ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸೃಜನಶೀಲ ಕಲಾಭಿವ್ಯಕ್ತಿಯ ಗಂಗೋತ್ರಿಗಳ ರೂಪದಲ್ಲಿ ಜನಮನ್ನಣೆ ಪಡೆಯಬೇಕಾದ ವಿಶ್ಯವಿದ್ಯಾಲಯಗಳು ಭ್ರಷ್ಟಾಚಾರ ಹಾಗೂ ಹಗರಣಗಳ ಮೂಲಕವೇ ಹೆಚ್ಚು ಚರ್ಚೆಯಲ್ಲಿವೆ. ಸಾಮಾಜಿಕ ಸೌಹಾರ್ದಕ್ಕೆ ಪೂರಕವಾದ ಸಂವಾದಗಳಿಗೆ ವೇದಿಕೆಯಾಗುವ ಬದಲು ಅನಾರೋಗ್ಯಕರ ಸಂಘರ್ಷಗಳ ತಾಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ವಾತಾವರಣ ಕ್ಷೀಣಗೊಂಡು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಕುಸಿದಿರುವುದರ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಿರುವುದು ಸ್ವಾಗತಾರ್ಹ.ವಿಶ್ವವಿದ್ಯಾಲಯಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳು ವಿಧಾನಸಭೆಯಲ್ಲೂ ಪ್ರತಿಧ್ವನಿಸುವ ಮೂಲಕ, ಉನ್ನತ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ಅಧಿಕೃತವಾಗಿ ಸರ್ಕಾರದ ಗಮನಕ್ಕೆ ಬಂದಂತಾಗಿದೆ. ಕುಲಪತಿ ಹುದ್ದೆ ₹ 5 ಕೋಟಿಯಿಂದ ₹ 10 ಕೋಟಿಗೆ ಬಿಕರಿಯಾಗುತ್ತಿದ್ದು, ಈಗ ಆ ಹುದ್ದೆಗಳಿಗೆ ಪಾವಿತ್ರ್ಯವೇ ಉಳಿದಿಲ್ಲ; ಸರ್ಕಾರದಲ್ಲಿ ಇರುವವರ ಕಾಲು ಹಿಡಿದು ಕುಲಪತಿ ಹುದ್ದೆಯನ್ನು ಖರೀದಿಸುವವರಿಂದ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಹೇಗೆ ಸಾಧ್ಯ ಎನ್ನುವ ಆತಂಕವೂ ವಿಧಾನಸಭೆಯಲ್ಲಿ ವ್ಯಕ್ತವಾಗಿದೆ. ನೇಮಕಾತಿ, ಬಡ್ತಿ, ಖರೀದಿ ಪ್ರಕ್ರಿಯೆಗಳಲ್ಲಿನ ಅಕ್ರಮಗಳ ಬಗ್ಗೆಯೂ ಚರ್ಚೆ ನಡೆದಿದೆ. ಅನುಭವ, ಅರ್ಹತೆ ಮತ್ತು ಯೋಗ್ಯತೆ ಇಲ್ಲದವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಯುಜಿಸಿ ಸಂಬಳ ಪಡೆಯುವ ಬೋಧಕರು ವಾರಕ್ಕೆ ಒಂದೆರಡು ಗಂಟೆಯಷ್ಟೇ ಬೋಧಿಸುತ್ತಿದ್ದಾರೆ ಮತ್ತು ನಕಲು ಮಾಡಲು ಅವಕಾಶ ಕಲ್ಪಿಸಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಪದವಿ ನೀಡುವ ಪರಿಸ್ಥಿತಿಯಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳ ವ್ಯವಸ್ಥೆ ಸರಿಯಿಲ್ಲ ಎನ್ನುವುದು ತಡವಾಗಿಯಾದರೂ ಶಾಸಕರಿಗೆ ಅರ್ಥವಾದಂತಿದ್ದು, ತಮ್ಮ ಆತಂಕವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶಾಸಕರ ಮಾತುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಎಲ್ಲ ಪ್ರಯತ್ನ ನಡೆಸಬೇಕಾಗಿದೆ. ವಿಶ್ವವಿದ್ಯಾಲಯ ಕಾಯ್ದೆ ರೂಪುಗೊಂಡು 22 ವರ್ಷಗಳಾಗಿದ್ದು,ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಲು ಹೊಸ ಕಾನೂನು ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ವಿಶ್ವವಿದ್ಯಾಲಯಗಳ ಸುಧಾರಣೆಗೆ ಆಸ್ಪದ ಕಲ್ಪಿಸುವ ಹೊಸ ಕಾನೂನನ್ನು ಜಾರಿಗೊಳಿಸುವುದು ಅಗತ್ಯ. ಆದರೆ, ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೂ ಅನ್ವಯಗೊಳ್ಳುವ ಉದ್ದೇಶಿತ ಕಾಯ್ದೆಯನ್ನು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳಿಗೆ ಪರಿಹಾರದ ರೂಪದಲ್ಲಿ ಸಚಿವರು ಬಿಂಬಿಸುತ್ತಿರು ವುದು ಪ್ರಶ್ನಾರ್ಹ. ಪ್ರಸ್ತುತ ವಿಶ್ವವಿದ್ಯಾಲಯಗಳ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆಯೇ ಹೊರತು ಕಾನೂನಿನಲ್ಲಿ ಇರಬಹುದಾದ ಲೋಪಗಳಲ್ಲ. ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಚೌಕಟ್ಟಿನಲ್ಲಿ ನೋಡುವ ಬದಲು, ರಾಜಕಾರಣದ ಅಖಾಡಗಳಂತೆ ನೋಡುವುದರಲ್ಲಿ ಸಮಸ್ಯೆಯ ಮೂಲ ಅಡಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವದೊಂದಿಗೆ ವೈಚಾರಿಕ ಪ್ರಜ್ಞೆ ಮತ್ತು ನೈತಿಕತೆಯನ್ನು ಕಸಿ ಮಾಡಬೇಕಾದ ವಿದ್ಯಾಸಂಸ್ಥೆಗಳು ದುಡ್ಡು ಮಾಡಲು ಅವಕಾಶವಿರುವ ಹುಲ್ಲುಗಾವಲುಗಳಾಗಿ ರೂಪುಗೊಂಡಿರುವುದರಲ್ಲಿ ರಾಜಕಾರಣಿಗಳ ಪಾತ್ರ ದೊಡ್ಡದಾಗಿಯೇ ಇದೆ.
ವಿಶ್ವವಿದ್ಯಾಲಯಗಳ ಗುಣಮಟ್ಟದ ಚರ್ಚೆಯ ನಡುವೆಯೂ ಏಳು ಹೊಸವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಬೀದರ್, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ– 2022’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದರಿಂದ ವಿದ್ಯಾರ್ಥಿಗಳ ಸಬಲೀಕರಣವಾಗಲಿದ್ದು, ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಪರಿಕಲ್ಪನೆ ಚೆನ್ನಾಗಿದೆಯಾದರೂ, ಅದರ ಸಾಧಕ ಬಾಧಕಗಳ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಿದಂತಿಲ್ಲ. ಒಂದಷ್ಟು ಜನರಿಗೆ ಅಧಿಕಾರ ಕೇಂದ್ರಗಳನ್ನು ಒದಗಿಸಿಕೊಡುವ ಕಾರಣಕ್ಕಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಲಾಗುತ್ತಿದೆ ಎನ್ನುವುದಕ್ಕೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ವಿಶ್ವ
ವಿದ್ಯಾಲಯಗಳು ನಿದರ್ಶನದಂತಿವೆ. ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಲ್ಲಿ ತೋರುವ ಉತ್ಸಾಹವು ಮೂಲ ಸೌಕರ್ಯಗಳನ್ನು ರೂಪಿಸಿಕೊಡುವಲ್ಲಿ ಸರ್ಕಾರಕ್ಕೆ ಇರುವಂತೆ ಕಾಣುತ್ತಿಲ್ಲ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ನಿವೃತ್ತರಿಂದ ತೆರವಾದ ಸ್ಥಾನಗಳನ್ನು ತಕ್ಷಣ ತುಂಬುವುದೂ ಇಲ್ಲ. ಹಾಗಾಗಿ, ಕಾಯಂ ಬೋಧಕರ ಅನುಪಸ್ಥಿತಿಯಲ್ಲಿಯೇ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಮುಗಿಸಬೇಕಾದ ಸ್ಥಿತಿ ಕೆಲವು ವಿಶ್ವವಿದ್ಯಾಲಯಗಳಲ್ಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಮೊದಲು ತೆರೆದುಕೊಂಡ ರಾಜ್ಯ ಕರ್ನಾಟಕ. ಅದರಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲೇನಾದರೂ ಸುಧಾರಣೆಯಾಗಿದೆಯೇ ಎಂದು ನೋಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳನ್ನು ಸಬಲಗೊಳಿಸುವುದು ಸರ್ಕಾರದ ಆದ್ಯತೆ ಆಗಬೇಕೇ ಹೊರತು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವುದಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.