ADVERTISEMENT

ಸಂಪಾದಕೀಯ: ಸರ್ಕಾರದ ಬಲವಂತದ ಕ್ರಮವು ಜನಸಂಖ್ಯಾ ಸ್ವರೂಪದ ಅಸಮತೋಲನ ಪರಿಹರಿಸದು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 21:01 IST
Last Updated 27 ಅಕ್ಟೋಬರ್ 2024, 21:01 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ದೇಶದ ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆ ಕುರಿತು ವ್ಯಕ್ತಪಡಿಸಿರುವ ಕಳವಳ ಹೊಸತೇನೂ ಅಲ್ಲ. ನಾಯ್ಡು ಅವರು ಜನಸಂಖ್ಯಾ ಸ್ವರೂಪದ ಕುರಿತು ಮಾತನಾಡಿದ್ದರೆ, ಸ್ಟಾಲಿನ್ ಅದೇ ವಿಚಾರವನ್ನು ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳದ ಪ್ರಮಾಣ ಕುಸಿಯುತ್ತಿದೆ ಎಂಬುದರ ಕುರಿತು ಈ ಹಿಂದೆಯೂ ಹಲವರು ಮಾತನಾಡಿದ್ದಾರೆ. ದೇಶದಲ್ಲಿ ಫಲವಂತಿಕೆಯ ಪ್ರಮಾಣ ಕುಸಿಯುತ್ತಲೇ ಇದೆ. ಈಗ ಇರುವ ಜನಸಂಖ್ಯೆಯನ್ನು ಇದೇ ಮಟ್ಟದಲ್ಲಿ ಉಳಿಸಿಕೊಳ್ಳಬೇಕಾದರೆ ಫಲವಂತಿಕೆಯ ಮಟ್ಟವು 2.1ರಷ್ಟು ಇರಬೇಕು. ಆದರೆ, ದೇಶದಲ್ಲಿ ಈಗ ಫಲವಂತಿಕೆಯು ಈ ಮಟ್ಟದ ಸಮೀಪದಲ್ಲಿದೆ ಅಥವಾ ಅದಕ್ಕಿಂತ ಕೆಳಗೆ ಇದೆ. ದಕ್ಷಿಣದ ರಾಜ್ಯಗಳಲ್ಲಿ ಈ ಮಟ್ಟವು 1.7ರಷ್ಟು ಅಥವಾ ಅದರ ಸಮೀಪದಲ್ಲಿದೆ. ಆದರೆ ಉತ್ತರದ ಎಲ್ಲ ರಾಜ್ಯಗಳಲ್ಲಿ ಈ ಮಟ್ಟವು 2ಕ್ಕಿಂತ ಮೇಲೆಯೇ ಇದೆ. ಈ ಅಸಮತೋಲನವು ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಮತ್ತು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗಿದೆ.

ಒಂದು ಪ್ರಮುಖ ಪರಿಣಾಮ ಏನೆಂದರೆ, 2026ರ ಬಳಿಕ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆದರೆ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆ; ಉತ್ತರದ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ. ಈಗಿನ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ನಡೆದರೂ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ರಾಜಕೀಯವಾಗಿ ದಕ್ಷಿಣದ ರಾಜ್ಯಗಳಿಗೆ ಈಗ ಇರುವ ಮಹತ್ವವೇ ಕಡಿಮೆ. ಮುಂದೆ ಅದು ಇನ್ನಷ್ಟು ಕುಸಿಯಲಿದೆ. ಕೇಂದ್ರದ ತೆರಿಗೆ ಅನುದಾನದ ಹಂಚಿಕೆಯಲ್ಲಿಯೂ ದಕ್ಷಿಣದ ರಾಜ್ಯಗಳ ಪಾಲು ಕಡಿಮೆಯಾಗಲಿದೆ. ದಕ್ಷಿಣದ ರಾಜ್ಯಗಳು ತಮಗಾಗಿ ಮತ್ತು ರಾಷ್ಟ್ರಕ್ಕಾಗಿ ಉತ್ತಮ ಸಾಧನೆ ಮಾಡಿವೆ. ಅದೇ ಕಾರಣಕ್ಕೆ ಈ ರಾಜ್ಯಗಳು ಹಿನ್ನಡೆಗೆ ಒಳಗಾಗಲು ಅವಕಾಶ ಕೊಡಬಾರದು. ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕೆಲವು ರಾಜ್ಯಗಳ ಅಭಿವೃದ್ಧಿಗೆ ತಮ್ಮ ಸಂಪನ್ಮೂಲವನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಒಯ್ಯಬಾರದು ಎಂದು ಕೆಲವು ರಾಜ್ಯಗಳು ಈಗಾಗಲೇ ಹೇಳಿವೆ. ಇಂತಹ ವ್ಯವಸ್ಥೆಯು ಈಗಾಗಲೇ ಒತ್ತಡದಲ್ಲಿರುವ ಒಕ್ಕೂಟ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡ ಹೇರುತ್ತದೆ. ಜನಸಂಖ್ಯಾ ಸ್ವರೂಪ ಮತ್ತು ಆರ್ಥಿಕ ವಿಚಾರದಲ್ಲಿನ ಕಳವಳಗಳು ಉತ್ತರ ಮತ್ತು ದಕ್ಷಿಣದ ನಡುವಣ ರಾಜಕೀಯ ಬಿರುಕನ್ನು ಇನ್ನಷ್ಟು ಗಾಢ
ಗೊಳಿಸುತ್ತವೆ.

ADVERTISEMENT

ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ನಾಯ್ಡು ಮತ್ತು ಸ್ಟಾಲಿನ್‌ ಅವರು ತಮ್ಮ ರಾಜ್ಯಗಳ ಜನರಿಗೆ ಕರೆ ಕೊಟ್ಟಿದ್ದಾರೆ. ಇದು ಉತ್ತಮವಾದ ಮತ್ತು ಕಾರ್ಯಸಾಧುವಾದ ಪರಿಹಾರವೇ ಎಂಬುದು ಚರ್ಚಾರ್ಹ ವಿಚಾರ. ಜನಸಂಖ್ಯಾ ಸ್ವರೂಪದ ಅಸಮ
ತೋಲನದಿಂದ ಆಗುವ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರು ವೃದ್ಧಾಪ್ಯದತ್ತ ಸಾಗುವುದರಿಂದ ಆಗುವ ಸಮಸ್ಯೆಗಳನ್ನು ಕೂಡ ಮಧ್ಯಮಾವಧಿಯಲ್ಲಿ ಪರಿಹರಿಸಿಕೊಳ್ಳಬೇಕು. ಮಕ್ಕಳು ಎಷ್ಟಿರಬೇಕು ಎಂಬುದು ದಂಪತಿಯ ವೈಯಕ್ತಿಕ ಮತ್ತು ಕೌಟುಂಬಿಕ ಆಯ್ಕೆಗಳು, ಶಿಕ್ಷಣ ಮಟ್ಟ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಸನ್ನಿವೇಶಗಳ ಮೇಲೆ ಅವಲಂಬಿತ. ಸರ್ಕಾರದ ಹಸ್ತಕ್ಷೇಪವು ಇಲ್ಲಿ ಯಾವುದೇ ಪರಿಣಾಮ ಉಂಟು ಮಾಡದು. ಒಂದೇ ಮಗು ನೀತಿಯನ್ನು ಚೀನಾ ದೇಶವು ಜಾರಿಗೆ ತಂದಾಗ ಅದು ನಕಾರಾತ್ಮಕ ಪರಿಣಾಮ ಬೀರಿತು. ಈ ನಿಯಮವನ್ನು ಸಡಿಲಿಸಿದ ಬಳಿಕವೂ ಫಲವಂತಿಕೆ ಮಟ್ಟವು ಏರಿಕೆ ಆಗಲಿಲ್ಲ. ಇತರ ಕೆಲವು ದೇಶಗಳಲ್ಲಿ ಕೂಡ ಇದೇ ರೀತಿ ಆಗಿದೆ. ಬಲವಂತದ ನೀತಿಯು ಪ್ರಜಾಸತ್ತಾತ್ಮಕ ಅಲ್ಲ. ಇದು ವ್ಯಕ್ತಿ, ಕುಟುಂಬ ಅದರಲ್ಲೂ ವಿಶೇಷವಾಗಿ ಮಹಿಳೆಗೆ ಹಾನಿ ಉಂಟು ಮಾಡುತ್ತದೆ. ಇಬ್ಬರು ಮುಖ್ಯಮಂತ್ರಿಗಳು ದೇಶದ ಜನಸಂಖ್ಯಾ ಸ್ವರೂಪದ ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ, ಇದೊಂದು ಬೆಳೆಯುತ್ತಲೇ ಇರುವ ಮತ್ತು ಗಂಭೀರವಾದ ಸಮಸ್ಯೆ ಎಂಬುದು ಅರಿವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.