ADVERTISEMENT

ಗ್ರಾಮೀಣರಿಗೆ ಬಲ ತುಂಬುವ ‘ಸ್ವಾಮಿತ್ವ’ಅನುಷ್ಠಾನದಲ್ಲಿ ಪೂರ್ಣ ಸಮನ್ವಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 19:31 IST
Last Updated 14 ಅಕ್ಟೋಬರ್ 2020, 19:31 IST
ಸಂಪಾದಕೀಯ
ಸಂಪಾದಕೀಯ   

ದೇಶದ ಗ್ರಾಮೀಣ ಪ್ರದೇಶದಲ್ಲಿನ ಆಸ್ತಿ ಮಾಲೀಕರಿಗೆ ನಿಖರ ಮಾಹಿತಿಯುಳ್ಳ ಡಿಜಿಟಲ್‌ ರೂಪದ ಆಸ್ತಿ ದಾಖಲೆಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯ ‘ಸ್ವಾಮಿತ್ವ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ‘ಗ್ರಾಮೀಣ ಜನವಸತಿಗಳ ಸರ್ವೆ ಮತ್ತು ಸುಧಾರಿತ ತಂತ್ರಜ್ಞಾನ ಬಳಸಿ ಮ್ಯಾಪಿಂಗ್‌ ಮಾಡುವ’ (ಸ್ವಾಮಿತ್ವ) ಯೋಜನೆಯ ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ 6.62 ಲಕ್ಷ ಗ್ರಾಮಗಳ ಎಲ್ಲ ಆಸ್ತಿಗಳ ಮಾಲೀಕರಿಗೆ ಹಕ್ಕುದಾರಿಕೆಯ ಕಾರ್ಡ್‌ ವಿತರಿಸುವ ಗುರಿ ಹೊಂದಲಾಗಿದೆ. ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಮೊದಲ ವರ್ಷವೇ ಕರ್ನಾಟಕದ 33,157 ಗ್ರಾಮಗಳೂ ಸೇರಿದಂತೆ 1.01 ಲಕ್ಷ ಗ್ರಾಮಗಳ ಜನರಿಗೆ ‘ಸ್ವಾಮಿತ್ವ ಕಾರ್ಡ್‌’ ವಿತರಿಸುವ ಗುರಿ ಇದೆ. ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಇಲಾಖೆ, ಸರ್ವೆ ಆಫ್‌ ಇಂಡಿಯಾ, ರಾಜ್ಯ ಸರ್ಕಾರದ ಕಂದಾಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳವರೆಗೆ ಹಲವು ಇಲಾಖೆಗಳು ಮತ್ತು ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಹೊಂದಿರುವವರಿಗೆ ಅದರ ಒಡೆತನದ ನಿಖರವಾದ ದಾಖಲೆ ಒದಗಿಸುವ ಮತ್ತು ಆಸ್ತಿಯನ್ನು ಸಾಲ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಮಹತ್ತರವಾದ ಉದ್ದೇಶಗಳು ಈ ಯೋಜನೆಯ ಹಿಂದಿವೆ. ಖಾಸಗಿ ಆಸ್ತಿಗಳು ಮಾತ್ರವಲ್ಲದೆ ಗ್ರಾಮೀಣ ರಸ್ತೆಗಳು, ಕೊಳಗಳು, ಕಾಲುವೆ, ಬಯಲು ಪ್ರದೇಶ, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳಂತಹ ಸಾರ್ವಜನಿಕ ಆಸ್ತಿಗಳನ್ನೂ ನಿಖರವಾಗಿ ಗುರುತಿಸಿ, ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಹಲವು ರಾಜ್ಯಗಳಲ್ಲಿ ಕೆಲವು ದಶಕ ಗಳಿಂದ ಗ್ರಾಮೀಣ ಪ್ರದೇಶದಲ್ಲಿನ ಆಸ್ತಿಗಳ ಸರ್ವೆ ಪ್ರಕ್ರಿಯೆ ನಡೆದೇ ಇಲ್ಲ. ಇದರಿಂದಾಗಿ, ಹಲವೆಡೆ ನಿಖರವಾದ ಭೂ ದಾಖಲೆಗಳನ್ನು ಹೊಂದುವುದು ಸಾಧ್ಯವಾಗಿಲ್ಲ. ಈ ಕೊರತೆಯನ್ನು ನೀಗಿಸಲು ‘ಡ್ರೋನ್‌’ಗಳ ನೆರವಿನಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಸರ್ವೆ ಮಾಡಿ, ಜಿಐಎಸ್‌ ಮ್ಯಾಪ್‌ಗಳ ಆಧಾರದಲ್ಲಿ ನಿಖರವಾದ ಆಸ್ತಿ ದಾಖಲೆಗಳನ್ನು ಸಿದ್ಧ ಪಡಿಸಿ, ಮಾಲೀಕರಿಗೆಡಿಜಿಟಲ್‌ ರೂಪದ ಕಾರ್ಡ್‌ ವಿತರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಗ್ರಾಮೀಣ ಪ್ರದೇಶದ ಜನರ ದೃಷ್ಟಿಯಿಂದ ಈ ಯೋಜನೆ ಮಹತ್ವಪೂರ್ಣವಾದುದು. ಮನೆ, ನಿವೇಶನದಂತಹ ಆಸ್ತಿಗಳಿದ್ದರೂ ನಿಖರವಾದ ದಾಖಲೆಗಳು ಲಭ್ಯವಿಲ್ಲದಿರುವ ಕಾರಣದಿಂದ ಅವುಗಳನ್ನು ಸಾಲ ಮತ್ತಿತರ ಆರ್ಥಿಕ ಉದ್ದೇಶ ಗಳಿಗೆ ಆಧಾರವಾಗಿ ಬಳಸಿಕೊಳ್ಳಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ‘ಸ್ವಾಮಿತ್ವ ಕಾರ್ಡ್‌’ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬಲ್ಲದು. ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ತಗ್ಗಿಸುವುದರಲ್ಲಿ ಈ ಯೋಜನೆ ನೆರವಾಗಲಿದೆ. ಈ ಯೋಜನೆಯಡಿ ತಯಾರಿಸಿದ ನಕ್ಷೆಗಳ ಆಧಾರದಲ್ಲೇ ಭವಿಷ್ಯದ ದಿನಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಸ್ತಾವವೂ ಇದೆ. ಇದೇ ಮಾದರಿಯಲ್ಲಿ ನಗರದ ಆಸ್ತಿಗಳ ಮಾಲೀಕರಿಗೆ ಹಕ್ಕಿನ ದಾಖಲೆಗಳನ್ನು ನೀಡಲು 2009ರಲ್ಲಿ ಆರಂಭಿಸಿದ ‘ನಗರ ಆಸ್ತಿ ಹಕ್ಕುಗಳ ದಾಖಲೆ’ (ಯುಪಿಒಆರ್‌) ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ‘ಸ್ವಾಮಿತ್ವ’ ಯೋಜನೆಯು ಹೆಚ್ಚು ಸಿಬ್ಬಂದಿ, ಶ್ರಮ, ಆರ್ಥಿಕ ಸಂಪನ್ಮೂಲ ಮತ್ತು ಸಮಯವನ್ನು ಬಯಸುತ್ತದೆ. ಅದರ ಜತೆಯಲ್ಲಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳವರೆಗೆ ಎಲ್ಲ ಹಂತದಲ್ಲಿ ಸರಿಯಾದ ಸಮನ್ವಯ ಸಾಧ್ಯವಾದರೆ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ. ಇದಕ್ಕಾಗಿ ವಿಶೇಷವಾದ ಗ್ರಾಮಸಭೆಗಳನ್ನು ಆಯೋಜಿಸಿ ಸರ್ವೆ ಪ್ರಕ್ರಿಯೆಗೆ ಜನರಿಂದ ಒಪ್ಪಿಗೆ ಪಡೆಯಬೇಕಾದ ಮತ್ತು ಸರ್ವೆಯ ಬಳಿಕ ಆಕ್ಷೇಪಣೆ ಗಳನ್ನು ಇತ್ಯರ್ಥಪಡಿಸಿ ನಕ್ಷೆಗಳನ್ನು ಅಂತಿಮಗೊಳಿಸಬೇಕಾದ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ಮೇಲಿದೆ. ಗ್ರಾಮೀಣ ಭಾರತಕ್ಕೆ ಬಲ ತುಂಬುವ ಗುರಿ ಹೊಂದಿರುವ ಈ ಯೋಜನೆಯ ಅನುಷ್ಠಾನದಲ್ಲಿ ಯಾವ ಕೊರತೆಗಳೂ ಉದ್ಭವಿಸದಂತೆ ಮತ್ತು ಲೋಪಗಳು ಆಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT