ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಮರುದಿನವೇ ‘ಟಿಪ್ಪು ಜಯಂತಿ’ ಆಚರಣೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಪಡಿಸಿದೆ. ‘ಹಳೆಯದನ್ನೆಲ್ಲ ಮರೆಯೋಣ. ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎನ್ನುತ್ತ ಗದ್ದುಗೆ ಏರಿದ ಯಡಿಯೂರಪ್ಪ ಅವರು ತೆಗೆದುಕೊಂಡಿರುವ ಆರಂಭಿಕ ನಿರ್ಣಯವೇ ಬಿಜೆಪಿಯ ಹಿಂದುತ್ವದ ಕಾರ್ಯ ಸೂಚಿಗೆ ತಕ್ಕಂತಿದೆ. ಮೈತ್ರಿ ಸರ್ಕಾರದ ಕಾಲದಲ್ಲಿ ಆಡಳಿತಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು ಎಂದು ಹೇಳುತ್ತ ಅಧಿಕಾರಕ್ಕೆ ಬಂದವರಿಗೆ, ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆ ರದ್ದತಿಯು ಆದ್ಯತೆಯ ವಿಷಯವಾಗಿ ಕಾಣಿಸಿರುವುದು ಆಶ್ಚರ್ಯಕರ. ನಾಡಿನ ಬಹುಭಾಗವನ್ನು ಬರ ಆವರಿಸಿಕೊಂಡಿದೆ. ತಂತಮ್ಮ ಕ್ಷೇತ್ರಗಳಲ್ಲಿ ಬರ ನಿರ್ವಹಣೆ ಕಾಮಗಾರಿಗಳ ಉಸ್ತುವಾರಿ ವಹಿಸಬೇಕಿದ್ದ ಶಾಸಕರು ಇತ್ತೀಚೆಗೆ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಇದ್ದುದಕ್ಕಿಂತ ಪಂಚತಾರಾ ಹೋಟೆಲು–ರೆಸಾರ್ಟುಗಳಲ್ಲಿ ಇದ್ದುದೇ ಹೆಚ್ಚು. ಇಂಥ ಸಂಕೀರ್ಣ ಸಂದರ್ಭದಲ್ಲಿ ನಾಡಿನ ಹಿತ ಹಾಗೂ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕುರಿತು ಯೋಚಿಸಬೇಕಿದ್ದ ಸರ್ಕಾರಕ್ಕೆ ಟಿಪ್ಪು ಜಯಂತಿ ಆಚರಣೆಯ ರದ್ದತಿಯು ತುರ್ತು ವಿಷಯವಾಗಿ ಕಾಣಿಸಿರುವುದು ಜನಪರ ಆಡಳಿತದ ಲಕ್ಷಣವಲ್ಲ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸದೇ ಇರುವ ತೀರ್ಮಾನಕ್ಕೆ ಅವರದೇ ಪಕ್ಷದ ಕೆಲವು ಶಾಸಕರ ವಿರೋಧದ ಕಾರಣ ನೀಡಿರುವುದಂತೂ ಬಾಲಿಶವಾಗಿದೆ. ಹಾಗಾದರೆ ಟಿಪ್ಪು ಜಯಂತಿಯನ್ನು ಆಚರಿಸಬೇಕೆನ್ನುವ ಶಾಸಕರು ಯಾರೂ ಇಲ್ಲವೇ? ಇರುವುದಾದರೆ ಅವರ ಅಭಿಪ್ರಾಯಕ್ಕೆ ಕಿಮ್ಮತ್ತಿಲ್ಲವೇ? 2016ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರಂಭಿಸಿದ ಟಿಪ್ಪು ಜಯಂತಿ ಆಚರಣೆಯು ಮುಸ್ಲಿಮರನ್ನು ಓಲೈಸುವ ವೋಟ್‌ಬ್ಯಾಂಕ್ ರಾಜಕಾರಣ ಎನ್ನುವುದಾದರೆ ಈಗ ಆ ಆಚರಣೆಯನ್ನು ರದ್ದುಪಡಿಸಿರುವುದು ಕೂಡ ಚುನಾವಣಾ ರಾಜಕಾರಣ ಅಲ್ಲವೇ? ಇದಕ್ಕೂ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರ ಜಯಂತಿಗಳ ಆಚರಣೆ ಶುರುಮಾಡಿದ್ದು, ಮಠ–ಮಂದಿರಗಳಿಗೆ ಕೋಟಿಗಟ್ಟಲೆ ಅನುದಾನ ನೀಡತೊಡಗಿದ್ದು ಕೂಡ ವೋಟ್‌ಬ್ಯಾಂಕ್ ರಾಜಕಾರಣವೇ. ಅದೇ ಓಲೈಕೆಯ ರಾಜಕಾರಣವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮುಂದುವರಿಸಿದ್ದರ ಭಾಗವಾಗಿಯೇ ಟಿಪ್ಪು ಜಯಂತಿ ಆಚರಣೆ ಶುರುವಾಗಿದ್ದು. ಈ ಓಲೈಕೆಯ ರಾಜಕಾರಣ ಈಗ ದ್ವೇಷದ ರೂಪು ಪಡೆದುಕೊಂಡಿದೆ ಎಂದು ಜನ ಭಾವಿಸಿದರೆ, ಅದರಲ್ಲಿ ಅವರ ತಪ್ಪೇನೂ ಇಲ್ಲ.
ಸರ್ಕಾರಕ್ಕೆ ಸಾಮಾಜಿಕ– ಸಾಂಸ್ಕೃತಿಕ ಕಾಳಜಿಯೇನಾದರೂ ಇದ್ದಲ್ಲಿ ಜಯಂತಿಗಳ ಬಗೆಗಿನ ತನ್ನ ನಿಲುವನ್ನೇ ಪರಿಶೀಲನೆಗೆ ಒಡ್ಡಿಕೊಳ್ಳಬೇಕು. ಜಯಂತಿಗಳನ್ನು ಆಚರಿಸುವುದು ಅದರ ಕರ್ತವ್ಯವಲ್ಲವಾದ್ದರಿಂದ, ಸರ್ಕಾರದ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳನ್ನು ರದ್ದು ಮಾಡಬೇಕು. ಈ ಜಯಂತಿಗಳ ಆಚರಣೆಗೆ ಸಾರ್ವಜನಿಕರ ತೆರಿಗೆಯ ಹಣವನ್ನು ಖರ್ಚು ಮಾಡುವುದು ನಿಲ್ಲಬೇಕು. ಆರ್ಥಿಕ ಹೊರೆಯ ಜೊತೆಗೆ ರಜೆಯ ರೂಪದಲ್ಲಿ ಉತ್ಪಾದಕತೆ ಕೂಡ ಕುಂಠಿತವಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ, ದೇಶಕ್ಕೆ ಸಂಬಂಧಿಸಿದ ಆಚರಣೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಯಂತಿಗಳ ಆಚರಣೆಗಳಿಂದಲೂ ಸರ್ಕಾರ ಅಂತರ ಕಾಪಾಡಿಕೊಳ್ಳಬೇಕು. ಒಂದು ಪಕ್ಷದ ಸರ್ಕಾರವು ಒಬ್ಬರ ಜಯಂತಿ ಆಚರಣೆಯನ್ನು ಆರಂಭಿಸುವುದು, ಮತ್ತೊಂದು ಪಕ್ಷದ ಸರ್ಕಾರ ಅದನ್ನು ರದ್ದುಪಡಿಸುವುದು ಕ್ಷುಲ್ಲಕ ರಾಜಕೀಯ ಹಾಗೂ ಆ ನಾಯಕರಿಗೆ ಎಸಗುವ ಅಪಮಾನವೂ ಹೌದು. ಇದೀಗ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವ ಸರ್ಕಾರ, ಅದರ ಮುಂದುವರಿದ ಭಾಗವಾಗಿ ಉಳಿದ ಜಯಂತಿಗಳ ಆಚರಣೆಯನ್ನೂ ರದ್ದುಗೊಳಿಸುವ ವಿವೇಕವನ್ನು ಪ್ರದರ್ಶಿಸುವುದೇ? ಇಲ್ಲದೇ ಹೋದರೆ, ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಟ್ಟಿರುವ ನಿರ್ಧಾರವು ಪೂರ್ವಗ್ರಹದಿಂದ ಕೂಡಿದ್ದು ಎಂಬ ಅನುಮಾನಕ್ಕೆ ಪುಷ್ಟಿ ನೀಡಿದಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.