ವಿರೋಧ ಪಕ್ಷಗಳ ಕೆಲವು ಪ್ರಮುಖರು, ಪತ್ರಕರ್ತರು ಹಾಗೂ ಇತರ ಕೆಲವರಿಗೆ ಆ್ಯಪಲ್ ಕಂಪನಿಯ ಕಡೆಯಿಂದ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದೆ. ಅವರ ಡಿಜಿಟಲ್ ಉಪಕರಣಗಳನ್ನು ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ಗುರಿಯಾಗಿಸಿಕೊಂಡಿದ್ದಾರೆ ಎಂದು ತಂತ್ರಜ್ಞಾನ ವಲಯದ ಬೃಹತ್ ಕಂಪನಿಯಾಗಿರುವ ಆ್ಯಪಲ್ ಈ ಎಚ್ಚರಿಕೆ ಸಂದೇಶದಲ್ಲಿ ಹೇಳಿದೆ.
ಇದು ಪ್ರಜೆಗಳ ಮೇಲೆ, ಅದರಲ್ಲೂ ಮುಖ್ಯವಾಗಿ ವಿರೋಧ ಪಕ್ಷಗಳ ನಾಯಕರ ಮೇಲೆ ಪ್ರಭುತ್ವವು ಕಣ್ಗಾವಲು ಇರಿಸಿದೆ ಎಂಬ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಿದೆ. ವಿರೋಧ ಪಕ್ಷಗಳ ನಾಯಕರು ಹಾಗೂ ಪತ್ರಕರ್ತರಿಗೆ ಈ ಸಂದೇಶವು ಕಂಪನಿಯ ಕಡೆಯಿಂದ ಸೋಮವಾರ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಇಂತಹ ಸಂದೇಶ ಸ್ವೀಕರಿಸಿದ ಕೆಲವು ಪ್ರಮುಖರು. ಈ ಸಂದೇಶವು ಕೆಲವು ಸಂದರ್ಭಗಳಲ್ಲಿ ತಪ್ಪಾಗಿರಲೂಬಹುದು ಎಂದು ಆ್ಯಪಲ್ ಕಂಪನಿಯು ನಂತರದಲ್ಲಿ ಸ್ಪಷ್ಟನೆ ನೀಡಿದೆ. ಆದರೆ ಇದು ಇಡೀ ವಿಚಾರದ ಗಾಂಭೀರ್ಯವನ್ನು ಕಡಿಮೆ ಮಾಡುವುದಿಲ್ಲ.
ಆ್ಯಪಲ್ ಉಪಕರಣಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆದಾಗ ಕಂಪನಿಯು ಇಂತಹ ಸಂದೇಶ ರವಾನಿಸುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಎಚ್ಚರಿಕೆಯ ಸಂದೇಶವು ಭಾರತಕ್ಕೆ ಸೀಮಿತವಾದುದಲ್ಲ ಎಂದು ಕೂಡ ಹೇಳಿದೆ. ಕೇಂದ್ರ ಐ.ಟಿ. ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ತನಿಖೆ ಆರಂಭವಾಗಿದೆ. ತನಿಖೆಯ ಭಾಗವಾಗುವಂತೆ ಆ್ಯಪಲ್‌ಗೆ ಸೂಚಿಸಲಾಗಿದೆ. ಇದೇ ಸಂದರ್ಭದಲ್ಲಿ ವೈಷ್ಣವ್ ಅವರು ವಿರೋಧ ಪಕ್ಷಗಳ ನಾಯಕರ ಮಾತುಗಳನ್ನು ‘ಅಸ್ಪಷ್ಟ’ ಎಂದು ಕರೆದಿದ್ದಾರೆ.
ಪ್ರಜೆಗಳ ಮೇಲೆ ಅಕ್ರಮವಾಗಿ ಕಣ್ಗಾವಲು ಇರಿಸ ಲಾಗುತ್ತಿದೆ ಎಂಬ ಆರೋಪವು ಗಂಭೀರವಾಗಿ ಕೇಳಿಬಂದಿರುವುದು ಈಚಿನ ದಿನಗಳಲ್ಲಿ ಇದು ಎರಡನೆಯ ಬಾರಿ. ಇಸ್ರೇಲ್‌ನ ಪೆಗಾಸಸ್ ಕುತಂತ್ರಾಂಶ ಬಳಸಿ ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಮೇಲೆ ಕಾನೂನುಬಾಹಿರವಾಗಿ ಕಣ್ಗಾವಲು ಇರಿಸಲಾಗಿತ್ತು ಎಂಬ ಆರೋಪವು 2021ರಲ್ಲಿ ಬಂದಿತ್ತು.
ಪೆಗಾಸಸ್ ಕುತಂತ್ರಾಂಶವನ್ನು ಪಡೆಯುವ ಶಕ್ತಿ ಇರುವುದು ಸರ್ಕಾರಗಳಿಗೆ ಮಾತ್ರ. ಆ ಸಂದರ್ಭದಲ್ಲಿ, ಈ ಆರೋಪಗಳನ್ನು ಸರ್ಕಾರವು ಅಲ್ಲಗಳೆದ ಬಗೆಯು ತೃಪ್ತಿಕರವಾಗಿ ಇರಲಿಲ್ಲ. ಈ ವಿಚಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ಸಿಕ್ಕಿರಲಿಲ್ಲ. ಈ ಆರೋಪದ ಬಗ್ಗೆ ತನಿಖೆ ನಡೆಸಲು ಕೋರ್ಟ್ ನೇಮಕ ಮಾಡಿದ್ದ ಸಮಿತಿಯೊಂದು, ಕುತಂತ್ರಾಂಶ ಬಳಕೆ ಮಾಡಿದ್ದನ್ನು ನಿರ್ಣಾಯಕವಾಗಿ ಸಾಬೀತು ಮಾಡುವ ಸಾಕ್ಷ್ಯಗಳು ಸಿಕ್ಕಿಲ್ಲ, ತನಿಖೆಗೆ ಸರ್ಕಾರವು ಸಹಕಾರ ನೀಡಿಲ್ಲ ಎಂದು ಹೇಳಿತು. ಸಮಿತಿ ನೀಡಿರುವ ಶಿಫಾರಸುಗಳನ್ನು ಪರಿಗಣಿಸುವುದಾಗಿ ಕೋರ್ಟ್ ಹೇಳಿದ್ದು, ಅದು ಶೀಘ್ರವೇ ವಿಚಾರಣೆಗೆ ಬರಲಿದೆ.
ಈಗ ಆ್ಯಪಲ್ ಕಂಪನಿಯು ರವಾನಿಸಿರುವ ಎಚ್ಚರಿಕೆಯ ಸಂದೇಶಗಳ ಬಗ್ಗೆ ಸರ್ಕಾರದ ಅಧೀನ ಸಂಸ್ಥೆಗಳೇ ತನಿಖೆ ನಡೆಸುವುದು ಸರಿಯಲ್ಲ. ಏಕೆಂದರೆ, ಕಣ್ಗಾವಲು ಇರಿಸಿರುವ ಆರೋಪ ಇರುವುದು ಸರ್ಕಾರದ ಮೇಲೆಯೇ. ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಇಂತಹ ಎಚ್ಚರಿಕೆಯ ಸಂದೇಶಗಳು ಬಂದಿವೆ ಎಂಬುದನ್ನು ಗಮನಿಸಬೇಕು. ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ, ಪ್ರತಿಭಟನೆಯ ಹಕ್ಕಿನ ಮೇಲೆ ದಾಳಿಯ ಮೂಲಕ ನಾಗರಿಕರ ಹಕ್ಕುಗಳ ಉಲ್ಲಂಘನೆಯ ಕಾರಣಕ್ಕೆ ಸರ್ಕಾರವು ಟೀಕೆಗಳಿಗೆ ಮತ್ತೆ ಮತ್ತೆ ಗುರಿಯಾಗಿದೆ.
ಖಾಸಗಿತನದ ಹಕ್ಕು ಮೂಲಭೂತ ಹಕ್ಕುಗಳಲ್ಲಿ ಒಂದು. ಪ್ರಜೆಗಳ ಮೇಲೆ ಅಕ್ರಮವಾಗಿ ಕಣ್ಗಾವಲು ಇರಿಸುವುದು ಈ ಹಕ್ಕಿನ ಉಲ್ಲಂಘನೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಕಣ್ಗಾವಲು ಇರಿಸುವ ಅಗತ್ಯ ಇರುತ್ತದೆ ಎಂಬ ಸಮರ್ಥನೆಯನ್ನು ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿಯ ಪ್ರತಿನಿಧಿಗಳು ನೀಡಿದ್ದಿದೆ. ಆದರೆ ವಿರೋಧ ಪಕ್ಷಗಳ ನಾಯಕರ ಮೇಲೆ ಕಣ್ಗಾವಲು ಇರಿಸುವ ಕೆಲಸವನ್ನು ಯಾವ ದೃಷ್ಟಿಯಿಂದಲೂ ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಸರ್ಕಾರದ ಟೀಕಾಕಾರರು ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರ ಫೋನ್‌ನಲ್ಲಿ ಅವರ ವಿರುದ್ಧವಾಗಿ ಕೆಲವು ಸಾಕ್ಷ್ಯಗಳನ್ನು ತುರುಕಲು, ಆ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಆರೋಪಗಳು ಇವೆ. ಪ್ರಜೆಗಳ ಮೇಲೆ ಕಣ್ಗಾವಲು ಇರಿಸಲು ಅನಿರ್ಬಂಧಿತ ಸ್ವಾತಂತ್ರ್ಯ ನೀಡುವುದರಿಂದ ‘ಪೊಲೀಸ್ ರಾಜ್ಯ’ದ ನಿರ್ಮಾಣ ಆಗುತ್ತದೆ. ಈ ಬಗೆಗಿನ ಕಳವಳಗಳು ಹೆಚ್ಚುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.