ADVERTISEMENT

ಸಂಪಾದಕೀಯ | ವರವರ ರಾವ್‌ಗೆ ಕೊನೆಗೂ ಜಾಮೀನು; ವಿಳಂಬವಾದರೂ ಸಮಾಧಾನ ತಂದ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 19:35 IST
Last Updated 16 ಆಗಸ್ಟ್ 2022, 19:35 IST
   

ಭೀಮಾ– ಕೋರೆಗಾಂವ್‌ ಪ್ರಕರಣದ ಪ್ರಮುಖ ಆರೋಪಿ, 82 ವರ್ಷ ವಯಸ್ಸಿನ ಕವಿ, ಚಳವಳಿಗಾರ ವರವರ ರಾವ್‌ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್‌ನಿಂದ ಶಾಶ್ವತ ಜಾಮೀನು ಸಿಕ್ಕಿದೆ. ಈ ಜಾಮೀನನ್ನು ಪಡೆಯಲು ಸುದೀರ್ಘ ಹಾಗೂ ಅಷ್ಟೇ ಕಠಿಣವಾದ ಕಾನೂನು ಹೋರಾಟವನ್ನೇ ಅವರು ನಡೆಸಬೇಕಾಯಿತು. 2018ರಲ್ಲಿ ಅವರನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಬಂಧಿಸಲಾಗಿತ್ತು ಮತ್ತು 2021ರಲ್ಲಿ ಅವರಿಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನನ್ನು ನೀಡಲಾಗಿತ್ತು.ರಾವ್‌ ಅವರ ಆರೋಗ್ಯದ ಸ್ಥಿತಿಯನ್ನು ನೋಡಿಕೊಂಡು ಕಾಲಕಾಲಕ್ಕೆ ಜಾಮೀನು ಅವಧಿಯನ್ನು ವಿಸ್ತರಿಸುತ್ತಾ ಬರಲಾಗಿತ್ತು. ಈಗ, ಸುಪ್ರೀಂ ಕೋರ್ಟ್‌ ಕೆಲವು ಷರತ್ತುಗಳನ್ನು ವಿಧಿಸಿ ಶಾಶ್ವತ ಜಾಮೀನನ್ನು ಮಂಜೂರು ಮಾಡಿದೆ.

‘ಜಾಮೀನು ಮಂಜೂರು ಮಾಡಲು ವಯಸ್ಸು ಮಾನದಂಡವಾಗಬಾರದು ಮತ್ತು ರಾವ್‌ ಅವರು ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿಲ್ಲ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಾದಿಸಿತ್ತು. ಆದರೆ, ಈ ವಾದವನ್ನು ಕೋರ್ಟ್‌ ಪುರಸ್ಕರಿಸಿಲ್ಲ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ, ಎಂಬತ್ತು ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಹಿರೀಕರಾಗಿದ್ದ ಮತ್ತು ಬುಡಕಟ್ಟು ಹಕ್ಕುಗಳ ಹೋರಾಟಗಾರರೂ ಆಗಿದ್ದ ಸ್ಟ್ಯಾನ್‌ ಸ್ವಾಮಿ ಅವರು ಜಾಮೀನಿನ ನಿರೀಕ್ಷೆಯಲ್ಲಿಯೇ ಕಳೆದ ವರ್ಷದ ಜುಲೈನಲ್ಲಿ ಜೈಲಿನಲ್ಲೇ ಕೊನೆಯುಸಿರು ಎಳೆದಿದ್ದರು.

ಜಾಮೀನು ಎನ್ನುವುದು ಯಾವುದೇ ಆರೋಪಿಯ ಸಹಜ ಹಕ್ಕು ಎಂದೇ ಪರಿಗಣಿತ. ‘ಅನಿವಾರ್ಯ ಸಂದರ್ಭ ಹೊರತುಪಡಿಸಿ ಮಿಕ್ಕೆಲ್ಲ ಪ್ರಕರಣಗಳಲ್ಲಿ ಜಾಮೀನು ನೀಡುವುದೇ ಆದ್ಯತೆಯಾಗಬೇಕು’ ಎಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಸೂಚನೆ ಇದ್ದರೂ ವಿವಿಧ ಕಾರಣಗಳಿಗಾಗಿ ಸಾಮಾನ್ಯ ಪ್ರಕರಣಗಳಲ್ಲೂ ಜಾಮೀನು ಪಡೆಯುವುದು ಕಠಿಣವಾಗಿರುವುದು ವಾಸ್ತವ. ಅದರಲ್ಲಿಯೂ ಯುಎಪಿಎ ಅಡಿ ಪ್ರಕರಣ ಎದುರಿಸುವವರು ಜಾಮೀನು ಪಡೆಯುವುದು ಹೆಚ್ಚು–ಕಡಿಮೆ ಅಸಾಧ್ಯ ಎನ್ನುವಂತಹ ವಾತಾವರಣವಿದೆ. ಸ್ಟ್ಯಾನ್‌ ಸ್ವಾಮಿ ಮತ್ತು ಇದೇ ರೀತಿಯ ಆರೋಪ ಎದುರಿಸಿದ ಇತರರ ಪ್ರಕರಣಗಳಲ್ಲಿ ಇದು ನಿರೂಪಿತ. ಯುಎಪಿಎ ಅಡಿ ಆರೋಪ ಎದುರಿಸುತ್ತಿರುವ ರಾವ್‌ ಅವರಿಗೆ ಜಾಮೀನು ಮಂಜೂರು ಮಾಡುವ ನಿರ್ಧಾರದಲ್ಲಿ ಕೋರ್ಟ್‌ನ ದೃಷ್ಟಿಕೋನ ಕೂಡ ಪ್ರತಿಬಿಂಬಿತವಾಗಿದೆ. ಆರೋಪಿಯ ವಯಸ್ಸು, ಆರೋಗ್ಯದ ಸ್ಥಿತಿ, ಆರೋಪ ನಿಗದಿಯ ಮತ್ತು ವಿಚಾರಣೆಯಲ್ಲಿನ ವಿಳಂಬ ಈ ಎಲ್ಲವನ್ನೂ ಅದು ಗಣನೆಗೆ ತೆಗೆದುಕೊಂಡಿದೆ. ಆದರೆ, ಈ ಜಾಮೀನನ್ನು ಪಡೆಯುವಲ್ಲಿ ತುಂಬಾ ದೀರ್ಘವಾದ ಹಾದಿಯನ್ನೇ ಸವೆಸಬೇಕಾಯಿತು. ಸುಪ್ರೀಂ ಕೋರ್ಟ್‌ವರೆಗೂ ಹೋಗಿ ದೀರ್ಘ ಅವಧಿಯವರೆಗೆ ಕಾನೂನು ಸಮರ ನಡೆಸುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ಜಾಮೀನು ಪಡೆಯುವ ಈ ಪ್ರಕ್ರಿಯೆಯೇ ಹಲವರ ಪಾಲಿಗೆ ಶಿಕ್ಷೆಯಾಗಿ ಪರಿಣಮಿಸುತ್ತದೆ ಮತ್ತು ಸ್ಟ್ಯಾನ್‌ ಸ್ವಾಮಿ ಅವರಂಥವರು ಜಾಮೀನು ಸಿಗುವವರೆಗೆ ಬದುಕುಳಿಯುವುದು ಕೂಡ ಕಷ್ಟವಾಗುತ್ತದೆ.

ADVERTISEMENT

ಯುಎಪಿಎ ಅಡಿ ದಾಖಲಾದ ಪ್ರಕರಣಗಳಲ್ಲಿ ಹುರುಳಿದೆ ಎಂದು ನ್ಯಾಯಾಧೀಶರಿಗೆ ಮೇಲ್ನೋಟಕ್ಕೆ ಅನಿಸಿದರೂ ಸಾಕು, ಆರೋಪಿಗೆ ಜಾಮೀನು ನೀಡುವಂತಿಲ್ಲ ಎನ್ನುತ್ತದೆ ನಿಯಮ. ಹೀಗಾಗಿ ತನ್ನ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ನಿರೂಪಿಸುವತನಕ ಆರೋಪಿ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ಕೆಳಹಂತದ ಕೋರ್ಟ್‌ಗಳಲ್ಲಿ ನ್ಯಾಯಾಧೀಶರು ಸಾಮಾನ್ಯವಾಗಿ ಆರೋಪ ನಿಗದಿ ಆಗುವತನಕ ಪೊಲೀಸರ ವಾದವನ್ನು ಪ್ರಶ್ನಿಸಲು ಹೋಗುವುದಿಲ್ಲ. ಒಮ್ಮೆ ಆರೋಪ ನಿಗದಿಯಾದ ಬಳಿಕ ಜಾಮೀನು ಪಡೆಯುವ ಪ್ರಕ್ರಿಯೆ ಇನ್ನೂ ಜಟಿಲವಾಗುತ್ತದೆ. ವಿಚಾರಣೆ ನಡೆಸುವಲ್ಲಿ ಆಗಿರುವ ವಿಳಂಬವನ್ನು ಕೂಡ ಜಾಮೀನು ನೀಡುವುದಕ್ಕೆ ಮಾನದಂಡವಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು, ಕೆಲವು ಪ್ರಕರಣಗಳ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡಲು ನೆರವಿಗೆ ಬರಬಹುದು. ಭೀಮಾ– ಕೋರೆಗಾಂವ್‌ ಪ್ರಕರಣವಂತೂ ಹೆಚ್ಚಿನ ಕಳವಳವನ್ನು ಉಂಟು ಮಾಡುವಂಥದ್ದು. ಈ ಪ್ರಕರಣದಲ್ಲಿ ಹೊರಿಸಲಾದ ಆರೋಪಗಳು ನಂಬಲು ಅರ್ಹವಾಗಿಲ್ಲ ಮತ್ತು ಆರೋಪಗಳನ್ನು ಪುಷ್ಟೀಕರಿಸಲು ನೆರವಾಗಬಹುದಾದ ಸಾಕ್ಷ್ಯಗಳನ್ನು ಆರೋಪಿಗಳ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಸೇರಿಸಲಾಗಿದೆ ಎಂಬ ವರದಿಗಳೂ ಇವೆ. ಆರೋಪಿಗಳನ್ನು ಜೈಲಿಗೆ ಹಾಕಿ ನಾಲ್ಕು ವರ್ಷಗಳೇ ಕಳೆದಿದ್ದರೂ ಎಲ್ಲ ಪ್ರಕರಣಗಳಲ್ಲಿ ಇದುವರೆಗೆ ದೋಷಾರೋಪ ನಿಗದಿಯಾಗಿಲ್ಲ. ವಿಚಾರಣೆ ಸಹ ನಡೆಯುತ್ತಿಲ್ಲ. ಪರಿಹಾರದ ಯಾವ ಮಾರ್ಗವನ್ನೂ ತೆರೆಯದೆ ಜನರನ್ನು ಇಷ್ಟೊಂದು ದೀರ್ಘಾವಧಿವರೆಗೆ ಸೆರೆಯಲ್ಲಿ ಇಡುವುದು ಘೋರ ಅನ್ಯಾಯ ಮತ್ತು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.