1984ರ ಸಿಖ್ ನರಮೇಧದ ಪ್ರಮುಖ ಆಪಾದಿತ,ಕಾಂಗ್ರೆಸ್ ಪಕ್ಷದ ಮುಖಂಡ ಸಜ್ಜನ್ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.ಆರೋಪದಿಂದ ಖುಲಾಸೆ ಮಾಡಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿದೆ. 34ವರ್ಷಗಳ ಕಾಲ ಕಾನೂನಿನ ಕತ್ತಲ ಕಾಡಿನಲ್ಲಿ ನ್ಯಾಯ ಅರಸಿ ಅಲೆದಾಡಿದ್ದ ಸಾವಿರಾರು ಸಿಖ್ ಕುಟುಂಬಗಳಿಗೆ ಈ ತೀರ್ಪು ಒಂದು ಬೆಳಕಿನ ಕಿರಣ.
ದೇಶವಿಭಜನೆಯ ದಳ್ಳುರಿಯ ದಿನಗಳಲ್ಲಿ ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಎದೆಗವಚಿಕೊಂಡು ಲಾಹೋರಿನಿಂದ ದೆಹಲಿಯತ್ತ ಧಾವಿಸುತ್ತಾರೆ ಯುವ ಕವಿ ಅಮೃತಾ ಪ್ರೀತಂ.ಹಾದಿಯುದ್ದಕ್ಕೆ ದ್ವೇಷ,ಕ್ರೌರ್ಯ, ದುಃಖ, ದುರಂತವನ್ನು ಹಾಯುತ್ತಾರೆ.ಹಬ್ಬಿದ ವಿಷದ ಬಳ್ಳಿಗಳು,ದ್ವೇಷದ ಬೀಜಗಳು,ಎಲ್ಲೆಲ್ಲೂ ರಕ್ತಪಾತ,ಬಿದಿರಿನ ಕೊಳಲುಗಳನ್ನು ವಿಷ ಸರ್ಪಗಳಾಗಿ ಬದಲಾಯಿಸುವ ಅಡವಿಯ ವಿಷಪೂರಿತ ಗಾಳಿ,ಹಸಿರು ಪಂಜಾಬನ್ನು ನೀಲಿಗಟ್ಟಿಸಿದ ದ್ವೇಷದ ವಿಷವನ್ನು ತಮ್ಮ ಕವಿತೆಯೊಂದರಲ್ಲಿ ಚಿತ್ರಿಸುತ್ತಾರೆ.
ಸರಿಯಾಗಿ 37 ವರ್ಷಗಳ ನಂತರ,ಇಂದಿರಾ ಗಾಂಧಿ ಹತ್ಯೆಯ ತರುವಾಯ ಇಂತಹುದೇ ಕೋಮುವಾದಿ ದ್ವೇಷದ ವಿಷ ಪುನಃ ದೆಹಲಿಯ ಹಾದಿ ಬೀದಿಗಳಲ್ಲಿ ಸಾಮೂಹಿಕ ಹತ್ಯೆಗಳ ರೂಪ ಧರಿಸಿ ಭುಸುಗುಟ್ಟಿ ಹರಿಯುತ್ತದೆ. 1984ರ ಸಿಖ್ ವಿರೋಧಿ ಗಲಭೆಗಳ ಕುರಿತು ಸೋಮವಾರ ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ಆರಂಭದ ಸಾಲುಗಳಿವು. ಮಾನವೀಯತೆಯನ್ನು ಬೆಚ್ಚಿ ಬೀಳಿಸುವ ಈ ಕೊಲೆಗಡುಕರಿಗೆ ರಾಜಕೀಯ ರಕ್ಷಣೆ ದೊರೆಯುತ್ತದೆ. 20 ವರ್ಷಗಳ ಕಾಲ ಕಾನೂನು ಇವರನ್ನು ಮುಟ್ಟಲಾಗುವುದಿಲ್ಲ.ಹತ್ತು ಸಮಿತಿಗಳು ಮತ್ತು ಆಯೋಗಗಳು ತನಿಖೆ ನಡೆಸುತ್ತವೆ. 21ವರ್ಷಗಳ ನಂತರ2005ರಲ್ಲಿ ಕೆಲವು ಅಪರಾಧಿಗಳ ಪಾತ್ರವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುತ್ತದೆ.
ಇನ್ನೂ ಬಹುಕಾಲ ಸಮಾಜದ ಸಾಮೂಹಿಕ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡುತ್ತಲೇ ಇರುವ ಘೋರ ಪ್ರಕರಣವಿದು.ಮಾನವೀಯತೆಯ ವಿರುದ್ಧ ನಡೆದ ಪಾತಕ. 1993ರ ಮುಂಬೈ ಗಲಭೆಗಳು, 2002ರ ಗುಜರಾತ್ ಗಲಭೆಗಳು, 2008ರ ಒಡಿಶಾದ ಕಂಧಮಾಲ್ ಗಲಭೆಗಳು, 2013ರ ಮುಜಫ್ಫರನಗರ ಗಲಭೆಗಳು ಈ ಸಾಲಿಗೆ ಸೇರುವ ಇನ್ನೂ ಕೆಲವು ನರಮೇಧಗಳು.ಪ್ರಬಲ ರಾಜಕೀಯ ಪಕ್ಷಗಳ ಪಾತ್ರಧಾರಿಗಳು ಮುನ್ನಡೆಸಿದ ಈ ಗಲಭೆಗಳಿಗೆ ಸರ್ಕಾರಗಳ ಕಾನೂನು ಬಾಹುಗಳು ನಡೆಮುಡಿ ಹಾಸಿಕೊಟ್ಟವು.
ಈ ಗಲಭೆಗಳ ಅಪರಾಧಿಗಳು ರಾಜಕೀಯ ಆಶ್ರಯ ಪಡೆದು ನ್ಯಾಯ ಪ್ರಕ್ರಿಯೆ ಮತ್ತು ಶಿಕ್ಷೆಯನ್ನು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದಾರೆ.ಇವರನ್ನು ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸುವುದು ನಮ್ಮ ಕಾನೂನು ವ್ಯವಸ್ಥೆಯ ಪಾಲಿಗೆ ಗಂಭೀರ ಸವಾಲೇ ಸರಿ.ಜನಾಂಗ ಹತ್ಯೆಯಾಗಲೀ,ಮಾನವೀಯತೆ ವಿರುದ್ಧ ಜರುಗುವ ಪಾತಕಗಳಾಗಲೀ ನಮ್ಮ ದೇಶದ ಅಪರಾಧ ಕಾನೂನಿನ ಭಾಗ ಆಗಿಲ್ಲ. ಈ ದೋಷವನ್ನು ತುರ್ತಾಗಿ ಸರಿಪಡಿಸಬೇಕಿದೆ ಎಂದು ತೀರ್ಪು ಆಗ್ರಹಿಸಿದೆ.ನಮ್ಮ ರಾಜಕೀಯ- ಸಾಮಾಜಿಕ ವ್ಯವಸ್ಥೆಗೆ ನ್ಯಾಯಾಂಗ ಹಿಡಿದ ಕನ್ನಡಿಯಿದು.ತೂರಿ ಬರುವ ಪ್ರತಿಬಿಂಬ, ವ್ಯವಸ್ಥೆಯನ್ನು ಇನ್ನಾದರೂ ಬೆಚ್ಚಿ ಬೀಳಿಸಬೇಕು.
ನೊಂದವರಿಗೆ ನ್ಯಾಯ ಸಲ್ಲಿಸದೆ ಇನ್ನೇನು ಇತಿಹಾಸದಲ್ಲಿ ಹೂತು ಹೋಗಲಿದ್ದ ನರಮೇಧ ಪ್ರಕರಣವೊಂದಕ್ಕೆ ನ್ಯಾಯಾಂಗ ಹಠಾತ್ತನೆ ಜೀವ ನೀಡಿದೆ.ಹಿಂದೆ ನಿಂತು ಹಿಂಸೆಯನ್ನು ಭುಗಿಲೆಬ್ಬಿಸಿದ ಪ್ರಭಾವಶಾಲಿ ನೇತಾರರನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವುದು ಸಾಧ್ಯವೆಂದು ಸಾರಿದೆ.ಪೊಲೀಸರು ಮತ್ತು ಅಧಿಕಾರಯಂತ್ರ ಉದ್ದೇಶಪೂರ್ವಕವಾಗಿ ಹಳಿ ತಪ್ಪಿಸಿದ್ದ ತನಿಖೆಗಳು ಮತ್ತು ಅವು ಮರೆಮಾಚಿದ್ದ ಹತ್ಯೆಗಳ ಸತ್ಯದ ಮೇಲೆ ಬೆಳಕು ಚೆಲ್ಲಲಾಗಿದೆ.
ಗುಜರಾತ್ ಮತ್ತಿತರೆ ನರಮೇಧಗಳ ಅಪರಾಧಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆ. ಈ ಎಲ್ಲ ಗುರುತರ ಆಪಾದನೆಗಳ ನಡುವೆಯೂ ಸಜ್ಜನ್ ಕುಮಾರ್ ಅವರನ್ನು ರಾಜಕಾರಣದ ಮುಂಚೂಣಿಯಲ್ಲೇ ಇರಿಸಿದ ಕಾಂಗ್ರೆಸ್ ಪಕ್ಷದ ನಡವಳಿಕೆ ಖಂಡನೀಯ.ಒಂದರ ನಂತರ ಮತ್ತೊಂದರಂತೆ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ನರಮೇಧದ ಅಪರಾಧಿಗಳನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವ ಗಂಭೀರ ಇಚ್ಛಾಶಕ್ತಿ ತೋರದೆ ಹೋದದ್ದು ಅಕ್ಷಮ್ಯ ಅಪರಾಧ. ಹಿಂದೆ ನಿಂತು ಹಿಂದೂಗಳನ್ನು ಕೆರಳಿಸಿ ಸಾವಿರಾರು ಸಿಖ್ಖರನ್ನು-ಮುಸ್ಲಿಮರನ್ನು ಸಾವಿನ ಮನೆಗಟ್ಟಿದ ತನ್ನ ತಲೆಯಾಳುಗಳು ಕಾನೂನಿನ ಕೈಗಳಿಗೆ ಸಿಗದಂತೆ ಕಾಪಾಡಿಕೊಂಡು ಬಂದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆಪಾದನೆಯ ಬೆರಳು ತೋರುವ ರಾಜಕೀಯದ ಹೊಲಸಿನಿಂದ ಮೇಲೇಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.