ADVERTISEMENT

ಸಂಪಾದಕೀಯ: ಪಟಾಕಿ ಅಕ್ರಮ–ಕಾನೂನು ಬಿಗಿಯಾಗಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ

ಸಂಪಾದಕೀಯ
Published 9 ಅಕ್ಟೋಬರ್ 2023, 21:38 IST
Last Updated 9 ಅಕ್ಟೋಬರ್ 2023, 21:38 IST
Edit 10.10.2023.jpg
Edit 10.10.2023.jpg   

ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 14 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಕೂಲಿಯ ಆಸೆಗೆ ತಮಿಳುನಾಡಿನಿಂದ ಕೆಲಸಕ್ಕೆ ಬಂದಿದ್ದ ಯುವಕರು, ವಿದ್ಯಾರ್ಥಿಗಳು ಪಟಾಕಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಜೀವ ತೆತ್ತಿದ್ದಾರೆ. ಕರ್ನಾಟಕ– ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ‘ಬಾಲಾಜಿ ಟ್ರೇಡರ್ಸ್‌’ ಹೆಸರಿನ ಮಳಿಗೆಯಲ್ಲಿ ಸಂಭವಿಸಿರುವ ಪಟಾಕಿ ಸ್ಫೋಟದ ದುರಂತವು ನೆರೆಯ ತಮಿಳುನಾಡಿನ ವಿವಿಧ ಗ್ರಾಮಗಳ ಕೆಲವು ಕುಟುಂಬಗಳನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಪಟಾಕಿ ಮಾರಾಟದ ವಹಿವಾಟಿನಲ್ಲಿ ಏರಿಕೆಯಾಗುವುದು ವಾಡಿಕೆ. ಅದರ ಜತೆಯಲ್ಲೇ ಪಟಾಕಿ ದಾಸ್ತಾನು ಮಾಡಿದ ಗೋದಾಮುಗಳು, ಮಾರಾಟ ಮಳಿಗೆಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಸಾವು, ನೋವು ಸಂಭವಿಸುವುದೂ ಆಗಾಗ ನಡೆಯುತ್ತಲೇ ಇದೆ. ಆಗಸ್ಟ್‌ ತಿಂಗಳಲ್ಲಿ ಹಾವೇರಿ ತಾಲ್ಲೂಕಿನ ಆಲದಕಟ್ಟಿಯ ಹೊರವಲಯದ ಹಾವೇರಿ– ಹಾನಗಲ್‌ ಮುಖ್ಯರಸ್ತೆಯ ಪಕ್ಕದ ಪಟಾಕಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ನಾಲ್ವರು ಸಜೀವ ದಹನಗೊಂಡಿದ್ದರು. ಅತಿಯಾದ ಶಬ್ದ ಹೊಮ್ಮಿಸುವ ಹಾಗೂ ಹೊಗೆ ಸೂಸುವ ಪಟಾಕಿಗಳ ಮಾರಾಟಕ್ಕೆ ನಿಷೇಧವಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅಂತಹ ಪಟಾಕಿಗಳ ಮಾರಾಟವನ್ನು ನಿಷೇಧಿಸಿರುವ ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಿರ್ದಿಷ್ಟ ಮಾನದಂಡಗಳ ವ್ಯಾಪ್ತಿಗೆ ಒಳಪಡುವ ‘ಹಸಿರು ಪಟಾಕಿ’ಗಳ ಮಾರಾಟಕ್ಕಷ್ಟೇ ಅನುಮತಿ ನೀಡಬೇಕೆಂಬ ಮಾರ್ಗಸೂಚಿಗಳನ್ನು ನಿಯಮಿತವಾಗಿ ಹೊರಡಿಸುತ್ತಲೇ ಇವೆ. ಆದರೆ, ಎಲ್ಲ ಮಾರ್ಗ
ಸೂಚಿಗಳನ್ನೂ ಗಾಳಿಗೆ ತೂರಿ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಲೇ ಇದೆ. ನೆರೆಯ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ತಯಾರಿಕೆಯ ಉದ್ಯಮ ವ್ಯಾಪಕವಾಗಿ ಬೆಳೆದಿದೆ. ಲಾಭದ ಆಸೆಗೆ ಅಲ್ಲಿಂದ ಕಡಿಮೆ ದರಕ್ಕೆ ಪಟಾಕಿ ಖರೀದಿಸಿ ತಂದು, ನಿಯಮ ಮೀರಿ ದಾಸ್ತಾನು ಮಾಡಿಕೊಳ್ಳುವ ದೊಡ್ಡ ಜಾಲವೇ ಇದೆ. ಅತ್ತಿಬೆಲೆಯ ಗಡಿ ಭಾಗದಲ್ಲೇ ಅಂತಹ ನೂರಾರು ಮಳಿಗೆಗಳಿವೆ. ಬೆಂಗಳೂರು ನಗರದ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲೂ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿ, ಮಾರಾಟ ಮಾಡುತ್ತಿರುವ ಆರೋಪಗಳೂ ಇವೆ.

ಪಟಾಕಿ ಮಾರಾಟ ಮತ್ತು ದಾಸ್ತಾನಿಗೆ ರಾಜ್ಯದಲ್ಲಿ ಎರಡು ಬಗೆಯ ಪರವಾನಗಿಗಳನ್ನು ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮೂಲಕ ಪರವಾನಗಿ ನೀಡುವ ವ್ಯವಸ್ಥೆ ಇದೆ. ಪಟಾಕಿಗಳ ತಯಾರಿಕೆ, ಬೃಹತ್‌ ಪ್ರಮಾಣದ ದಾಸ್ತಾನು ಚಟುವಟಿಕೆ ನಡೆಸಲು ಜಿಲ್ಲಾಡಳಿತದ ನಿರಾಕ್ಷೇಪಣಾ ಪತ್ರದೊಂದಿಗೆ (ಎನ್‌ಒಸಿ) ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯು (ಪಿಇಎಸ್‌ಒ) ಪರವಾನಗಿ ನೀಡುತ್ತದೆ. ಈ ಪ್ರಕರಣದಲ್ಲಿ ಬಾಲಾಜಿ ಟ್ರೇಡರ್ಸ್‌ ಮಾಲೀಕರಾದ ರಾಮಸ್ವಾಮಿ ರೆಡ್ಡಿ ಮತ್ತು ನವೀನ್‌ ರೆಡ್ಡಿ ಅಕ್ರಮವಾಗಿ ಎನ್‌ಒಸಿಗಳನ್ನು ಪಡೆದು ಪಟಾಕಿ ಮಳಿಗೆ ನಡೆಸಲು ತಾತ್ಕಾಲಿಕ ಪರವಾನಗಿ ಪಡೆದಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಪಟಾಕಿ ದಾಸ್ತಾನು ಮಳಿಗೆಗೆ ಕಾಯಂ ಪರವಾನಗಿ ಪಡೆಯಲು ಜಿಲ್ಲಾಡಳಿತದಿಂದ ಎನ್‌ಒಸಿ ಪಡೆದು ಪಿಇಎಸ್‌ಒಗೆ ಸಲ್ಲಿಸಿರುವುದು ಕೂಡ ಪರಿಶೀಲನೆ ವೇಳೆ ಗೊತ್ತಾಗಿದೆ. ದುರಂತ ಸಂಭವಿಸಿರುವ ಪಟಾಕಿ ದಾಸ್ತಾನು ಮಳಿಗೆಯ ಅಕ್ಕಪಕ್ಕದಲ್ಲೇ ಮದ್ಯದಂಗಡಿ, ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳಿವೆ. ಎದುರಿನಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಅಂಗಡಿಯ ಮುಂಭಾಗದಲ್ಲೇ ವಿದ್ಯುತ್‌ ಕಂಬವೂ ಇದೆ. ಇಂತಹ ಸ್ಥಳದಲ್ಲಿ ನಿಯಮ ಮೀರಿ ಪಟಾಕಿ ಮಾರಾಟ ಹಾಗೂ ದಾಸ್ತಾನು ಮಳಿಗೆಗೆ ಪರವಾನಗಿ ನೀಡಲಾಗಿದೆ. 1,000 ಕೆ.ಜಿ.ಯಷ್ಟು ಪಟಾಕಿಗಳನ್ನು ಮಾತ್ರ ದಾಸ್ತಾನು ಮಾಡಿಕೊಂಡು, ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿ ನೀಡಲಾಗಿತ್ತು. ಅದನ್ನು ಉಲ್ಲಂಘಿಸಿ ಹತ್ತಾರು ಟನ್‌ಗಳಷ್ಟು ಪಟಾಕಿಗಳನ್ನು ದಾಸ್ತಾನು ಮಾಡಿದ್ದೇ ಇಷ್ಟೊಂದು ದೊಡ್ಡ ದುರಂತ ಸಂಭವಿಸಲು ಕಾರಣ ಎಂದು ತನಿಖೆಯಿಂದ ಬಯಲಾಗಿದೆ. ಪ್ರತಿ ಬಾರಿಯೂ ಇಂತಹ ದುರ್ಘಟನೆಗಳು ನಡೆದಾಗ ಒಂದಷ್ಟು ದಿನಗಳ ಕಾಲ ಸುತ್ತಮುತ್ತಲಿನ ಪಟಾಕಿ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತದೆ. ನಿಯಮ ಪಾಲನೆ ಆಗುತ್ತಿದೆಯೇ ಎಂಬುದರ ತಪಾಸಣೆಯು ಕಣ್ಣೊರೆಸುವ ರೀತಿಯಲ್ಲಿ ನಡೆಯುತ್ತದೆ. ಇದರ ನಡುವೆ ಪಟಾಕಿಗಳ ಅಕ್ರಮ ದಾಸ್ತಾನು ಮತ್ತು ಮಾರಾಟ ಮಾತ್ರ ಅಬಾಧಿತವಾಗಿ ನಡೆಯುತ್ತಲೇ ಇರುತ್ತದೆ. ಪಟಾಕಿಗಳ ಮಾರಾಟ ಮತ್ತು ದಾಸ್ತಾನು ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರವು ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಹರಿದು ಹಂಚಿಹೋಗಿದೆ. ಈ ಕಾರಣಕ್ಕಾಗಿಯೇ ನಿಯಮ, ಮಾರ್ಗಸೂಚಿಗಳ ಪಾಲನೆ ಬಿಗಿಯಾಗಿ ನಡೆಯುತ್ತಿಲ್ಲ. ಕಂದಾಯ ಮತ್ತು ಪೊಲೀಸ್‌ ಇಲಾಖೆಗಳಿಗೆ ಹೆಚ್ಚು ಅಧಿಕಾರವಿದ್ದರೂ ಇಂತಹ ಪ್ರಕರಣಗಳಲ್ಲಿ ಅದನ್ನು ನಿಷ್ಠುರವಾಗಿ ಚಲಾಯಿಸುತ್ತಿಲ್ಲ. ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವುದು, ತಪಾಸಣೆ, ನಿಯಂತ್ರಣವನ್ನು ಕೆಲವು ಇಲಾಖೆಗಳು ಲಂಚದ ದೊಡ್ಡ ಮೂಲವನ್ನಾಗಿ ಮಾಡಿಕೊಂಡಿವೆ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಅತ್ತಿಬೆಲೆಯ ಪ್ರಕರಣದಲ್ಲೂ ಭ್ರಷ್ಟಾಚಾರವೇ ಈ ಪರಿಯ ನಿಯಮ ಉಲ್ಲಂಘನೆಗೆ ಕಾರಣ ಎಂಬ ದೂರುಗಳಿವೆ. ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ತನಿಖೆಯು ಮಳಿಗೆ ಮಾಲೀಕರನ್ನು ಬಂಧಿಸುವುದಕ್ಕೆ ಸೀಮಿತವಾಗಬಾರದು. ಅಕ್ರಮವಾಗಿ ಪರವಾನಗಿ ನೀಡಲು ಕಾರಣರಾದ ಅಧಿಕಾರಿಗಳನ್ನೂ ಪತ್ತೆಹಚ್ಚಿ ಅವರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ರಾಜ್ಯದಾದ್ಯಂತ ಈ ರೀತಿ ಅಕ್ರಮವಾಗಿ ಪಟಾಕಿಗಳ ದಾಸ್ತಾನು, ಮಾರಾಟ ನಡೆಸುತ್ತಿರುವವರನ್ನು ಪತ್ತೆಮಾಡುವ ಕೆಲಸವೂ ಆಗಬೇಕು. ಅದರ ಜತೆಯಲ್ಲೇ ಪಟಾಕಿಗಳ ಸಾಗಣೆ, ದಾಸ್ತಾನು ಮತ್ತು ಮಾರಾಟದಲ್ಲಿ ಅಕ್ರಮ ತಡೆಯಲು ನಿಯಮಗಳನ್ನು ಇನ್ನೂ ಬಿಗಿಗೊಳಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT