ADVERTISEMENT

ಸಂಪಾದಕೀಯ | ಮದುವೆಯ ವಯಸ್ಸು: ಜಾಗೃತಿ ಮೂಡಿಸುವ ಕೆಲಸವೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 19:45 IST
Last Updated 17 ಡಿಸೆಂಬರ್ 2021, 19:45 IST
   

ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟಿರುವ ಮಹಿಳಾ ಸಮುದಾಯವು ಪುರುಷ ಸಮುದಾಯಕ್ಕೆ ಸಮಾನವಲ್ಲ ಎಂಬ ನಂಬಿಕೆ, ಗ್ರಹಿಕೆಯು ಹೆಣ್ಣು ಮತ್ತು ಗಂಡು ಎರಡೂ ವರ್ಗದ ಗಮನಾರ್ಹ ಪ್ರಮಾಣದ ಜನರಲ್ಲಿ ಇದೆ ಎಂಬುದು ನಾಗರಿಕತೆಯು ಪೂರ್ಣವಾಗಿ ವಿಕಾಸಗೊಂಡಿಲ್ಲ ಎಂಬುದರ ಸಂಕೇತ. ಲಿಂಗ ತಾರತಮ್ಯವು ಹೆಣ್ಣು ಮಗು ಹುಟ್ಟುವ ಮೊದಲೇ ಶುರುವಾಗುತ್ತದೆ. ಹೆಣ್ಣು ಮಗು ಬೇಡ ಎಂಬ ಭಾವನೆಯು ವ್ಯಾಪಕವಾಗಿದೆ.

ಭ್ರೂಣಲಿಂಗ ಪತ್ತೆಯನ್ನು ನಿಷೇಧ ಮಾಡಿದ್ದರೂ ಭ್ರೂಣದ ಲಿಂಗ ಪತ್ತೆ ಮಾಡುವ ಅಕ್ರಮವು ನಡೆಯುತ್ತಿದೆ. ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿಯೂ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮವಲ್ಲ ಎಂಬುದನ್ನು ಇಬ್ಬರಿಗೂ ಮನದಟ್ಟು ಮಾಡುವ ಕೆಲಸವನ್ನು ಕುಟುಂಬ ಮತ್ತು ಸಮಾಜವು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಆಹಾರ, ವಸ್ತ್ರ, ಕಲಿಕೆಯ ಅವಕಾಶ ಮತ್ತು ಬೆಳವಣಿಗೆಯ ಎಲ್ಲ ಅವಕಾಶಗಳಲ್ಲಿಯೂ ಹೆಣ್ಣು ಮಗುವಿಗೆ ಸಮಾನತೆ ದಕ್ಕಿದರೆ ಅದು ಅದೃಷ್ಟವೇ ಸರಿ. 2019–20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ, ದೇಶದಲ್ಲಿ 15–49ರ ವಯೋಮಾನದ ಮಹಿಳೆಯರಲ್ಲಿ ಶೇ 57ರಷ್ಟು ಮಂದಿಯಲ್ಲಿ ರಕ್ತಹೀನತೆ ಸಮಸ್ಯೆ ಇದೆ.

ಇದೇ ವಯೋಮಾನದ ಪುರುಷರಲ್ಲಿ ರಕ್ತಹೀನತೆ ಪ್ರಮಾಣವು ಶೇ 25ರಷ್ಟು ಇದೆ. ರಾಜ್ಯದ ಈ ವಯೋಮಾನದ ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣವು ಶೇ 48ರಷ್ಟು ಇದೆ. ರಾಜ್ಯದ 15ರಿಂದ 19ರ ವಯೋಮಾನದ ಬಾಲಕರಲ್ಲಿ ಶೇ 26.5ರಷ್ಟು ರಕ್ತಹೀನತೆ ಇದ್ದರೆ ಬಾಲಕಿಯರಲ್ಲಿ ಈ ಪ್ರಮಾಣವು ಶೇ 49.4ರಷ್ಟು ಇದೆ. ಆಹಾರದಲ್ಲಿಯೂ ಯಾವ ಮಟ್ಟದ ಅಸಮಾನತೆ ಇದೆ ಎಂಬುದಕ್ಕೆ ಈ ಅಂಕಿ ಅಂಶಗಳು ಬೆಳಕು ಚೆಲ್ಲುತ್ತವೆ.

ADVERTISEMENT

ಹೆಣ್ಣು ಎಂದರೆ ಎರಡನೇ ದರ್ಜೆ ಎಂಬ ಮನಃಸ್ಥಿತಿಯು ಒಂದೋ ಎರಡೋ ವಿಚಾರಗಳಿಗೆ ಸೀಮಿತವಾದುದಲ್ಲ. ಹೆಣ್ಣನ್ನು ‘ಹೊರೆ’ ಎಂದು ಪರಿಗಣಿಸುವ ಮನೋಭಾವ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇದೆ. ನಗರ ಪ್ರದೇಶ ಇದಕ್ಕೆ ಸಂಪೂರ್ಣವಾಗಿ ಹೊರತಾಗಿದೆ ಎಂದು ಭಾವಿಸುವ ಅಗತ್ಯವೇನೂ ಇಲ್ಲ. ಈ ‘ಹೊರೆ’ ಎಂಬ ಮನೋಭಾವವೇ ಹೆಣ್ಣು ಮಕ್ಕಳಿಗೆ ಸಾಧ್ಯವಾದಷ್ಟು ಬೇಗ ಮದುವೆ ಮಾಡುವಂತೆ ಹೆತ್ತವರನ್ನು ಪ್ರೇರೇಪಿಸುತ್ತದೆ. ಹೆಣ್ಣು ಮಗಳ ಮದುವೆ ಮಾಡಿಕೊಟ್ಟು ಜವಾಬ್ದಾರಿ ಕಳಚಿಕೊಳ್ಳಬೇಕು ಎಂದು ಭಾವಿಸುವ ಅಪ್ಪ–ಅಮ್ಮಂದಿರೇ ಹೆಚ್ಚು ಎಂಬುದು ತಾರತಮ್ಯದ ಆಳ ಅಗಲವನ್ನು ಬಿಚ್ಚಿಡುತ್ತದೆ. ಹೆಣ್ಣು ಮಕ್ಕಳ ಮದುವೆಯ ಕನಿಷ್ಠವಯಸ್ಸು ಈಗ 18 ಇದೆ. ಪುರುಷರ ಮದುವೆಯ ಕನಿಷ್ಠ ವಯಸ್ಸು 21. ಇಲ್ಲಿಯೂ ತಾರತಮ್ಯ. ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಅಷ್ಟರಮಟ್ಟಿಗೆ ಒಂದು ತಾರತಮ್ಯವನ್ನು ಇಲ್ಲವಾಗಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣ ತಗ್ಗಿಸುವುದು, ತಾಯಿಯಾಗುವ ವಯಸ್ಸು, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ ಸಮಸ್ಯೆ ಮುಂತಾದವುಗಳ ಬಗ್ಗೆ ಸಮಾಲೋಚನೆ ನಡೆಸಿ ವರದಿ ಕೊಡುವುದಕ್ಕೆ ಜಯಾ ಜೇಟ್ಲಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಆ ಕಾರ್ಯಪಡೆಯ ವರದಿ ಆಧಾರದಲ್ಲಿ, ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸು ಏರಿಕೆಯ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಹೆಣ್ಣು ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಏರಿಸಿದ ಮಾತ್ರಕ್ಕೆ ಲಿಂಗ ತಾರತಮ್ಯವೆಂಬ ಕಲ್ಪನೆಯೇ ಇರುವುದಿಲ್ಲ ಎಂದು ಹೇಳಲಾಗದು. ಆಹಾರ, ವಸ್ತ್ರ, ಕಲಿಕೆಯ ಅವಕಾಶ ಮತ್ತು ಸ್ವಾತಂತ್ರ್ಯದ ವಿಚಾರದಲ್ಲಿ ತಕ್ಷಣವೇ ಭಾರಿ ಬದಲಾವಣೆ ಆಗಿಬಿಡುತ್ತದೆ ಎಂದೂ ನಿರೀಕ್ಷಿಸಲಾಗದು. ಅಷ್ಟಕ್ಕೂ ಮದುವೆಯ ಕನಿಷ್ಠ ವಯಸ್ಸು ಏರಿಕೆಯಿಂದ ಬಾಲ್ಯವಿವಾಹ ನಿಂತೇ ಹೋಗಬಹುದು ಎಂದು ಭಾವಿಸಲು ಯಾವ ಕಾರಣವೂ ಇಲ್ಲ. ಯುನಿಸೆಫ್‌ನ ಒಂದು ಅಂದಾಜು ಪ್ರಕಾರ, ಭಾರತದಲ್ಲಿ ಪ್ರತಿವರ್ಷ 15 ಲಕ್ಷ ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸಿನ ಒಳಗೆ ಮದುವೆ ಮಾಡಲಾಗುತ್ತದೆ. ಮದುವೆಯ ವಿಚಾರದಲ್ಲಿ ಬರೀ ಕಾಯ್ದೆಯ ಅಂಕುಶದಿಂದ ಹೆಚ್ಚಿನದೇನನ್ನೂ ಸಾಧಿಸಲಾಗದು ಎಂಬುದನ್ನು ಈ ಅಂಕಿಅಂಶ ನಿಚ್ಚಳಗೊಳಿಸುತ್ತದೆ.

ಮದುವೆಯ ಕನಿಷ್ಠ ವಯಸ್ಸು 21ಕ್ಕೆ ಏರಿದರೆ, ಹೆಣ್ಣು ಹೆತ್ತವರ ಹೊರೆ ಕಳಚಿಕೊಳ್ಳುವ ಧಾವಂತ ಇನ್ನಷ್ಟು ಹೆಚ್ಚಿ, ಇನ್ನೂ ಹೆಚ್ಚು ಬಾಲ್ಯವಿವಾಹಗಳು ಗುಟ್ಟು ಗುಟ್ಟಾಗಿ ನಡೆಯದಿರುವಂತೆ ನೋಡಿಕೊಳ್ಳುವುದು ಹೇಗೆ? ಇದು ಸರ್ಕಾರ ಮತ್ತು ಸಮಾಜವು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆ. ಕನಿಷ್ಠ ವಯೋಮಿತಿಗೆ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದಕ್ಕೆ ಇರುವ ಕಾರಣ ಬಡತನ ಮತ್ತು ಅಜ್ಞಾನ. ಮದುವೆಯ ಕನಿಷ್ಠ ವಯಸ್ಸು 21ಕ್ಕೆ ಏರಿಕೆಯಾದರೆ, ಈ ವಯಸ್ಸಿಗೆ ಮುಂಚೆಯೇ ಮದುವೆ ಮಾಡುವುದು ಪವಾಡದ ರೀತಿಯಲ್ಲಿ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ಅತಿಶಯೋಕ್ತಿ ಅಷ್ಟೆ. ಅಂತಹ ಸಂದರ್ಭದಲ್ಲಿ, ಯುವಜನ ಮತ್ತು ಅವರ ಹೆತ್ತವರಿಗೆ ಕಿರುಕುಳ ನೀಡಲು ತಿದ್ದುಪಡಿ ಕಾಯ್ದೆಯು ಬಳಕೆ ಆಗಬಹುದು ಎಂಬ ಸಂಶಯ ಇಲ್ಲದೇ ಇಲ್ಲ. ಬಾಲ್ಯವಿವಾಹದ ಸಮಸ್ಯೆಯು ಸಾರ್ವತ್ರಿಕವಲ್ಲ ಎಂಬುದು ಸಮಾಧಾನದ ಸಂಗತಿ. ಸುಶಿಕ್ಷಿತ, ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಹಾಗೂ ಹೊರಜಗತ್ತಿಗೆ ತೆರೆದುಕೊಂಡಿರುವ ವರ್ಗಗಳಲ್ಲಿ ಹೆಣ್ಣು ಮಕ್ಕಳ ಮದುವೆಯು ಆತುರದಲ್ಲಿ ನಡೆಯುವುದಿಲ್ಲ. ವಿದ್ಯೆ ಮತ್ತು ವೃತ್ತಿಯ ಹಾದಿಯಲ್ಲಿ ಮುಂದೆಸಾಗಲು ಬಯಸುವ ಈ ವರ್ಗಗಳ ಜನರು ಮದುವೆಯೇ ಬಿಡುಗಡೆಯ ಮಾರ್ಗ ಎಂದು ನಂಬಿಲ್ಲ. ಹಾಗಾಗಿ, ಕಾಯ್ದೆಗೆ ತಿದ್ದುಪಡಿಯ ಜತೆಗೆ, ಜನರಲ್ಲಿ ಜಾಗೃತಿ ಮೂಡಿಸಲು ಬೇಕಾದ ಕೆಲಸಗಳನ್ನು ಸರ್ಕಾರ ಮಾಡಲೇಬೇಕು. ಹೆಣ್ಣು ಮಕ್ಕಳಿಗೆ ವಿದ್ಯೆ, ವೃತ್ತಿ ಮತ್ತು ಬದುಕಿನಲ್ಲಿ ಸಮಾನ ಅವಕಾಶಗಳು ಇನ್ನೂ ಹೆಚ್ಚಿಗೆ ತೆರೆದುಕೊಳ್ಳುವಂತೆ ಮಾಡಬೇಕು. ತಮ್ಮ ಮಕ್ಕಳಿಗೆ ಬದುಕಿನ ಸುರಕ್ಷತೆಯ ಖಾತರಿ ಇದೆ ಎಂದಾದರೆ ಅಪ್ಪ–ಅಮ್ಮಂದಿರು ಹೆಣ್ಣು ಮಕ್ಕಳನ್ನು ಹೊರೆ ಎಂದು ಭಾವಿಸಲಾರರು. ಮದುವೆಯ ಕನಿಷ್ಠ ವಯಸ್ಸು ಎಂಬುದು ಹೆಚ್ಚು ಸಂಕೀರ್ಣವಾದ ಸಾಮಾಜಿಕ ವಿಚಾರ. ಈ ವಿಷಯದಲ್ಲಿ ದಂಡನೆಗಿಂತ ಜಾಗೃತಿಯೇ ಹೆಚ್ಚು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.