ADVERTISEMENT

ರ್‍ಯಾಗಿಂಗ್‌ ಪಿಡುಗು ತಡೆಯಲು ಮತ್ತಷ್ಟು ಕಠಿಣ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:00 IST
Last Updated 22 ಆಗಸ್ಟ್ 2019, 20:00 IST
ragging
ragging   

ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಸೈಫಾಯ್‌ನಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ರ್‍ಯಾಗಿಂಗ್‌ಗೆ ಒಳಪಡಿಸಿರುವುದು ತೀವ್ರ ಖಂಡನೀಯ. ಸುಮಾರು 150 ವಿದ್ಯಾರ್ಥಿಗಳ ತಲೆ ಬೋಳಿಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಮೆರವಣಿಗೆ ಮಾಡಿಸಿರುವುದು ಹಾಗೂ ಆ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗೆ ತಲೆ ತಗ್ಗಿಸಿ ಸಲಾಂ ಹೊಡೆದು ಓಡಾಡುವಂತೆ ಮಾಡಿರುವುದರ ವಿಡಿಯೊ ಬಹಿರಂಗಗೊಂಡಿದೆ. ಭದ್ರತಾ ಸಿಬ್ಬಂದಿ ಇದನ್ನು ಮೌನವಾಗಿ ನೋಡುತ್ತಿರುವ ದೃಶ್ಯವೂ ಒಂದು ವಿಡಿಯೊದಲ್ಲಿದೆ. ಈ ವಿಶ್ವವಿದ್ಯಾಲಯದಲ್ಲಿ ರ್‍ಯಾಗಿಂಗ್‌ಯಾವುದೇ ಭಿಡೆಯಿಲ್ಲದೆ ನಡೆಯುತ್ತಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಬೋಳು ತಲೆಯಲ್ಲಿ ವಿದ್ಯಾರ್ಥಿಗಳು ಮರುದಿನ ತರಗತಿಗೆ ಹಾಜರಾಗಿದ್ದರಿಂದ ರ್‍ಯಾಗಿಂಗ್‌ ವಿಷಯ ಬಹಿರಂಗಗೊಂಡಿದೆಯೇ ಹೊರತು, ಯಾವ ವಿದ್ಯಾರ್ಥಿಯೂ ದೂರು ನೀಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ರ್‍ಯಾಗಿಂಗ್‌ ಹೆಸರಿನಲ್ಲಿ ಉತ್ತರಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ವರದಿಗಳು ಪ್ರತಿವರ್ಷವೂ ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅಲಹಾಬಾದ್‌ನ ಮೋತಿಲಾಲ್‌ ನೆಹರೂ ಸರ್ಕಾರಿ ವೈದ್ಯಕೀಯ ಕಾಲೇಜ್‌ನಲ್ಲಿ 100 ಮಂದಿ ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳ ತಲೆ ಬೋಳಿಸಿ ಹೀಗೆಯೇ ನಡುಬಗ್ಗಿಸಿ ಮುಜುರಾ ಮಾಡುವ ವಿಡಿಯೊ ಬಹಿರಂಗವಾಗಿತ್ತು. ರ್‍ಯಾಗಿಂಗ್‌ ಅನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಥಳಿಸಲಾಗಿತ್ತು. ನವೆಂಬರ್‌ನಲ್ಲಿ ಸಹಾರನ್‌ಪುರದ ಜಿಲ್ಲಾ ಮೆಡಿಕಲ್‌ ಕಾಲೇಜಿನಲ್ಲಿ ರ್‍ಯಾಗಿಂಗ್‌ಹಾಗೂ ಹಲ್ಲೆ ಪ್ರಕರಣ ವರದಿಯಾಗಿತ್ತು. ರ್‍ಯಾಗಿಂಗ್‌ನಡೆಸಿದ 52 ಹಿರಿಯ ವಿದ್ಯಾರ್ಥಿಗಳನ್ನು ತರಗತಿಯಿಂದ ಒಂದು ತಿಂಗಳು ಮತ್ತು ಹಾಸ್ಟೆಲ್‌ನಿಂದ ಆರು ತಿಂಗಳ ಕಾಲ ಸಸ್ಪೆಂಡ್‌ ಮಾಡಲಾಗಿತ್ತು. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಇತ್ತೀಚೆಗೆ ತೀರಾ ಹದಗೆಟ್ಟಿದ್ದು, ಗುಂಪುಗೂಡಿ ಹಲ್ಲೆ ನಡೆಸುವ ಪ್ರಕರಣಗಳೂ ಪದೇ ಪದೇ ನಡೆಯುತ್ತಿವೆ. ಇದರ ನಡುವೆ ವೈದ್ಯಕೀಯ ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ರ್‍ಯಾಗಿಂಗ್‌ ಪ್ರಕರಣಗಳನ್ನು ಅಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಕಿರಿಯ ವಿದ್ಯಾರ್ಥಿಗಳು ತಮ್ಮ ಸುರಕ್ಷೆಯ ದೃಷ್ಟಿಯಿಂದ ದೂರು ನೀಡುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ.ಸೈಫಾಯ್‌ನ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ, ಈ ಘಟನೆಯ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದು, ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ರ್‍ಯಾಗಿಂಗ್‌ಪ್ರಕರಣಗಳಲ್ಲಿ ಕಿರುಕುಳಕ್ಕೆ ಒಳಗಾದ ಕಿರಿಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದೂರು ನೀಡಲು ಹೋಗುವುದಿಲ್ಲ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾಗುವುದೇ ಇಲ್ಲ.

ಹಾಗೆ ನೋಡಿದರೆ, ಇದು ಉತ್ತರಪ್ರದೇಶವೊಂದಕ್ಕೇ ಸೀಮಿತವಾದ ಸಮಸ್ಯೆಯಲ್ಲ. ಕರ್ನಾಟಕ ಸಹಿತ ಬಹುತೇಕ ಎಲ್ಲ ರಾಜ್ಯಗಳಲ್ಲೂ ಒಂದಲ್ಲ ಒಂದು ವೈದ್ಯಕೀಯ ಕಾಲೇಜಿನಲ್ಲಿರ್‍ಯಾಗಿಂಗ್‌ಪಿಡುಗು ಪ್ರತಿವರ್ಷವೂ ಸುದ್ದಿ ಮಾಡುತ್ತದೆ. ಕಳೆದ ವರ್ಷ ದೇಶದಾದ್ಯಂತ 170 ವೈದ್ಯಕೀಯ ಕಾಲೇಜುಗಳಲ್ಲಿ ರ್‍ಯಾಗಿಂಗ್‌ ಹೆಸರಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಬಗ್ಗೆ ದೂರುಗಳು ದಾಖಲಾಗಿವೆ. ಇದರಲ್ಲೂ ಅತ್ಯಧಿಕ ಸಂಖ್ಯೆಯ ದೂರುಗಳು ಉತ್ತರಪ್ರದೇಶದಿಂದಲೇ ಬಂದಿವೆ. ರ್‍ಯಾಗಿಂಗ್‌ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾ ಕೂಡಾರ್‍ಯಾಗಿಂಗ್‌ತಡೆಗೆ ನಿಯಮಾವಳಿಗಳನ್ನು ರೂಪಿಸಿವೆ. ಯುಜಿಸಿ ನಿಯಮಗಳ ಪ್ರಕಾರ, ಪ್ರತಿ ಕಾಲೇಜಿನಲ್ಲೂ ರ್‍ಯಾಗಿಂಗ್‌ ತಡೆ ಸಮಿತಿಯನ್ನು ರಚಿಸಬೇಕು. ಸಾಮೂಹಿಕವಾಗಿ 150 ವಿದ್ಯಾರ್ಥಿಗಳ ತಲೆ ಬೋಳಿಸಿರುವುದನ್ನು ನೋಡಿದರೆ, ಸೈಫಾಯ್‌ನ ವೈದ್ಯಕೀಯ ಕಾಲೇಜಿನಲ್ಲಿ ಇಂತಹ ಸಮಿತಿಯೂ ಇದ್ದಂತೆ ಕಾಣಿಸುತ್ತಿಲ್ಲ. ವೈದ್ಯಕೀಯ ಕಾಲೇಜ್‌ಗಳಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ಬೆದರಿಸಿ ಹಿರಿಯ ವಿದ್ಯಾರ್ಥಿಗಳು ತಮ್ಮ ಅಸೈನ್‌ಮೆಂಟ್‌ ಬರೆಸುವುದು, ಹೊರಗಿನಿಂದ ಆಹಾರ ಪದಾರ್ಥಗಳನ್ನು ತರಿಸುವುದು, ಜೇಬಿನಿಂದ ಹಣ ಎಗರಿಸುವುದು... ಹೀಗೆ ನಾನಾ ಬಗೆಯ ಕಿರುಕುಳ ನೀಡುವುದೂ ಇದೆ. ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಗಳು ಭಯದಿಂದ ದೂರು ನೀಡದೇ ಇರುವಂತಹ ವಾತಾವರಣ ಇರುವ ಹಿನ್ನೆಲೆಯಲ್ಲಿ, ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಟ್ಟು, ಯಾರೇ ಆದರೂ ತಮ್ಮ ಹೆಸರು ನಮೂದಿಸದೆ ದೂರು ನೀಡಲು ಅನುಕೂಲ ಮಾಡಿಕೊಡುವುದು ಒಳ್ಳೆಯದು. ಕಾಲೇಜುಗಳಲ್ಲಿ ಈ ಕುರಿತು ಆಪ್ತಸಮಾಲೋಚಕರ ನೇಮಕದ ಅಗತ್ಯವೂ ಇದೆ. ಜೊತೆಗೆ ‍ರ್‍ಯಾಗಿಂಗ್ ಹಾವಳಿ ತಡೆಗೆ ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತಷ್ಟು ಬಿಗಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಗಂಭೀರವಾಗಿ ಯೋಚಿಸಬೇಕು. ಶಿಕ್ಷೆಯ ಭಯ ಹೆಚ್ಚಿಸುವುದು ಕೂಡ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT