ಹೆತ್ತವರನ್ನು ನೋಡಿಕೊಳ್ಳುವುದು ಕಾನೂನು ಬಾಧ್ಯತೆಯಷ್ಟೇ ಅಲ್ಲ, ಅದು ಮಕ್ಕಳ ನೈತಿಕ ಕರ್ತವ್ಯವೂ ಹೌದು ಎನ್ನುವ ಹೈಕೋರ್ಟ್ ಅಭಿಪ್ರಾಯವು ಸಾಮಾಜಿಕ ಸಂರಚನೆಯಲ್ಲಿ ಮಾನವೀಯ ಸಂವೇದನೆಗಳ ಕೊರತೆಯಿರುವುದನ್ನು ಬೆಟ್ಟು ಮಾಡಿ ತೋರಿಸುವಂತಿದೆ.
ಮಗಳು ಮತ್ತು ಅಳಿಯನೊಂದಿಗಿನ ಹಿರಿಯ ನಾಗರಿಕರೊಬ್ಬರ ಕಾನೂನು ವ್ಯಾಜ್ಯದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬದುಕಿನ ಮುಸ್ಸಂಜೆಯಲ್ಲಿರುವ ಅಪ್ಪ–ಅಮ್ಮನನ್ನು ನೋಡಿಕೊಳ್ಳುವುದನ್ನು ಮಕ್ಕಳು ಪುಕ್ಕಟೆಯೆಂದು ಭಾವಿಸಬೇಕಾಗಿಲ್ಲ; ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ ಎಂಬರ್ಥದ ನ್ಯಾಯಪೀಠದ ಅಭಿಪ್ರಾಯವು ಸಮಾಜಕ್ಕೊಂದು ಕಿವಿಮಾತಿನಂತಿದೆ ಹಾಗೂ ಹಿರಿಯ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ನಡೆಯೂ ಆಗಿದೆ.
ಇತ್ತೀಚಿನ ದಿನಗಳಲ್ಲಿ ಪೋಷಕರ ಮೇಲೆ ಹತ್ತಿರದವರಿಂದಲೇ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಪೀಠವು ಅಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮತ್ತು ಪ್ರಾಧಿಕಾರಗಳು ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಹೇಳಿರುವುದು ಸರಿಯಾಗಿದೆ. ಹಿರಿಯ ನಾಗರಿಕರ ವಿಷಯದಲ್ಲಿ ಕುಟುಂಬದವರು ಅಥವಾ ಸಮಾಜ ಅಸೂಕ್ಷ್ಮವಾಗಿ ವರ್ತಿಸುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು. ಹಾಗೆಯೇ ಅಮ್ಮ–ಅಪ್ಪನನ್ನು ನೋಡಿಕೊಳ್ಳುವುದು ಮಕ್ಕಳ ಒಳ್ಳೆಯತನ ಎಂದೂ ಭಾವಿಸಬೇಕಾಗಿಲ್ಲ. ವೃದ್ಧಾಪ್ಯ ಎನ್ನುವುದು ಎಲ್ಲರ ಪಾಲಿಗೂ ಅನಿವಾರ್ಯವಾದ ಕಟುವಾಸ್ತವ. ಹಾಗಾಗಿ, ಹಿರಿಯ ನಾಗರಿಕರನ್ನು ಅಕ್ಕರೆಯಿಂದ ಕಾಣುವುದು ನಮ್ಮ ನಾಳೆಗಳನ್ನು ಸುಂದರ
ಆಗಿಸಿಕೊಳ್ಳುವ ಕಾಳಜಿಯೂ ಆಗಿದೆ.
ವೃದ್ಧಾಪ್ಯದಲ್ಲಿ ಮತ್ತೊಬ್ಬರನ್ನು ಅವಲಂಬಿಸುವುದು ಹಿರಿಯ ನಾಗರಿಕರಿಗೆ ಅನಿವಾರ್ಯ. ಆರೋಗ್ಯದ ಸಮಸ್ಯೆಗಳೊಂದಿಗೆ, ಭಾವನಾತ್ಮಕ ಹಾಗೂ ಹಣಕಾಸಿನ ಸಮಸ್ಯೆಗಳನ್ನೂ ಅವರು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕಿರಿಯರ ಬೈಗುಳ ಹಾಗೂ ತಿರಸ್ಕಾರಕ್ಕೂ ಗುರಿಯಾಗಬೇಕಾಗುತ್ತದೆ. ಮಕ್ಕಳು ಹಿರಿಯರಿಗೆ ಆಹಾರ ಹಾಗೂ ಔಷಧೋಪಚಾರ ಸರಿಯಾಗಿ ಒದಗಿಸದ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ಆಗಾಗ ವರದಿಯಾಗುತ್ತಲೇ ಇರುತ್ತವೆ. ಈ ಸಮಸ್ಯೆಯು ಭಾರತಕ್ಕೆ ಸೀಮಿತವಾದ ವಿದ್ಯಮಾನ ಅಲ್ಲ.
ವಿಶ್ವದ ಅನೇಕ ದೇಶಗಳಲ್ಲಿ ಹಿರಿಯ ನಾಗರಿಕರು ಅಸಹಾಯಕತೆ, ಅಸುರಕ್ಷತೆಯಿಂದ ಬಳಲುತ್ತಿದ್ದು, ಅಂಥ ಹಿರಿಯರಿಗೆ ಕಾನೂನಿನ ಆಸರೆ ಒದಗಿಸುವ ಪ್ರಯತ್ನಗಳು ನಡೆದಿವೆ. ಆಹಾರ, ಬಟ್ಟೆ, ವಸತಿ, ವೈದ್ಯಕೀಯ ನೆರವುಗಳನ್ನು ಕಾನೂನಿನ ಮೂಲಕ ಖಾತರಿಪಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಹಿರಿಯರ ಬಗೆಗಿನ ನಿರ್ಲಕ್ಷ್ಯ ಕುಟುಂಬದಲ್ಲಿ ಮಾತ್ರವಲ್ಲದೆ, ಮನೆಯಿಂದ ಹೊರಗೆ ಸಮಾಜದಲ್ಲೂ ಕಂಡುಬರುತ್ತದೆ. ಪಿಂಚಣಿ ಅಥವಾ ವೃದ್ಧಾಪ್ಯ ವೇತನ ಪಡೆಯಲಿಕ್ಕಾಗಿ ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳಿಗೆ ಧಾವಿಸುವ ಹಿರಿಯ ನಾಗರಿಕರೊಂದಿಗೆ ಕೆಲವು ಅಧಿಕಾರಿಗಳು ಒರಟಾಗಿ ವರ್ತಿಸುವುದಿದೆ.
ವಾಹನಗಳಿಗೆ ಆದ್ಯತೆ ನೀಡುವ ರಸ್ತೆ ವ್ಯವಸ್ಥೆಯಂತೂ ಹಿರಿಯರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ನಾವು ರೂಪಿಸಿಕೊಂಡಿರುವ ನಾಗರಿಕ ವ್ಯವಸ್ಥೆಯಲ್ಲಿ ಮಕ್ಕಳು ಹಾಗೂ ವೃದ್ಧರಿಗೆ ಆದ್ಯತೆ ಕಡಿಮೆ. ಕೂಡು ಕುಟುಂಬಗಳು ಅಪರೂಪವಾಗುತ್ತಿರುವ ದಿನಗಳಲ್ಲಿ ಮನೆಯ ಒಳಗೂ ವೃದ್ಧರು ಒಂಟಿಯಾಗಿ ಉಳಿಯುವ ಸ್ಥಿತಿಯಿದೆ. ಮನೆಮಂದಿಯ ಮೊಬೈಲ್ ಫೋನ್ ಗೀಳಿನಿಂದಾಗಿ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗಿನ ಹಿರಿಯ ನಾಗರಿಕರ ಒಡನಾಟದ ಅವಧಿ ಕೂಡ ಕಡಿಮೆಯಾಗುತ್ತಿದೆ. ಕೊರೊನಾ ಕಾಲಘಟ್ಟ ಹಿರಿಯ ನಾಗರಿಕರ ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸಿತು. ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಕೊರೊನಾ ಸಂದರ್ಭದಲ್ಲಿ ರದ್ದುಗೊಳಿಸಿದ ಕೇಂದ್ರ ಸರ್ಕಾರ, ಆ ಸೌಲಭ್ಯವನ್ನು ಮರಳಿ ನೀಡಲು ಮುಂದಾಗಿಲ್ಲ. ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರ ಕಡಿತಗೊಂಡಿರುವುದೂ ಹಿರಿಯ ನಾಗರಿಕರ ಜೀವನ ನಿರ್ವಹಣೆಗೆ ತೊಡಕಾಗಿ ಪರಿಣಮಿಸಿದೆ.
ಭಾರತದಲ್ಲಿ 2022ರ ಜುಲೈ ಹೊತ್ತಿಗೆ ಹಿರಿಯ ನಾಗರಿಕರ ಸಂಖ್ಯೆ 15 ಕೋಟಿಯಷ್ಟಿತ್ತು ಎಂದು ಅಂದಾಜಿಸಲಾಗಿದೆ. ಈ ಪ್ರಮಾಣ 2050ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಹಿರಿಯ ನಾಗರಿಕರ ಸಂಖ್ಯೆಯ ಹೆಚ್ಚಳಕ್ಕೆ ತಕ್ಕಂತೆ ಅವರಿಗೆ ಸವಲತ್ತುಗಳನ್ನು ಒದಗಿಸುವ ಕಾರ್ಯಕ್ರಮಗಳು ರೂಪುಗೊಂಡಿಲ್ಲ. ಹಿರಿಯರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಿಸಿಕೊಳ್ಳುವ ಹಾಗೂ ದೈಹಿಕ ಸಾಮರ್ಥ್ಯ ಹೊಂದಿರುವವರಿಗೆ ಗೌರವದಿಂದ ದುಡಿಯುವ ಅವಕಾಶಗಳನ್ನು ಒದಗಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿಲ್ಲ. ವಯಸ್ಸಾದವರು ಯಾವುದೇ ಕೆಲಸವನ್ನು ಮಾಡಲಾಗದ ನಿಷ್ಪ್ರಯೋಜಕರು ಎನ್ನುವ ಮನೋಭಾವದಲ್ಲೇ ಸಮಸ್ಯೆಯ ಮೂಲವಿದೆ.
ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆಗಾಗಿ ‘ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ–ಪೋಷಣೆ ಮತ್ತು ಕಲ್ಯಾಣ ಅಧಿನಿಯಮ– 2007’ ಜಾರಿಯಲ್ಲಿದ್ದರೂ, ಅದರ ಸಮರ್ಪಕ ಅನುಷ್ಠಾನ ಆಗಿರುವ ಉದಾಹರಣೆಗಳು ಕಡಿಮೆ. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರನ್ನು ಪ್ರೀತಿ ಹಾಗೂ ಗೌರವದಿಂದ ನಡೆಸಿಕೊಳ್ಳದಿರುವುದು ಸಮಾಜದ ಅನಾರೋಗ್ಯದ ಸಂಕೇತ. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ನಾಗರಿಕ ಸಮಾಜದ ಪ್ರಮುಖ ಲಕ್ಷಣವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.