ಟಿ.ವಿ. ವಾಹಿನಿಗಳ ಶುಲ್ಕ ನಿಗದಿ ವ್ಯವಸ್ಥೆ ಹಾಗೂ ಡಿಟಿಎಚ್ ಮತ್ತು ಕೇಬಲ್ ಟಿ.ವಿ. ಸೇವಾದಾತರು ತಮ್ಮ ಸೇವೆಗಳಿಗೆ ಚಂದಾದಾರರಿಂದ ಎಷ್ಟು ಹಣ ಪಡೆಯಬಹುದು ಎನ್ನುವ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿರುವ ನಿರ್ದೇಶನಗಳ ಅನುಷ್ಠಾನದ ವಿಚಾರದಲ್ಲಿ ಗೊಂದಲಗಳು ಮುಂದುವರಿದಿವೆ. ಹೊಸ ವ್ಯವಸ್ಥೆಗೆ ಹೊರಳಿಕೊಳ್ಳಲು ಫೆಬ್ರುವರಿ 1ರ ಗಡುವು ನೀಡಲಾಗಿತ್ತು. ಅದನ್ನು ಈಗ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಈ ಹಿಂದೆಯೂ ಆಗಿದೆ. ಚಂದಾದಾರರು ತಾವು ವೀಕ್ಷಿಸಲು ಬಯಸುವ ವಾಹಿನಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು, ಆ ವಾಹಿನಿಗಳಿಗೆ ಮಾತ್ರ ಶುಲ್ಕ ಪಾವತಿಸುವ ಸೌಲಭ್ಯ ಹೊಸ ವ್ಯವಸ್ಥೆಯ ಅಡಿ ಇರಲಿದೆ ಎಂಬುದು ಟ್ರಾಯ್ ನೀಡಿರುವ ವಿವರಣೆ. ಹಣ ಕೊಟ್ಟು ವೀಕ್ಷಿಸಬೇಕಾದ ವಾಹಿನಿಗಳಿಗೆ ಗರಿಷ್ಠ ಶುಲ್ಕಮಿತಿ ನಿಗದಿ ಮಾಡಲಾಗಿದ್ದು, ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂಬ ಮಾತನ್ನೂ ಟ್ರಾಯ್ ಹೇಳಿದೆ. ವಾಹಿನಿಗಳನ್ನು ಪ್ಯಾಕೇಜ್ ರೂಪದಲ್ಲಿ ಅಲ್ಲದೆ, ಬಿಡಿ ಬಿಡಿಯಾಗಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಹೊಸ ವ್ಯವಸ್ಥೆ
ಯಲ್ಲಿದೆ. ಅಲ್ಲದೆ, ಹೊಸ ವ್ಯವಸ್ಥೆಯಲ್ಲಿನ ಇತರ ಕೆಲವು ನಿಯಮಗಳು ಕೂಡ ಟಿ.ವಿ. ವಾಹಿನಿ ವೀಕ್ಷಕರನ್ನು ಇನ್ನಷ್ಟು ಸಶಕ್ತಗೊಳಿಸುವಂತೆ ಕಾಣುತ್ತವೆ. ಆದರೆ ಇದರ ಇನ್ನೊಂದು ಮುಖವೂ ಈಗ ಗೋಚರಿಸತೊಡಗಿದೆ. ಹೊಸ ವ್ಯವಸ್ಥೆಯ ತೆಕ್ಕೆಗೆ ಇನ್ನೂ ಬಾರದ ಗ್ರಾಹಕರ ಅನುಕೂಲಕ್ಕಾಗಿ ಗಡುವನ್ನು ವಿಸ್ತರಿಸಲಾಗಿದೆ ಎಂದು ಟ್ರಾಯ್ ಹೇಳಿದೆ. ಆದರೆ, ಈ ವಿಚಾರದಲ್ಲಿ ಕೂಡ ಕೆಲವು ಗೊಂದಲಗಳು ಕಾಣುತ್ತಿವೆ. ಫೆಬ್ರುವರಿ 1ರ ಗಡುವನ್ನು ವಿಸ್ತರಿಸಿದ ನಂತರವೂ ಟ್ರಾಯ್ ಹಲವು ವಿಚಾರಗಳಲ್ಲಿ ತಾನು ರೂಪಿಸಿದ ನಿಯಮಗಳ ಬಗ್ಗೆ ವಿವರಣೆ ನೀಡಬೇಕಾಯಿತು. ಒಂದೇ ಕಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಟಿ.ವಿ.ಗಳಿಗೆ ಪಡೆದಿರುವ ಸಂಪರ್ಕಗಳಿಗೆ ಯಾವ ರೀತಿ ಶುಲ್ಕ ವಿಧಿಸಲಾಗುತ್ತದೆ, ಬಹುದಿನಗಳ ಅವಧಿಗೆ ರೀಚಾರ್ಜ್ ಮಾಡಿಸಿಕೊಂಡಿರುವ ಗ್ರಾಹಕರು ಪಾವತಿಸಿದ ಮೊತ್ತವನ್ನು ಹೇಗೆ ಮರುಹೊಂದಿಸಿಕೊಳ್ಳಲಾಗುತ್ತದೆ ಎಂಬೆಲ್ಲ ವಿಷಯಗಳ ಕುರಿತು ಟ್ರಾಯ್ ವಿವರಣೆ ನೀಡಬೇಕಾಯಿತು.
10 ಕೋಟಿ ಕೇಬಲ್ ಚಂದಾದಾರರ ಪೈಕಿ 6.5 ಕೋಟಿ ಚಂದಾದಾರರು ಹೊಸ ವ್ಯವಸ್ಥೆಗೆ ಬಂದಿದ್ದಾರೆ ಎಂದು ಟ್ರಾಯ್ ಹೇಳಿದೆ. ಹಾಗೆಯೇ, 7 ಕೋಟಿ ಡಿಟಿಎಚ್ ಚಂದಾದಾರರ ಪೈಕಿ 2.5 ಕೋಟಿ ಚಂದಾದಾರರು ಹೊಸ ವ್ಯವಸ್ಥೆಗೆ ತೆರೆದುಕೊಂಡಿದ್ದಾರೆ. ಹೊಸ ವ್ಯವಸ್ಥೆಯ ಕಾರಣದಿಂದಾಗಿ ಚಂದಾದಾರರು ಪ್ರತಿತಿಂಗಳು ಪಾವತಿಸಬೇಕಿರುವ ಹಣದ ಮೊತ್ತದಲ್ಲಿ ಅಂದಾಜು ಶೇಕಡ 15ರಷ್ಟು ಕಡಿಮೆ ಆಗಲಿದೆ ಎಂಬುದು ಟ್ರಾಯ್ ಪ್ರತಿಪಾದಿಸಿದ ಮುಖ್ಯ ಅಂಶಗಳಲ್ಲಿ ಒಂದಾಗಿತ್ತು. ಆದರೆ ಇದು ಎಲ್ಲ ಕಡೆಗಳಲ್ಲಿಯೂ ಸಾಧ್ಯವಾಗಿಲ್ಲ ಎಂಬ ದೂರುಗಳು ಇವೆ. ಈಗ ಪಾವತಿಸುತ್ತಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಾನೆಲ್‌ಗಳ ಆಯ್ಕೆಯಲ್ಲಿ ಸುಶಿಕ್ಷಿತರೇ ಬೇಸ್ತು ಬಿದ್ದು ಅನಗತ್ಯವಾಗಿ ಹೆಚ್ಚು ಶುಲ್ಕ ಪಾವತಿಸುವ ಪರಿಸ್ಥಿತಿ ಉದ್ಭವಿಸಿದೆ. ಈ ಎಲ್ಲ ಗೋಜಲುಗಳಲ್ಲಿ ಸಾಮಾನ್ಯರು, ಗ್ರಾಮೀಣ ಜನರು ಇನ್ನಷ್ಟು ಶೋಷಣೆಗೆ ಒಳಗಾಗುವ ಅಪಾಯ ಎದುರಾಗಿದೆ. ಇದೇ ಮಾತನ್ನು ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಕ್ರಿಸಿಲ್ ಕೂಡ ಹೇಳಿದೆ. ಚಂದಾ ಮೊತ್ತವು ಕೆಲವು ಪ್ರಕರಣಗಳಲ್ಲಿ ಶೇಕಡ 25ರಷ್ಟು ಹೆಚ್ಚಾಗಬಹುದು ಎನ್ನುವುದು ಕ್ರಿಸಿಲ್ ಹೇಳಿರುವ ಮಾತು. ಆದರೆ ಇದನ್ನು ನಿರಾಕರಿಸಿರುವ ಟ್ರಾಯ್, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಚಂದಾ ಮೊತ್ತ ಇನ್ನಷ್ಟು ಕಡಿಮೆ ಆಗಲಿದೆ ಎಂದಿದೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಟಿ.ವಿ ವಾಹಿನಿಗಳ ಚಂದಾ ಮೊತ್ತದ ವಿಚಾರದಲ್ಲಿ ಇಷ್ಟೊಂದು ಗೊಂದಲಗಳು ಉಂಟಾಗಿರುವುದು ದುರದೃಷ್ಟಕರ. ಈ ಗೊಂದಲಗಳನ್ನು ನಿವಾರಿಸಿ ಗ್ರಾಹಕರ ಹಿತ ಕಾಯುವ ಹೊಣೆ ಟ್ರಾಯ್ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.