ADVERTISEMENT

ರ್‍ಯಾಲಿ ನಡೆಸದಿರುವ ತೀರ್ಮಾನ: ನೈತಿಕ ಮೇಲ್ಪಂಕ್ತಿಯ ನಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 19:30 IST
Last Updated 20 ಏಪ್ರಿಲ್ 2021, 19:30 IST
SAMPADAKIYA-21-04-2021
SAMPADAKIYA-21-04-2021   

ದೇಶದಲ್ಲಿ ಕೋವಿಡ್–19 ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲೇ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆದಿದೆ. ಚುನಾವಣಾ ಪ್ರಕ್ರಿಯೆಯ ಬಹುಮುಖ್ಯ ಭಾಗ ಬಹಿರಂಗ ಸಭೆಗಳನ್ನು ಆಯೋಜಿಸುವುದು. ಈ ಸಭೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಯಾಚನೆಗೆ ಇರುವ ಬಹುದೊಡ್ಡ ವೇದಿಕೆ. ಹೀಗಿದ್ದರೂ, ಕೋವಿಡ್–19ರ ಎರಡನೆಯ ಅಲೆಯ ತೀವ್ರತೆಯನ್ನು ಗಮನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಾವು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್‍ಯಾಲಿಗಳನ್ನು ನಡೆಸುವುದಿಲ್ಲ ಎಂದು ಮೂರು ದಿನಗಳ ಹಿಂದೆ ಪ್ರಕಟಿಸಿದ್ದು ಒಂದು ಮೇಲ್ಪಂಕ್ತಿಯೇ ಸರಿ. ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯುವ ಸಾಧ್ಯತೆ ತೀರಾ ಕ್ಷೀಣವೆಂಬುದು ನಿಜ. ಆ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಪ್ರಶ್ನೆಯಷ್ಟೇ ಈಗ ಉಳಿದಿರುವುದು. ಹೀಗಿದ್ದರೂ, ದೇಶದ ಒಂದು ಪ್ರಮುಖ ರಾಜಕೀಯ ಪಕ್ಷದ ಮುಂಚೂಣಿ ನಾಯಕ ಈ ಬಗೆಯ ನಿಲುವು ತಾಳುವುದು ಸ್ವಾಗತಾರ್ಹವೂ ಹೌದು ಅಪೇಕ್ಷಣೀಯವೂ ಹೌದು. ರಾಹುಲ್ ಅವರು ತಾಳಿದ ಈ ನಿಲುವು, ರ್‍ಯಾಲಿಗಳನ್ನು ನಿಲ್ಲಿಸುವಂತೆ ಇತರ ರಾಜಕೀಯ ಪಕ್ಷಗಳ ನಾಯಕರಲ್ಲಿ ಅವರು ಮಾಡಿದ ಮನವಿಯು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಮೇಲೆ ನೈತಿಕ ಒತ್ತಡವೊಂದನ್ನು ಸೃಷ್ಟಿಸಿತು. ರಾಹುಲ್ ಅವರ ನಿಲುವನ್ನು ಆರಂಭದಲ್ಲಿ ಅಣಕಿಸಿದ್ದ ಬಿಜೆಪಿ ಕೂಡ ಈಗ ತಾನು ದೊಡ್ಡ ರ್‍ಯಾಲಿಗಳನ್ನು ಆಯೋಜಿಸುವುದಿಲ್ಲ ಎಂದು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿರುವ ರ್‍ಯಾಲಿಗಳು ಕೂಡ 500ಕ್ಕಿಂತ ಕಡಿಮೆ ಜನರ ಪಾಲ್ಗೊಳ್ಳುವಿಕೆಯದ್ದಾಗಿರಲಿವೆ ಎಂದು ಬಿಜೆಪಿ ಹೇಳಿದೆ. ಟಿಎಂಸಿ ಕೂಡ ಇದೇ ಮಾದರಿಯ ನಿಲುವೊಂದನ್ನು ತಳೆದಿದ್ದು, ಕೋಲ್ಕತ್ತ ನಗರದಲ್ಲಿ ದೊಡ್ಡ ಪ್ರಮಾಣದ ರ್‍ಯಾಲಿಗಳನ್ನು ಆಯೋಜಿಸುವುದಿಲ್ಲ ಎಂದು ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಇನ್ನು ಮೂರು ಹಂತಗಳ ಮತದಾನ ಬಾಕಿ ಇದೆ. ಕೋವಿಡ್–19ರ ಎರಡನೆಯ ಅಲೆಯ ಸೂಚನೆಯು ಚುನಾವಣಾ ಪ್ರಚಾರ ಸಭೆಗಳು ಆರಂಭವಾಗುವ ಸಂದರ್ಭದಲ್ಲೇ ಇದ್ದವು. ಜನ ಒಂದೆಡೆ ಗುಂಪು ಗೂಡುವುದು ಕೊರೊನಾ ಹರಡಲು ಕಾರಣವಾಗು ತ್ತದೆ, ಚುನಾವಣಾ ರ್‍ಯಾಲಿಗಳಲ್ಲಿ ಜನ ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಾರೆ ಎಂಬುದೆಲ್ಲ ನಮ್ಮ ರಾಜಕಾರಣಿಗಳಿಗೆ ತಿಳಿಯದ್ದೇನೂ ಅಲ್ಲ. 2020ರಲ್ಲಿ ಆತುರಾತುರವಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದವರೇ ಈ ಚುನಾವಣೆಯಲ್ಲಿ ಸಾವಿರಾರು ಜನ ಒಂದೆಡೆ ಸೇರುವಂತೆ ಮಾಡಿದ್ದು, ಜನ ಒಂದೆಡೆ ಸೇರುವುದನ್ನು ಸಂಭ್ರಮದಿಂದ ಕಂಡಿದ್ದು ನೈತಿಕವಾಗಿ ತೀರಾ ಕೆಟ್ಟ ನಡೆ. 2020ರಲ್ಲಿ ಲಾಕ್‌ಡೌನ್‌ ಹೇರಿದ್ದನ್ನು ಬಿಜೆಪಿ ಅತ್ಯಂತ ಬಲವಾಗಿ ಸಮರ್ಥಿಸಿಕೊಂಡಿತ್ತು. ಈಗ ಚುನಾವಣೆಯ ನೆಪದಲ್ಲಿ ಸಹಸ್ರಾರು ಜನರನ್ನು ಒಂದೆಡೆ ಸೇರಿಸಿದ್ದನ್ನು ಪಕ್ಷವು ಹೇಗೆ ಸಮರ್ಥಿಸಿಕೊಳ್ಳಲಿದೆ? ಕಾಯಿಲೆ ಹರಡುವುದನ್ನು ತಡೆಯಲು ಜನರ ಜೀವನಾಡಿಯಾದ ಆರ್ಥಿಕ ಚಟುವಟಿಕೆಗಳಿಗೆ ಲಗಾಮು ಹಾಕುವುದನ್ನು ಸಮರ್ಥಿಸಿಕೊಳ್ಳಲಾಗಿತ್ತು. ಹೀಗಿರುವಾಗ ಸಾವಿರಾರು ಜನರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುವ ರ್‍ಯಾಲಿಗಳನ್ನು ಸಮರ್ಥಿಸಿಕೊಳ್ಳಲು ಯಾವ ಕಾರಣವೂ ಕಾಣಿಸುತ್ತಿಲ್ಲ. ರ್‍ಯಾಲಿಗಳ ಮೂಲಕ ತಲುಪುವುದಕ್ಕಿಂತ ಹೆಚ್ಚಿನ ಜನರನ್ನು ಮಾಹಿತಿ ತಂತ್ರಜ್ಞಾನದ ಬಳಕೆಯ ಮೂಲಕ ತಲುಪುವ ಶಕ್ತಿಯು ಇತರ ಪಕ್ಷಗಳಿಗಿಂತ ಬಿಜೆಪಿಗೇ ಹೆಚ್ಚು ಇದೆ. ಬಿಜೆಪಿಯಲ್ಲಿ ಸುಸಜ್ಜಿತ ಐ.ಟಿ. ಪಡೆ ಕೂಡ ಇದೆ ಎಂಬ ವರದಿಗಳಿವೆ. ಅದನ್ನು ಬಳಸಿಕೊಂಡೇ ಆ ಪಕ್ಷವು ಜನರನ್ನು ತಲುಪಿ, ಮತ ಯಾಚಿಸಬಹುದಿತ್ತು. ಅತ್ಯಂತ ವಿಷಮವಾಗಿರುವ ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯು ಬೇರೆ ಪಕ್ಷಗಳಿಗೆ ಮಾದರಿಯಾಗಿ ನಿಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಯಾವುದೇ ರಾಜಕೀಯ ಪಕ್ಷದ ಮುಖಂಡರನ್ನು ಉದ್ದೇಶಿಸಿ, ‘ನೀವು ತಪ್ಪು ಮಾಡಿದ್ದೀರಿ’ ಎಂದು ವಿವೇಕಿಗಳು ಹೇಳಿದರೆ, ‘ನಮ್ಮನ್ನೇಕೆ ದೂಷಿಸುತ್ತೀರಿ, ಹಿಂದಿನವರು ತಪ್ಪು ಮಾಡಿರಲಿಲ್ಲವೇ’ ಎಂಬ ಮರುಪ್ರಶ್ನೆ ಹಾಕಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಲಘಟ್ಟ ಇದು. ಇನ್ನೊಬ್ಬರ ಲೋಪದಲ್ಲಿ ತಮ್ಮ ಲೋಪವನ್ನು ಮುಚ್ಚಿಕೊಳ್ಳುವವರಿಗೆ ವಿವೇಕದ ಮಾತುಗಳು ರುಚಿಸುವುದಿಲ್ಲ. ಆದರೆ, ಯಾವ ಬೆಲೆ ತೆತ್ತಾದರೂ ಚುನಾವಣೆ ಗೆಲ್ಲಬೇಕು ಎಂಬ ಸಂದರ್ಭದಲ್ಲಿಯೂ ನೈತಿಕ ಹಿರಿಮೆಯ ನಿಲುವನ್ನು ತಾಳಬಹುದು. ಅಂತಹ ನಿಲುವನ್ನು ಜನ ಮೆಚ್ಚಿಕೊಳ್ಳುತ್ತಾರೆ ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT