ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿನ ಪಠ್ಯದ ಹೊರೆಯನ್ನು ಅರ್ಧದಷ್ಟು ಕಡಿತಗೊಳಿಸುವ ಮೂಲಕ ಪಾಠದ ಜೊತೆಗೆ ಆಟವನ್ನು ಪರಿಚಯಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹಗುರ ಪಠ್ಯದ ಪರಿಕಲ್ಪನೆಯನ್ನು ಸರ್ಕಾರ ಪ್ರತಿಪಾದಿಸುತ್ತಿರುವುದು ಇದು ಮೊದಲೇನಲ್ಲ. ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಲಿ’ಯ (ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು ಅರ್ಧದಷ್ಟು ಇಳಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಈ ಮೊದಲು ಹೇಳಿದ್ದರು. ಈಗ ಶಾಲೆಗಳಲ್ಲಿರುವ ಪಠ್ಯಕ್ರಮ ಬಿ.ಎ., ಬಿ.ಕಾಂ. ತರಗತಿಗಳ ಪಠ್ಯದ ಎರಡರಷ್ಟಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಚಿಂತನೆಯ ಭಾಗವಾಗಿಯೇ ಕ್ರೀಡಾ ಸಚಿವಾಲಯ ಪಾಠದೊಂದಿಗೆ ಆಟವನ್ನು ಸಮೀಕರಿಸಲು ಮುಂದಾಗಿದೆ. ಈಗಾಗಲೇ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ನಿರ್ದಿಷ್ಟ ಸಮಯವಿದೆ. ಆದರೆ, ಆಟದ ಪೀರಿಯಡ್ ಅನೇಕ ಶಾಲೆಗಳಲ್ಲಿ ಹೆಸರಿಗಷ್ಟೇ ಇರುತ್ತದೆ.
ಕೆಲವು ವಿದ್ಯಾಸಂಸ್ಥೆಗಳಂತೂ ಮಕ್ಕಳು ಆಟವಾಡುವುದನ್ನು ಅಪರಾಧವೆನ್ನುವಂತೆ ಭಾವಿಸುತ್ತವೆ. ಈ ನಕಾರಾತ್ಮಕ ಧೋರಣೆಯನ್ನು ಗಮನಿಸಿಯೇ, ಪ್ರಸ್ತುತ ಇರುವ ಪಠ್ಯದ ಹೊರೆಯನ್ನು ಶೇ 50ರಷ್ಟು ಕಡಿಮೆ ಮಾಡಲು ನಿರ್ಧರಿಸಿರುವ ಸರ್ಕಾರ, ಆ ಸಮಯವನ್ನು ಕ್ರೀಡಾ ಚಟುವಟಿಕೆಗಳಿಗೆ ಕಡ್ಡಾಯಗೊಳಿಸಲು ಉದ್ದೇಶಿಸಿದೆ ಎಂದು ಕೇಂದ್ರ ಕ್ರೀಡಾಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಹೇಳಿದ್ದಾರೆ. ದೇಶದಲ್ಲಿ ಕ್ರೀಡಾಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನೂ ಹಮ್ಮಿಕೊಂಡಿದೆ. ಅವುಗಳಲ್ಲಿ ಮುಖ್ಯವಾದುದು, 20 ವಿಶೇಷ ಕ್ರೀಡಾ ತರಬೇತಿ ಶಾಲೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸುವುದು. ಪ್ರತಿ ಶಾಲೆಗೆ ₹7ರಿಂದ ₹8 ಕೋಟಿ ಖರ್ಚು ಮಾಡಲು ಸರ್ಕಾರ ಉದ್ದೇಶಿಸಿದೆ. ಪ್ರತಿ ಶಾಲೆಯು 2 ಅಥವಾ 3 ಕ್ರೀಡೆಗಳಿಗಷ್ಟೇ ಗಮನಹರಿಸಲಿದೆ. ಕ್ರೀಡಾ ಪ್ರಾಧಿಕಾರದ ಸಿಬ್ಬಂದಿಯನ್ನು 2022ರೊಳಗೆ ಅರ್ಧಕ್ಕಿಳಿಸಿ, ಆ ಹಣವನ್ನು ಕೂಡ ಕ್ರೀಡಾ ಚಟುವಟಿಕೆಗಳಿಗೆ ಬಳಸುವ ಉದ್ದೇಶ ಕೂಡ ಕ್ರೀಡೆಗೆ ಉತ್ತೇಜನ ನೀಡುವ ಕ್ರಮವೇ ಆಗಿದೆ.
ಕ್ರೀಡಾ ಚಟುವಟಿಕೆಗಳು ಮಕ್ಕಳ ದೈಹಿಕ–ಮಾನಸಿಕ ಆರೋಗ್ಯಕ್ಕೆ ಅಗತ್ಯ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಎಷ್ಟೋ ಶಾಲೆಗಳಲ್ಲಿ ಮೈದಾನಗಳು ಇಲ್ಲದಿರುವಾಗ, ಕ್ರೀಡಾ ಶಿಕ್ಷಕರ ಕೊರತೆ ಇರುವಾಗ, ಸರ್ಕಾರದ ಕ್ರೀಡಾನೀತಿ ಕೆಲವು ಶಾಲೆಗಳಿಗಷ್ಟೇ ಅನ್ವಯವಾಗುತ್ತದೆ. ಸಣ್ಣಪುಟ್ಟ ಶಾಲೆಗಳಲ್ಲಿನ ಕಿಷ್ಕಿಂಧೆಗಳಂತಹ ಕಟ್ಟಡಗಳಲ್ಲಿ ಓದುತ್ತಿರುವ ಬಹುಸಂಖ್ಯೆಯ ಮಕ್ಕಳನ್ನು ಆಟದ ಅಂಗಳಕ್ಕೆ ತರುವುದು ಸುಲಭದ ಕೆಲಸವೇನಲ್ಲ. ಅಲ್ಲದೆ, ಶಾಲಾ ಅವಧಿಯ ಶೇ 50ರಷ್ಟು ಸಮಯವನ್ನು ಆಟೋಟಕ್ಕೆ ಕಡ್ಡಾಯಗೊಳಿಸುವ ನಿಲುವನ್ನು ಪ್ರಾಯೋಗಿಕ ದೃಷ್ಟಿಯಿಂದಲೂ ಪರಿಶೀಲಿಸಬೇಕಾಗಿದೆ. ಶಾಲೆಗಳು ದೇಹದಾರ್ಢ್ಯ ಪಟುಗಳನ್ನು ರೂಪಿಸುವ ವ್ಯಾಯಾಮಶಾಲೆಗಳಾಗದಂತೆ ಎಚ್ಚರ ವಹಿಸಬೇಕು.
ಪಠ್ಯವನ್ನು ಅರ್ಧದಷ್ಟು ಹಗುರಗೊಳಿಸುವ ಚಿಂತನೆಗೆ ಪೋಷಕರ ಪ್ರತಿಕ್ರಿಯೆಯನ್ನೂ ಗಮನಿಸಬೇಕಿದೆ. ಸ್ಪರ್ಧಾತ್ಮಕ ಜಾಗತಿಕ ಸನ್ನಿವೇಶಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರದ ಶಿಕ್ಷಣ ನೀತಿ ಪರಿಷ್ಕಾರಗೊಳ್ಳಬೇಕು. ಆಟದ ಜೊತೆಗೆ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಅಗತ್ಯವಾದ ಸೃಜನಾತ್ಮಕ ಕಲಿಕೆ ಹಾಗೂ ಜೀವನ ಕೌಶಲಗಳ ಪರಿಚಯ ಶಾಲೆಗಳಲ್ಲಿ ಆಗಬೇಕು. ಮುಖ್ಯವಾಗಿ ನಮ್ಮ ಪರೀಕ್ಷಾ ಪದ್ಧತಿ ಆಮೂಲಾಗ್ರ ಬದಲಾವಣೆಯನ್ನು ಕಾಣಬೇಕಾಗಿದೆ. ಕಂಠಪಾಠದ ಒಪ್ಪಿಸುವಿಕೆ ಹಾಗೂ ಅಂಕಗಳ ಮೂಲಕ ವಿದ್ಯಾರ್ಥಿಗಳ ಯಶಸ್ಸನ್ನು ಅಳೆಯುವ ಪ್ರಸಕ್ತ ಪರೀಕ್ಷಾ ಪದ್ಧತಿಯನ್ನು ತೀವ್ರ ವಿಮರ್ಶೆಗೆ ಒಳಪಡಿಸಬೇಕಿದೆ. ಗುಣಮಟ್ಟದ ಶಿಕ್ಷಣ ಈ ಹೊತ್ತಿನ ತುರ್ತು. ಅಂಥ ಶಿಕ್ಷಣದಲ್ಲಿ ಆಟವೂ ಬೇಕು, ಆಟಕ್ಕೆ ಹೊರತಾದ ಸೃಜನಶೀಲ ಕಲಿಕೆಗಳ ಒಡನಾಟವೂ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.