ADVERTISEMENT

ಸಂಪಾದಕೀಯ: ರಾಜ್ಯ ಬೋರ್ಡ್‌ ಪರೀಕ್ಷೆ ಗೊಂದಲ, ಸರ್ಕಾರಕ್ಕೆ ಮುಕ್ತ ಮನಸ್ಸು ಅಗತ್ಯ

ಸಂಪಾದಕೀಯ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
   

ರಾಜ್ಯ ಪಠ್ಯಕ್ರಮದ 5, 8, 9 ಹಾಗೂ 11ನೇ ತರಗತಿಗಳ ಬೋರ್ಡ್‌ ಪರೀಕ್ಷೆಯ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಿ, ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ನಿರ್ಧಾರಗಳಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ–ಒತ್ತಡ ಅನುಭವಿಸುವಂತೆ ಆಗಿರುವುದಲ್ಲದೆ, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಬಿಕ್ಕಟ್ಟು ಉಂಟಾಗಿದೆ; ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶವು ಆರ್‌ಟಿಐ ಕಾಯ್ದೆಯ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದೂ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಹೇಳಿದೆ. ನಿಯಮಗಳನ್ನು ಹೊರತುಪಡಿಸಿ ನೋಡಿದರೂ ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ತಿಕ್ಕಾಟವು ವಿದ್ಯಾರ್ಥಿಗಳನ್ನು ಅನಗತ್ಯ ಗೊಂದಲ ಹಾಗೂ ಒತ್ತಡಕ್ಕೆ ಸಿಲುಕಿಸಿದೆ. ಈ ಪರೀಕ್ಷೆಗಳ ಪ್ರಕಟಿತ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡುವುದರೊಂದಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ ಹಾಗೂ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೂ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಫಲಿತಾಂಶ ಪ್ರಕಟಣೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಹೊರಡಿಸಿದ್ದ ಆದೇಶಕ್ಕೂ ತಡೆ ನೀಡಲಾಗಿದೆ. ಇದರಿಂದಾಗಿ ಇಡೀ ಪರೀಕ್ಷಾ ಪ್ರಕ್ರಿಯೆಯ ಸಿಂಧುತ್ವವೇ ಪ್ರಶ್ನಾರ್ಥಕ ಎನ್ನುವಂತಾಗಿದೆ. ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ ನಡುವೆ ಮೊದಲಿನಿಂದಲೂ ತಿಕ್ಕಾಟ ನಡೆಯುತ್ತಿದೆ. ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ಸಂಗತಿ ಸುಪ್ರೀಂ ಕೋರ್ಟ್‌ ಅಂಗಳ ತಲುಪಿರುವುದರಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠೆಯೇ ಪ್ರಮುಖ ಕಾರಣವಾಗಿರುವಂತಿದೆ. ಖಾಸಗಿ ಶಾಲೆಗಳ ತೀವ್ರ ವಿರೋಧದ ನಡುವೆಯೂ ಬೋರ್ಡ್‌ ಪರೀಕ್ಷೆಗಳನ್ನು ಆತುರಾತುರವಾಗಿ ನಡೆಸಿದ್ದ ಶಿಕ್ಷಣ ಇಲಾಖೆಯು ಮೌಲ್ಯಮಾಪನ ಹಾಗೂ ಫಲಿತಾಂಶವನ್ನು ತರಾತುರಿಯಲ್ಲಿ ಪ್ರಕಟಿಸಿದೆ. ಬೋರ್ಡ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ. ಈ ಹಿಂದಿನ ಸರ್ಕಾರ ಕೂಡ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಉತ್ಸುಕವಾಗಿತ್ತು. ಆ ಉತ್ಸಾಹವನ್ನು ಈಗಿನ ಸರ್ಕಾರ ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಮೂಲಕ ಕಾನೂನು ಸಂಘರ್ಷ ಎದುರಿಸುವಂತಾಗಿದೆ.

ಹತ್ತನೇ ತರಗತಿಗೆ ಮೊದಲು ಬೋರ್ಡ್‌ ಪರೀಕ್ಷೆ ನಡೆಸುವುದರ ಕುರಿತು ರಾಜ್ಯ ಸರ್ಕಾರ ಪುನರ್‌ ಚಿಂತನೆ ನಡೆಸಬೇಕಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಬೋರ್ಡ್‌ ಪರೀಕ್ಷೆಗಳನ್ನು ನಡೆಸಬೇಕೆನ್ನುವ ವಾದ ತಾರ್ಕಿಕವಾಗಿ ನಿರಾಕರಿಸುವುದು ಕಷ್ಟ. ಆದರೆ, ಕಲಿಕೆಯ ಗುಣಮಟ್ಟ ನಿರ್ಣಯಕ್ಕೆ ಬೋರ್ಡ್‌ ಪರೀಕ್ಷೆಯೊಂದೇ ಮಾನದಂಡವಲ್ಲ. ಮಕ್ಕಳ ಮನಸ್ಸಿನ ಮೇಲೆ ಒತ್ತಡ ಉಂಟುಮಾಡುವ ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು ಎನ್ನುವ ಚಿಂತನೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಎಳೆಯರನ್ನು ಒತ್ತಡಕ್ಕೆ ಸಿಲುಕಿಸುವ ಬೋರ್ಡ್‌ ಪರೀಕ್ಷೆಗಳನ್ನು ಒಪ್ಪಿಕೊಳ್ಳುವುದು ಕಷ್ಟ. ಸಾಮಾಜಿಕ ಆಯಾಮದ ದೃಷ್ಟಿಯಿಂದಲೂ ಈ ಪರೀಕ್ಷೆಗಳನ್ನು ನೋಡಬೇಕಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ನಂತರ ವಿದ್ಯಾಭ್ಯಾಸದಿಂದ ದೂರವುಳಿಯುವ ವಿದ್ಯಾರ್ಥಿಗಳನ್ನು ಗಮನಿಸಿದರೆ, ಸಮಾಜದ ದುರ್ಬಲ ವರ್ಗಗಳಿಂದ ಬರುವ ಮಕ್ಕಳಿಗೆ ಬೋರ್ಡ್‌ ಪರೀಕ್ಷೆ ಎನ್ನುವುದು ಪೆಡಂಭೂತದಂತೆ ಭಯ ಹುಟ್ಟಿಸುತ್ತದೆ.

ADVERTISEMENT

ಸ್ಪರ್ಧಾತ್ಮಕ ಶಿಕ್ಷಣದ ಹೆಸರಿನಲ್ಲಿ ನಡೆಯುವ ಈ ಪರೀಕ್ಷೆಗಳು, ಶಿಕ್ಷಣದ ಪ್ರಾಥಮಿಕ ಆಶಯಗಳಲ್ಲೊಂದಾದ ಸಾಮಾಜಿಕ ನ್ಯಾಯಕ್ಕೆ ಪೂರಕವಲ್ಲ. ಹಾಗಾಗಿ, ಹತ್ತನೇ ತರಗತಿಗೆ ಮೊದಲೇ ವಿವಿಧ ಹಂತಗಳಲ್ಲಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಹಟವನ್ನು ಸರ್ಕಾರ ಬಿಡುವುದೇ ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದ ದಿಸೆಯಲ್ಲಿ ಹಟ ಹಿಡಿಯುವುದು ಅಥವಾ ಪ್ರತಿಷ್ಠೆ ಸಾಧಿಸುವುದು ಯಾರಿಗೂ ಸಲ್ಲದು. ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವ್ಯಾಪಕ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆಯುವುದು ಉತ್ತಮ. ಅಧಿಕಾರಿಗಳ ಮಾತುಗಳಿಗಿಂತಲೂ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಪಡೆದು ಸರ್ಕಾರ ಮುಂದುವರಿಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.