ಈ ಬಾರಿಯ ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಎರಡು ಕಾರಣಗಳಿಗಾಗಿ ಮುಖ್ಯವಾದುದು. ಕೊರೊನಾ ಸೋಂಕಿನ ಬಿಕ್ಕಟ್ಟಿನ ನಡುವೆಯೇ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳು ಸುರಕ್ಷಿತ ವಾತಾವರಣದಲ್ಲಿ ಯಶಸ್ವಿಯಾಗಿ ನಡೆದಿರುವುದು ಮೊದಲ ವಿಶೇಷ. ಫಲಿತಾಂಶದ ಪಟ್ಟಿಯಲ್ಲಿ ಈವರೆಗೆ ಮುಂಚೂಣಿಯಲ್ಲಿರುತ್ತಿದ್ದ ಜಿಲ್ಲೆಗಳ ಸ್ಥಾನದಲ್ಲಿ ಹೊಸ ಹೆಸರುಗಳು ಕಾಣಿಸಿಕೊಂಡಿರುವುದು ಮತ್ತೊಂದು ಗಮನಾರ್ಹ ಸಂಗತಿ.
ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ಕೊಂಚ ಕಡಿಮೆಯಾಗಿದೆ. ಆದರೆ, ಸವಾಲಿನ ಸಂದರ್ಭದಲ್ಲಿ ನಡೆದ ಪರೀಕ್ಷೆಯಿಂದ ಹೊಮ್ಮಿರುವ ಶೇ 71.80ರ ಸಾಧನೆ ಕಡಿಮೆಯದೇನಲ್ಲ. ಸುಮಾರು ಮೂರು ತಿಂಗಳ ಕಾಲ ಶಾಲೆಗಳಿಂದ ದೂರವಿದ್ದ ವಿದ್ಯಾರ್ಥಿಗಳು, ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲೇ ಪರೀಕ್ಷೆ ಬರೆಯುವ ಸವಾಲನ್ನು ಎದುರಿಸಿ ಯಶಸ್ವಿಯಾಗಿರುವುದು ರಾಜ್ಯದ ಶಿಕ್ಷಣ ಇತಿಹಾಸದಲ್ಲಿ ಮಹತ್ವದ ವಿದ್ಯಮಾನವಾಗಿ ಉಳಿಯಲಿದೆ.
ನೆರೆಯ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳ ಪರೀಕ್ಷಾ ಮಂಡಳಿಗಳು ಎಸ್ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದುಪಡಿಸಿದ್ದರೂ ಕರ್ನಾಟಕ ಸರ್ಕಾರ ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡಿತ್ತು. ದೀರ್ಘಕಾಲ ಶಾಲೆಗಳಿಂದ ದೂರವುಳಿದಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ದಿಸೆಯಲ್ಲಿ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು. ರೋಗಭೀತಿಯ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎನ್ನುವ ಸಾರ್ವಜನಿಕರ ಅಭಿಪ್ರಾಯದ ನಡುವೆಯೂ ಪರೀಕ್ಷೆಗಳು ಸುರಕ್ಷಿತವಾಗಿ ನಡೆದಿದ್ದವು.
ಸೋಂಕಿನ ಆತಂಕವನ್ನು ಮೆಟ್ಟಿನಿಂತು ಪರೀಕ್ಷೆ ಬರೆದ 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಅವರಿಗೆ ಪರೀಕ್ಷೆ ಬರೆಯಲು ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಟ್ಟ ಶಿಕ್ಷಣ ಇಲಾಖೆ ಹಾಗೂ ಮಕ್ಕಳನ್ನು ಸವಾಲಿನ ಕೆಲಸಕ್ಕೆ ಸಜ್ಜುಗೊಳಿಸಿದ ಪೋಷಕರಿಗೆ ಪರೀಕ್ಷಾ ಪ್ರಕ್ರಿಯೆಯ ಯಶಸ್ಸು ಸಲ್ಲಬೇಕು.
ಫಲಿತಾಂಶದ ಪಟ್ಟಿಯಲ್ಲಿ ಸಾಮಾನ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಮುಂಚೂಣಿಯಲ್ಲಿ ಇರುತ್ತಿದ್ದವು. ಆದರೆ ಈ ಬಾರಿ ‘ಎ’ ಗ್ರೇಡ್ ಪಡೆದ ಹತ್ತು ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಹಾಗೂ ಮಧುಗಿರಿಯಂತಹ ಶೈಕ್ಷಣಿಕ ಜಿಲ್ಲೆಗಳೂ ಕಾಣಿಸಿಕೊಂಡಿರುವುದು ಕುತೂಹಲಕರ ಸಂಗತಿ. ಮಂಡ್ಯ, ಚಿತ್ರದುರ್ಗ, ಕೋಲಾರ ಜಿಲ್ಲೆಗಳ ಸಾಧನೆ ಕೂಡ ಉತ್ತಮವಾಗಿದೆ.
ಉತ್ತಮ ಫಲಿತಾಂಶಕ್ಕಾಗಿ ಜಿಲ್ಲೆಗಳ ನಡುವೆ ನಡೆಯುತ್ತಿರುವ ಈ ಸ್ಪರ್ಧೆ ಆರೋಗ್ಯಕರವಾದುದು. ಆದರೆ, ಕಳೆದ ವರ್ಷ ಕೊನೆಯ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿಯೂ ಕೊನೆಯಲ್ಲಿಯೇ ಉಳಿದಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಬೆಳಗಾವಿ, ಗದಗ ಹಾಗೂ ಹಾವೇರಿಯು ಫಲಿತಾಂಶದ ಪಟ್ಟಿಯಲ್ಲಿ ಕೊನೆಯಲ್ಲಿರುವ ಜಿಲ್ಲೆಗಳು. ಬಾಲಕಿಯರು ಎಂದಿನಂತೆ ಈ ವರ್ಷವೂ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶದ ಮತ್ತೊಂದು ಕುತೂಹಲಕರ ಸಂಗತಿ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಾಧಿಸಿದ್ದರೂ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಸಾಧನೆಯಲ್ಲಿ ಮುಂದಿರುವುದು. ಕನ್ನಡ ಮಾಧ್ಯಮದ ಶೇ 70.49ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣ ಶೇ 84.98ರಷ್ಟು. ಈ ಗಣನೀಯ ವ್ಯತ್ಯಾಸ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಅಡಿಪಾಯ ಅಲುಗಾಡುತ್ತಿರುವ ಆತಂಕಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೆ ಪೂರಕವಾಗಿಯೇ ಸರ್ಕಾರಿ ಶಾಲೆಗಳಿಗಿಂತಲೂ ಅನುದಾನರಹಿತ ಶಾಲೆಗಳ ಸಾಧನೆ ಗಮನಸೆಳೆಯುವಂತಿರುವುದನ್ನು ಗಮನಿಸಬಹುದು. ಅಂಕಿಅಂಶಗಳ ಹೊರತಾಗಿಯೂ ಪ್ರಸಕ್ತ ಎಸ್ಎಸ್‌ಎಲ್‌ಸಿ ಫಲಿತಾಂಶವು ಶೈಕ್ಷಣಿಕ ವಲಯದಲ್ಲಿ ಭರವಸೆ ಮೂಡಿಸುವಂತಹದ್ದು.
ಈ ಬಾರಿಯ ಪರೀಕ್ಷೆಯು ರೂಢಿಗತ ವಾರ್ಷಿಕ ಪ್ರಕ್ರಿಯೆಯಾಗಿರದೆ, ಸರ್ಕಾರ ಹಾಗೂ ಸಾರ್ವಜನಿಕರ ಸಂಕಲ್ಪಶಕ್ತಿಯ ಪ್ರತೀಕವಾಗುವ ಮೂಲಕ ದೇಶದ ಗಮನಸೆಳೆದಿದೆ. ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವಲ್ಲಿ ಯಶಸ್ವಿಯಾಗಿರುವ ಸರ್ಕಾರವು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶ ಪಡೆಯುವ ಪ್ರಕ್ರಿಯೆಯೂ ಯಾವುದೇ ಗೊಂದಲವಿಲ್ಲದೆ ನಡೆಯುವಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.