಾಯ ಘೋಷಿಸಿದ್ದರು. ಇನ್ನೇನು ವೃತ್ತಿಪರ ಟೆನಿಸ್‌ನಿಂದಲೂ ನಿವೃತ್ತಿಯಾಗುವ ಯೋಚನೆಯಲ್ಲಿದ್ದರು. ಇದೀಗ ಅವರಿಗೆ ಈ ಗೆಲುವು ಮತ್ತಷ್ಟು ಕಾಲ ಟೆನಿಸ್‌ ಕಣದಲ್ಲಿ ಉಳಿಯಲು ಸ್ಫೂರ್ತಿಯಾಗಬಹುದು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.