ADVERTISEMENT

ಸಂಪಾದಕೀಯ: ಐದು ರಾಜ್ಯಗಳ ಚುನಾವಣೆ– ಬಿಜೆಪಿ, ಕಾಂಗ್ರೆಸ್‌ಗೆ ನಿರ್ಣಾಯಕ

ಸಂಪಾದಕೀಯ
Published 12 ಅಕ್ಟೋಬರ್ 2023, 23:25 IST
Last Updated 12 ಅಕ್ಟೋಬರ್ 2023, 23:25 IST
   

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾ‍ಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಮುಂದಿನ ತಿಂಗಳು ಮೂರು ವಾರಗಳಲ್ಲಿ ಮತದಾನ ‍ಪ್ರಕ್ರಿಯೆ ನಡೆಯಲಿದೆ. ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನಸಭಾ ಚುನಾವಣೆಯು ಜನರಿಗೆ ಹೆಚ್ಚು ಮುಖ್ಯ. ಏಕೆಂದರೆ, ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರವೇ ಜನರಿಗೆ ಹತ್ತಿರ. ಅಷ್ಟೇಅಲ್ಲ, ರಾಜ್ಯ ಸರ್ಕಾರದ ನಿರ್ಧಾರಗಳು ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತವೆ. ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಮತದಾನವು ಬಹಳ ಮುಖ್ಯವಾದ ಪ್ರಕ್ರಿಯೆ. ಜನಾದೇಶವನ್ನು ಬುಡಮೇಲು ಮಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. 2020ರಲ್ಲಿ ಮಧ್ಯಪ್ರದೇಶದಲ್ಲಿ ಆಗಿದ್ದನ್ನು ಇಲ್ಲಿ
ನೆನಪಿಸಿಕೊಳ್ಳಬಹುದು. ಅದೇನೇ ಇದ್ದರೂ ಪ್ರಜಾಸತ್ತಾತ್ಮಕ ಆಳ್ವಿಕೆಗೆ ಚುನಾವಣೆಯೇ ಜೀವಾಳ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ನವೆಂಬರ್‌ 7ರಿಂದ 30ರ ನಡುವೆ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್‌ 3ರಂದು ಮತ ಎಣಿಕೆ ಮಾಡಲಾಗುವುದು. 

ಈ ಐದೂ ರಾಜ್ಯಗಳ ಮತದಾರರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಭಿನ್ನವಾಗಿ ಮತ ಚಲಾಯಿಸಿದ ನಿದರ್ಶನ ನಮ್ಮ ಮುಂದೆ ಇದೆ. ಹಾಗಿದ್ದರೂ ಈ ರಾಜ್ಯಗಳ ಚುನಾವಣೆಯ ಫಲಿತಾಂಶವು ಮುಂದಿನ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿ ಆಗಬಹುದೇ ಎಂದು ಹುಡುಕಾಡುವ ಮನಃಸ್ಥಿತಿ ನಮ್ಮಲ್ಲಿ ಇದೆ. ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಗೆ ಈ ರಾಜ್ಯಗಳ ಚುನಾವಣೆಯು ಸೆಮಿಫೈನಲ್‌ ಎಂದು ಹೇಳುವವರೂ ಇದ್ದಾರೆ. ಇದನ್ನು ಸಂಪೂರ್ಣ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ವಿಸ್ತಾರವಾದ ಪ್ರದೇಶದಲ್ಲಿ ಮತದಾನ ನಡೆಯಲಿದ್ದು, ದೇಶದ ಆರನೇ ಒಂದರಷ್ಟು ಮತದಾರರು ತಮ್ಮ ಹಕ್ಕು ಚಲಾಯಿ
ಸಲಿದ್ದಾರೆ. ಮತದಾನ ನಡೆಯಲಿರುವ ಐದು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ನೇರ ಸ್ಪರ್ಧೆ ಇದೆ. ತೆಲಂಗಾಣದಲ್ಲಿ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಡುವೆ ಹಣಾಹಣಿ ಇರುವಂತೆ ಕಾಣಿಸುತ್ತಿದೆ. ಆದರೆ, ಬಿಜೆಪಿ ಕೂಡ ಇಲ್ಲಿ ನೆಲೆ ಕಂಡುಕೊಳ್ಳಲು
ಪ್ರಯತ್ನಿಸುತ್ತಿದೆ. ಮಿಜೋರಾಂನಲ್ಲಿ ಆಡಳಿತಾರೂಢ ಮಿಜೊ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಮತ್ತು ಹೊಸ ರಾಜಕೀಯ ಪಕ್ಷವಾದ ಜೊರಾಮ್‌ ಪೀಪಲ್ಸ್‌ ಮೂವ್‌ಮೆಂಟ್‌ ನಡುವೆ ಸ್ಪರ್ಧೆ ಇದೆ. ಕಾಂಗ್ರೆಸ್‌ ಪಕ್ಷವು ಹಲವು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದೆ. 

ಛತ್ತೀಸಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಕಳೆದ ಚುನಾವಣೆಯಲ್ಲಿ ಗೆದ್ದಿತ್ತು. ಈ ಮೂರೂ ರಾಜ್ಯಗಳಲ್ಲಿ ಮತ್ತೆ ಗೆಲ್ಲುವುದು ಕಾಂಗ್ರೆಸ್‌ಗೆ ಬಹಳ ಮುಖ್ಯವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ರೂಪದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ನಾಯಕತ್ವ ಸಿಕ್ಕಿದೆ. ರಾಹುಲ್‌ ಗಾಂಧಿ ಅವರು ಹೆಚ್ಚಿನ ಚೈತನ್ಯದಿಂದ ‍ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನಕಲ್ಯಾಣದ ಹೊಸ ಹೊಸ ಭರವಸೆಗಳನ್ನು ನೀಡುವ ಮೂಲಕ ಚುನಾವಣೆ ಗೆಲ್ಲಬಹುದು ಎಂಬ ಮಾದರಿಯನ್ನು ಕರ್ನಾಟಕದ ಚುನಾವಣೆಯು ಆ ಪಕ್ಷಕ್ಕೆ ತೋರಿಸಿಕೊಟ್ಟಿದೆ. ಜಾತಿ ಜನಗಣತಿಯ ವಿಚಾರವನ್ನು ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡುವ ಸೂಚನೆಯನ್ನು ಕಾಂಗ್ರೆಸ್ ನೀಡಿದೆ. ಚುನಾವಣೆಯ ಹೆಚ್ಚಿನ ಹೊಣೆಗಾರಿಕೆಯನ್ನು ರಾಜ್ಯ ಮಟ್ಟದ ನಾಯಕರಿಗೆ ವಹಿಸಲಾಗಿದೆ. ಆದರೆ, ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಗುಂಪುಗಾರಿಕೆ ಇದೆ. ಇದಕ್ಕೆ ರಾಜಸ್ಥಾನವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮೇಲೆಯೇ ಬಿಜೆಪಿ ಚುನಾವಣೆ ಎದುರಿಸಲಿದೆ. ಕೇಂದ್ರ ಸರ್ಕಾರ ಮಾಡಿರುವ ಕೆಲಸಗಳನ್ನು ಆ ಪಕ್ಷವು ಜನರ ಮುಂದಿರಿಸಬಹುದು. ಹೊಸ ಭರವಸೆಗಳಂತೂ ಇದ್ದೇ ಇರುತ್ತವೆ. ಬಿಜೆಪಿಗೆ ರಾಜ್ಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಸಮಸ್ಯೆಗಳು ಇವೆ. ನಾಯಕತ್ವದ ಬಿಕ್ಕಟ್ಟು ಕೂಡ ಇದೆ. ವಸುಂಧರಾ ರಾಜೇ ಸಿಂಧಿಯಾ ಅವರು ರಾಜಸ್ಥಾನದಲ್ಲಿ ಜನಬೆಂಬಲ ಇರುವ ನಾಯಕಿಯಾದರೂ ಅವರನ್ನು ನೇಪಥ್ಯಕ್ಕೆ ಸರಿಸುವ ಪ್ರಯತ್ನ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸ್ಥಿತಿಯೂ ಹೀಗೆಯೇ ಇದೆ. ‘ಇಂಡಿಯಾ’ ಮೈತ್ರಿಕೂಟ ರೂಪುಗೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಈ ಕೂಟದಲ್ಲಿರುವ ಪಕ್ಷಗಳ ಪೈಕಿ ಕಾಂಗ್ರೆಸ್‌ ಮಾತ್ರ ಮುಖ್ಯವಾಗಿ ಸ್ಪರ್ಧೆಯಲ್ಲಿ ಇದೆ. ಹಾಗಿದ್ದರೂ ‘ಇಂಡಿಯಾ’ ಮೈತ್ರಿಕೂಟವು ಚುನಾವಣೆಯಲ್ಲಿ ಯಾವ ಬಗೆಯ ಪರಿಣಾಮ ಬೀರಬಹುದು ಎಂಬ ಸುಳಿವು ಸಿಗಬಹುದು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.