ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅದೇ ರಾಗ, ಅದೇ ಹಾಡು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 18:30 IST
Last Updated 30 ಏಪ್ರಿಲ್ 2019, 18:30 IST
   

2018–19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಶೇ 73.70ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ 1.8ರಷ್ಟು ಏರಿಕೆಯಾಗಿದೆ. ಕರಾವಳಿ ಜಿಲ್ಲೆಗಳನ್ನು ಹಿಂದಕ್ಕೆ ತಳ್ಳಿ ಹಾಸನ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಫಲಿತಾಂಶದ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇತ್ತೀಚೆಗೆ ಪ್ರಕಟವಾದ ಪಿಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದ ಚಿತ್ರದುರ್ಗ ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ 6ನೇ ಸ್ಥಾನದಲ್ಲಿದೆ. ಇಷ್ಟನ್ನು ಹೊರತುಪಡಿಸಿದರೆ ಫಲಿತಾಂಶದ ಉಳಿದ ವಿವರಗಳಲ್ಲಿ ಹೆಚ್ಚಿನ ಅಚ್ಚರಿಗಳೇನೂ ಇಲ್ಲ. ಎಂದಿನಂತೆ ಹುಡುಗಿಯರ ಹಿಂದೆ ಹುಡುಗರಿದ್ದಾರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಮುಂದೆ ಗ್ರಾಮೀಣ ವಿದ್ಯಾರ್ಥಿಗಳಿದ್ದಾರೆ. ಯಾದಗಿರಿ, ರಾಯಚೂರು, ಗದಗ, ಕಲಬುರ್ಗಿ, ಬೀದರ್‌ ಜಿಲ್ಲೆಗಳು ಸಾಧನೆಯ ಪಟ್ಟಿಯ ಕೊನೆಯಲ್ಲಿವೆ. ಯಾವುದೇ ಗೊಂದಲವಿಲ್ಲದೆ ಪರೀಕ್ಷೆ–ಫಲಿತಾಂಶದ ಪ್ರಕ್ರಿಯೆಯನ್ನು ಮುಗಿಸಿರುವ ಅಧಿಕಾರಿ–ಸಿಬ್ಬಂದಿ ವರ್ಗಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಫಲಿತಾಂಶಗಳನ್ನು ಗಮನಿಸುತ್ತಾ ಬಂದವರಿಗೆ ಪ್ರಸಕ್ತ ಫಲಿತಾಂಶದಲ್ಲಿ ಅಂಕಿಅಂಶಗಳ ಬದಲಾವಣೆಯನ್ನು ಹೊರತುಪಡಿಸಿದರೆ ಸಂತಸಪಡುವಂತಹದ್ದೇನೂ ಕಾಣಿಸುವುದಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳು ಫಲಿತಾಂಶದಲ್ಲಿ ಹಿಂದುಳಿಯುವುದೇಕೆ, ಕರಾವಳಿ ಜಿಲ್ಲೆಗಳ ವಿದ್ಯಾರ್ಥಿಗಳ ಸಾಧನೆಗೆ ಕಾರಣವೇನು ಎನ್ನುವುದರ ಬಗ್ಗೆ ವೈಜ್ಞಾನಿಕ ಅಧ್ಯಯನಗಳೇ ನಮ್ಮಲ್ಲಿ ನಡೆದಿಲ್ಲ. ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ಫಲಿತಾಂಶ ವಿಶ್ಲೇಷಣೆಯ ಔಪಚಾರಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಳಪೆ ಸಾಧನೆಯ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಹಾಗೂ ಅಂಥ ಶಾಲೆಗಳ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತದೆ. ಇದರಿಂದಾಗಿ ಮುಂದಿನ ವರ್ಷಗಳ ಫಲಿತಾಂಶದಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಮಾತ್ರ ಈವರೆಗೆ ಸಾಧ್ಯವಾಗಿಲ್ಲ. ಇದರರ್ಥ ಸ್ಪಷ್ಟ: ಶಿಕ್ಷಣ ಇಲಾಖೆ ಎಚ್ಚರಗೊಳ್ಳುವುದು ಪರೀಕ್ಷೆ–ಫಲಿತಾಂಶದ ಸಂದರ್ಭದಲ್ಲಿ ಮಾತ್ರ. ಉಳಿದಂತೆ ಅದು ತನ್ನೆಲ್ಲ ಹೊಣೆಯನ್ನು ಶಿಕ್ಷಕರ ಮೇಲೆ ಹೇರಿ ದಿವ್ಯನಿದ್ರೆಯಲ್ಲಿ ಮುಳುಗುತ್ತದೆ.

ವಿದ್ಯಾರ್ಥಿಗಳ ಸಾಧನೆಗೂ ಶಾಲೆಗಳಲ್ಲಿನ ಮೂಲ ಸೌಕರ್ಯಗಳಿಗೂ ಸಂಬಂಧವಿದೆ. ಗ್ರಂಥಾಲಯ
ವಿಲ್ಲದ, ಪ್ರಯೋಗಾಲಯಗಳಿಲ್ಲದ ಶಾಲಾ–ಕಾಲೇಜುಗಳು ಬಹಳಷ್ಟಿವೆ. ಶಿಕ್ಷಕರ ಸಾಮ‌ರ್ಥ್ಯದ ಬಗ್ಗೆಯೂ ಪ್ರಶ್ನೆಗಳಿವೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ನಿಗದಿತ ವಿದ್ಯಾರ್ಹತೆ ಹಾಗೂ ಮೆರಿಟ್‌ ಹೊಂದಿರುತ್ತಾರೆ. ಆದರೆ, ಖಾಸಗಿ ಶಾಲೆಗಳಲ್ಲಿನ ಶಿಕ್ಷಕರ ಆಯ್ಕೆಯಲ್ಲಿ ಪ್ರತಿಭೆಗಿಂತಲೂ ಬೇರೆಯದೇ ಮಾನದಂಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದೇ ಜಾತಿ–ಸಮುದಾಯಕ್ಕೆ ಸೇರಿರುವ ಶಿಕ್ಷಕರೇ ತುಂಬಿಕೊಂಡಿರುವ ವಿದ್ಯಾಸಂಸ್ಥೆಗಳಿವೆ. ಜಾತಿಯೊಂದಿಗೆ ರಾಜಕಾರಣ, ಹಣ ಕೂಡ ಶಿಕ್ಷಕರ ನೇಮಕಾತಿಗಳಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಇದರ ಜೊತೆಗೆ ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಬಳ ನೀಡುವುದರಿಂದ ಉತ್ತಮ ಶಿಕ್ಷಕರು ಅತ್ತ ತಲೆಹಾಕುವುದಿಲ್ಲ. ವಿಷಯಾಧಾರಿತ ಶಿಕ್ಷಕರ ಪರಿಕಲ್ಪನೆಯೇ ಅನೇಕ ಶಾಲೆಗಳಲ್ಲಿಲ್ಲ. ಇಂಥ ಸಂದರ್ಭದಲ್ಲಿ ಉತ್ತಮ ಬೋಧನೆ–ಫಲಿತಾಂಶ ನಿರೀಕ್ಷಿಸುವುದು ಹೇಗೆ? ವಾಸಸ್ಥಳಕ್ಕೆ ರೂಪುಗೊಂಡ ಕಟ್ಟಡಗಳಲ್ಲಿ ನಡೆಯುವ ವಿದ್ಯಾಸಂಸ್ಥೆಗಳೂ ಹಲವೆಡೆ ಇದ್ದು, ಅವುಗಳ ಬಗ್ಗೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ. ಸರ್ಕಾರಿ ಶಾಲೆಗಳ ಶಿಕ್ಷಕರದು ಬೇರೆಯದೇ ಸಮಸ್ಯೆ. ಸರ್ಕಾರದ ಕಣ್ಣಿಗೆ ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವ ಬೋಧಕರಂತೆ ಕಾಣಿಸದೆ, ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಗುಮಾಸ್ತರಂತೆ ಕಾಣಿಸಿರುವುದೇ ಹೆಚ್ಚು. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಶಿಕ್ಷಣ ಇಲಾಖೆ ಜಡ್ಡುಗಟ್ಟಿದೆ. ಶೈಕ್ಷಣಿಕ ವಾತಾವರಣವನ್ನು ಚುರುಕುಗೊಳಿಸುವ, ಹುಮ್ಮಸ್ಸು ತುಂಬುವ ಸಮರ್ಥ ಸಚಿವರು ಕೂಡ ಶಿಕ್ಷಣ ಇಲಾಖೆಗೆ ದೊರೆಯುತ್ತಿಲ್ಲ. ಪ್ರಸಕ್ತ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಗೆ ಪೂರ್ಣಾವಧಿ ಸಚಿವರೇ ಇಲ್ಲ. ಶಿಕ್ಷಣ ಖಾತೆಯು ಮುಖ್ಯಮಂತ್ರಿಗಳ ಬಳಿಯೇ ಉಳಿದಿದೆ. ಶಿಕ್ಷಣಕ್ಷೇತ್ರದ ಬಗ್ಗೆ ಸರ್ಕಾರಕ್ಕಿರುವ ಉದಾಸೀನವನ್ನು ಸೂಚಿಸಲು ಇದಕ್ಕಿಂತ ಬೇರೇನು ನಿದರ್ಶನ ಬೇಕು. ಪೂರ್ಣಾವಧಿ ಶಿಕ್ಷಣ ಸಚಿವರೊಬ್ಬರನ್ನು ನೇಮಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ಕರ್ನಾಟಕದ ಉತ್ತರ–ದಕ್ಷಿಣ ಜಿಲ್ಲೆಗಳ ನಡುವೆ ಇರುವ ಶೈಕ್ಷಣಿಕ ತಾರತಮ್ಯಕ್ಕೆ ನಿಖರ ಕಾರಣಗಳನ್ನು ಕಂಡುಕೊಳ್ಳಲು ವೈಜ್ಞಾನಿಕ ಅಧ್ಯಯನ ನಡೆಸುವುದನ್ನು ತುರ್ತು ಆದ್ಯತೆಯಾಗಿ ‍ಪರಿಗಣಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT