ADVERTISEMENT

ಸಂಪಾದಕೀಯ: ಮುಂಬೈ ಬಾರ್ಜ್‌ ದುರಂತ; ಸ್ವತಂತ್ರ ತನಿಖೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಮೇ 2021, 21:16 IST
Last Updated 23 ಮೇ 2021, 21:16 IST
Edit 24-05-21
Edit 24-05-21   

ತೌತೆ ಚಂಡಮಾರುತದ ಏಟಿಗೆ ಸಿಲುಕಿ ಹಾನಿ ಅನುಭವಿಸಿದ ಕುಟುಂಬಗಳ ಸಂಖ್ಯೆ ಎಷ್ಟು ಎಂಬುದನ್ನು ಲೆಕ್ಕ ಹಾಕುವ ಕೆಲಸ ಇನ್ನೂ ನಡೆದಿದೆ. ಈ ಚಂಡಮಾರುತಕ್ಕೆ ಆಹಾರವಾದ ಆಸ್ತಿಯ ಪ್ರಮಾಣ ಎಷ್ಟು ಎಂಬುದನ್ನು ಅಂದಾಜಿಸುವ ಕೆಲಸ ಕೂಡ ಇನ್ನೂ ಪೂರ್ತಿಯಾಗಿ ಆಗಿಲ್ಲ. ದೇಶದ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಕಂಪನಿಗಾಗಿ ಕೆಲಸ ಮಾಡುತ್ತಿದ್ದ, ಅರಬ್ಬಿ ಸಮುದ್ರದಲ್ಲಿ ನಿಯೋಜನೆಗೊಂಡಿದ್ದ ಪಿ–305 ಬಾರ್ಜ್‌ನ ದುರಂತವು ಹಲವು ಲೋಪಗಳತ್ತ ಬೊಟ್ಟು ಮಾಡುತ್ತಿದೆ. ಬಾರ್ಜ್‌ನ ದುರಂತಕ್ಕೆ ಕಾರಣರಾದ ಅಧಿಕಾರಿಗಳ ಬೇಜವಾಬ್ದಾರಿಯ ನಡೆಯನ್ನೂ ಇದು ತೋರಿಸುತ್ತಿದೆ.

ಬಾರ್ಜ್‌ ದುರಂತದಲ್ಲಿ 65ಕ್ಕೂ ಹೆಚ್ಚು ಮಂದಿ ಸತ್ತಿರುವುದಾಗಿ ವರದಿಯಾಗಿದೆ. ಒಂಬತ್ತು ಜನ ಇನ್ನೂ ಪತ್ತೆಯಾಗಿಲ್ಲ. ಪಿ–305 ಹೆಸರಿನ ಬಾರ್ಜ್‌ನಲ್ಲಿ ಒಟ್ಟು 261 ಜನ ಇದ್ದರು. ನೌಕಾಪಡೆ ಮತ್ತು ಕರಾವಳಿ ಭದ್ರತಾಪಡೆಯ ಸಿಬ್ಬಂದಿಯ ಪರಿಶ್ರಮದ ಕಾರಣದಿಂದಾಗಿ ಹಲವರ ಪ್ರಾಣ ಉಳಿದಿದೆ. ಹೀಗಿದ್ದರೂ, ಬಾರ್ಜ್‌ ದುರಂತದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ದೊಡ್ಡದೇ. ಏಕೆಂದರೆ, ಎಚ್ಚರಿಕೆಯ ಸಂದೇಶಗಳಿಗೆ ಸಕಾಲದಲ್ಲಿ ಸ್ಪಂದನ ದೊರೆತಿದ್ದರೆ ಪ್ರಾಣ ಉಳಿಸಬಹುದಿತ್ತು. ದುರಂತದಲ್ಲಿ ಆಸ್ತಿಗೆ ಕೂಡ ಹಾನಿಯಾಗಿದೆ. ಅದಕ್ಕಿಂತ ಹೆಚ್ಚಾಗಿ, ಪ್ರಾಣಹಾನಿ ಸಂಭವಿಸಿದೆ. ದುರಂತಕ್ಕೆ ಹೊಣೆ ಯಾರು ಎಂಬ ವಿಚಾರದಲ್ಲಿ ಅವರಿವರ ಮೇಲೆ ಬೊಟ್ಟು ಮಾಡುವ ಕೆಲಸ ಈಗ ನಡೆದಿದೆ. ಈ ದುರಂತಕ್ಕೆ ಬಾರ್ಜ್‌ನ ಕ್ಯಾಪ್ಟನ್‌ ಕಾರಣ ಎಂದು ಈಗ ಹೇಳಲಾಗುತ್ತಿದೆ.

ಭಾನುವಾರ ರಾತ್ರಿ 10ರವರೆಗೂ ಅವರ ಇರುವಿಕೆ ಪತ್ತೆಯಾಗಿರಲಿಲ್ಲ. ತೌತೆ ಚಂಡಮಾರುತವು ರೌದ್ರಾವತಾರ ತಾಳಿ ಬರುತ್ತಿದ್ದಾಗಲೂ ದಡಕ್ಕೆ ಧಾವಿಸದೆ, ಸಮುದ್ರದಲ್ಲೇ ಇರುವ ತೀರ್ಮಾನ ಕೈಗೊಂಡಿದ್ದು ಕ್ಯಾಪ್ಟನ್‌ ಎಂದು ಹೇಳಲಾಗುತ್ತಿದೆ. ದುರಂತಕ್ಕೆ ತುತ್ತಾಗಿರುವ ಪಿ–305 ಬಾರ್ಜ್‌, ಅಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗಾಗಿ ಕೆಲಸ ಮಾಡುತ್ತಿತ್ತು. ಡರ್ಮಾಸ್ಟ್ ಎಂಟರ್‌ಪ್ರೈಸಸ್‌ ಕಂಪನಿಯು ಈ ಬಾರ್ಜ್‌ನ ಮಾಲೀಕ. ಒಎನ್‌ಜಿಸಿ ಪರವಾದ ಕಾಮಗಾರಿಗಾಗಿ ಅಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು ದುರಂತಕ್ಕೆ ತುತ್ತಾದ ಬಾರ್ಜ್‌ ಅನ್ನು ಬಳಸುತ್ತಿತ್ತು.

ADVERTISEMENT

ದುರಂತದ ಬಹುಪಾಲು ಹೊಣೆಯನ್ನು ಒಎನ್‌ಜಿಸಿಯೇ ಹೊತ್ತುಕೊಳ್ಳಬೇಕು. ಚಂಡಮಾರುತದ ತೀವ್ರತೆ ಹಾಗೂ ಅದು ಹಾದುಹೋಗುವ ಮಾರ್ಗದ ಬಗ್ಗೆ ಮೊದಲು ಸಿಕ್ಕಿದ ಮಾಹಿತಿ ಆಧರಿಸಿ ಬಾರ್ಜ್‌ನ ಕ್ಯಾಪ್ಟನ್‌ ಸಮುದ್ರದಲ್ಲಿಯೇ ಇರುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ. ಆದರೆ ಪರಿಸ್ಥಿತಿ ಬಿಗಡಾಯಿಸಿದ ಹೊತ್ತಿನಲ್ಲಿ ಅವರಿಗೆ ದಡದ ಕಡೆ ಬರಲು ಸಾಧ್ಯವಾಗಲೇ ಇಲ್ಲ. ಈ ವಿವರಣೆಯು ದುರಂತ ಹೇಗೆ ನಡೆಯಿತು ಎಂಬುದನ್ನು ತಿಳಿಸಬಹುದು. ಆದರೆ, ಅಷ್ಟೊಂದು ಜನರ ಜೀವ ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಗಳು ಏನು ಮಾಡುತ್ತಿದ್ದರು ಎನ್ನುವುದನ್ನು ಇದು ಹೇಳುವುದಿಲ್ಲ.

ಪರಿಸ್ಥಿತಿಯನ್ನು ಹಾಗೇ ನೋಡುತ್ತ ಕೂರುವ ಬದಲು ತಾನೇ ಮುಂದಾಗಿ ಜೀವಗಳನ್ನು ರಕ್ಷಿಸುವ ಕೆಲಸವನ್ನು ಒಎನ್‌ಜಿಸಿ ಮಾಡಬಹುದಿತ್ತು. ‘ನಾವು ಸಮುದ್ರಯಾನಿಗಳಲ್ಲ. ನಮಗೆ ಪರಿಣತಿ ಇರುವುದು ನೈಸರ್ಗಿಕ ಅನಿಲ ಹಾಗೂ ತೈಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ’ ಎಂದು ಒಎನ್‌ಜಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಬಹಳ ಅಸೂಕ್ಷ್ಮ ಹೇಳಿಕೆ. ಕಂಪನಿಯು ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಒಎನ್‌ಜಿಸಿ ಅಧಿಕಾರಿಗಳು ಜಲಸಾರಿಗೆ ಸಚಿವಾಲಯಕ್ಕೆ ಸೇರಿದ, ಮುಂಬೈನಲ್ಲಿ ಇರುವ ಮಾಹಿತಿ ಕೇಂದ್ರಕ್ಕೆ ರಕ್ಷಣಾ ಕಾರ್ಯಾಚರಣೆಗೆ ಬೇಕಿರುವ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ರವಾನೆ ಮಾಡಿರಲಿಲ್ಲ ಎಂದೂ ವರದಿಯಾಗಿದೆ.

ಚಂಡಮಾರುತವು ತನ್ನ ಪಥವನ್ನು ಬದಲಿಸಿತು ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಭಾರತೀಯ ಹವಾಮಾನ ಇಲಾಖೆ ಅಲ್ಲಗಳೆದಿದೆ. ಒಎನ್‌ಜಿಸಿಯಲ್ಲಿ ಕೂಡ ಹೊಣೆಗಾರಿಕೆ ಯಾರದ್ದು ಎಂಬುದು ಸ್ಪಷ್ಟವಿಲ್ಲ. ಈ ಘಟನೆಗೆ ಸಂಬಂಧಪಟ್ಟಂತೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಒಂದು ಹೇಳಿಕೆಯೂ ಬಂದಿಲ್ಲದಿರುವುದು ಆಘಾತಕಾರಿ. ಇಡೀ ದುರಂತಕ್ಕೆ ಯಾರು ಹೊಣೆ ಎಂಬುದನ್ನು ಪತ್ತೆ ಮಾಡಲು ಸ್ವತಂತ್ರ ತನಿಖೆಯೊಂದನ್ನು ನಡೆಸಬೇಕಾದ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.